Home Trending ಇಂಗ್ಲಿಷ್ ಶೀರ್ಷಿಕೆಯ ಅಪ್ಪಟ ಕನ್ನಡ ಸಿನಿಮಾ – Tribute to the great Poornachandra Tejaswi

ಇಂಗ್ಲಿಷ್ ಶೀರ್ಷಿಕೆಯ ಅಪ್ಪಟ ಕನ್ನಡ ಸಿನಿಮಾ – Tribute to the great Poornachandra Tejaswi

0

ಪೂರ್ಣಚಂದ್ರ ತೇಜಸ್ವಿಯವರ ಹೆಸರು ಕೇಳಿದೊಡನೆ ಚಿಗುರುತ್ತೇನೆ.. ನಾನವರನ್ನು ಹೆಚ್ಚಾಗಿ ಓದಿಕೊಂಡಿಲ್ಲವಾದರೂ ಕೇಳಿ ತಿಳಿದ ಅವರ ಚಿಂತನೆಗಳು ಮತ್ತು ಬದುಕಿದ ರೀತಿಯ ಕುರಿತು ಪ್ರಭಾವಿತನಾಗಿದ್ದೇನೆ. ಅಷ್ಟಕ್ಕೂ ನಾನು ವಿವಾಹವಾಗಿದ್ದು ಕುಪ್ಪಳಿಯ ಅವರ ಮನೆಯಂಗಳದಲ್ಲಿ! ಇನ್ನು ಅವರ ಓದುಗರೇ ಸೇರಿಕೊಂಡು ಇದೇ ಮೊದಲ ಬಾರಿಗೆ ಅವರ ಕತೆಯೊಂದನ್ನು ತೆರೆಯ ಮೇಲೆ ತೋರಿಸಿದ್ದಾರೆ ಎಂದರೆ ತಪ್ಪಿಸುವ ಮಾತುಂಟೆ ? ಮತೀಯವಾದವೆಂಬ ಕಿಚ್ಚಿಗೆ ನೀರು ಸುರಿದು ಸೌಹಾರ್ದತೆ, ಸಮಾನತೆಯ ಸುಂದರ ಪಾಠ ಹೇಳುವ ಇಂಗ್ಲಿಷ್ ಶೀರ್ಷಿಕೆಯಿರುವ ನಮ್ಮ ಕನ್ನಡ ಸಿನಿಮಾ Daredevil Musthafa !

ಕನ್ನಡದ ಸುಪ್ರಸಿದ್ಧ ಸಾಹಿತಿ ಜಯಂತ ಕಾಯ್ಕಿಣಿ ಅವರ ಮಾತುಗಳೊಂದಿಗೆ ಆರಂಭವಾಗುವ ಸಿನಿಮಾ ಕ್ಷಣ ಕ್ಷಣಕ್ಕೂ ಕತೆಯನ್ನು ಊಹಿಸುವಂತೆ ಮಾಡುತ್ತದೆ. ಹೀರೋ, ಹೀರೋಯಿನ್ ಕಲ್ಪನೆ ಇಲ್ಲದೆ ಪೂರ್ತಿ ಕತೆಯೇ ಇಲ್ಲಿ ನಮ್ಮ ನಡುವಿನ ಹೀರೋ. ಚಿತ್ರದಲ್ಲಿನ ಪ್ರಮುಖ ನಟರು ತಮ್ಮ ಪಾತ್ರಗಳನ್ನು ಅರೆದು ಕುಡಿದು ಬಿಟ್ಟಿದ್ದಾರೆ. ಆಪ್ತವೆನಿಸುವ ಸಂಭಾಷಣೆ, ಹಳ್ಳಿಗಾಡಿನ ಪ್ರದೇಶ, ಇಂಪಾದ ಹಿನ್ನೆಲೆ ಸಂಗೀತ ಕೊನೆಯವರೆಗೂ ನಿಮ್ಮ ಜೊತೆಗೇ ಇರುತ್ತವೆ.

ಈ ಚಿತ್ರ ನಿಂತಿರುವುದೇ ಸೂಕ್ಷ್ಮ ಸಂವೇದನೆಯ ಕೆಲವು ಸಂಗತಿಗಳ ಮೇಲೆ. ಧರ್ಮ, ಪ್ರೇಮ, ಹೊಟ್ಟೆ ಕಿಚ್ಚು, ದ್ವೇಷ, ಪೂರ್ವಾಗ್ರಹ ಪೀಡಿತ ವಿಷಯಗಳನ್ನು ಎಲ್ಲರಿಗೂ ತಲುಪುವಂತೆ ಪ್ರಸ್ತುತಪಡಿಸುವುದು ಸುಲಭದ ಮಾತಲ್ಲ. ಅಷ್ಟರ ಮಟ್ಟಿಗೆ ಇಡೀ ಚಿತ್ರತಂಡ ಗೆದ್ದಿದೆ. ಕಾಲೇಜಿನ ಹುಡುಗರು ಕೆರೆ ಪಕ್ಕ ಹೊಡೆದಾಡಿಕೊಳ್ಳುವಾಗ ಹಿನ್ನೆಲೆಯಲ್ಲಿ ಕೇಳಿ ಬರುವ ಹಾಡು, ಸಿನೆಮಾದ ಕೊನೆಯಲ್ಲಿ ಕ್ರಿಕೆಟ್ ಪಂದ್ಯಾಟದ ದೃಶ್ಯ, ಐಯ್ಯಂಗಾರಿ ಮನಸಲ್ಲಾಗುವ ಗೊಂದಲ ಮತ್ತು ತಳಮಳದ ನಡುವೆ ಮ್ಯಾಚ್ ಜೊತೆಗೆ ಮಾನವೀಯತೆ ಗೆಲ್ಲಿಸಿಕೊಡುವ ಅಪರೂಪದ ಸನ್ನಿವೇಶ ಎಂಥವರ ಕಣ್ಣಂಚನ್ನೂ ಒದ್ದೆಯಾಗಿಸುತ್ತದೆ.ಕಾಲೇಜು ಹುಡುಗರು ಹೊಡೆದಾಡಿಕೊಳ್ಳುವಾಗ ಹೋಗಿ ಬಿಡಿಸಿಯೇ ಬರೋಣ ಅಂತ ನನ್ನಂತೆ ಹಲವರಿಗೆ ಅನಿಸಿರಬಹುದು. ತರಗತಿಯ ದೃಶ್ಯಗಳು ಬಂದಾಗಲೆಲ್ಲ ಬಾಲ್ಯದ ಗೆಳೆಯರಾದ Rohith, Arif, Desmond ಹತ್ತು ಬಾರಿ ಮನಸಿನಲ್ಲಿ ಹಾದು ಹೋದರು.

‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ನಮ್ಮ ಕರುನಾಡನ್ನು ರಾಷ್ಟ್ರಕವಿ ಕುವೆಂಪು ಅವರು ಸುಖಾಸುಮ್ಮನೆ ವ್ಯಾಖ್ಯಾನಿಸಿಲ್ಲ. ‘ನೂರು ಮತದ ಹೊಟ್ಟ ತೂರಿ ಎಲ್ಲ ತತ್ವದೆಲ್ಲೆ ಮೀರಿ ನಿರ್ದಿಗಂತವಾಗಿ ಏರಿ’ ದಾಗ ಮಾತ್ರ ನಮ್ಮ ಬದುಕಿಗೊಂದು ಅರ್ಥ ಬಂದಂತಾಗುತ್ತದೆ. ಆಧುನಿಕ ಬಸವಣ್ಣ, ಸಮನ್ವಯತೆಯ ಹರಿಕಾರ, ಕನ್ನಡದ ಕಬೀರ ಪದ್ಮಶ್ರೀ ಇಬ್ರಾಹಿಂ ಸುತಾರ ಅವರು ಈ ಸಿನೆಮಾವನ್ನು ನೋಡಿದ್ದರೆ ಬಹಳ ಖುಷಿ ಪಡುತ್ತಿದ್ದರು ಅಂತನಿಸಿತು.

ಇಡೀ ಚಿತ್ರತಂಡಕ್ಕಾಗಿ ಅವರು ಬೋಧಿಸಿದ ಈ ಹಾಡು :

ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ
ಒಂದು ತೋಟದಲ್ಲಿ ಹಲವು ಬಣ್ಣದ ಹೂಗಳು
ಅದರಂತೆ ನಮ್ಮ ದೇಶದಲ್ಲಿ ಹಲವು ಮತಗಳು
ಆ ಹೂಗಳಂತೆ ಮತಗಳು ಮಕರಂದ ಬೀರಲಿ
ನಮ್ಮಲ್ಲಿ ಭೇದ ಭಾವ ಪ್ರಭು ದೂರವಾಗಲಿ

ನಾವು ಶ್ವಾಸ ಎಳೆಯುವಾಗ ಗಾಳಿ ಕುಲವ ಕೇಳಿತೆ?
ನಾವು ಮನೆಯ ಕಟ್ಟುವಾಗ ಭೂಮಿ ಜಾತಿ ಕೇಳಿತೆ ?
ಈ ಸೃಷ್ಟಿಯಲ್ಲಿ ಸರ್ವರು ಸಮನಾಗಿ ಬಾಳಲಿ
ನಮ್ಮಲ್ಲಿ ಭೇದ ಭಾವ ಪ್ರಭು ದೂರವಾಗಲಿ

ಜಗಕೆ ಶಾಂತಿ ಪಾಠ ಹೇಳಿದಂತ ನಾಡಿದು
ದಯವೇ ಧರ್ಮವೆಂದು ಸಾರಿದಂತ ನಾಡಿದು
ಈ ನಾಡಿನಲ್ಲಿ ಶಾಂತಿಯು ಸ್ಥಿರವಾಗಿ ನೆಲೆಸಲಿ
ನಮ್ಮಲ್ಲಿ ಭೇದ ಭಾವ ಪ್ರಭು ದೂರವಾಗಲಿ

ಆ ಸೂರ್ಯನಂತೆ ಸಂತರು ಜಗ ಬೆಳಗಿ ಹೋದರು
ಆ ವರುಣನಂತೆ ಜ್ಞಾನವನ್ನು ಸುರಿದು ಹೋದರು
ಗುರು ಬಸವ ನಿಮ್ಮ ಬೋಧೆ ಮನದಲ್ಲಿ ನಿಲ್ಲಲಿ
ನಮ್ಮಲ್ಲಿ ಭೇದ ಭಾವ ಪ್ರಭು ದೂರವಾಗಲಿ

So friends ತಡ ಮಾಡಬೇಡಿ. OTT ಗೆ ಬರಲಿ ಅಂತ ಕಾಯಬೇಡಿ. ಕುಟುಂಬ ಸಮೇತ ಹೋಗಿ ಸಿನಿಮಾ ನೋಡಿ. ಪೂರ್ಣಚಂದ್ರ ತೇಜಸ್ವಿಯವರ ಪ್ರಪಂಚಕ್ಕೊಂದು ಸುತ್ತು ಹಾಕಿ ಬನ್ನಿ.

ಇನ್ನು ಪದೇ ಪದೇ Hindu – Muslim – Christian ಅಂತ ಗಲಾಟೆ ಮಾಡಿದ್ರೆ ಗೊತ್ತಲ್ಲ.. ಕುಸುಮಾಕರ್ ಮಾಷ್ಟ್ರನ್ನ ಕರೆಸುತ್ತೇನೆ. ಅವರು ಹೇಗಿದ್ದರೂ ನನಗೆ Closu.ಅವರ ಬಾಯಲ್ಲಿ ಹೇಗೆ ಬಚಾವಾಗುತ್ತೀರಿ ಅಂತ ನಾನೂ ನೋಡುತ್ತೇನೆ.!


 

LEAVE A REPLY

Please enter your comment!
Please enter your name here