The Origin of ‘Masala Dosa’
ಬಾಲ್ಯದ ಕುರಿತು ನಮಗೆಲ್ಲರಿಗೂ ಹೇಳಲು ಹೋದರೆ ಸಾವಿರ ಮಾತಿದೆ. ಒಂದೊಂದೇ ಸಂಗತಿಗಳನನ್ನು ಕೆದಕುತ್ತಾ ಹೋದಂತೆ ಕಳೆದು ಹೋದ ದಿನಗಳ ಕುರಿತು ಖುಷಿ ಹೆಚ್ಚಾದರೆ ಅದು ಮರಳಿ ಬರುವುದಿಲ್ಲ ಅನ್ನೋ ಬೇಸರ ಮತ್ತೊಂದು ಕಡೆ.
ಉಡುಪಿಯಲ್ಲಿ Woodlands Restaurant ನ ಪರಿಚಯ ಯಾರಿಗಿಲ್ಲ ಹೇಳಿ?. ಕೃಷ್ಣ ಮಠದಿಂದ ಒಂದರ್ಧ ಫರ್ಲಾಂಗ್ ದೂರದಲ್ಲಿರುವ Woodlands ಈಗ ಎಲ್ಲರ ಮನೆ ಮಾತಾಗಿದೆ. ಬಾಲ್ಯದಲ್ಲಿ ಇಲ್ಲಿಂದ ಕೇವಲ 100 ಹೆಜ್ಜೆಗಳಷ್ಟು ದೂರದಲ್ಲಿ ನನ್ನ ಅಜ್ಜನ ಮನೆ ಇತ್ತು. ಆಗೆಲ್ಲಾ ಅಷ್ಟೊಂದು ಅನುಕೂಲ ಇರದ ಕಾರಣ ಆಗಾಗ ಹೋಟೆಲ್ ಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ನನಗೆ ನೆನಪಿರುವಂತೆ ರಸ್ತೆ ಬದಿ ಸೇರಿದಂತೆ ಅಲ್ಲಲ್ಲಿ ಸಣ್ಣ ಪುಟ್ಟ ಹೊಟೇಲುಗಳಲ್ಲಿ ಗೋಬಿ ಮಂಚೂರಿ ಸಿಗುತ್ತಿರಲಿಲ್ಲ. ಹಾಗಂದ್ರೆ ಏನು ಅಂತಾನೂ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ ! ಆದ್ರೆ ಈ Woodlandsನಲ್ಲಿನ ಗೋಬಿ ಮಂಚೂರಿ ಮಾತ್ರ Super Famous ಆಗಿತ್ತು ! 6 ತಿಂಗಳೋ, ವರ್ಷಕ್ಕೋ ಒಮ್ಮೆ ನನ್ನ ಅತ್ತೆ ಊರಿಗೆ ಬಂದಾಗ ಗೋಬಿ ಮಂಚೂರಿ ತಿನ್ನಲೆಂದು ಇಲ್ಲಿಗೆ ಕರೆದುಕೊಂಡು ಹೋಗುತ್ತಿದ್ದರು. ವಿಶೇಷ ಅಂದ್ರೆ ಅಲ್ಲಿನ ಅಂದಿನ ಗೋಬಿ ಮಂಚೂರಿ ರುಚಿ ಈಗಲೂ ಹಾಗೇ ಉಳಿದಿದೆ !!
90 ರ ದಶಕದಲ್ಲಿ ಉಡುಪಿಯಲ್ಲಿ ಹೋಟೆಲ್ ಕಲ್ಪನಾ, ಅಪ್ಸರಾ, ತ್ರಿವೇಣಿ, ಡಯಾನಾ ಕೂಡ ಜನಪ್ರಿಯವಾಗಿದ್ದವು (Hotel Diana, Udupi ಕುರಿತು ಮತ್ತೊಂದು ಲೇಖನ ಬರೆಯುತ್ತೇನೆ ). ಆದ್ರೆ Woodlands had a different fame altogether. ಒಂದು ಹೋಟೆಲ್ ನಲ್ಲಿ ಮಸಾಲ ದೋಸಾ ರುಚಿಯಾಗಿದ್ದರೆ ಆ ಹೋಟೆಲ್ ನಿಜಕ್ಕೂ ಚೆನ್ನಾಗಿದೆ ಎಂದು ಜನರು ಆ ದಿನಗಳಲ್ಲಿ certificate ನೀಡುತ್ತಿದ್ದರು.
ಬೆರಳಣಿಕೆಯಷ್ಟೇ ಹೆಸರುವಾಸಿಯಾದ ಹೋಟೆಲ್ ಗಳಿದ್ದ ಆ ಕಾಲದಲ್ಲಿ Woodlands ಮುಂಚೂಣಿಯಲ್ಲಿ ಕಾಣಸಿಗುತ್ತಿತ್ತು. ಇದರ ಮಾಲಕರಾದ ಮನೋಹರ ರಾವ್ ಅವರ ವಠಾರ ಬನ್ನಂಜೆ Heera Baug ನಲ್ಲಿ ನಾವು ಬಾಡಿಗೆಗೆ ವಾಸವಿದ್ದರೆ Woodlands ನ ಸಮೀಪವೇ ನನ್ನ ಅಜ್ಜನಮನೆ ಇದ್ದ ಕಾರಣಕ್ಕೆ ನನಗೂ Woodlands ಗು ಎರಡೆರಡು ಕಡೆಗಳಿಂದ ಸಂಬಂಧ. ಅಷ್ಟೇ ಅಲ್ಲ 2013 ರಿಂದ 2019 ವರೆಗೆ ನನ್ನ ಯೋಚನೆ, ಯೋಜನೆ ಕುರಿತಾದಂತ ಮಾತುಕತೆಗಳೆಲ್ಲವೂ ಇದೇ ಹೋಟೆಲ್ ನ ಆಯ್ದ ಕೆಲವು ಮೇಜಿನ ಮೇಲೆ ನಡೆಯುತ್ತಿತ್ತು ಮತ್ತು ಹೆಚ್ಚಿನವು ಯಶಸ್ವಿಯಾಗಿ ಹೊರಹೊಮ್ಮುತ್ತಿದ್ದವು. ಕೊರೊನ ನಂತ್ರ ಕಾಲದ ಜೊತೆ ನನ್ನ ಜಾಗವೂ ಬದಲಾಯಿತು. ಪರಿವರ್ತನೆ ಜಗದ ನಿಯಮ – ಶ್ರೀ ಕೃಷ್ಣ ಪರಮಾತ್ಮ.

ವಿಶ್ವ ಪ್ರಸಿದ್ಧಿ ಪಡೆದಿರುವ ‘ಮಸಾಲಾ ದೋಸಾ’ ಹುಟ್ಟಿಕೊಂಡಿದ್ದು ಎಲ್ಲಿ ? (The Origin of Masala Dosa)
ಪ್ರತಿಯೊಂದು ಹೊಸತರ ಹುಟ್ಟಿನ ಹಿಂದೆ ಸ್ವಾರಸ್ಯಕರ ಘಟನೆ ಇರುತ್ತದೆ. ಈ ವಿಚಾರ ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ. New Woodlands Hotels Pvt.Ltd ನ ಮಾಲಕರು ಕಡಂದಲೆ ಕೃಷ್ಣ ರಾವ್ ಅವರು. ಇದು ಆರಂಭವಾಗಿದ್ದು ತಮಿಳುನಾಡಿನ ಚೆನ್ನೈನಲ್ಲಿ (ಅಂದಿನ Madras). ಬ್ರಿಟಿಷರ ಆಳ್ವಿಕೆಯ ದಿನಗಳಲ್ಲಿ ಇವರು ಮತ್ತು ದಾಸ್ ಪ್ರಕಾಶ್ ಎಂಬ ಮತ್ತೊಂದು ಪ್ರಸಿದ್ಧ ಹೋಟೆಲ್ ನ ಮಾಲಕರಾದ ಸೀತಾರಾಮ ರಾವ್ ಅವರು ಒಮ್ಮೆ ಉತ್ತರ ಭಾರತಕ್ಕೆ ಹೀಗೆ ವಿಹಾರಕ್ಕೆಂದು ತೆರಳಿದ್ದರಂತೆ. ಅಂದ ಹಾಗೆ ಇವರಿಬ್ಬರೂ ನಂತರ ಸಂಬಂಧಿಕರಾದರು. ಅಲ್ಲಿ ಬೆಳಗ್ಗಿನ ಉಪಹಾರಕ್ಕೆಂದು ಹೋಟೆಲ್ ಗೆ ಹೋಗಿದ್ದಾಗ ಪೂರಿ ಪಲ್ಯ ಕಂಡರು. ತಮಿಳುನಾಡು, ಕೇರಳ ಕಡೆ ಇದನ್ನು ಪೂರಿ ಮಸಾಲ ಅಥವಾ ಪೂರಿ ಕೆಳಂಗ್ ಎನ್ನುತ್ತಾರೆ .ಆ ರುಚಿ ಇಷ್ಟವಾಗಿ ಪೂರಿ ಜೊತೆಗೆ ತಮಗೆ ನೀಡಿದ ಬಟಾಟೆ ಪಲ್ಯ (ಭಾಜಿ) ವನ್ನು ನಮ್ಮ ಖಾಲಿ ದೋಸೆಯೊಳಗಿಟ್ಟು ದಕ್ಷಿಣ ಭಾರತದ ಶೈಲಿಯಲ್ಲಿ ಅದನ್ನು ತಯಾರಿಸಿ ಗ್ರಾಹಕರಿಗೆ ನೀಡಿದರೆ ಹೇಗಿರಬಹುದೆಂದು ಆಲೋಚಿಸಿ ಚೆನ್ನೈಗೆ (ಅಂದಿನ Madras) ಮರಳಿ ಬಂದು ಈ ಪ್ರಯತ್ನ ಪಟ್ಟಾಗ ಎಲ್ಲರಿಗೂ ಹಿಡಿಸಿತಂತೆ. ಹೀಗೆ ದೋಸೆ ಮೇಲೆ ಭಾಜಿ ( ಬಟಾಟೆ ಪಲ್ಯ) ಇಟ್ಟು ಮಡಚಿ, ಚಟ್ನಿ, ಸಾಂಬಾರ್ ಜೊತೆಯಾಗಿ ನೀಡುತ್ತಿದ್ದರು! ಆಗ ಬಟಾಟೆ ಪಲ್ಯ ಮಾತ್ರ ನೀಡುತ್ತಿದ್ದರು, ಈರುಳ್ಳಿ ಬೆರೆಸುತ್ತಿರಲಿಲ್ಲ. ಆದ್ರೆ 1938 – 40ರ ಮಧ್ಯೆ ಬಟಾಟೆ ಅಭಾವ ಇದ್ದ ಕಾರಣ ಬಟಾಟೆ ಜೊತೆ ಈರುಳ್ಳಿ, ಬಟಾಣಿ ಮಿಶ್ರಣ ಮಾಡಿ ಪಲ್ಯವನ್ನು ನೀಡಿದರು. ಹೀಗೆ ಅವರ ಈ ಪ್ರಯತ್ನಕ್ಕೆ ‘ ಮಸಾಲಾ ದೋಸೆ’ ಎಂದು ನಾಮಕರಣವಾಯಿತು. ಹಾಗಾಗಿ ನಾವು ಈಗ ಸವಿಯುತ್ತಿರುವ ಮಸಾಲ ದೋಸೆ ಆರಂಭವಾಗಿ ಇಂದಿಗೆ 83 ವರ್ಷಗಳು ಸಂದಿವೆ! ಈಗ ಈ ದೋಸೆ ತ್ರಿಕೋನ, ಪೇಪರ್, ಟೊಪ್ಪಿ ಮತ್ತಿತರ ಆಕೃತಿಯಲ್ಲಿಕಾಣಸಿಗುತ್ತದೆ. ವಿಶ್ವದಾದ್ಯಂತ ಖ್ಯಾತಿ ಪಡೆದಿದೆ.
ಮತ್ತೊಂದು ಮುಖ್ಯ ವಿಷಯ ಅಂದ್ರೆ ಕೃಷ್ಣ ರಾಯರು ಆ ದಿನಗಳಲ್ಲಿ ‘ಉಡುಪಿ ಕೃಷ್ಣ ವಿಲಾಸ’ ಎನ್ನುವ ಹೆಸರಿನಲ್ಲಿ ಹೋಟೆಲ್ ನಡೆಸುತ್ತಿದ್ದರು. ನಂತ್ರ ಅದು Woodlands ಆಗಿ ಬದಲಾಯಿತು.Woodlands ಹೆಸರಿನಲ್ಲಿ ಇವರು ಹೋಟೆಲ್ ಆರಂಭ ಮಾಡಿದ್ದು ದ್ವಿತೀಯ ವಿಶ್ವ ಯುದ್ಧದ ಸಂದರ್ಭದಲ್ಲಿ ! ( ಈ ಮಧ್ಯೆ ಬೇರೆಯದೇ ಆದ ಕತೆ ಇದೆ ). ಆಗವರು ಹೋಟೆಲ್ ಆರಂಭಿಸಲು ಎಷ್ಟು ಧೈರ್ಯ ಮಾಡಿರಬಹುದು ? ಈಗ ವಿಶ್ವ ವಿಖ್ಯಾತಿ ಪಡೆದಿರುವ ಈ Restaurant / Hotels ಗೆ ಅಸಂಖ್ಯ ಅಭಿಮಾನಿಗಳಿದ್ದಾರೆ. ಒಂದು Windmill ಮತ್ತು ರೆಕ್ಕೆಯ ಭಾಗದಲ್ಲಿ ಎದ್ದು ಕಾಣುವ ‘ W ‘ ಅಕ್ಷರದ ಗುರುತನ್ನು ಗುರುತಿಸದವರಿಲ್ಲ.ಈ ಖ್ಯಾತಿಯನ್ನು ನೋಡಿ ಕಣ್ತುಂಬಿಕೊಳ್ಳಲು ಕೃಷ್ಣ ರಾಯರು ಈಗಿಲ್ಲ. ಆದ್ರೆ ಆ ಕಾಲದಲ್ಲೇ ರಾಯರ ಶ್ರಮವನ್ನು ರಾಣಿ ಎಲಿಜಬೆತ್, ಇಂದಿರಾ ಗಾಂಧಿ, ಮೊರಾರ್ಜಿ ದೇಸಾಯಿ, ಜಯಚಾಮರಾಜೇಂದ್ರ ವಡೆಯರ್, ಕಾಂಗ್ರೆಸ್ ಪಕ್ಷದ ಕಿಂಗ್ ಮೇಕರ್ ಮತ್ತು ಅವರ ಆಪ್ತ ಗೆಳೆಯರಾಗಿದ್ದ ಕಾಮರಾಜ್, ಗುಂಡು ರಾವ್ ಸೇರಿದಂತೆ ಹಲವು ಅಗ್ರ ಗಣ್ಯರು ಕೊಂಡಾಡಿದ್ದರು. ಇಷ್ಟೇ ಅಲ್ಲದೆ ನಮ್ಮ ದೇಶದಲ್ಲಿ ಮೊದಲ Drive Inn Restaurant ಅನ್ನು ಆರಂಭಿಸಿದ್ದು ಇದೇ ಕೃಷ್ಣ ರಾಯರು! ಒಂದು ಬ್ರಾಂಡ್ ಯಾವ ರೀತಿ ಬೆಳೆದಿದೆ ಎನ್ನುವುದಕ್ಕೆ ಪ್ರತಿದಿನ ಸಂಜೆ ಉಡುಪಿಯ Woodlands ಹೋಟೆಲ್ ಕಡೆಗೆ ಒಂದು ಘಳಿಗೆ ಹೋದರೆ ತಿಳಿಯುತ್ತದೆ. ಉಡುಪಿಗೆ ಬಂದಾಗ ಇಲ್ಲಿಗೂ ಭೇಟಿ ನೀಡುವ ಪ್ರತೀತಿ ಹೆಚ್ಚಿನ ಯಾತ್ರಾರ್ಥಿಗಳಲ್ಲೂ ಇದೆ.
ಇನ್ನು ಮುಂದೆ ಮಸಾಲಾ ದೋಸೆ ಸವಿಯುವಾಗ ಈ ಕತೆ ನಿಮಗೆ ನೆನಪಾಗಿ ನಿಮ್ಮೊಂದಿಗಿರುವವರಿಗೆ ಹಂಚಿ. ಒಳ್ಳೆ ವಿಷಯಗಳನ್ನು ಹಂಚುವುದರಲ್ಲಿ ಖುಷಿ ಇದೆ ಯಾಕಂದ್ರೆ ‘ಹಂಚಿ ಬಾಳಿದರಷ್ಟೇ ಸ್ವರ್ಗ ಸುಖ’. ಮಸಾಲಾ ದೋಸಾ ಹಂಚಿದರೆ ಮತ್ತಷ್ಟು ಸುಖ ! ನಾನು ಕಾಲೇಜು ದಿನಗಳಲ್ಲಿ ಗೆಳೆಯರಿಗೆ ಮಸಾಲ ದೋಸಾ ಪಾರ್ಟಿ ಕೊಡುತ್ತಿದ್ದೆ !
ಈ ಎಲ್ಲಾ ವಿಷಯಗಳನ್ನು ಪ್ರಸ್ತುತ ಉಡುಪಿ Woodlands ನ ಉಸ್ತುವಾರಿ ನೋಡಿಕೊಳ್ಳುತ್ತಿರುವ ಪ್ರಸಾದ್ ರಾವ್ ಮತ್ತು Woodlands ಸಮೂಹದ ಆಡಳಿತ ನಿರ್ದೇಶಕರು ಕೃಷ್ಣ ರಾಯರ ಕೊನೆಯ ಪುತ್ರ ಕಡಂದಲೆ ಮುರಳೀಧರ ರಾವ್ ಅವರು ನನಗೆ ನೀಡಿದರು. ಅವರಿಗೆ ಧನ್ಯವಾದ.
ಹಲವರಿಗೆ ಉದ್ಯೋಗ ನೀಡಿ ಉಡುಪಿಯ ಹೆಸರನ್ನು ವಿಶ್ವವಿಖ್ಯಾತಿಗೊಳಿಸಲು ಶ್ರಮಿಸಿದ ಮಹಾನ್ ಚೇತನ ಕೃಷ್ಣ ರಾವ್ ಮತ್ತವರ ಸಾಧನೆಯ ಕುರಿತು ಹೇಳಲು ಹೋದರೆ ಸಾವಿರ ಮಾತಿದೆ..
Sooper brother 🙂 thanks for this information.
ಚೆನ್ನಾಗಿದೆ ಲೇಖನ ಗೆಳೆಯ. ಮಸಾಲೆ ದೋಸೆ ತಿಂದಷ್ಟೇ ಖುಷಿಯಾಯಿತು. ಮಸಾಲೆ ಜ್ಞಾನವೂ ಸಿಕ್ಕಿತು. Thanks
Very informative. Good one 👍 thanks