Home Trending ಬಾಲ್ಯ ನೆನಪಿಸುವ ‘ಪೇಟ್ಲಾ’ ಈ ಬಾರಿ ಜನ್ಮಾಷ್ಟಮಿಗೆ ಮತ್ತಷ್ಟು ಮೆರುಗು !!

ಬಾಲ್ಯ ನೆನಪಿಸುವ ‘ಪೇಟ್ಲಾ’
ಈ ಬಾರಿ ಜನ್ಮಾಷ್ಟಮಿಗೆ ಮತ್ತಷ್ಟು ಮೆರುಗು !!

12

ನಿಮ್ಮ ಬದುಕಿನ ಸುಂದರ ಕ್ಷಣಗಳನ್ನು ಕಳೆದದ್ದು ಜೀವನದ ಯಾವ ಘಟ್ಟದಲ್ಲಿ ಅಂತ ಸುಮ್ನೆ ಯಾರಿಗಾದ್ರು ಒಮ್ಮೆ ಕೇಳಿದರೆ ‘ಬಾಲ್ಯ’ ಅನ್ನೋ ಉತ್ತರ ನಿಮಗೆ ಹೆಚ್ಚಾಗಿ ಸಿಕ್ರೆ ಆಶ್ಚರ್ಯ ಇಲ್ಲ. ಹೌದು.. ಯಾಕಂದ್ರೆ ಅಲ್ಲಿ ಕಪಟ, ನಾಟಕ, ಮುಖವಾಡ ಯಾವುದೂ ಇರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ತಂತ್ರಜ್ಞಾನ ನಮ್ಮನ್ನು ಅವರಿಸಿಕೊಳ್ಳೋ ಮುನ್ನ ಜಾತಿ, ಮತಗಳ ಬೇಧ ನಮ್ಮಲ್ಲಿರಲಿಲ್ಲ ( ನನ್ನಲ್ಲಿ ಈಗಲೂ ಇಲ್ಲ). ಇಂತಹ ಅಮೂಲ್ಯ ಬಾಲ್ಯವನ್ನು ಮತ್ತಷ್ಟು ಹಸನಾಗಿಸಿದ್ದು ಆ ದಿನಗಳಲ್ಲಿನ ಕೆಲವು ವಿಶೇಷ ಆಚರಣೆಗಳು. ಈ ಹೊತ್ತಿಗೆ ನನ್ನ ಬಾಲ್ಯದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂದರ್ಭ ‘ಪೇಟ್ಲಾ’ ಆಡುತ್ತಿದ್ದ ನೆನಪನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಈ ಮೂಲಕ ನಿಮ್ಮ ಬಾಲ್ಯವನ್ನು ನಿಮಗೆ ನೆನಪಿಸುತಿದ್ದೇನೆ.

ಏನಿದು ಪೇಟ್ಲಾ ?

ಇದನ್ನು ಬಿದಿರು ಕೋಲಿನಿಂದ ತಯಾರಿಸುತ್ತಾರೆ. 10 ಇಂಚಿನಷ್ಟು ಕೋಲಿನ ಮಧ್ಯೆ ಉದ್ದಕ್ಕೂ ರಂಧ್ರ, ಮುಂಭಾಗ ರಿಕ್ಷಾದ Hornನಂತೆ ಕಾಣುವ ಬಾಯ್ತೆರೆದ ಮುಖ, ರಂಧ್ರಕ್ಕೆ ಕಾಯಿ ( ಪೇಟ್ಲಾ ಕಾಯಿ) ಹಾಕಿ ಅದರೊಳಗೆ ಹೊಕ್ಕುವ ಕೋಲಿನಿಂದ ಕಾಯಿಯನ್ನು ಜೋರಾಗಿ ದೂಡಿದರೆ ಸಾಕು ಅದರಿಂದ ಹೊಮ್ಮುವ ಸದ್ದನ್ನು ನಾವು ಕೇಳಿ ಪಡುವ ಖುಷಿಗೆ ಪಾರವೇ ಇರಲಿಲ್ಲ. ಪ್ರಪಂಚದ ಎಲ್ಲಾ ಖುಷಿಯೂ ನಮಗೇ ಸಿಕ್ಕಂತೆ ಭಾಸವಾಗುತಿತ್ತು.

Udupi Shri Krishna Janmashtami

Bamboo sticks are used to make Petla’s

ಪೇಟ್ಲಾ ಕೊಡಿಸುತಿದ್ದ ತಂದೆ, ಅಜ್ಜ

ದಕ್ಷಿಣ ಕನ್ನಡ, ಉಡುಪಿಯಲ್ಲಿ ಪ್ರತಿ ವಾರ ನಡೆಯುವ ಸಂತೆಯಲ್ಲಿ ಅಷ್ಟಮಿಗೂ 10 ದಿನಗಳ ಮುಂಚೆ ಮಾರಾಟಕ್ಕಿರುತ್ತಿತ್ತು. 25 – 30 ರುಪಾಯಿಗೆ ಸಿಗುತ್ತಿದ್ದ ಪೇಟ್ಲಾ ಪ್ರತಿಯೊಬ್ಬರ ಮನೆಯಲ್ಲೂ ಕಾಣಸಿಗುತಿತ್ತು. ನಾವು ಗೆಳೆಯರು ತಂಡ ಕಟ್ಟಿಕೊಂಡು ಪೇಟ್ಲಾ ಆಟವಾಡುತ್ತಿದ್ದೆವು. ಕಾಯಿ ಖಾಲಿಯಾದಾಗ ಬೇಸರದ ಜೊತೆಗೆ ಇನ್ನೊಬ್ಬರಲ್ಲಿ ಕೇಳಿ ಪಡೆಯಲು ಯಾವ ಮುಜುಗರವೂ ಇರುತ್ತಿರಲಿಲ್ಲ. ಹೆಚ್ಚಾಗಿ ಚಿಕ್ಕಪ್ಪಂದಿರಿಗಿಂತ ವರ್ಷವೂ ನನಗೆ ಪೇಟ್ಲಾ ಕೊಡಿಸಿದ್ದು ಅಜ್ಜ ಮತ್ತು ಅಪ್ಪ.

ಪೇಟ್ಲಾದೊಂದಿಗೆ ನಮ್ಮ ಆಟ ಹೀಗಿತ್ತು

ಕಾಯಿಯನ್ನು ಕೆಲವೊಮ್ಮೆ ಆಕಾಶಕ್ಕೆ ಹಾರಿಸುತ್ತಿದ್ದೆವು, ಕೆಲವೊಮ್ಮೆ ಹಕ್ಕಿ ಹಾರಿಸಲು, ಕೆಲವೊಮ್ಮೆ ಗೆಳೆಯರ ಬೆನ್ನಿಗೆ, ಕೆಲವೊಮ್ಮೆ ಬೆನ್ನಿಗೂ ಸ್ವಲ್ಪ ಕೆಳಗೆ ( you know what i mean ) ಇನ್ನು ಕೆಲವೊಮ್ಮೆ ಹುಲಿವೇಷ ಧಾರಿಗಳಿಗೆ ಮತ್ತು ಇತರ ವೇಷಧಾರಿಗಳ ಮೇಲೂ ಈ ಪೇಟ್ಲಾ ಕಾಯಿಯಿಂದ ಆಕ್ರಮಣ ಮಾಡುವುದು ಬಾಲ್ಯದ ವಿಶೇಷ ಚೇಷ್ಟೆಗಳಲ್ಲಿ ಒಂದಾಗಿತ್ತು.

ಕಾಲ ಬದಲಾಯಿತು. ಆಧುನಿಕತೆಯ ಭರಾಟೆಗೆ ಸಿಕ್ಕಿ ಪೇಟ್ಲಾ ಕಣ್ಮರೆಯಾಯಿತು. ಕಾಲಕ್ರಮೇಣ ಇದನ್ನು ತಯಾರಿಸುವವರೇ ಇಲ್ಲ ಅನ್ನೋ ಮಾತನ್ನೇ ನಾನು ವರ್ಷಗಳಿಂದೀಚೆಗೆ ಹೆಚ್ಚಾಗಿ ಕೇಳಿದ್ದೇನೆ. ಸಹಜ ಅಲ್ವೇ.. ಕಾಡು ನಾಶವಾಯಿತು. ಬಿದಿರಿನ ಜತೆಗೆ ಕಾಯಿ ಬೆಳೆಯುವ ಮರವೂ ಇಲ್ಲವಾಯಿತು. ಈ ಕಾರಣಗಳಿಂದಾಗಿ ನಮ್ಮ ನಂತರದ ಪೀಳಿಗೆಗೆ ಈ ಪೇಟ್ಲಾದ ಕಲ್ಪನೆಯೇ ಇಲ್ಲವಾಯಿತು. ‘ಪೇಟ್ಲಾ ಈಗ ಸಿಗುವುದೇ ಇಲ್ಲ’ ಅನ್ನೋ ಮಾತು ಪದೇ ಪದೇ ಕೇಳಿ ಮನಸಿನಲ್ಲಿನ ನೋವಿನ ತೀವ್ರತೆ ಕೂಡ ಕಡಿಮೆಯಾಯಿತು.

ಕೆಲವು ಮುಖ್ಯಾಂಶಗಳು
* ಕೃಷ್ಣ ಜನಿಸಿದಾಗ ಸಂಭ್ರಮಾಚರಿಸಲು ಪೇಟ್ಲಾ ಕಾಯಿ ಹೊಡೆಯುತ್ತಿದ್ದರು ಎಂದು ಹಿರಿಯರು ಹೇಳಿದ್ದನ್ನು ನಾನು ಕೇಳಿದ್ದೇನೆ

* 80, 90 ರ ದಶಕದಲ್ಲಿ ಜನಿಸಿದವರಿಗೆ ಪೇಟ್ಲಾದ ಮಹತ್ವ ಏನೆಂದು ಸ್ಪಷ್ಟವಾಗಿ ತಿಳಿದಿದೆ

* ಕಾಯಿ ಹೊಡೆದಾಗೆಲ್ಲಾ ಒಂದು ‘ ಗ್ಯಾಸ್’ ರೀತಿ ಉತ್ಪತ್ತಿಯಾಗುತ್ತದೆ. ಅದೊಂದು ವಿಶೇಷ ಸುವಾಸನೆ ಬೀರುತ್ತದೆ

* ಗ್ರಹಚಾರ ಕೆಟ್ಟು ಅಪ್ಪಿ ತಪ್ಪಿ ಅಷ್ಟಮಿ ಸಂದರ್ಭ ಪರೀಕ್ಷೆಯಲ್ಲೇನಾದರೂ ಕಡಿಮೆ ಅಂಕ ಬಂದರೆ ಈ ಬಾರಿ ಪೇಟ್ಲಾ ಸಿಗುವುದಿಲ್ಲ ಎನ್ನುವ ಭಯ ಒಳಗೊಳಗೇ ಕಾಡುತ್ತಿತ್ತು

* ನಾನು, ನನ್ನ ತಮ್ಮ ಒಮ್ಮೆ ಖರೀದಿಸಿದ ಪೇಟ್ಲಾವನ್ನು ಜೋಪಾನವಾಗಿ ಮುಂದಿನ ವರ್ಷ ಅಷ್ಟಮಿಯವರೆಗೂ ಕಾಯ್ದಿಟ್ಟುಕೊಳ್ಳುತ್ತಿದ್ದೆವು

* ಬಲು ಮುಖ್ಯವಾದ ಅಂಶ ಅಂತಂದ್ರೆ ಕೃಷ್ಣಾಷ್ಟಮಿಯ ಸಂದರ್ಭ ಈ ಆಟವನ್ನು ಆಡುತ್ತಿದ್ದರೂ ಇಲ್ಲಿ ಜಾತಿ ಮತದ ಬೇಲಿ ಇರಲಿಲ್ಲ

ಈ ಬಾಲ್ಯ ಅನ್ನೋದು ಎಷ್ಟೊಂದು ಅದ್ಬುತ ಎಂತಹ ಅಮೂಲ್ಯ ಅಲ್ವೇ ?

ಹೀಗೆ ಅಳಿದು ಹೋಗಿರುವ ಪೇಟ್ಲಾವನ್ನು ಮತ್ತೆ ಮುನ್ನೆಲೆಗೆ ತಂದು ನಮ್ಮ ಬಾಲ್ಯವನ್ನು ನೆನಪಿಸುತ್ತಿದ್ದಾರೆ ಕಾಪು ಬೆಳಪುವಿನ ಪ್ರಶಾಂತ್ ಮತ್ತವರ ಗೆಳೆಯರು.

Udupi Shri Krishna Janmasthami

Prashanth’s friends making Petla’s

ಇದನ್ನು ತಯಾರಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಬಿದಿರು ಮತ್ತು ಕಾಯಿಯನ್ನು ಹುಡುಕುವುದೇ ಒಂದು ದೊಡ್ಡ ಸಾಹಸವಾಗಿ ಬಿಟ್ಟಿದೆ ಎನ್ನುತ್ತಾರೆ ಪ್ರಶಾಂತ್ ಗೆಳೆಯರು.

ಅದರ ಮುಂಭಾಗವನ್ನು ತಗಡಿನಿಂದ ಅಥವಾ ಮೂಡೆ ಮಾಡುವ ಎಲೆಯಿಂದ ನಾಜೂಕಾಗಿ ಸಿದ್ಧಪಡಿಸಬೇಕು. ತಮ್ಮ ಎಲ್ಲಾ ಕೆಲಸವನ್ನು ಬದಿಗೊತ್ತಿ ಪೇಟ್ಲಾ ತಯಾರಿಸಲು ಇವರೆಲ್ಲರೂ 10 ದಿನಗಳ ತಮ್ಮ ಸಮಯ ಮೀಸಲಿಟ್ಟಿದ್ದಾರೆ.
ಕಾಲ ಬದಲಾಗಿದೆ. ಸಹಜವಾಗಿ ಬೆಲೆಯೂ ಏರಿದೆ. ಒಂದರ ಬೆಲೆ ಕೇವಲ 250 ರೂಪಾಯಿ, ಅಷ್ಟೇ..

Avinash-Kamat-Udupi-Shree-Krishna-Janmasthami
ಪೇಟ್ಲಾ ಮುಂಭಾಗದ ತಗಡಿನ ತುಂಡು

ನೆನಪುಗಳು, ಭಾವನೆಗಳು, ಖುಷಿಯ ಎದುರು ಪೇಟ್ಲಾಗೆ ಬೆಲೆ ಕಟ್ಟಲು ಸಾಧ್ಯ ಇಲ್ಲ. ಕೊರೊನ ನಂತ್ರ ಇದೇ ಮೊದಲ ಬಾರಿಗೆ ಅಷ್ಟಮಿ ಜೋರಾಗಿ ನಡೆಯುವ ಎಲ್ಲಾ ಲಕ್ಷಣ ಕಾಣುತ್ತಿದೆ. ಹಲವು ಹುಲಿವೇಷ ತಂಡಗಳು ಫೀಲ್ಡಿಗಿಳಿಯಲಿವೆ!! ಅದರ ಜೊತೆ ಪೇಟ್ಲಾ ಸೇರಿಕೊಂಡರೆ ಹಬ್ಬ ಈ ಬಾರಿ ಜಗಮಗ..ಈ ಪ್ರಯತ್ನ ಕೈಗೊಂಡ ಪ್ರಶಾಂತ್ ಮತ್ತು ಸ್ನೇಹಿತರಿಗೆ ಅಭಿನಂದನೆಯ ಜೊತೆ ಒಂದು ಸಣ್ಣ ಧನ್ಯವಾದ ಹೇಳೋಣ. ಅಂದ ಹಾಗೆ ಇವರ ಈ ಯೋಜನೆಯಲ್ಲಿ ಮೊದಲ ಪೇಟ್ಲಾ ಖರೀದಿದಾರ ನಾನೇ! ಸಾಧ್ಯವಾದ್ರೆ ನೀವೂ ಒಂದು ಖರೀದಿಸಿ ಇವರನ್ನು ಪ್ರೋತ್ಸಾಹಿಸಿ..

Avinash-Kamat-Udupi-Shree-Krishna-Janmasthami.
ಪ್ರಶಾಂತರ ಈ ಸಾಹಸದಲ್ಲಿ ನಾನು ಖರೀದಿಸಿದ ಮೊದಲ ಪೇಟ್ಲಾ

ಬನ್ನಿ, ಈ ಅಷ್ಟಮಿ ಎಲ್ಲಾ ಹಮ್ಮು ಬಿಮ್ಮು ಬಿಟ್ಟು ಪೇಟ್ಲಾ ಹೊಡೆದು ಮತ್ತೆ ಮಗುವಾಗೋಣ..

ಹೇಳಲು ಹೋದರೆ ಸಾವಿರ ಮಾತಿದೆ

Prashant Poojary, Belapu, Kaup

Ph:+91 72041 21354


12 COMMENTS

  1. ಮತ್ತೆ ಬಾಲ್ಯಮರಳಿ ಬರಬಾರದೇ? ಸವಿ ನೆನಪುಗಳನ್ನು ನೆನಪಿಸಿದಕ್ಕಾಗೀ ಧನ್ಯವಾದಗಳು ಅವಿನಾಶ್…… Good job …

  2. ಚೆನ್ನಾಗಿ ಬರೆದಿದ್ದೀರ .ಈಗಿನ ಮಕ್ಕಳ ಬಾಲ್ಯ ಸಂಪೂರ್ಣವಾಗಿ ಮೊಬೈಲ್ ಟಿವಿ ಕಂಪ್ಯೂಟರ್ ಆಕ್ರಮಿಸಿಕೊಂಡಿದೆ .

  3. ಪೇಟ್ಲಾದ ಕುರಿತ ನಿಮ್ಮ ಬರಹ ಹೃದಯಸ್ಪರ್ಶಿ ಹಾಗು ಒಳಗೆ ಬೆಚ್ಚಗೆ ಕುಳಿತ ಬಾಲ್ಯದ ನೆನಪುಗಳಿಗೆ ಕಚಗುಳಿ ಇಟ್ಟು ಎಬ್ಬಿಸಿ ಮುನ್ನೆಲೆ ತಂದು ಮರು ರೋಮಾಂಚಿತ ಅನುಭವ ನೀಡಿದೆ. ಕಳೆದು ಹೋದ ಜೀವನ ಚೈತನ್ಯಗಳ ಬಗ್ಗೆ ಹೀಗಿಯೇ ಬರೆಯುತ್ತಿರಿ. ಅಭಿನಂದನೆ…

    • ನಿಮ್ಮ ಪ್ರೋತ್ಸಾಹ ನನಗಿರಲಿ .. ನಿಮ್ಮ ಕೃತಿಯಲ್ಲಿ ನಿಮ್ಮ ಬಾಲ್ಯವೂ ಹಾಸು ಹೊಕ್ಕಾಗಿದೆ.

  4. ಬಾಲ್ಯ ಎಂದಾಗ ಹಲವು ನೆನಪುಗಳು ಕಣ್ಣ ಮುಂದೆ ಬಂದು ಕಣ್ಣಂಚು ಒದ್ದೆ ಅಗೋವುದು ಸಹಜ.. ಅದರಲ್ಲೂ ಅಷ್ಟಮಿ ನಂಗೆ ಸಡಗರದ ಹಬ್ಬ ಕಾರಣ ಕೃಷ್ಣ. ಇನ್ನು ಈ ಪೇಟ್ಲದ ಬಗ್ಗೆ ನನಗೆ ನಿಮ್ಮ ವಿಡಿಯೋ ನೋಡೇ ಗೊತಾಗಿದ್ದು… ನಮ್ಮ ಕಡೆ ಇದನ್ನ ಯಾವತ್ತು ಕಂಡಿಲ್ಲ ನಾನು.. ಆದರೂ ಇದನ್ನು ನೋಡಿದ ಮೇಲೆ ಒಮ್ಮೆ ಆದ್ರು ಪೇಟ್ಲ ಬಿಡಬೇಕು ಅನ್ನಿಸ್ತಾ ಇದೆ ಯವತ್ತಾದ್ರೂ ನಿಮ್ಮನ್ನು ಭೇಟಿ ಆದ್ರೆ ನನಗೋಸ್ಕರ ಒಂದು ಖರೀದಿಸಿ ಇಡೀ ಅವಿನಾಶ್, ಈ ದಶಕದ ಪೆಟ್ಲವನ್ನು ಪರಿಚಯಿಸಿದಕ್ಕಾಗಿ ಧನ್ಯವಾದಗಳು. ಕೃಷ್ಣನ ಜೊತೆ ಇವತ್ತು ಪೇಟ್ಲದ ನೆನಪು .

  5. ಕುಂದಾಪ್ರ ಕನ್ನಡದಲ್ ನಾವ್ ಪಿಟ್ಲಿಯಂಡಿ ಅಂತಿದ್ದಿತ್ ಮತ್ ಆ ಕಾಯಿಗೆ ಪಿಟ್ಲಿಕಾಯ್ ….
    ಬಾಲ್ಯ ಚಂದು ಅಲ್ದ 😊
    ಚಂದ ಬರ್ದಿರಿ 👌

LEAVE A REPLY

Please enter your comment!
Please enter your name here