ಈ ಹೊತ್ತಿಗೆ ನನ್ನಲ್ಲಿ ನೂರಾರು ವಿಷಯಗಳು ಮನಸಿನಲ್ಲಿ ಹರಿದಾಡುತ್ತಿವೆ. ಕಾರಣ ಎರಡು. ನಾನು ಹುಟ್ಟಿ, ಬೆಳೆದು, ಪೊರೆಯುತ್ತಿರುವ ಊರು ಉಡುಪಿ ಜಿಲ್ಲೆಯಾಗಿ ಇಂದಿಗೆ 25 ಸಂವತ್ಸರ ಪೂರೈಸಿದ ಖುಷಿ ಒಂದೆಡೆಯಾದರೆ ಜಿಲ್ಲೆಯಾಗಿ ಪದೋನ್ನತಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಬಹುತೇಕರ ನೆಚ್ಚಿನ ಪಕ್ಷಾತೀತ ನಾಯಕ ಜಯಪ್ರಕಾಶ್ ಹೆಗ್ಡೆ ಕುರಿತು ಅದೆಷ್ಟೋ ವಿಚಾರಗಳನ್ನು ಹಂಚಿಕೊಳ್ಳಲು ಇದೇ ಸಕಾಲ ಅನ್ನೋದು ಎರಡನೇ ವಿಷಯ.
ಅವರ ಕುರಿತು ಪ್ರಸ್ತಾಪಿಸುತ್ತಿದ್ದೇನೆ ಎಂದ ಮಾತ್ರಕ್ಕೆ ಸದ್ಯ ಅವರು ಪ್ರತಿನಿಧಿಸುತ್ತಿರುವ ಪಕ್ಷದ ಪರವಾಗಿದ್ದೇನೆಂದಲ್ಲ. ಈ ಲೇಖನ ರಾಜಕೀಯ ಪ್ರೇರಿತವಾಗಿ ಅಥವಾ ಯಾವುದೇ ಪಕ್ಷದ ಪರ, ವಿರೋಧವಾಗಿಯೂ ಅಲ್ಲ. ಇಲ್ಲೇನಿದ್ದರೂ ಅವರ ಜೊತೆಗಿನ ಒಡನಾಟ,ಅಭಿಮಾನ ಅಕ್ಷರ ರೂಪದಲ್ಲಿ ದಾಖಲಿಸಿ ಪ್ರಾಯಶಃ ನಿಮಗೆ ತಿಳಿದಿರದ ಹಲವು ವಿಚಾರಗಳನ್ನು ತಿಳಿಸುವುದು ನನ್ನ ಉದ್ದೇಶವಾಗಿದೆ ಎಂದು ಮೊದಲೇ ಸ್ಪಷ್ಟಪಡಿಸುತ್ತಿದ್ದೇನೆ.
ಜಿಲ್ಲೆಯಾಗಿ ಪರಿವರ್ತನೆಯಾಗುವಾಗ ನನಗೆ 10 ವರ್ಷ ವಯಸ್ಸು. ಹಾಗಾಗಿ ಆಗಿನ ರಾಜಕೀಯ ಚಟುವಟಿಕೆಗಳು ಮತ್ತು ಹೆಗ್ಡೆಯವರ ಕುರಿತು ಏನೆಂದರೇನೂ ತಿಳಿದಿರಲಿಲ್ಲ. ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಾ ರಾಜಕೀಯ ವಿಶ್ಲೇಷಕರ ಜೊತೆಗಿನ ಮಾತುಕತೆಯಿಂದ ಕಲೆ ಹಾಕಿದ ಪ್ರಮುಖ ವಿಚಾರಗಳನ್ನು ನಿಮ್ಮ ಮುಂದೆ ತೆರೆದಿಡುತ್ತಿದ್ದೇನೆ. ಒಮ್ಮೆ ಎಂಜಿಎಂ ಕಾಲೇಜಿನ ನಿವೃತ್ತ ಪ್ರೊಫೆಸರ್, ರಾಜಕೀಯ ವಿಶ್ಲೇಷಕರೂ ಆದ ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ ಅವರು ಹೆಗ್ಡೆ ಮತ್ತು ಉಡುಪಿ ಜಿಲ್ಲೆ ಆದ ಕುರಿತು ಹೇಳಿದ ಮಾತುಗಳು ಹೀಗಿವೆ..
1997ರಲ್ಲಿ U R Sabhapathi Udupiಯ ಶಾಸಕರಾಗಿದ್ದರು. ರಾಜ್ಯದಲ್ಲಿ J H Patel ನೇತೃತ್ವದಲ್ಲಿ ಜನತಾ ದಳ ಸರ್ಕಾರ ಆಡಳಿತ ನಡೆಸುತ್ತಿತ್ತು. ಬ್ರಹ್ಮಾವರ ಕ್ಷೇತ್ರದಿಂದ ಜೆ. ಪಿ. ಹೆಗ್ಡೆ ಶಾಸಕರಾಗಿದ್ದರು. ದೂರದ ಬೈಂದೂರು, ಶಿರೂರಿನ ಜನತೆ ತಮ್ಮ ಕೆಲಸ ಕಾರ್ಯಗಳಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಬೇಕು ಮತ್ತಿತರ ಕಾರಣಗಳಿಂದಾಗಿ ಆಡಳಿತಾತ್ಮಕವಾಗಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿಯನ್ನು ಬೇರ್ಪಡಿಸಿ, ಜಿಲ್ಲೆಯಾಗಿಸಿ ಜನರಿಗೆ ಅನುಕೂಲವಾಗಿಸಬೇಕು ಎನ್ನುವ ಸಂಕಲ್ಪ ತೊಟ್ಟು ಅದಕ್ಕಾಗಿ ಎಲ್ಲಾ ರೀತಿಯ ಶ್ರಮ ವಹಿಸಿದ ಹೆಗ್ಡೆಯವರಿಗೆ ಕಾಂಗ್ರೆಸ್ ನ ಸಭಾಪತಿ, ಕುಂದಾಪುರ ಶಾಸಕರಾದ ಪ್ರತಾಪಚಂದ್ರ ಶೆಟ್ಟಿ, ಕಾರ್ಕಳ ಶಾಸಕ ಮೊಯ್ಲಿಯವರು ಕೂಡ ಸಂಪೂರ್ಣ ಬೆಂಬಲ ಪಕ್ಷಾತೀತವಾಗಿ ವ್ಯಕ್ತಪಡಿಸಿದರು.ಇತ್ತ ಬಿಜೆಪಿಯಿಂದ Dr V S Acharya ಪರಿಷತ್ ಸದಸ್ಯರಾಗಿದ್ದರು. ಆಡಳಿತ ಪಕ್ಷ ಜನತಾದಳವಾಗಿದ್ದರಿಂದ ಇವರ್ಯಾರೂ ವಿರೋಧ ವ್ಯಕ್ತಪಡಿಸದೆ ಎಲ್ಲಾ ಕಡೆಗಳಿಂದಲೂ ಹೆಗ್ಡೆಯವರಿಗೆ ಅನುಕೂಲವಾಯಿತು. ಆ ದಿನಗಳಲ್ಲಿ ರಾಜಕೀಯ ಮೇಲಾಟಗಳು ಹೆಚ್ಚಾಗಿ ಇರದ ಕಾರಣ ಎಲ್ಲವೂ ಸುಸೂತ್ರವಾಗಿ ನೆರವೇರಿತು. ಉಡುಪಿ ಜಿಲ್ಲೆಯ ಪ್ರಥಮ ಉಸ್ತುವಾರಿ ಮಂತ್ರಿಯೂ ಆದರು. ಅಂದ ಹಾಗೆ ಸಭಾಪತಿಯವರ ಕೊಡುಗೆಯನ್ನೂ ಜಿಲ್ಲೆಯ ಜನ ಮರೆಯುವಂತಿಲ್ಲ.
ಹೆಗ್ಡೆ ಮತ್ತು ರಾಜಕೀಯ ವರ್ಚಸ್ಸು – ನಾ ಕಂಡಂತೆ
ರಾಜಕಾರಣಕ್ಕೆ ವಿಶೇಷ ಮೆರುಗು ನೀಡಿದವರು ಹೆಗ್ಡೆಯವರು. ಸರಳವಾಗಿ ಕಂಗೊಳಿಸುವ ಉಡುಪು, ಒಮ್ಮೆ ಬಾಚಿದರೆ ಹಾಗೇ ಉಳಿಯುವ ಕೂದಲು, ಮುಖದ ಕಾಂತಿ ಹೆಚ್ಚಿಸುವ ಅವರ ಕನ್ನಡಕ ಇವೆಲ್ಲದರ ತೂಕ ಉಲ್ಭಣಗೊಳಿಸುವ ಅವರ ಧ್ವನಿ ಎಲ್ಲರನ್ನೂ ಅವರತ್ತ ಆಕರ್ಷಿಸುವಂತೆ ಮಾಡುತ್ತದೆ. ಸ್ಪಷ್ಟವಾದ ಕನ್ನಡ ಜೊತೆಗೆ ಸೊಗಸಾಗಿ ಆಂಗ್ಲಭಾಷೆಯಲ್ಲೂ ಜನರನ್ನು ತಲುಪಬಲ್ಲ ಅತ್ಯಂತ ಗೌರವಾದರದ ರಾಜಕಾರಣಿ. ವಿಷಯ ಯಾವುದೇ ಇರಲಿ ಅದನ್ನು ವಿಷಯಾಂತರಿಸದೆ ಸ್ಪಷ್ಟ ಸಂದೇಶ ತಲುಪಿಸುವ ಅವರು ಚುನಾವಣೆಯಲ್ಲಿಲ್ಲದಿದ್ದರೂ ಸದಾ ಚಲಾವಣೆಯಲ್ಲಿರುವ ಅಪರೂಪದ ರಾಜಕಾರಣಿ. ಅವರ ಮಟ್ಟಿಗಂತೂ ಜನ ಸೇವೆ ಮಾಡಲು ಅಧಿಕಾರದ ಅವಶ್ಯಕತೆ ಇಲ್ಲವೇ ಇಲ್ಲ ಎನ್ನುವುದು ಇಂದಿಗೂ ಸಾಬೀತಾಗುತ್ತಿರುವುದು ನಿಮಗೆ ಗೊತ್ತಿರುವಂಥದ್ದೇ.
* ವಿರೋಧ ಪಕ್ಷದವರನ್ನು ಟೀಕಿಸುವ ಭರಾಟೆಯಲ್ಲಿ ಬಾಯಿಗೆ ಬಂದಂತೆ ಮಾತನಾಡಿದವರಲ್ಲ ( ಈಗಿನವರ ಭಾಷೆಯ ಕುರಿತು ವಿವರವಾಗಿ ಹೇಳಬೇಕಿಲ್ಲ )
* ಆರೋಗ್ಯಪೂರ್ಣ ಮತ್ತು ಸ್ಪಷ್ಟತೆಯೊಂದಿಗೆ ಅವರ ವಿರುದ್ಧ ಟೀಕೆಗಳಿಗೆ ಉತ್ತರ
* ಅಧಿಕಾರಿಗಳ ವಲಯದಲ್ಲಿ ಹೆಗ್ಡೆಯವರ ಕುರಿತು ಅಪಾರ ಗೌರವ
* ಜನರು ಪದೇಪದೇ ನೆನಪಿಸಿಕೊಳ್ಳುವುದು ಹಿಂತಿರುಗಿ ಕರೆಮಾಡಿ ವಿಚಾರಿಸುವ ಅವರ ವಿಶೇಷ ಗುಣಕ್ಕೆ. ಯಾರೇ ಕರೆ ಮಾಡಿದರೂ, ಅದೆಷ್ಟೇ ಹೊತ್ತಾದರೂ ವಾಪಾಸ್ ಕರೆ ಬರುವುದು ಖಚಿತ ಎಂಬ ಮಾತು ಅವರೊಂದಿಗೆ ಸಂಪರ್ಕ ಬೆಳೆಸಿದ ಪ್ರತಿಯೊಬ್ಬರಿಗೂ ಗೊತ್ತು
* ಒಂದು ಕೆಲಸ ಸುಖಾಂತ್ಯ ಪಡೆಯುವವರೆಗೆ ಅದಕ್ಕೆ ಸಂಬಂಧಪಟ್ಟವರೊಡನೆ ಸಂಪರ್ಕ ನಿರಂತರ
Mother Teresa ಜೊತೆ ಹೆಗ್ಡೆ
2010 ರಿಂದ ನಾನವರ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಲು ಆರಂಭಿಸಿದ್ದೆ. ಚುನಾವಣೆ ಸಂದರ್ಭ ಹಲವು ಬಾರಿ ಅವರ ಸಂದರ್ಶನ ನಡೆಸಿದ್ದೆ. ಟಿವಿ ವಾಹಿನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ 2014 ರ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಹೆಗ್ಡೆ ಸ್ಪರ್ಧಿಸಿದ್ದಾಗ ಶೋಭಾ ಅವರಿಗಿಂತ ಇವರ ಕುರಿತು ಒಂದೆರಡು ಒಳ್ಳೆಯ ಮಾತು ಹೆಚ್ಚೇ ಆಡಿದ್ದೆಅನ್ನೋ ಕಾರಣಕ್ಕಾಗಿ ಸುಳ್ಯದ ಬಿಜೆಪಿ ಕಾರ್ಯಕರ್ತರೊಬ್ಬರು ಯದ್ವಾತದ್ವಾ ನನ್ನನ್ನು ಟೀಕಿಸಿ Facebook ನಲ್ಲಿ ಬೈಗುಳದ ಸುರಿಮಳೆಗೈದಿದ್ದರು. ಆ ಶಬ್ದಗಳು ಹೇಗಿದ್ದವೆಂದರೆ ದೂರು ದಾಖಲಿಸಬೇಕೆಂದುಕೊಂಡಿದ್ದರೂ ಜೆಪಿಯವರು ‘ ಇದೆಲ್ಲ ಸಹಜ, ಮರೆತು ಬಿಡು’ ಎಂದಿದ್ದರು. 2016 ರಲ್ಲಿ ನನ್ನ ಮತ್ತೊಂದು ಸಂದರ್ಶನದಲ್ಲಿ ತೆರೇಸಾ ಅವರನ್ನು ಭೇಟಿಯಾದ ಖುಷಿಯನ್ನು ಹಂಚಿಕೊಂಡಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದಾಗ ಆ. 15ರಂದು ಧ್ವಜಾರೋಹಣ ಮುಗಿಸಿದ ನಂತ್ರ ತೆರೇಸಾ ಅವರು ಮಂಗಳೂರಿಗೆ ಬಂದ ವಿಷಯ ಇವರ ಗಮನಕ್ಕೆ ಬಂತಂತೆ. ಅದೇ ಸಂಜೆ Catholic Association ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಇವರು ಅತಿಥಿಯಾಗಿ ಭಾಗವಹಿಸಲು ತೆರಳಿದಾಗ ತೆರೇಸಾ ಅವರ ಪಕ್ಕ ಕೂರುವ ಅವಕಾಶ ಸಿಕ್ಕಿತ್ತಂತೆ. ನೆನಪಿಗಾಗಿ ಅವರು ಇವರಿಗೆ ಲೊಕೆಟ್ ಒಂದನ್ನು ನೀಡಿದ್ದರು. ಅದನ್ನವರು ಇತ್ತೀಚೆಗಿನ ವರ್ಷದವರೆಗೂ ಅವರ Purse ನಲ್ಲೇ ಉಳಿಸಿಕೊಂಡಿದ್ದರು!
ಜಿಲ್ಲೆಯಾಗಿ ಘೋಷಿಸಲು ಬಂದಾಗ ಪಟೇಲ್ ಹೀಗಂದಿದ್ರು
ಪಟೇಲ್ ಅವರ ಕುರಿತು ಹೇಳಿದ ಮಾತು ನನಗಿನ್ನೂ ನೆನಪಿದೆ. ಆವತ್ತು ಭಾಷಣದಲ್ಲಿ ಹೀಗಂದಿದ್ರಂತೆ. ‘ಕೃಷ್ಣನ ನಾಡಿಗೆ ಬಂದಿದ್ದೇನೆ. ನಾನೂ ಒಂಥರಾ ಕೃಷ್ಣನಿದ್ದ ಹಾಗೆ. ನೀವು ಏನು ಬೇಕಿದ್ರೂ ತಿಳ್ಕೊಳಿ, ಪರವಾಗಿಲ್ಲ’ ಎಂದು ಹಾಸ್ಯ ಚಟಾಕಿ ಹಾರಿಸಿದ್ರಂತೆ.ಈ ಮಾತನ್ನು ಎಲ್ಲರೂ ಹಗುರಾಗಿ ಆವತ್ತು ಸ್ವೀಕರಿಸಿದ್ರು ಈಗೇನಾದ್ರು ಈ ಮಾತು ಕೇಳಿ ಬಂದ್ರೆ ಅದ್ರ ಕತೇನೇ ಬೇರೆಯಾಗಿರುತ್ತಿತ್ತು . ಪಟೇಲ್ ನಿಜಕ್ಕೂ ಹೃದಯ ಶ್ರೀಮಂತ ವ್ಯಕ್ತಿ. ಅವರಲ್ಲಿ ಯಾವುದೇ ಪಕ್ಷದವರು ಬಂದರೂ ಸಹಕಾರ ನೀಡುತ್ತಿದ್ದರು. ಯಾವುದೇ ಹಮ್ಮು ಬಿಮ್ಮಿರಲಿಲ್ಲ ಎಂದು ಹೆಗ್ಡೆ ಹೇಳುತ್ತಾರೆ.
ಜೆಪಿ ಜೊತೆ ಚಹಾ ಸಂಜೆ
ಟಿವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಿನಗಳಲ್ಲಿ ನಮ್ಮ ಭೇಟಿ ಆಗಾಗ ನಡೆಯುತ್ತಿತ್ತು( ಈಗಲೂ ಇದೆ). ಚಿಟ್ಪಾಡಿಯ ಗಜಾನನ ಹೋಟೆಲ್ ನಮ್ಮ ಖಾಯಂ ಸ್ಥಳ. ಅವರದ್ದು ಸಕ್ಕರೆ ಕಮ್ಮಿ ಚಹಾ ಮತ್ತು ಗೋಳಿಬಜೆ. ಬಿಜೆಪಿ ಸೇರುವ ಸುದ್ದಿಯ ಕುರಿತು ಒಮ್ಮೆ ಅವರು ಎಲ್ಲಾ ಮಾಧ್ಯಮದವರನ್ನು ಕರೆಸಿ ವಿವರಣೆ ಮೊದಲು ನೀಡಿದ್ದು ಅದೇ ಹೋಟೆಲ್ ನ ಹಿಂಭಾಗದ ಹಿತ್ತಲಲ್ಲಿ.

ಬಿಜೆಪಿ ಸೇರಿ ಉಡುಪಿಗೆ ಬಂದಾಗ ಮೊದಲ ಬಾರಿಗೆ ಜಿಲ್ಲಾ ಕಚೇರಿಗೆ ಭೇಟಿ ನೀಡಿದಾಗಲೂ ನಾನು ಅವರೊಂದಿಗಿದ್ದೆ. ಸುಮಾರು ಒಂದು ಘಂಟೆ ಅಲ್ಲಿ ಕಳೆದ ನಂತ್ರ ಕೃಷ್ಣ ಮಠದ ಪಾರ್ಕಿಂಗ್ ಸ್ಥಳದಲ್ಲಿರುವ ಮಥುರಾ ಹೋಟೆಲ್ ನಲ್ಲಿ ಚಹಾ ಸೇವಿಸಲು ಕೂತಿದ್ದಾಗ ಬಹಳಷ್ಟು ನೋವಿನ ವಿಚಾರಗಳನ್ನು ಹಂಚಿಕೊಂಡಿದ್ದರು. ಹಿತ ಎನಿಸಿದವರು ಶತ್ರುಗಳಾಗಿದ್ದು ಹೇಗೆ ? ಸುತ್ತಲಿದ್ದವರೇ ಆಟವಾಡಿದ್ದು ಹೇಗೆ ? ಇತ್ಯಾದಿ ವಿಷಯಗಳನ್ನು ಪ್ರಸ್ತಾಪಿಸಿದ್ದರು. ಕಾಂಗ್ರೆಸ್ ನಿಂದ ಉಚ್ಛಾಟನೆಯ ಸುದ್ದಿ ಪ್ರಸಾರವಾಗುತ್ತಿದ್ದ ಸಂದರ್ಭ ಅವರು ಅಂಬಲಪಾಡಿಯ ಶಾಮಿಲಿ ಸಭಾಂಗಣದಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಕರೆ ಮಾಡಿ ಅವರಲ್ಲಿಗೆ ಓಡಿದ್ದೆ. ಅಲ್ಲೇ ವಿಷಯ ತಿಳಿಸಿ ಪಕ್ಕದಲ್ಲೇ ಇದ್ದ ಸಭಾಂಗಣದ ಕಚೇರಿಯಲ್ಲಿ ಕುಳಿತು ಅವರ ಉತ್ತರ ಪಡೆದು ಅರ್ಧ ಗಂಟೆಯೊಳಗೆ ಪ್ರಸಾರ ಮಾಡಿದ್ದೆ.

ಸಂಗೀತ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪಾರ ಆಸಕ್ತಿ
ಹಾಡು, ನಾಟಕ ಇತ್ಯಾದಿಗಳಲ್ಲಿ ಅವರಿಗೆ ಅಪಾರ ಆಸಕ್ತಿ. ಕಲಾವಿದರನ್ನು ಪ್ರಶಂಸಿಸಿ ಪ್ರೋತ್ಸಾಹಿಸುವುದು ಅವರ ಮತ್ತೊಂದು ಗುಣ. ಜನವರಿ ತಿಂಗಳಲ್ಲಿ ವರ್ಷವೂ ಜರಗುವ ಕೋಟದ ಅಮೃತೇಶ್ವರಿ ತಾಯಿಯ ಜಾತ್ರೆಯ ಸಂದರ್ಭ ಬೃಹತ್ ವೇದಿಕೆಯಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಅವರು ಅತಿಥಿಯಾಗಿ ಬಂದಿದ್ದರು. ನಾನು ನಿರೂಪಕನಾಗಿದ್ದೆ. ಭಾಷಣ ಮುಗಿದ ನಂತರ ‘ ಇಲ್ಲಿರುವ ಚಿಕ್ಕ ಹುಡುಗಿ ಸಾನ್ವಿ ಶೆಟ್ಟಿಯ ಅಭಿಮಾನಿ ನಾನು, ಅವಳಿಗೆ ವೋಟ್ ಮಾಡಿದ್ದೇನೆ.. ಬಾ ಒಂದು ಫೋಟೋ ಬೇಕು’ ಎಂದು ಕ್ಲಿಕ್ಕಿಸಿಕೊಂಡಿದ್ದರು. 2016 ರಲ್ಲಿ ಬೆಂಗಳೂರಿನ ‘ ನಮ್ಮೂರ ಹಬ್ಬ’ ಕಾರ್ಯಕ್ರಮ ನಡೆದ ಮಾರನೇ ದಿನ ಕರೆ ಮಾಡಿ ‘ ಮನೆಗೆ ಬಾ, ಮಧ್ಯಾಹ್ನ ಊಟ ಮಾಡೋಣ’ ಎಂದು ಕರೆದು ಅವತ್ತು ಬಹಳಷ್ಟು ಸಾಂಸ್ಕೃತಿಕ ವಿಷಯಗಳ ಕುರಿತು ಪತ್ರಕರ್ತ ಕೆ. ಸಿ. ರಾಜೇಶ್ ಮತ್ತು ಚಂದ್ರಶೇಖರ ಶೆಟ್ಟಿಯವರ ಜೊತೆಗೂ ಹಂಚಿಕೊಂಡಿದ್ದರು.
ಹಿನ್ನೆಲೆ ಧ್ವನಿ ಕಲಾವಿದರಾದ ಜೆಪಿ ಹೆಗ್ಡೆ
ಹಿನ್ನೆಲೆ ಧ್ವನಿ ಕಲಾವಿದನೂ ಆದ ನನಗೆ ಜೆಪಿಯವರ ಧ್ವನಿ, ಮಾತಿನಲ್ಲಿನ ಏರಿಳಿತದ ಕುರಿತು ಸ್ಪಷ್ಟ ಅರಿವಿತ್ತು. ಆ ಧ್ವನಿ ನನ್ನ ಯಾವುದಾದರೊಂದು ಯೋಜನೆಗೆ ಬಳಸಿಕೊಳ್ಳಬೇಕೆಂಬ ಆಲೋಚನೆಯನ್ನೊಮ್ಮೆ ಅವರಲ್ಲಿ ಪ್ರಸ್ತಾಪಿಸಿದಾಗ ಒಪ್ಪಿಯೇ ಬಿಟ್ಟರು! ಅವತ್ತು ರೆಕಾರ್ಡಿಂಗ್ ಮುಗಿಸಿದ ನಂತ್ರ ‘ ನಾನು ಮಂತ್ರಿಯಾಗಿದ್ದಾಗ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಶ್ರೀ ಕೃಷ್ಣ ಧಾರಾವಾಹಿ ನಿನಗೆ ನೆನಪಿರಬಹುದು. ಅದರ ನಿರ್ದೇಶಕರಾದ ರಮಾನಂದ್ ಸಾಗರ್ ಕರೆ ಮಾಡಿ ಧ್ವನಿ ಬೇಕು ಅಂದಾಗ ‘ my voice is not for sale’ ಎಂದು ಹೇಳಿ ನಿರಾಕರಿಸಿದ್ದರಂತೆ! Ravi Basrur ಅವರ ಯೋಜನೆಗೆ ಧ್ವನಿ ನೀಡಿದ ನಂತರದ ವಾಯ್ಸ್ ಪ್ರಾಜೆಕ್ಟ್ ಇದೇ ಎಂದು ಹೇಳಿದ್ದರು. ಇಲ್ಲಿ ಬಹು ಮುಖ್ಯ ವಿಚಾರ ಅಂದ್ರೆ ಅವರು ಧ್ವನಿ ನೀಡಿದ್ದು ಉಡುಪಿಯನ್ನು ಮೊದಲು ಕಟ್ಟಿ ಬೆಳೆಸಿದ ಮಹನೀಯರಾದ Haji Abdullahರ ಕುರಿತ ಸಾಕ್ಷ್ಯ ಚಿತ್ರಕ್ಕೆ! ಅದರಲ್ಲೂ ಸಾಹೇಬರು ಮಾಡುವ ಸ್ವಗತಕ್ಕೆ! ನಿಮಗೆ ತಿಳಿದಿರಲಿ ಸ್ನೇಹಿತರೆ .. ಅವರು ಅಂದು ಕೇವಲ ಒಂದೂವರೆ ವರ್ಷ ಲೋಕಸಭಾ ಸದಸ್ಯರಾಗಿದ್ದರೂ ಕೂಡ ಅವರ ಕಾರ್ಯಶೈಲಿ, ಕೈಗೆತ್ತಿಕೊಂಡ ಯೋಜನೆಗಳನ್ನು ಪಕ್ಷಾತೀತವಾಗಿ ಈಗಲೂ ಜನರು ಕೊಂಡಾಡುತ್ತಾರೆ. ಜೊತೆಗೆ ನಮ್ಮೆಲ್ಲಾ MP ಗಳಿಗಿಂತಲೂ ಹೆಗ್ಡೆಯವರೇ ಅತ್ಯಂತ ಜನಪ್ರಿಯರೆಂದರೆ ತಪ್ಪಿಲ್ಲ ಅಂದುಕೊಂಡಿದ್ದೇನೆ.
ಉತ್ತರ ನಮ್ಮದು
2019 ರಲ್ಲಿ ಉತ್ತರ ಕರ್ನಾಟಕ ಪ್ರವಾಹದಿಂದ ತತ್ತರಿಸಿ ಹೋಗಿದ್ದಾಗ ನಾವು ಗೆಳೆಯರು ಸೇರಿಕೊಂಡು ‘ ಉತ್ತರ ನಮ್ಮದು’ ಎಂಬ ಅಭಿಯಾನವನ್ನು ಕೈಗೆತ್ತಿಕೊಂಡು ಕೇವಲ 3 ದಿನಗಳಲ್ಲಿ 4 ಲಕ್ಷ ರೂಪಾಯಿಗಳಷ್ಟು ದಿನಸಿ ಸಾಮಗ್ರಿಗಳನ್ನು ಕ್ರೋಡೀಕರಿಸಿ ಕಾರವಾರದ ಮಲ್ಲಾಪುರಕ್ಕೆ ನೀಡುವುದೆಂದು ನಿರ್ಧರಿಸಿದಾಗ ನಮ್ಮ ಬೆಂಬಲಕ್ಕೆ ಮೊದಲು ನಿಂತು ‘ ಏನೇ , ಎಷ್ಟೇ ಕಡಿಮೆಯಾದರೂ ನಾನಿದ್ದೇನೆ’ ಎಂದಿದ್ದರು ಜೆಪಿ ಸರ್.

ನನ್ನೆಲ್ಲಾ ಯೋಜನೆಗಳಿಗೆ ಚಾಲನೆ ನೀಡಿದ ಜೆಪಿ ಸರ್
ಕೊರೊನ ಸಂದರ್ಭ ಕಂಗಾಲಾಗಿದ್ದಾಗ ಅಜ್ಜರಕಾಡಿನ ಭುಜಂಗ ಉದ್ಯಾನವನದಲ್ಲಿ ಕೂತು ಅವರು ಪಟ್ಟ ಪಾಡಿನ ಕುರಿತು ಹೇಳಿ ನನ್ನ ಕಷ್ಟಗಳು ಏನೂ ಅಲ್ಲವೆಂದು ಸಮಾಧಾನ ಪಡಿಸಿದ್ದರು.
ಕೊನೆಯಲ್ಲಿ ..
ಇತ್ತೀಚೆಗಿನ ವರ್ಷಗಳಲ್ಲಿ ರಾಜಕೀಯ ಅಂದ್ರೆ ಅಸಹ್ಯವೆನಿಸುವಷ್ಟರ ಮಟ್ಟಿಗೆ ಕುಲಗೆಡಿಸಿರುವ, ಸ್ವಾರ್ಥ, ಸಂವಿಧಾನ , ಆಡಳಿತ, ಜನರ ಭಾವನೆಯನ್ನೇ ಅರಿಯದ ರಾಜಕಾರಣಿಗಳ ನಡುವೆ ಜೆಪಿ ಹೆಗ್ಡೆ Odd Man Out. ಅವರಂತಹ ವರ್ಚಸ್ಸಿರುವವರು ಮುಖ್ಯಮಂತ್ರಿ ಅಭ್ಯರ್ಥಿಯಾಗಬೇಕು. ಕಾಸರಗೋಡಿನಿಂದ ಕಾರವಾರದವರೆಗೆ ಯಾವುದೇ ಕ್ಷೇತ್ರದಲ್ಲಿ ಸ್ಫರ್ಧಿಸಬಲ್ಲ ಸಾಮರ್ಥ್ಯ ಇರುವ ಏಕೈಕ ರಾಜಕಾರಣಿ ಅಂದ್ರೆ ಪ್ರಾಯಶಃ ಇವರೇ. ‘ಇನ್ನು 6 ತಿಂಗಳಲ್ಲಿ ಚುನಾವಣೆ, ನಮ್ಮ ಕತೆ ಏನು ?’ ಎಂದು ನಿನ್ನೆ ಮಾತನಾಡಿದಾಗ ‘ ನನಗೆ ಚುನಾವಣಾ ರಾಜಕಾರಣ ಇನ್ನು ಬೇಡ. ಕರೆದಲ್ಲಿ ಹೋಗಿ ಭಾಷಣ ಬಿಗಿದು ಬರುತ್ತೇನೆ’ ಎಂದರು. ಇದಕ್ಕೆ ಕಾಲವೇ ಉತ್ತರ ನೀಡಬೇಕು..
ಉಡುಪಿಯಲ್ಲಿ ನಡೆಯುವ ರಜತ ಮಹೋತ್ಸವದ ಕಾರ್ಯಕ್ರಮದ ನಿರೂಪಣೆಯನ್ನು ನೀನು ಮಾಡಬೇಕು ಎಂದಿದ್ದರು. ಅನಿವಾರ್ಯ ಕಾರಣಗಳಿಂದ ಆ ವೇದಿಕೆ ಏರಲಾಗುತ್ತಿಲ್ಲ ಎನ್ನುವ ನೋವಿದೆ..
ಅವರ ಕುರಿತು ಆಡದೆ ಉಳಿದ ಮಾತು ನೂರಿದೆ
ಯಾಕಂದ್ರೆ ಹೇಳಲು ಹೋದರೆ ಸಾವಿರ ಮಾತಿದೆ!