ಪ್ರತಿ ಬಾರಿ ರವಿ ಬಸ್ರೂರ್ ಹೆಸರು ಕೇಳಿದಾಗಲೆಲ್ಲ ನಾನು ಚಿಗುರುತ್ತೇನೆ. ಕುಂದಾಪ್ರ ಕನ್ನಡ, ಸಾಧನೆ, ಹಠ ಸಾಧನೆ, ಅಂದುಕೊಂಡಿದ್ದನ್ನು ಮಾಡಿಯೇ ತೀರುವ ಛಲ – ಇವೆಲ್ಲದರ ಮಿಶ್ರಣವೇ ರವಿ ಬಸ್ರೂರ್. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಬಸ್ರೂರಿನ ಕಿರು ಓಣಿಯ ಮನೆಯಿಂದ ಬಾಲಿವುಡ್ ವರೆಗೆ ಕ್ರಮಿಸಿದ ಬಸ್ರೂರ್ ಪ್ರಯಾಣ ನಿಜಕ್ಕೂ ರೋಚಕವಾದದ್ದು. ಈ ಬಾರಿ ‘ಕುಂದಪ್ರಭ’ ಪತ್ರಿಕೆ ಕೊಡಮಾಡುವ ಪ್ರತಿಷ್ಠಿತ ಕೋ. ಮ. ಕಾರಂತ ಪ್ರಶಸ್ತಿಗೆ ರವಿ ಆಯ್ಕೆಯಾಗಿದ್ದು ನಿಜಕ್ಕೂ ಸಂತಸದ ಸಂಗತಿಯಾಗಿದೆ. ಪ್ರಶಸ್ತಿಯ ತೂಕವೂ ಹೆಚ್ಚಿದೆ. ಆ ಕಾರಣಕ್ಕೆ ಈ ಲೇಖನ ಬರೆಯಲು ಮುಂದಾದೆ.
ನಾನು ರವಿ ಅವರನ್ನು ಮೊದಲು ಭೇಟಿಯಾಗಿದ್ದು 2012 ರಲ್ಲಿ. ಅವತ್ತು ಕೋಟೇಶ್ವರದ ಗೌಜಿಯ ಕೊಡಿ ಹಬ್ಬದ ಜನ ಜಾತ್ರೆಯ ನಡುವೆ ತನ್ನ ಗೆಳೆಯರೊಂದಿಗೆ ‘Panak Makkal’ CD ಮಾರಾಟ ಮಾಡುತ್ತಿದ್ದ ರವಿ ಬಸ್ರೂರ್ ಇಂದು Gaana, Jio Saawan, Spotify, Amazon Music, Youtube, Apple Musicಗಳಲ್ಲಿ ತನ್ನ ಹಾಡುಗಳನ್ನು ಜನರು ಹುಚ್ಚೆದ್ದು ಹುಡುಕಾಡುವಂತೆ ಬೆಳೆದದ್ದರ ಹಿಂದಿನ ಮೂಲ ಮಂತ್ರ ಒಂದೇ .. ಅದು ಶ್ರಮ ಮತ್ತು ಶ್ರಮ ಮಾತ್ರ.
ಹೀಗೆ ನನಗವರ ಪರಿಚಯ ಆಗಿ ಸ್ನೇಹ ಬೆಳೆಯಿತು. ನಂತ್ರ ಅವರ ಎಲ್ಲಾ ಚಟುವಟಿಕೆಗಳನ್ನು Follow ಮಾಡುತ್ತಲೇ ಬಂದೆ. ಹಲವು ಬಾರಿ ಭಾಷಣಗಳಲ್ಲಿ ಅವರ ಮಾತುಗಳನ್ನು ಉಲ್ಲೇಖ ಮಾಡಿದ್ದೇನೆ. ಸ್ಪಂದನ ವಾಹಿನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದಿನಗಳಲ್ಲಿ ರವಿ ಸ್ಟುಡಿಯೋಗೆ ಬಂದು ಸೀರಿಯಲ್ ಮಾಡುವ ವಿಚಾರ ಪ್ರಸ್ತಾಪಿಸಿದ್ದರು. ಕಾರಣಾಂತರಗಳಿಂದ ಅದು ಕೈಗೂಡಲಿಲ್ಲ. ಅವರ ‘ಕಟಕ’ ಸಿನಿಮಾದ ಕೊಂಕಣಿ ಟ್ರೈಲರ್ ಗೆ ಧ್ವನಿ ನೀಡುವ ಅವಕಾಶವನ್ನು ನನಗೆ ಕಲ್ಪಿಸಿಕೊಟ್ಟರು. ಬೆಂಗಳೂರಿನಲ್ಲಿ ಅವರ ಹಳೆಯ ಸ್ಟುಡಿಯೋದಲ್ಲಿ ತಾನು compose ಮಾಡಿ ಬಿಡುಗಡೆಯಾಗಬೇಕಾಗಿದ್ದ ಹಾಡುಗಳನ್ನು ಕೇಳಿಸಿದ್ದರು.
2014ರಲ್ಲಿ ಬಸ್ರೂರಿನ ಜಾತ್ರೆಯಲ್ಲಿ ಸಂಗೀತ ಕಾರ್ಯಕ್ರಮ ನಿರೂಪಣೆ ಸಂದರ್ಭ ವೇದಿಕೆ ಮೇಲೆ ಅವರ ಕುರಿತು ಮಾತನಾಡುವ ಅವಕಾಶ ನನಗೆ ಸಿಕ್ಕಿತ್ತು. ಬೆಂಗಳೂರಿನ ‘ನಮ್ಮೂರ ಹಬ್ಬ’ದ ಕುರಿತು ಅವರು ಶೀರ್ಷಿಕೆ ಗೀತೆಯೊಂದನ್ನು ತಯಾರಿಸಿದ್ದರು. ಅದು ಕೂಡ ಜನಮನ್ನಣೆ ಪಡೆದು ಹಬ್ಬ ಮುಗಿದು ಹಲವು ದಿನಗಳವರೆಗೂ ಎಲ್ಲರೂ ಗುನುಗುವಂತೆ ಮಾಡಿತ್ತು.
‘ ಹೆಜ್ಜೆ ಗುರುತು’ ಕಾರ್ಯಕ್ರಮದಲ್ಲಿ ರವಿ ಬಸ್ರೂರ್
2018 ರಲ್ಲಿ ಜನರು ಮೆಚ್ಚಿಕೊಂಡಿದ್ದ ‘ಹೆಜ್ಜೆ ಗುರುತು’ ಕಾರ್ಯಕ್ರಮದಲ್ಲಿ ನಾನು ರವಿ ಬಸ್ರೂರ್ ಹೆಸರು ಪ್ರಸ್ತಾಪಿಸಿದಾಗ ‘ ಜನ ಬರಬಹುದಾ’ ಅಂತ ಕೇಳಿದವರು ಕೆಲವರು. ನಂಬಿ, ಆವತ್ತು ಕುಂದಾಪುರದಿಂದ 3 van ನಲ್ಲಿ ಜನರು ಬಂದಿದ್ದರು! ಸಭಾಂಗಣ ತುಂಬಿತ್ತು.
ತಮ್ಮ ಪ್ರಯಾಣದ ಕುರಿತು ಅಷ್ಟೊಂದು ವಿಸ್ತಾರವಾಗಿ ರವಿ ಹೇಳಿಕೊಂಡಿದ್ದು ಅದೇ ಮೊದಲು ಎಂದು ನನಗನಿಸುತ್ತದೆ.
ರವಿ ಒಬ್ಬ ಒಳ್ಳೆಯ ಮಾತುಗಾರರೂ ಹೌದು. ಭಾಷಣದ ಕಲೆಯೂ ಅವರಿಗೆ ಸಿದ್ಧಿಸಿದೆ. 4 ವರ್ಷಗಳ ಹಿಂದೆ Youtubeನಲ್ಲಿ ನಾ ಕಂಡ ಅವರ ಭಾಷಣದ ಕೆಲವು ಮಾತುಗಳು ಈ ಹೊತ್ತಿಗೆ ನೆನಪಾಗುತ್ತಿದೆ.
Switch ಒತ್ತಿದರೆ ಕರೆಂಟ್ ಬರುತ್ತದೆ ಅಂತ ಗೊತ್ತಾಗಿದ್ದು ನಾನು 10 ನೇ ತರಗತಿಯಲ್ಲಿ ಇದ್ದಾಗ. 8 ಫೇಲ್. 10 ತರಗತಿಗೆ ಪರೀಕ್ಷೆ ಬರೆದಿದ್ದೆ ಆದ್ರೆ ಪಾಸೋ, ಫೇಲೋ ಅಂತ ನನಗೆ ನೆನಪಿಲ್ಲ!
‘ಉಗ್ರಂ’ ಸಿನಿಮಾ ಬಿಡುಗಡೆಯಾಗೋವರೆಗೆ 63 ಚಿತ್ರಗಳಿಗೆ ಸಂಗೀತ ನೀಡಿದ್ದೆ. ಈಗ ಕನ್ನಡ, ಹಿಂದಿ, ತಮಿಳು ಸೇರಿ ಒಟ್ಟು 97 ಚಿತ್ರಗಳಿಗೆ ಸಂಗೀತ ನೀಡಿದ್ದೇನೆ ! (4 ವರ್ಷಗಳ ಹಿಂದಿನ ಮಾತು)
ಪ್ರತಿಭೆ ಇದ್ದವ ಅಡಗಿ ಕೂತಿರುತ್ತಾನೆ. ಸಣ್ಣ ಪುಟ್ಟ ಪ್ರತಿಭೆ ಇದ್ದವ ಮುಂದೆ ಬರುತ್ತಾನೆ. ಪ್ರತಿಭೆ ಇದ್ದವರನ್ನು ಗುರುತಿಸಿ ಮುನ್ನೆಲೆಗೆ ತಳ್ಳಬೇಕು.
8 ನೇ ತರಗತಿ ಫೇಲ್ ಆದ ನಾನು ಕನ್ನಡದ ‘ ಕಟಕ’ ಸಿನಿಮಾಕ್ಕೆ 14 ಹಾಲಿವುಡ್ ಕಂಪನಿಗಳನ್ನು ಕರೆತಂದಿದ್ದೇನೆ’
ನಮ್ಮ ದೇಶದಲ್ಲಿ ಸುಮಾರು 1857 ಭಾಷೆಗಳಿವೆ. ಅದರಲ್ಲಿ 650 ಮಾತ್ರ ಉಳಿದುಕೊಂಡಿವೆ. ಕೊಂಕಣಿ, ಬ್ಯಾರಿ, ತುಳು, ಕುಂದಾಪ್ರ ಕನ್ನಡ ಹೀಗೆ ಆಯಾಯ ಭಾಷೆಗಳನ್ನು ಎಲ್ಲಾ ಸಂದರ್ಭಗಳಲ್ಲೂ ಬಳಸುವುದು ನನ್ನ, ನಿಮ್ಮ ಕರ್ತವ್ಯ. ಅದನ್ನು ಪ್ರಾಮಾಣಿಕವಾಗಿ ಮಾಡೋಣ.
ಇನ್ನು KGF, KGF – 2 ಯಶಸ್ಸಿನ ಕುರಿತು ನಾನೇನೂ ಹೇಳಬೇಕಾಗಿಲ್ಲ !
ಹೆಜ್ಜೆ ಗುರುತು ಕಾರ್ಯಕ್ರಮಕ್ಕೆ ಅವರ ಮನೆಯಲ್ಲಿ ಅಣ್ಣ, ತಮ್ಮ ಮನೆಯವರನ್ನು ಮಾತನಾಡಿಸಿ ಅವರ ಕುರಿತು ಹಲವು ವಿಡಿಯೋ ಸಂಗ್ರಹಿಸಿದ್ದೇನೆ. ಮುಂದೆ ಅವಕಾಶ ಸಿಕ್ಕಾಗ ಮತ್ತೊಂದು ಲೇಖನ ಬರೆದು ಅಲ್ಲಿ ಪ್ರಕಟಿಸುತ್ತೇನೆ.
ಇವತ್ತು ರವಿ ಬಸ್ರೂರ್ ಜನ್ಮದಿನ. ಈ ದಿನವೇ ಅವರು ತಮ್ಮ ಸಾಧನೆಗಾಗಿ ಪ್ರತಿಷ್ಠಿತ ಕೋ. ಮ. ಕಾರಂತ ಪ್ರಶಸ್ತಿ ಪಡೆಯುತ್ತಿರುವುದು ವಿಶೇಷ.
ತುರ್ತಿನಲ್ಲಿ ನಾನಿಲ್ಲಿ ಬರೆದದ್ದು ನೂರರಲ್ಲಿ ಕೇವಲ ಶೇ 5 ರಷ್ಟು!
ನಿಮಗೇನಾದರೂ ಸಾಧನೆ ಮಾಡಬೇಕು ಅಂತ ಇದ್ರೆ ಇವತ್ತೇ Last Date ಅಂತ ತಿಳಿಯಿರಿ –Ravi Basrur
ಅವರ ಜೊತೆಗಿನ ಒಡನಾಟ ಮತ್ತವರ ಸಾಧನೆ ಕುರಿತು ಹೇಳಲು ಹೋದರೆ ನಿಜಕ್ಕೂ ಸಾವಿರ ಮಾತಿದೆ..!!