ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹೆಜ್ಜೆ ಹೆಜ್ಜೆಗೂ ಬಾಳೆ ಎಲೆಯ ಮೀನು ಊಟದ ಹೋಟೆಲ್ ಗಳು ಕಾಣಸಿಗುತ್ತವೆ. ಅದು ಇಲ್ಲಿನ ವಿಶೇಷತೆಗಳಲ್ಲೊಂದು. ಊರಿನಿಂದೂರಿಗೆ ರುಚಿ, ತಾಜಾತನ ಎಲ್ಲವೂ ಬದಲಾಗುತ್ತಲೇ ಹೋಗುತ್ತದೆ. ಸಣ್ಣ ಪುಟ್ಟ ಹೊಟೇಲುಗಳಲ್ಲಿ ಸಿಗುವ ಮೀನು ಊಟದ ರುಚಿ ದೊಡ್ಡ ಸ್ಟಾರ್ ಹೋಟೆಲ್ ಗಳಲ್ಲಿ ಸಿಗುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಹೆಚ್ಚಿನ ಸಣ್ಣ ಪುಟ್ಟ ಮೀನು ಊಟದ ಹೋಟೆಲ್ ನಲ್ಲಿ ನಾನು ಊಟ ಮಾಡಿದ್ದೇನೆ. ಅಂದ್ರೆ ಸಿಕ್ಕ ಸಿಕ್ಕ ಹೋಟೆಲ್ ಗೆ ಹೋಗಿಲ್ಲ, ಆದ್ರೆ ಒಮ್ಮೆ ಹೋಗಬೇಕು ಅಂದುಕೊಂಡ ಕಡೆಗೆ ಹೋಗಿ ರುಚಿ ನೋಡಿದ್ದೇನೆ.
ಮಣಿಪಾಲದ ಕೆನರಾ ಬ್ಯಾಂಕ್ ಶಾಖೆಯಿಂದ ( ಆಗಿನ Syndicate Bank head Office) ಅರ್ಧ ಕಿ. ಮೀ. ಮುಂದೆ ಬಂದರೆ ಶಾಂತಿನಗರಕ್ಕೆ ಹೋಗುವ ದಾರಿಯಲ್ಲಿ ಬಲಗಡೆ ಗೂಡಂಗಡಿ ತರಹ ಅಥವಾ ಅರ್ಧಕ್ಕೆ ನಿಂತ ಕಟ್ಟಡದ ರೀತಿ ಕಾಣುವ ಸಣ್ಣ ಹೋಟೆಲ್ ಒಂದಿದೆ. ಅದು ಹೋಟೆಲ್ ಎಂದು ತಕ್ಷಣಕ್ಕೆ ಪ್ರಾಯಶಃ ಕಂಡು ಬರುವುದಿಲ್ಲ. ಆದ್ರೆ ಮಧ್ಯಾಹ್ನದ ಹೊತ್ತು ಅಲ್ಲಿ ಕಾರು, ಬೈಕುಗಳು ಸಾಲು ಸಾಲಾಗಿ ನಿಂತು, ಊಟ ಮುಗಿಸಿ ಒಂದೈದು ನಿಮಿಷ ಅಲ್ಲೇ ಹೊರಗಡೆ ನಿಂತು ಹರಟೆ ಹೊಡೆಯುವ ಒಂದಿಷ್ಟು ಮಂದಿ ಕಾಣ ಸಿಗುತ್ತಾರೆ. ಒಳಗಡೆ ಹೊಕ್ಕರೆ ಮೀನು ಫ್ರೈ ನ ಘಮ ಘಮ ಪರಿಮಳ ಮೂಗಿಗೆ ಬಡಿದು ಮೀನಿನೊಂದು ತುಂಡನ್ನು ನೀವು ಬಾಯಿಗಿಡುವಲ್ಲಿವರೆಗೆ ಕಾಯಲು ಸಾಧ್ಯವಾಗುವುದಿಲ್ಲ. ಸುಮ್ಮನೆ ಹಾಗೆ ಹೀಗೆ ಅಟ್ಟಕ್ಕೇರಿಸಿ ಬರೆಯುತ್ತಿಲ್ಲ. ಇದು ನಿಜ. ಮತ್ತೊಂದು ವಿಶೇಷ ಅಂದ್ರೆ ಇಲ್ಲಿ IT, BT, ಹೆಸರುವಾಸಿ ಕಾಲೇಜಿನ ಅಧ್ಯಾಪಕರು, Doctors, Corporate ಕಂಪನಿಯ ಉದ್ಯೋಗಿಗಳು ಊಟಕ್ಕೆ ಬರುತ್ತಾರೆ. ಒಂದಿಷ್ಟೇ ಜಾಗ, ನೆತ್ತಿ ಮೇಲೆ ಹಂಚಿನ ಹಾಸು ಬಿಟ್ಟರೆ ಎದುರುಗಡೆ ತಗಡಿನ ಶೀಟು ಕಾಣಸಿಗುತ್ತದೆ. ಇದೇ ಕಾರಣಕ್ಕೆ ಕೆಲವು Software ಉದ್ಯೋಗಿಗಳು ಇದಕ್ಕೆ ‘ ತಗಡ್ ಶೀಟ್ ‘ ಅಂತಾನೆ ಹೆಸರಿಟ್ಟುಬಿಟ್ಟಿದ್ದಾರೆ. ! ‘ ಇನಿ ತಗಡ್ ಶೀಟ್ ಪೋಯ ‘ ?, ‘ ಓಲುಲ್ಲಾ ? ಯಾನ್ ತಗಡ್ ಶೀಟ್ ಡ್ ಉಲ್ಲೆ’ ಇಂತಹ ಮಾತುಗಳು ಕೇಳಿಬರುವುದು Common.
ಊಟ ಚೆನ್ನಾಗಿದೆ. ಆದರೆ ಅದಕ್ಕೂ ಚೆನ್ನಾಗಿರುವುದು ಇಲ್ಲಿನ ಮೀನು ಫ್ರೈ ! ಅದಕ್ಕಾಗಿ ಬಳಸುವ ಮಸಾಲೆಯ ರುಚಿ ಅತ್ಯದ್ಭುತವಾಗಿದೆ. ಎರಡಕ್ಕಿಂತ ಕಡಿಮೆ ಫ್ರೈ ತಿನ್ನದವರಿಲ್ಲ. ಒಂದು ಕುಟುಂಬದ ಸದಸ್ಯರು ಮತ್ತಿಬ್ಬರು ಸಹಾಯಕರು ಸಲೀಸಾಗಿ ಬಂದವರನ್ನು ಸಂಭಾಳಿಸುತ್ತಾರೆ.
ಅತೀ ಸರಳ ಎನಿಸುವ ಯಾವುದೇ ಖರ್ಚಿಲ್ಲದೆ ರುಚಿಗೆ ಮಹತ್ವ ಕೊಟ್ಟ ಈ ಯಶಸ್ವೀ ಮೀನು ಹೋಟೆಲ್ ನಿಂದ ಉದ್ಯಮದ ಗುಟ್ಟನ್ನು ಮುಂದೆ ಮೀನು ಊಟದ ಹೋಟೆಲ್ ತೆರೆಯುವವರು ಕಲಿಯಬಹುದು. ಮಣಿಪಾಲ ಕಡೆ ಬಂದ್ರೆ ಒಮ್ಮೆ ಭೇಟಿ ನೀಡಿ ಹೋಟೆಲ್ Shreesagar ಅಲ್ಲಲ್ಲ …ತಗಡ್ ಶೀಟ್ !
ಇಲ್ಲಿನ ಮೀನು ಫ್ರೈ ಕುರಿತು ಹೇಳಲು ಹೋದ್ರೆ.. ಅಬ್ಬಾ.. ಸಾವಿರ ಮಾತಿದೆ