ಪದ್ಮಶ್ರೀ ಮಂಜಮ್ಮ ಜೋಗತಿ ಇಂದು ವಿಶ್ವವಿಖ್ಯಾತಿ ಪಡೆದಿದ್ದಾರೆ. ಅವರೊಂದಿಗಿನ ಆಪ್ತ ಒಡನಾಟವನ್ನು ನನ್ನ ಪಾಲಿನ ಯೋಗ ಎಂದೇ ಭಾವಿಸುತ್ತೇನೆ.
ಸುಮಾರು 7 ವರ್ಷಗಳ ಹಿಂದೆ ಉಡುಪಿಯ ಹೆಸರಾಂತ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆಯವರು ಕರೆ ಮಾಡಿ “ಅವಿನಾಶ್ ಇವತ್ತು ಮಧ್ಯಾಹ್ನ 3 ಗಂಟೆಗೆ ಆಸ್ಪತ್ರೆಗೆ ಬಾ, ಒಬ್ಬ ಸ್ಪೆಷಲ್ ವ್ಯಕ್ತಿಯನ್ನು ಮೀಟ್ ಮಾಡಿಸ್ತೇನೆ” ಎಂದರು. ನಾನು ತಲುಪುವಾಗ ಆಗಲೇ ಕಾರ್ಯಕ್ರಮ ಆರಂಭವಾಗಿತ್ತು. ವೇದಿಕೆಯಲ್ಲಿ ಮಂಜಮ್ಮ ಒಬ್ಬರೇ ಕೂತು ತಮ್ಮ ಬದುಕನ್ನು ಎಳೆಎಳೆಯಾಗಿ ಸಭಿಕರೊಂದಿಗೆ ಹಂಚಿಕೊಳ್ಳುತ್ತಿದ್ದರು. ಮಾತಿಗೆ ಬೆರಗಾದ ನನಗೆ ಅವರ ಕತೆ ಕೇಳಿ ಕಣ್ಣಂಚು ಒದ್ದೆಯಾಗಿತ್ತು. ಇಂಥವರೂ ನಮ್ಮ ಸುತ್ತ ಇದ್ದಾರಾ ಎನ್ನುವ ಪ್ರಶ್ನೆ ಹಲವು ಬಾರಿ ಕಾಡಿತು. ಅವತ್ತು ನನಗವರ ಪರಿಚಯವನ್ನು ಮಾಡಿ ಕೊಟ್ಟವರು ಡಾ. ವಿರೂಪಾಕ್ಷ ದೇವರಮನೆ.

ಹೀಗೆ ದೂರವಾಣಿ, ಮೆಸೇಜು ಅಂತ ಆಗಾಗ ಮಾತು ನಡೆಯುತ್ತಲೇ ಇತ್ತು. ಅವರು ಉಡುಪಿಗೆ ಬಂದಾಗಲೆಲ್ಲ ನಮ್ಮ ಸ್ನೇಹಿತರಾದ ಸ್ವರಾಜ್ಯಲಕ್ಷ್ಮೀ ಮೇಡಂ ಮನೆಯಲ್ಲಿ ಉಳಿಯುತ್ತಿದ್ದರು. ಈಗಲೂ ಅಷ್ಟೇ. ಕಾರ್ಯಕ್ರಮ ಎಷ್ಟೇ ದೊಡ್ಡದಿರಲಿ, ಆಯೋಜಕರು ಯಾರೇ ಇರಲಿ, ಉಡುಪಿ ಕಡೆ ಬಂದರೆ ಅವರಿಗೆ ಸ್ವರಾಜ್ಯ ಟೀಚರ್ ಮನೆಯೇ ಸ್ವರ್ಗ !

ಮತ್ತೊಮ್ಮೆ ಉಡುಪಿಗೆ ಬಂದಾಗ ಹಲವು ತಿಂಗಳ ನಂತರ ಸ್ನೇಹಿತರಾದ ರವಿರಾಜ ಸರ್ ಮತ್ತವರ ಮಡದಿ ಕಾತ್ಯಾಯಿನಿ ಮೇಡಂ ಜೊತೆ ಸೇರಿ ಅವರನ್ನು ಭೇಟಿಯಾಗಿ ಒಂದು ಸಣ್ಣ ಸನ್ಮಾನವನ್ನು ನೆರವೇರಿಸಿದ ಸವಿನೆನಪು.

ಈ ನಡುವೆ ಎಂಜಿಎಂ ಕಾಲೇಜಿನಲ್ಲಿ ‘ಹೆಜ್ಜೆ ಗುರುತು’, ಸಾಧಕರ ಯಶೋಗಾಥೆ ಎನ್ನುವ ಸರಣಿ ಕಾರ್ಯಕ್ರಮ ಆರಂಭಿಸಿದೆ. ಅವರ ಇಡೀ ಬದುಕನ್ನು ತೆರೆದಿಡುವ ಪ್ರಯತ್ನ ಆ ಕಾರ್ಯಕ್ರಮದಲ್ಲಿ ಮಾಡುವ ಅವಕಾಶ ನನಗೆ ಸಿಕ್ಕಿತು. ಇದಕ್ಕೂ ಮುಂಚೆ ಅವರೂರಾದ ಬಳ್ಳಾರಿ ಜಿಲ್ಲೆಯ ಮರಿಯಮ್ಮನಹಳ್ಳಿಗೆ ಹೋಗಿ ಅವರ ಜತೆ ಒಂದು ದಿನ ಕಳೆದು ನಮಗೆ ಬೇಕಿರುವ ಚಿತ್ರೀಕರಣವನ್ನು ಮುಗಿಸಿ ಬಂದೆವು! ಆಶ್ಚರ್ಯ ಅಂದ್ರೆ ಅಲ್ಲಿ ಅವರು ಮತ್ತವರ ಸಂಗಡಿಗರು ಒಟ್ಟು 8 ಮಂದಿ ವಾಸವಿದ್ದದ್ದು ಕೇವಲ 200 ಚದರ ಅಡಿಯ ಮನೆಯಲ್ಲಿ! ಅಲ್ಲಿನ ವಿಡಿಯೋಗಳು ನೀವು ನೋಡಬಹುದಿತ್ತು. ಆದ್ರೆ ಅದನ್ನು ಸಂಗ್ರಹ ಮಾಡಿದ ನನ್ನ ಹಾರ್ಡ್ ಡಿಸ್ಕ್ 3 ತಿಂಗಳ ಹಿಂದೆ ಕ್ರ್ಯಾಶ್ ಆಗಿ ಎಷ್ಟೋ ಅಮೂಲ್ಯ ಚಿತ್ರಗಳನ್ನು, ವಿಡಿಯೋಗಳನ್ನು ಕಳೆದುಕೊಂಡಿದ್ದೇನೆ! ಆ ನೋವಿನಿಂದ ಹೊರಬರಲಾರದೆ ಒದ್ದಾಡುತ್ತಿದ್ದೇನೆ.
ಈ ನಡುವೆ ‘ ಹೆಜ್ಜೆ ಗುರುತು’ ಆರಂಭಕ್ಕೂ ಮುನ್ನ ಮಂಜಮ್ಮ ಅವರ ಜೊತೆಗೆ ನಮ್ಮ ಸ್ನೇಹಿತರಾದ ರವಿರಾಜ ಸರ್ ಮನೆಯ ಆವರಣದಲ್ಲಿ ಗಿಡವೊಂದನ್ನು ನೆಟ್ಟಿದ್ದೆವು. ಅದೀಗ ಬೆಳೆದು ದೊಡ್ಡ ಮರವಾಗಿದೆ. ಹೀಗೆ ನನ್ನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು, ಹರೇಕಳ ಹಾಜಬ್ಬ, ಸಾಲುಮರದ ತಿಮ್ಮಕ್ಕ ಇವರೆಲ್ಲರ ಜೊತೆ ನೆಟ್ಟ ಗಿಡಗಳು ಈಗ ಮರವಾಗಿ ಬೆಳೆದ ಹಸಿರು ಕ್ಷಣ ನಮ್ಮ ಕಣ್ಣ ಮುಂದಿದೆ. ಈ ಕತೆಯನ್ನು ಬೇರೊಂದು ಲೇಖನದಲ್ಲಿ ಚಿತ್ರ ಸಮೇತ ಪ್ರಕಟಿಸುತ್ತೇನೆ.

ಈ ನಡುವೆ ಬಾರಿಕೆರೆ ಯುವಕ ಮಂಡಲ ಕೋಟ, ಮಂಜಮ್ಮ ಅವರನ್ನು ‘ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಆಯ್ಕೆ ಮಾಡಿದರು. ಕಾರ್ಯಕ್ರಮದ ದಿನ ಅವರ ಕುರಿತ VT ಗಾಗಿ ಧ್ವನಿ ನೀಡಲೆಂದು ನನ್ನನ್ನು ಆಯ್ಕೆಮಾಡಲಾಗಿತ್ತು. ಸಾವಿರಾರು ಸಭಿಕರ ಮುಂದೆ ಆ VT ಪ್ರದರ್ಶನವಾಯಿತು. ಆ ಕಾರ್ಯಕ್ರಮದಲ್ಲಿ ನಾನಿರಲಿಲ್ಲ. ಆದರೆ ಕಂಡು ಭಾವುಕತೆಯಿಂದ ಹಲವು ಮಂದಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ಸಾರ್ಥಕತೆ ಕ್ಷಣ ನನ್ನ ಪಾಲಿಗಿದೆ.
ನನ್ನ ಮದುವೆಗೆ ಆಮಂತ್ರಣ ನೀಡಿದಾಗ “ನಾನು ಮೊದಲ ದಿನವೇ ಬರುತ್ತೇನೆ ಅವಿನಾಶ್, ಕುಪ್ಪಳಿಯಲ್ಲಿ ಉಳಿಯಲು ವ್ಯವಸ್ಥೆ ಮಾಡು” ಎಂದು ಆಜ್ಞೆ ಮಾಡಿದರು. ಹಿಂದಿನ ಮಧ್ಯಾಹ್ನವೇ ನಮಗಿಂತ ಮುಂಚೆ ತಲುಪಿ ಎಲ್ಲಾ ಕಾರ್ಯಕ್ರಮದ ಅಂತ್ಯದವರೆಗೂ ಇದ್ದು ಹಾರೈಸಿ, ಆಶೀರ್ವದಿಸಿದರು. ಮದುವೆಯ ಹಿಂದಿನ ರಾತ್ರಿ 9 ಗಂಟೆ ಸುಮಾರಿಗೆ ಉಂಗುರ ಬದಲಿಸುವ ಸಣ್ಣ ಶಾಸ್ತ್ರಕ್ಕೆ ನನ್ನ ಮತ್ತು ಅಕ್ಷತಾ ಮನೆಯವರನ್ನು ಹೊರತುಪಡಿಸಿ ನಮ್ಮ ಜೊತೆಗಿದ್ದವರು ಮಂಜಮ್ಮ ಜೋಗತಿ !
ಒಂದು ಕಾರ್ಯಕ್ರಮವೋ ಸಿನಿಮಾ ಚಿತ್ರೀಕರಣವೋ ನನಗೆ ನೆನಪಿಲ್ಲ. ಎರಡು ಮೂರು ದಿನ ಅವರು ಉಡುಪಿಯಲ್ಲಿ ಉಳಿದುಕೊಂಡಿದ್ದರು. ನಾನು ಮತ್ತು ರವಿರಾಜ್ ಸರ್ ಇಬ್ಬರೂ ಕೆಲಸದ ಒತ್ತಡದಲ್ಲಿದ್ದ ಕಾರಣ ಅವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಹೊರಡುವ ದಿನ ನನಗೆ ಕರೆ ಮಾಡಿ “ಏನ್ ಅವಿನಾಶ್ ? ದೊಡ್ ಜನ ನೀನು! ಮೂರು ದಿನದಿಂದ ಉಡುಪೀಲಿದೀನಿ ಅಮ್ಮನ್ನ ಬಂದು ಸಿಗಕ್ಕೆ ಟೈಮ್ ಇಲ್ಲ ನಿಂಗೆ ಅಲ್ವಾ?” ಅಂತ ಬೇಸರದ ಧ್ವನಿಯಲ್ಲೇ ನನಗೆ ಬೈದಿದ್ದರು. ಆಮೇಲೆ ನಾನು, ರವಿ ಸರ್ ಅವರನ್ನು ರಾತ್ರಿ ಉಡುಪಿ ಬಸ್ ನಿಲ್ದಾಣದಲ್ಲಿ ಭೇಟಿಯಾಗಿ ಏನೇನೋ ಹೇಳಿ ಪುಸಲಾಯಿಸಿ ಖುಷಿಯಿಂದ ಬೀಳ್ಕೊಟ್ಟಿದ್ದೆವು. ಬಸ್ ನಿಲ್ದಾಣದಲ್ಲಿ ಕ್ಲಿಕ್ಕಿಸಿದ ಚಿತ್ರ ಇಲ್ಲಿದೆ.
ತನ್ನಲ್ಲಾದ ನೈಸರ್ಗಿಕ ಬದಲಾವಣೆಯಿಂದಾಗಿ ಹೊರದಬ್ಬಲ್ಪಟ್ಟ ಮಂಜಮ್ಮ ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಜಾನಪದ ಅಕಾಡೆಮಿಯ ಅಧ್ಯಕ್ಷರಾದರು!! ನಾವವರನ್ನು ಉಡುಪಿಗೆ ಕರೆಸಿ ಸಂವಾದ ಆಯೋಜಿಸಿ ಅಧ್ಯಕ್ಷರಾದ ನಂತರದ ಮೊದಲ ಕಾರ್ಯಕ್ರಮವನ್ನು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಮೂಲಕ ಉಡುಪಿಯಲ್ಲಿ ಆಯೋಜಿಸಿದೆವು. ಅಷ್ಟರ ಮಟ್ಟಿಗೆ ನಮಗೂ ಅವರಿಗೂ ನಂಟು ಆಗಲೇ ಬೆಳೆದುಬಿಟ್ಟಿತ್ತು. ಇನ್ನೊಂದು ಸ್ವಾರಸ್ಯ ಅಂದ್ರೆ ಅವರು ಅಧ್ಯಕ್ಷರಾದ ನಂತರ ನಾನು ಕರೆ ಮಾಡಿದಾಗಲೆಲ್ಲಾ “ಹಲೋ, ನಾನು ಜಾನಪದ ಅಕಾಡೆಮಿ ಅಧ್ಯಕ್ಷ ಅವಿನಾಶ್ ಉಡುಪಿಯಿಂದ ಮಾತಾಡ್ತೇನೆ” ಅಂತ ತಮಾಷೆಯಿಂದ ಮಾತು ಆರಂಭಿಸುತ್ತೇನೆ. ಈಗ ಅದು “ಹಲೋ, ನಾನು ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅವಿನಾಶ್ ಉಡುಪಿಯಿಂದ ಮಾತಾಡ್ತೇನೆ” ಅಂತ ಬದಲಾಗಿದೆ. “ಹಾಗೆ ಆಗಲಿ ಇವ್ರೇ” ಅಂತ ಅವರು ಪ್ರತಿ ಬಾರಿ ಹಾರೈಸುತ್ತಾರೆ.
ಉದಯವಾಣಿ ಆನ್ಲೈನ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಿನಗಳಲ್ಲಿ ಅವರನ್ನು ವಿಶೇಷವಾಗಿ ಸಂದರ್ಶನ ನಡೆಸುವ ಅವಕಾಶ ನನಗೆ ನಾನೇ ಕಲ್ಪಿಸಿಕೊಂಡಿದ್ದೆ. ಅದೇ ದಿನ ನಮ್ಮ ಭಾಗದ ಹೆಸರಾಂತ ದೈವ ನರ್ತಕರಾದ ಕುಮಾರ ಪಂಬದ ಅವರ ಮನೆಗೆ ಭೇಟಿ ನೀಡಿದೆವು. ಆವತ್ತು ಅವರ ಮನೆಯಲ್ಲಿ ನವರಾತ್ರಿ ಪೂಜೆ ನಡೆಯುತ್ತಿತ್ತು. ಒಂದರ್ಧ ಕಿ. ಮೀ ದೂರದಲ್ಲಿ ಕಾರ್ ನಿಲ್ಲಿಸಿ ನಡೆದುಕೊಂಡೇ ಕುಮಾರ್ ಮನೆಗೆ ಹೋಗುವಾಗ “ಅಮ್ಮ, ನಿಮಗೆ ಪದ್ಮಶ್ರೀ ಪ್ರದಾನ ಯಾವಾಗಂತೆ ? ಕೊರೊನ ಕಾರಣ 2 ವರ್ಷವಾದರೂ ಆ ಕಾರ್ಯಕ್ರಮ ಮಾತ್ರ ನಡೆಯಲೇ ಇಲ್ಲ” ಅಂದೆ. ಅದಕ್ಕವರು “ಆ ಕಾರ್ಯಕ್ರಮಕ್ಕೆ ನಾನು ಹೊದ್ರೆಷ್ಟು ಬಿಟ್ರೆಷ್ಟು.. ಪದ್ಮಶ್ರೀ ಘೋಷಣೆಯಾದ ಮೇಲೆ ತುಂಬಾ ಸನ್ಮಾನ ಸಿಕ್ತು ಕಣಪ್ಪ” ಅಂದ್ರು. ಹೀಗೆ ಕುಮಾರ್ ಮನೆಗೆ ಭೇಟಿ ನೀಡಿದೆವು, ಅಲ್ಲೂ ಸನ್ಮಾನ ಸ್ವೀಕರಿಸಿದರು. ನಂತರ ಊಟಕ್ಕೆ ಜೊತೆಯಾಗಿ ಕೂತೆವು. ಆಗ ಅವರಿಗೊಂದು ಕರೆ ಬಂತು. ಮಾತು ಮುಗಿಸಿ ಊಟ ಮಾಡುತ್ತಿದ್ದ ನನ್ನತ್ತ ತಿರುಗಿ “ಅದೇ ಆಗ ಕೇಳಿದ್ಯಲ್ಲ.. ನವೆಂಬರ್ 8 ಕ್ಕೆ ದಿಲ್ಲಿಯಲ್ಲಿ ರಾಷ್ಟ್ರಪತಿ ಪ್ರಶಸ್ತಿ ಕೊಡ್ತಾರಂತೆ, ಅದೇ ಈ ಫೋನು” ಅಂದಾಗ ಇಬ್ಬರಿಗೂ ಆಶ್ಚರ್ಯ! ನೋಡಿ ಇದೆಲ್ಲ ನನ್ನ ಬಾಯಿಗುಣ ಅಂತೆಲ್ಲ ಕೊಚ್ಚಿಕೊಂಡಿದ್ದೆ. ಇಬ್ಬರೂ ಜೋರಾಗಿ ನಕ್ಕಿದ್ದೆವು. ಖುಷಿಯಿಂದ ಊಟ ಮುಗಿಸಿ ಅಲ್ಲಿಂದ ನೇರ ಉದಯವಾಣಿ ಕಚೇರಿಗೆ ತಲುಪಿ ಲೈವ್ ಸಂದರ್ಶನ ನಡೆಸಿದ್ದೆ. ಸಹಜವಾಗಿ ಪದ್ಮಶ್ರೀ ಕುರಿತು ಒಂದು ಪ್ರಶ್ನೆ ಕೇಳಿದ್ದೆ. ಆ ಭಾಗವನ್ನು ಮಾತ್ರ ಕಟ್ ಮಾಡಿ ಅವರು 8 ರಂದು ಪ್ರಶಸ್ತಿ ಸ್ವೀಕರಿಸಿದ ಕೇವಲ 5 ನಿಮಿಷದ ಒಳಗೆ ವಿಡಿಯೋ ಪ್ರಸಾರ ಮಾಡಿದ್ದೆ.


ಇತ್ತೀಚೆಗಿನ ಸ್ವಾರಸ್ಯಕರ ಘಟನೆಯೊಂದನ್ನು ಹೇಳಬೇಕು. ಎರಡು ತಿಂಗಳ ಹಿಂದೆ ಮೈಸೂರಿನಲ್ಲಿ ಕಾರ್ಯಕ್ರಮ ನಿರೂಪಣೆಗೆಂದು ತೆರಳಿದ್ದೆ. Pai Vista ಹೋಟೆಲ್ ನಲ್ಲಿ ನನಗೆ ತಂಗಲು ವ್ಯವಸ್ಥೆ ಮಾಡಿದ್ದರು. ಹೋಟೆಲ್ ಪಕ್ಕದಲ್ಲಿ Tata Indica ಕಾರೊಂದು ಕಣ್ಣಿಗೆ ಬಿತ್ತು. ಹಿಂದೆ ಡಾ. ಬಿ. ಮಂಜಮ್ಮ ಜೋಗತಿ ಅಂತ ಅವರ ಚಿತ್ರ ಸಮೇತ ಪೋಸ್ಟರ್ ಅಳವಡಿಸಿ ಯಾರೋ ಅಭಿಮಾನ ಮೆರೆದಿದ್ದರು. ಅದನ್ನು ಕಂಡು ಬೆರಗಾಗಿ ಫೋಟೋ ಕ್ಲಿಕ್ಕಿಸಿ “ನೋಡಿ ಮೈಸೂರಿನಲ್ಲಿ ಹೀಗೊಂದು ಕಾರ್ ನೋಡಿದೆ. ಸಾಧನೆ ಅಂದ್ರೆ ಹೀಗಿರಬೇಕು” ಅಂತ ವಾಯ್ಸ್ ಮೆಸೇಜ್ ಕಳಿಸಿದೆ. 5 ನಿಮಿಷಕ್ಕೆ ಕರೆ ಬಂತು ..
ಅವರು – ಎಲ್ಲಿದೀಯಪ್ಪ ?
ನಾನು – ಮೈಸೂರು
ಅವರು – ನಾನೂ ಮೈಸೂರಲ್ಲೇ ಇದ್ದೀನಿ. ಆ Car ನಲ್ಲೇ ಬಂದಿದೀನಿ !
ನಾನು – ಹೌದಾ ? ಎಲ್ಲಿ ನಿಮ್ ರೂಮ್ ?
ಅವರು – ಪೈ ವಿಸ್ಟಾ
ನಾನು – ನಾನೂ ಅಲ್ಲೇ ಇದ್ದೀನಿ
ಅವರು – ರೂಮ್ no ?
ನಾನು – 201
ಅವರು – 304
ಅವರು – 5 ನಿಮಿಷದಲ್ಲಿ ಬರ್ತೀನಿ, ಬಾ ಸಿಗೋಣ !!!!
ಅವರ ಕೊಠಡಿಯಲ್ಲಿ ಸಿನಿಮಾ ಚಿತ್ರೀಕರಣದ ಮಾತುಕತೆ ನಡೆಯುತ್ತಿತ್ತು. ಜೊತೆಗೆ ಒಂದು ಗಂಟೆ ಕಳೆದೆವು.
The world is now become small!

ಇದಾಗಿ ಎರಡು ತಿಂಗಳಿಗೆ ಉಡುಪಿಯಲ್ಲಿ ಅವರ ಬದುಕಿನ ಕುರಿತ ಏಕವ್ಯಕ್ತಿ ನಾಟಕ ‘ಮಾತಾ’ ಇದರ ಪ್ರದರ್ಶನವೊಂದನ್ನು ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಸ್ವರಾಜ್ಯಲಕ್ಷ್ಮೀ ಟೀಚರ್ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಕಾರಣಾಂತರಗಳಿಂದ ನನಗೆ ಹೋಗಲಾಗಿರಲಿಲ್ಲ. ಅಲ್ಲಿನ ಸಭೆಯಲ್ಲಿ ಮಾತಿನ ಮಧ್ಯೆ ಹತ್ತಾರು ಬಾರಿ “ಅವಿನಾಶ್ ಎಲ್ಲಿ” ಎಂದು ಕೇಳಿದರಂತೆ. ಅಲ್ಲಿದ್ದವರಲ್ಲಿ ಹಲವರು ನನಗೆ ಕರೆ ಮಾಡಿದರು. ಇನ್ನು ಕೆಲವರು ಮರುದಿನ ಈ ವಿಚಾರವನ್ನು ನನಗೆ ಹೇಳಿದರು. ಹೀಗಿದೆ ಅವರೊಂದಿಗಿನ ಅನುಬಂಧ.
ಮಾರನೇ ದಿನ ಅವರೊಂದಿಗೆ ಸಂವಾದ ಕಾರ್ಯಕ್ರಮವವನ್ನು ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಆಯೋಜಿಸಿತ್ತು. ಈ ಕಾರ್ಯಕ್ರಮದ ನಿರ್ವಹಣೆ, ನಿರೂಪಣೆ ಮಾಡುವ ಅವಕಾಶ ನನಗೊದಗಿ ಬಂತು.

ಮಂಜಮ್ಮ ನಮ್ಮ ನಡುವಿನ ಅಪ್ರತಿಮ ಸಾಧಕಿ, ಬೆಂಕಿಯಲ್ಲಿ ಅರಳಿದ ಹೂವು. ಶಾಲೆಯ ಮೆಟ್ಟಿಲೇರಿಲ್ಲ ಆದರೆ ಇವತ್ತು ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಅವರ ಬದುಕನ್ನು ಅರಿಯಲು ಮುಖ್ಯ ಅತಿಥಿಯಾಗಿ ಆಹ್ವಾನಿಸುತ್ತಾರೆ. ಇಷ್ಟೆಲ್ಲಾ ಎತ್ತರಕ್ಕೆ ಏರಿದರೂ ಸರಳತೆ, ಮಾನವೀಯ ಅಂತಃಕರಣ, ಪ್ರೀತಿ, ಆತ್ಮೀಯತೆಯಿಂದಲೇ ನನಗವರು ಬಲು ಎತ್ತರದ ಸ್ಥಾನದಲ್ಲಿ ಕಾಣುತ್ತಾರೆ.
ಇಲ್ಲಿ ಆಡದೆ ಉಳಿದ ಮಾತು ನೂರಿದೆ.. ಹೇಳಲು ಹೋದರೆ ಸಾವಿರ ಮಾತಿದೆ !