ಉಮಾನಾಥ್ ಕೋಟ್ಯಾನ್
ಒಬ್ಬ ಚಿಂತನಶೀಲ ಮತ್ತು ಅಭಿವೃದ್ಧಿಪರವಾದ ರಾಜಕಾರಣಿ. ಇದ್ದದ್ದನ್ನು ಇದ್ದ ಹಾಗೆಯೇ ಹೇಳುವ ನೇರ ಕೆಲವೊಮ್ಮೆ ನಿಷ್ಠುರ ಎಂದೆನಿಸಬಹುದಾದ ವ್ಯಕ್ತಿತ್ವ. ಸಂಘ ಪರಿವಾರದ ಹಿನ್ನೆಲೆಯಿಂದ ಬಂದಿರುವ ಇವರು ಒಬ್ಬ ಒಳ್ಳೆಯ ಮಾತುಗಾರ ಮತ್ತು ಅತ್ಯುತ್ತಮ ರಂಗಭೂಮಿ ನಟರೂ ಆಗಿದ್ದಾರೆ. ಹಲವು ಆರೋಪಗಳು ಬಂದಾಗಲೂ ಅದನ್ನು ದಿಟ್ಟವಾಗಿ ಎದುರಿಸಿ ಉತ್ತರದ ಜೊತೆಗೆ ಸ್ಪಷ್ಟೀಕರಣ ನೀಡಿದ್ದರು. ‘ ನನ್ನದು ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕಾರಣ’ ಎನ್ನುವ ಮಾತಿನ ಮೂಲಕ ಎಲ್ಲರ ಗಮನ ಸೆಳೆದು ಹೋರಾಟ, ಜಿದ್ದು ಕೇವಲ ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು ಎನ್ನುವ ಸಕಾರಾತ್ಮಕ ಸಂದೇಶ ನೀಡಿದ್ದಾರೆ.
ಮಿಥುನ್ ರೈ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮುಂಚೂಣಿಯಲ್ಲಿ ಕಂಡು ಬರುವ ಯುವ ನಾಯಕ. ಕಾಲೇಜು ದಿನಗಳಿಂದಲೇ ಹೋರಾಟದ ಮನೋಭಾವ ಬೆಳೆಸಿಕೊಂಡ ಇವರು ಸರ್ವ ಕಾಲೇಜು ಯೂನಿಯನ್ ಅಧ್ಯಕ್ಷರಾಗಿ, ಮಂಗಳೂರು ನಗರ NSUI ಅಧ್ಯಕ್ಷರಾಗಿ, ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಕೆಪಿಸಿಸಿ ಕಾರ್ಯದರ್ಶಿಯಾಗಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.ತುಳು ಭಾಷೆ, ಸಂಸ್ಕೃತಿ ಕುರಿತು ಅಪಾರ ಅಭಿಮಾನ ಹೊಂದಿರುವ ಇವರು ‘ಪಿಲಿ ನಲಿಕೆ’ ಕಾರ್ಯಕ್ರಮದ ಮೂಲಕ ಸಾಂಪ್ರದಾಯಿಕ ಕಲೆಯಾದ ಹುಲಿವೇಷಕ್ಕೆ ವಿಶ್ವದಾದ್ಯಂತ ಮನ್ನಣೆ ದೊರಕಿಸಿಕೊಡುವುದರಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ.