ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ನಿನ್ನೆ ಹುಟ್ಟಿದ ಮಗು ತಾಸೆ ಸದ್ದು ಕೇಳಿದರೆ ಸಾಕು, ಹೆಜ್ಜೆ ಹಾಕುತ್ತೆ, ಭಾವನೆ ವ್ಯಕ್ತಪಡಿಸುತ್ತೆ, ಊಟ ಮಾಡುತ್ತದೆ ಅನ್ನೋ ಮಾತಿದೆ. ಇದು ಅಕ್ಷರಶಃ ಸತ್ಯ. ಈ ತುಳುನಾಡು ಎನ್ನುವ ಪುಣ್ಯ ಭೂಮಿ ಅಂತಹ ನೂರು ಕಲೆಗಳಿಗೆ, ಆಚರಣೆಗಳಿಗೆ ತವರು, ಸಾಂಸ್ಕೃತಿಕ ಬೀಡು. ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ನವರಾತ್ರಿ ಸಂದರ್ಭ ಹೆಚ್ಚಾಗಿ ಕಾಣ ಸಿಗುವ ಹುಲಿವೇಷ, ತುಳುನಾಡಿನ ಜನರ ನರ ನಾಡಿಗಳಲ್ಲಿ ಹಾಸು ಹೊಕ್ಕಿರುವ ಜಾನಪದ ಕಲೆ. ಈ ನೃತ್ಯಕ್ಕೆ ಶ್ರೀಮಂತ, ಬಡವ, ಹಿರಿಯ, ಕಿರಿಯ, ಗಂಡು, ಹೆಣ್ಣು ಎನ್ನುವ ಭೇದವಿಲ್ಲ .ಜಾತಿ ಮತದ ಬೇಲಿಯೂ ಇಲ್ಲ. ಈ ನೃತ್ಯ ಕಲಿಯಲು ಗುರುವಿಲ್ಲ. ಖುಷಿ, ಸಂಭ್ರಮವೇ ಎಲ್ಲಾ !! ಹುಲಿ ಕುಣಿಯುವಾಗ ಮೈಯಲ್ಲಾಗುವ ವಿದ್ಯುತ್ ಸಂಚಾರಕ್ಕೆ ಸರಿಸಾಟಿ ಯಾವುದೂ ಇಲ್ಲ !
ನನ್ನ ಬಾಲ್ಯ ಮತ್ತು ಹುಲಿವೇಷ
ಈ ಕಲೆಯ ಕುರಿತು ಎಷ್ಟು ಆಸಕ್ತಿಯೋ ಅಷ್ಟೇ ಭಯವೂ ನನ್ನಲ್ಲಿತ್ತು. ಬಣ್ಣ ಕಂಡಾಗ, ತಾಸೆ ಸದ್ದು ಕೇಳಿದಾಗ ಭಯ ಪಟ್ಟು ಓಡಿ, ಮೂಲೆಯಲ್ಲೆಲ್ಲೋ ಅಡಗಿ, ಇಣುಕಿ ಹುಲಿ ವೇಷ ಕಂಡು ಸಂಭ್ರಮ ಪಡುವುದಾಗಿತ್ತು. ನಾನು ಓದಿದ್ದು ಕೃಷ್ಣ ಮಠದ ಪಕ್ಕದಲ್ಲೇ ಇರುವ ಮುಕುಂದ ಕೃಪಾ ಶಾಲೆಯಲ್ಲಿ. 2 ನೇ ತರಗತಿಯಲ್ಲಿದ್ದಾಗ ಹುಲಿವೇಷ ತಂಡವೊಂದು ನಮ್ಮ ಶಾಲೆಯ ಆವರಣಕ್ಕೆ ಬಂದು ಅರ್ಧ ಘಂಟೆ ಕುಣಿದಿತ್ತು. ನಾನೂ ಅವರೊಂದಿಗೆ ಕುಣಿದ ಕಾರಣ ಆವತ್ತು ಶಾಲೆಯಲ್ಲಿ ಎಲ್ಲರ ಗಮನ ನನ್ನ ಮೇಲಿತ್ತು ! ಈ ಭಯ ಕಾಲ ಕ್ರಮೇಣ ಕಡಿಮೆ ಆಗಿ ವೇಷದ ಜೊತೆಗಿನ ನಂಟು ಮತ್ತಷ್ಟು ಬಿಗಿಯಾಗುತ್ತಾ ಹೋಯಿತು. 8ನೇ ತರಗತಿಯಲ್ಲಿದ್ದಾಗ ಉಡುಪಿ ಶ್ರೀ ವೆಂಕಟರಮಣ ದೇವಸ್ಥಾನದ ತಂಡದೊಂದಿಗೆ ಹುಲಿವೇಷ ಹಾಕಿ ನನ್ನ ಆಸಕ್ತಿ ತೀರಿಸಿಕೊಂಡಿದ್ದೆ!

ಚಿತ್ತರಂಜನ್ ವೃತ್ತ ಮತ್ತು ಹುಲಿವೇಷ ಪ್ರದರ್ಶನ
ಆ ದಿನಗಳಲ್ಲಿ ಈ ವೃತ್ತದಲ್ಲಿ ಅಷ್ಟಮಿಯಂದು ಹುಲಿವೇಷಧಾರಿಗಳ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಗುತ್ತಿತ್ತು. ಇದನ್ನು ನೋಡಲು ಜನಸಾಗರವೇ ಅಲ್ಲಿ ನೆರೆದಿರುತಿತ್ತು. ಅಲ್ಲಿನ ವಿಶೇಷ ಆಕರ್ಷಣೆ ಅಂದ್ರೆ ಕಾಡಬೆಟ್ಟು ಅಶೋಕರಾಜ್, ಸುರೇಶ ಮತ್ತು ಸುರೇಂದ್ರ ಅವರ ತಂಡ. ಅವರು ಹತ್ತಿಪತ್ತು ಕೆಜಿ ಅಕ್ಕಿ ಮೂಟೆಯನ್ನು ಹಲ್ಲಿನಿಂದ ಎತ್ತಿ ಹಿಂದಕ್ಕೆ ಎಸೆಯುವುದು, ಬೆಂಕಿ ಜೊತೆ ಆಟ ಪ್ರದರ್ಶನದ ಕೇಂದ್ರಬಿಂದುವಾಗಿತ್ತು. ಕಾಲ ಬದಲಾದಂತೆ ಎಲ್ಲವೂ ಬದಲಾಯಿತು. ಈಗ ಆ ಜಾಗದಲ್ಲಿ ವೇದಿಕೆ ಕಾಣಸಿಗುವುದು ಅಪರೂಪವಾಗಿದೆ.

ಅಂದಿನ ಹುಲಿವೇಷ
ವೇಷ ಅಂದು ಅತ್ಯಂತ ಸಾಂಪ್ರದಾಯಿಕವಾಗಿತ್ತು. ಬಣ್ಣದ ತೀಕ್ಷ್ಣತೆ, ಧರಿಸುತ್ತಿದ್ದ ಚಡ್ಡಿ, ಟೊಪ್ಪಿ,ಬಿಗಿಯಾಗಿ ಕಟ್ಟುದ್ದಿದ್ದ ಜಟ್ಟಿ ಎಲ್ಲಾ ಹುಲಿವೇಷಧಾರಿಗಳಲ್ಲಿ ಹೆಚ್ಚು ಕಡಿಮೆ ಒಂದೇ ಆಗಿರುತ್ತಿತ್ತು. ಅಂತರ್ಜಾಲ ಅಂದ್ರೆ ಏನು ಎಂದು ಯಾರಿಗೂ ತಿಳಿದಿರದ ಆ ದಿನಗಳಲ್ಲಿ ಬಳಸುತ್ತಿದ್ದದ್ದು ಕುರಿಯ ಚರ್ಮದಿಂದ ತಯಾರಿಸಿದ ತಾಸೆ.ಇದರ ಸದ್ದೇ ಬೇರೆ ! ಹಬ್ಬ ಮುಗಿದು ಒಂದು ವಾರದವರೆಗೂ ತಾಸೆ ಸದ್ದಿನ ಗುಂಗು ನಮ್ಮಲ್ಲಿ ಹಾಗೇ ಉಳಿದಿರುತ್ತಿತ್ತು. ನಾವು ಓಡಾಡುತ್ತಿದ್ದ ಲ್ಯಾಂಬಿ ರಿಕ್ಷಾದ ಶಬ್ದ ಕೇಳಿದಾಗಲೂ ತಾಸೆ ಸದ್ದು ಕೇಳಿದ ಹಾಗೆ ಒಂದು ರೀತಿಯ ಭ್ರಮೆ ನಮ್ಮನ್ನು ಆವರಿಸಿಕೊಳ್ಳುತ್ತಿತ್ತು. ಆಗೆಲ್ಲ ವೇಷಧಾರಿಗಳು ಕಿ. ಮೀಗಟ್ಟಲೆ ನಡೆದುಕೊಂಡೇ ಹಲವು ಕಡೆಗೆ ಭೇಟಿ ಕೊಟ್ಟು ರಂಜಿಸಿ ದೇಣಿಗೆ ಸ್ವೀಕರಿಸುತ್ತಿದ್ದರು. ಪಾದರಕ್ಷೆಗಳನ್ನು ಹೆಚ್ಚಾಗಿ ಧರಿಸುತ್ತಿರಲಿಲ್ಲ. ಬಣ್ಣದಲ್ಲಿ ಅತಿರೇಕ ಎಂದೆನಿಸುವ ಯಾವ ಸಂಗತಿಯೂ ಕಾಣಿಸುತ್ತಿರಲಿಲ್ಲ.
ಇಂದಿನ ಹುಲಿವೇಷ
ಕಾಲ ಬದಲಾದಂತೆ ಸ್ವಲ್ಪ ಬದಲಾವಣೆ ಕಂಡಿತು. ಈಗ ಬಳಿಯುವ ಬಣ್ಣದಲ್ಲಿ ಸೃಜನಶೀಲತೆ ಕಾಣುತ್ತಿದೆ. ಧರಿಸುವ ಟೊಪ್ಪಿ, ಚಡ್ಡಿಯಲ್ಲೂ ವೈವಿಧ್ಯತೆ ಇದೆ. ನಾನು ತಿಳಿದಿರುವಂತೆ ಹಿಂದೆ ಸಂಬಂಧಪಟ್ಟವರಿಗೆ ಮೊದಲೇ ಬರುವ ವಿಚಾರ ತಿಳಿಸಿ ಭೇಟಿ ನೀಡುತ್ತಿದ್ದದ್ದು ಕಡಿಮೆ. ಈಗ ಆಯ್ದ ದಾನಿಗಳಿಗೆ ಮೊದಲೇ ತಿಳಿಸಿ ಭೇಟಿ ನೀಡುವುದು ರೂಢಿಯಾಗಿದೆ. ಕೆಲವೊಂದು ತಂಡಗಳಲ್ಲಿ ವೃತಾಚರಣೆ ಜಾರಿಯಲ್ಲಿದೆ. ಕಲೆಗೆ ಧಾರ್ಮಿಕ ಸ್ಪರ್ಶ ನೀಡಿ ದೇವರ ಸೇವೆ ಎಂದು ತಿಳಿಯುವ ಬಹು ದೊಡ್ಡ ವರ್ಗವೇ ಇದೆ. ಹುಡುಗಿಯರು, ಹೆಂಗಸರೂ ವೇಷ ಧರಿಸುತ್ತಾರೆ. ಒಂದೆರಡು ವರ್ಷದ ಹಿಂದೆ ಕಡಿಯಾಳಿಯಲ್ಲಿ ಹುಡುಗಿಯರ ಹುಲಿವೇಷ ತಂಡ ಸಂಚಲನ ಮೂಡಿಸಿತ್ತು.
ತಾಸೆ ಎಂಬ ಮಾಯೆ, ಮೈ ರೋಮಾಂಚನಗೊಳಿಸುವ ಅದರ ಸದ್ದು
ತಾಸೆ ಕಲಾವಿದರನ್ನು ಕಂಡರೆ ನನಗೆ ಎಲ್ಲಿಲ್ಲದ ಪ್ರೀತಿ. ಇದನ್ನು ನುಡಿಸಲು ಶಕ್ತಿಯೊಂದಿದ್ದರೆ ಸಾಲದು. ಶಕ್ತಿ ಜೊತೆ ಯುಕ್ತಿ ಸೇರಿ ಕೌಶಲ್ಯವೂ ಬೇಕು. ಹಿಂದೆಲ್ಲಾ ಅವರನ್ನು ಅಷ್ಟಾಗಿ ಯಾರೂ ಗುರುತಿಸುತ್ತಿರಲಿಲ್ಲ. ಆದರೆ ಈಗಂತೂ ಕೆಲವು ತಾಸೆ ಕಲಾವಿದರ ಹೆಸರು ಜನಜನಿತವಾಗಿದೆ. ಅವರಿಗೆ ಬೇಡಿಕೆ ಇದೆ. ‘ಮೊತ್ತ ಎಷ್ಟಾದರೂ ಸರಿ ಅವರೇ ಬೇಕು’ ಎನ್ನುವಷ್ಟರ ಮಟ್ಟಿಗೆ ತಾಸೆ ಕಲಾವಿದರು ಹೆಸರುವಾಸಿಯಾದವರಿದ್ದಾರೆ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಈಗ ಕುರಿಯ ಚರ್ಮದ ತಾಸೆ ಮಾಯವಾಗಿ ಫೈಬರ್ ತಾಸೆ ಚಾಲ್ತಿಯಲ್ಲಿದೆ. ಸದ್ದು ಸುಮಾರು ಒಂದು ಕಿ. ಮೀ ವರೆಗೂ ಸ್ಪಷ್ಟವಾಗಿ ಕೇಳಿಸುವ ತಾಕತ್ತು ಈ ಫೈಬರ್ ತಾಸೆಗಿದೆ.

ಕಷ್ಟ
ವೇಷಧಾರಿ ಕನಿಷ್ಠ ಮೂರು ದಿನ ನಿದ್ದೆಗೆಡಬೇಕು. ಹಬ್ಬ ಮುಗಿದ ನಂತರ 3 – 4 ದಿನ ಮೈ ಕೈ ನೋವು ಸಾಮಾನ್ಯ. ಬಣ್ಣ ಬಳಿಯುವಾಗ ಸ್ವಲ್ಪ ಉರಿಯ ಜೊತೆಗೆ ಬಣ್ಣದ ಮೇಲೆ ಕುರಿ ರೋಮ ಚೆಲ್ಲುವಾಗ ಚುಚ್ಚಿದಂತೆ ಭಾಸವಾಗುವ ನೋವು ಒಟ್ಟೊಟ್ಟಿಗೇ ಸಹಿಸಬೇಕು. ಬಣ್ಣ ತೆಗೆಯಲು ಯಾರಾದರೊಬ್ಬರ ಸಹಾಯ ಬೇಕು. ಚಡ್ಡಿಯ ಮೇಲೆ ಜಟ್ಟಿಯನ್ನು ಬಿಗಿಯಾಗಿ ಕಟ್ಟುವುದರಿಂದ ಮಲ, ಮೂತ್ರ ವಿಸರ್ಜನೆ ಮಾಡುವುದು ಕಷ್ಟ.ಬಿಸಿಲಿನ ತಾಪ ಏನಾದರೂ ಜೋರಾಗಿದ್ರೆ ಕೆಲವೊಮ್ಮೆ ಪಿತ್ತ ನೆತ್ತಿಗೇರಿ ತಲೆ ಸುತ್ತು ಬರುವುದು, ನಿತ್ರಾಣ ಇತ್ಯಾದಿ ಅರೋಗ್ಯ ಸಮಸ್ಯೆ ಕಂಡು ಬರಬಹುದು. ಇಷ್ಟೆಲ್ಲಾ ಕಷ್ಟವಿದೆ ಎಂದು ತಿಳಿದರೂ ಆ ಹುಚ್ಚು ಅಥವಾ ಚಟ ಮಾತ್ರ ಕೆಲವರಲ್ಲಿ ಕಡಿಮೆಯಾಗದಿರುವುದು ನಿಜಕ್ಕೂ ವಿಶೇಷ !!
ಇಷ್ಟ
ತರಹೇವಾರಿ ವೇಷಗಳೆಷ್ಟೇ ಇದ್ದರೂ ಹುಲಿವೇಷ ಇಲ್ಲದೆ ಇದ್ದರೆ ಹಬ್ಬ ಕಳೆಗಟ್ಟುವುದಿಲ್ಲ. ನಿಜವಾದ ಮೆರುಗು, ಜೀವಂತಿಕೆ ಬರುವುದೇ ಹುಲಿವೇಷ ಇದ್ದಾಗ.ಕೃಷ್ಣ ಮಠದ ರಥಬೀದಿ ಸುತ್ತ ಜರಗುವ ವಿಟ್ಲಪಿಂಡಿ ಆಚರಣೆಯಲ್ಲಿ ಲಕ್ಷ ಜನರ ಮಧ್ಯೆ ಎದ್ದು ಕಾಣುವುದೇ ಹುಲಿವೇಷ !! ಶ್ರೀಕೃಷ್ಣನನ್ನು ಮಠದಿಂದ
ಹೊರಕ್ಕೆ ಕರೆದುಕೊಂಡು ಬರುವಾಗ ಹುಲಿವೇಷ ತಂಡ ಅವನೊಂದಿಗೆ ಕುಣಿದು ಬರುವ ದೃಶ್ಯ ರೋಮಾಂಚನಗೊಳಿಸುತ್ತದೆ. ಭರಪೂರ ಮನೋರಂಜನೆಯ ಜೊತೆ ಆ ತಾಸೆಯ ಸದ್ದಿಗೆ ಜೀವಮಾನದಲ್ಲಿ ಒಮ್ಮೆಯೂ ಕುಣಿಯದವನು ಕುಣಿಯಬೇಕು!

ಅಳಿವಿನಂಚಿನಲ್ಲಿರುವ ಹುಲಿವೇಷ ? !
ಬದಲಾದ ಕಾಲಘಟ್ಟದಲ್ಲಿ ಹುಲಿವೇಷ ಅಳಿವಿನಂಚಿನಲ್ಲಿದೆ ಎಂಬ ಮಾತು ಕೇಳಿದ್ದೇನೆ. ಈ ಮಾತು ಮಾತ್ರ ನನಗೆ ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ, ಎಂದಿಗೂ ನಂಬುವುದೂ ಇಲ್ಲ. ಮತ್ತೊಂದು ಬಹು ಮುಖ್ಯವಾದ ಅಂಶವೆಂದರೆ ಹೆಚ್ಚಾಗಿ ಹಿಂದೂ ಬಾಂಧವರು ಉಳಿಸಿ ಬೆಳೆಸಿರುವ ಕಲೆಯಾದರೂ ಇದನ್ನು ಪ್ರೀತಿಸದ ವರ್ಗವೇ ಇಲ್ಲ!! ಈ ಕಲೆಗೆ ಜಾತಿ ಮತದ ಬೇಲಿಯಂತೂ ಇಲ್ಲವೇ ಇಲ್ಲ! ನನ್ನ ಚಡ್ಡಿ ದೋಸ್ತ್ ಆರೀಫ್ ಹುಲಿವೇಷ ನೋಡಲು, ಕುಣಿಯಲು ಅವರಿಗೆ ತನ್ನಿಂದಾದ ದೇಣಿಗೆ ನೀಡಲು ವರ್ಷವೂ ಗಲ್ಫ್ ರಾಷ್ಟ್ರದಿಂದ ರಜೆ ಹೊಂದಿಸಿಕೊಂಡು ಬರುತ್ತಾನೆ. ತಾಸೆ,ಡೋಲಿನ ಜೊತೆ ತುತ್ತೂರಿ(Trumpet) ನುಡಿಸುವ, ಇತ್ತೀಚಿಗೆ ಸೇರಿಕೊಂಡಿರುವ ನಾದಸ್ವರ ನುಡಿಸುವ ಕಲಾವಿದರಲ್ಲಿ ಕ್ರಿಶ್ಚಿಯನ್, ಮುಸಲ್ಮಾನ ಬಾಂಧವರೂ ಇದ್ದಾರೆ.

ಮಧ್ಯಮ ವರ್ಗ – ಪ್ರಮುಖ ಪಾತ್ರ
ಈ ಮಾತನ್ನು ಗಮನಿಸಿ ಸ್ನೇಹಿತರೆ.. ಬಣ್ಣ ಹಚ್ಚಿ ಕುಣಿಯುವ, ತಾಸೆ, ತುತ್ತೂರಿ, ನಾದಸ್ವರ ನುಡಿಸುವ, ಬಣ್ಣ ಬಳಿಯುವ ಅಧಿಕ ಮಂದಿ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರು. AC ಕೊಠಡಿಯಲ್ಲಿ ಕೂತು, ಲಕ್ಷಗಟ್ಟಲೆ ಸಂಬಳ ಪಡೆದು, ಉನ್ನತ ಹುದ್ದೆಯಲ್ಲಿರುವ ಮಂದಿ ಹುಲಿವೇಷದ ಉಸಾಬರಿಗೆ ಬಂದ ಹಾಗೆ ಕಾಣಿಸುವುದಿಲ್ಲ. ಈ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಶ್ರಮ ಪಡುತ್ತಿರುವವರಿಗೆ ಉದ್ಯಮಿಗಳು, ದಾನಿಗಳು, ನಮ್ಮಂತಹ ಯುವಕರು ನಮ್ಮಿಂದಾದ ಪ್ರೋತ್ಸಾಹವನ್ನು ಕೈತುಂಬಾ ನೀಡಬೇಕು ಎನ್ನುವುದು ಈ ಬರಹದ ಆಶಯವಾಗಿದೆ (ಅದನ್ನು ಪ್ರೋತ್ಸಾಹಿಸುವ ಶ್ರೀಮಂತರ ವರ್ಗವೂ ಇದೆ).
ಹಣ್ಣುಗಳ ರಾಜ ಮಾವು ಇದ್ದ ಹಾಗೆ ವೇಷಗಳ ರಾಜ ಹುಲಿವೇಷ ಎನ್ನಬಹುದು. ಹಬ್ಬದ ಸಂದರ್ಭ ಅಲ್ಲಲ್ಲಿ ಹುಲಿವೇಷ ಕುಣಿತ ಸ್ಪರ್ಧೆ ಏರ್ಪಡಿಸುತ್ತಿರುವ ಸಂಘ ಸಂಸ್ಥೆಗಳ ಶ್ರಮವನ್ನು ಅಭಿನಂದಿಸಬೇಕು. ‘ಹುಲಿವೇಷ ಅಳಿವಿನಂಚಿನಲ್ಲಿದೆ’ ಎಂದು ಯಾವತ್ತಿಗೂ ಕೇಳದ ಹಾಗಾಗಲಿ ಎನ್ನುವ ಹಾರೈಕೆಯೊಂದಿಗೆ …
ಹೇಳಲು ಹೋದರೆ ಸಾವಿರ ಮಾತಿದೆ ..