Home Interviews ಇವರು ‘ಮಾತನಾಡುವ ಕಲ್ಕುಡ’ ! Beeru Panara

ಇವರು ‘ಮಾತನಾಡುವ ಕಲ್ಕುಡ’ ! Beeru Panara

0
Beeru Panara
Pic Credit: Bhuvanesh N Devadiga

ಇವರು ‘ಮಾತನಾಡುವ ಕಲ್ಕುಡ’ ! ಎಲ್ಲರ ನೆಚ್ಚಿನ ಬೀರು ಪಾಣಾರ

ನನ್ನ ಹಿಂದಿನ ಲೇಖನದಲ್ಲಿ ಬೀರು ಪಾಣಾರ ಎನ್ನುವ ವಿಶಿಷ್ಟ ದೈವ ಚಾಕರಿಯ ವ್ಯಕ್ತಿಯೊಬ್ಬರ ಕುರಿತು ಪೀಠಿಕೆ ಹಾಕಿದ್ದೆ. ಚಿಕ್ಕಂದಿನಿಂದಲೂ ದೈವಸ್ಥಾನದಲ್ಲಿ ದರ್ಶನ ಪಾತ್ರಿಯಾಗಿ, ಕೋಲ ಸೇವೆ ನಡೆಸುಕೊಡುವವರಾಗಿ ಕಂಡ ಬೀರು ಅವರನ್ನು Coronaಗೂ ಮುನ್ನ ಅವರ ಸ್ವಗ್ರಹದಲ್ಲಿ ಭೇಟಿಯಾಗಿ ಒಂದೆರಡು ಗಂಟೆ ಕಳೆದಿದ್ದೆ. ಕೆಲವರ ಕುರಿತು ಗೌರವ, ಆಸಕ್ತಿ, ಪ್ರೀತಿ ಹುಟ್ಟಲು ಕಾರಣ ಬೇಕಿಲ್ಲ. ಆದರೆ ಬೀರು ಅವರನ್ನು ದೈವದ ಗುಡಿಯ ಅಂಗಳದಲ್ಲೇ ಹೆಚ್ಚಾಗಿ ಕಂಡ ನನಗೆ ಅವರ ನಡೆ, ನುಡಿ, ಹಾವ ಭಾವ, ನಗೆ, ಭಾಷೆಗಳಿಂದಲೇ ಆಕರ್ಷಿತನಾಗಿದ್ದೆ.

ಯಾರು ಈ ಬೀರು ?

ಸದ್ಯ ಇವರು Udupiಯಿಂದ Karkalaಕ್ಕೆ ಸಾಗುವ ದಾರಿಯಲ್ಲಿ ನೀರೆ ಎಂಬ ಪುಟ್ಟ ಊರಿನಲ್ಲಿ ತಮ್ಮ ಸಂಸಾರದೊಂದಿಗೆ ವಾಸವಿದ್ದಾರೆ. 15 ನೇ ವಯಸ್ಸಿನಿಂದಲೇ ದೈವ ಚಾಕರಿಗೆ ಇಳಿದಿದ್ದ ಇವರಿಗೆ ತಂದೆಯೇ ಗುರು. ಅವರ ಹೆಸರು ಕಾಳು ಪಾಣಾರ. ದೈವದ ಸೇವೆಯಲ್ಲಿ ಇವರು ಆ ದಿನಗಳಲ್ಲೇ ಪ್ರಸಿದ್ಧರಾಗಿದ್ದರು. ಕಲ್ಕುಡನ (Kalkuda) ಸೇವೆಯನ್ನು ಅತ್ಯಂತ ನಿಷ್ಠೆಯಿಂದ ನಡೆಸುತ್ತಿದ್ದ ಕಾರಣಕ್ಕೆ ಜನರು ಅವರನ್ನು ಕಲ್ಕುಡ ಕಾಳು ಎಂದೇ ಕರೆಯುತ್ತಿದ್ದರಂತೆ! ಸುಮಾರು 5 ದಶಕಗಳಿಂದ ದೈವ ಚಾಕರಿ ನಡೆಸಿಕೊಂಡು ಬಂದಿರುವ ಬೀರು ಅವರು ಸೇವೆ ಸಲ್ಲಿಸಿದ ಅಷ್ಟೂ ಕ್ಷೇತ್ರಗಳಲ್ಲಿ ಇವರ ಕುರಿತು ಅಲ್ಲಿಗೆ ಸಂಬಂಧಪಟ್ಟವರು ಮತ್ತು ಭಕ್ತರಿಗೆ ಎಲ್ಲಿಲ್ಲದ ಗೌರವ. ಕಟಪಾಡಿಯ ವಿಶ್ವನಾಥ ಕ್ಷೇತ್ರದ ಕಲ್ಕುಡ ಸ್ಥಾನದಲ್ಲಿ ಪ್ರತೀ ಶನಿವಾರದ ದರ್ಶನ ಸೇವೆಗೆ ಇವರೇ ಬೇಕು. ಮೊನ್ನೆ ಬನ್ನಂಜೆ ಕಲ್ಕುಡ ಮನೆಗೆ ಭೇಟಿ ಕೊಟ್ಟಾಗ ಆ ಮನೆಯವರು ‘ನಮಗೆ ಜನರು ಫೋನ್ ಮಾಡಿ ಇವತ್ತು ದರ್ಶನಕ್ಕೆ ಯಾರು ಅಂತ ಕೇಳಿ ಬರುವವರಿದ್ದಾರೆ’ ಎಂದಿದ್ದರು. ಈ ವಿಷಯ ನನಗೆ ಹಿಂದಿನಿಂದಲೂ ಗೊತ್ತು. ಬನ್ನಂಜೆಯಲ್ಲಿ ದರ್ಶನಕ್ಕೆ ಬೀರು ಅವರು ನಿಂತಾಗ ಅಲ್ಲಿ ಸೃಷ್ಟಿಯಾಗುವ ವಾತಾವರಣವೇ ಬೇರೆ. ಇದನ್ನು ನಾನು ಎಷ್ಟೋ ವರ್ಷಗಳ ಕಾಲ ಅನುಭವಿಸಿದ್ದೇನೆ. ಅವರಿಗೆ ಯಾರೊಂದಿಗೂ ಮನಸ್ತಾಪವಿಲ್ಲ. ಹಣಕ್ಕಾಗಿ ಸೇವೆ ಮಾಡಿದವರಲ್ಲ. ಪಾಲಿಗೆ ಬಂದದ್ದೇ ಪಂಚಾಮೃತ ಎಂದು ತಿಳಿದು ತನ್ನ ನಿಯಮ, ನಿಷ್ಠೆಗೆ ಬದ್ಧರಾಗಿ ಸೇವೆ ಸಲ್ಲಿಸಿದ ಕಾರಣಕ್ಕೆ ಕಲ್ಕುಡ ಇವರಿಗೆ ಒಲಿದಿದ್ದಾನೆ ಎಂದರೆ ತಪ್ಪಿಲ್ಲ. ದರ್ಶನದಲ್ಲಿ ಪ್ರಶ್ನೆಗೆ ಅವರಲ್ಲಿಗೆ ಬಂದಾಗ ಭಕ್ತರೊಂದಿಗಿನ ಅವರ ಸಂಭಾಷಣೆ, ತುಳು ಭಾಷೆಯ ಮೇಲಿನ ಹಿಡಿತ, ಸ್ಪಷ್ಟತೆ, ಬಳಸುವ ಪದಗಳು, ಧ್ವನಿಯ ಏರಿಳಿತ ಎಲ್ಲವೂ ಸೇರಿದಾಗ ಎಂಥವರಿಗೂ ಸಾಂತ್ವನ ದೊರಕುತ್ತಿತ್ತು. ಆ ಕಾರಣಕ್ಕಾಗಿ ಅವರನ್ನು ಮಾತನಾಡುವ ಮತ್ತು ನಡೆದಾಡುವ ಕಲ್ಕುಡ ಎಂದೂ ಅನೇಕ ಭಕ್ತರು ಅಭಿಮಾನದಿಂದ ಸಂಬೋಧಿಸುತ್ತಾರೆ. ಮತ್ತೊಂದು ಮುಖ್ಯ ಅಂಶವೆಂದರೆ ಕಲ್ಕುಡ ದೈವದ ಮೂಲ ಹೆಸರು ಬೀರ ಕಲ್ಕುಡ. ಆತ ಬೀರನಾದರೆ ಇವರು ಬೀರು – ಇಬ್ಬರೂ ಒಂದೇ ! ಇವರೊಂದಿಗಿನ ಪ್ರತಿ ಸಂಭಾಷಣೆಯಲ್ಲೂ ನಾನು ಕಲ್ಕುಡನೊಂದಿಗೇ ಮಾತನಾಡುತ್ತಿದ್ದೆನೇನೋ ಎಂಬ ಭಾವನೆ ಮೂಡಿದ್ದಿದೆ.

Beeru Panara as Kalkuda
Beeru Panara as Kalkuda

Blog ಆರಂಭವಾಗಿ ಇಂದಿಗೆ ಸರಿಯಾಗಿ ಒಂದು ತಿಂಗಳು. ಇಂದಿನಿಂದ ‘Interviews’ ಎನ್ನುವ ಹೊಸ ವಿಭಾಗವೊಂದನ್ನು ಸೇರಿಸುತ್ತಿದ್ದೇನೆ. ಮೊದಲನೇ ಸಂದರ್ಶನ ಬೀರು ಅವರದ್ದಾಗಿರುವುದರಿಂದ ಕಲ್ಕುಡನ ಅನುಗ್ರಹ ಸಿಕ್ಕಂತೆ ಎಂದು ಭಾವಿಸುತ್ತೇನೆ.

ಅಂದು ಮತ್ತು ಇಂದಿನ ದೈವಾರಾಧನೆ ಹೇಗಿದೆ ?

ಆಗೆಲ್ಲಾ ಅಚ್ಚುಕಟ್ಟಾಗಿ ಸಂಪ್ರದಾಯಬದ್ಧವಾಗಿ ನಡೆಯುತ್ತಿದ್ದ ಆರಾಧನೆ ಕ್ರಮೇಣ ಆಧುನೀಕತೆಗೆ ಒಗ್ಗಿಕೊಂಡು ನಡೆಯುತ್ತಿರುವುದು ನಿಮಗೆ ಗೊತ್ತಿರುವ ಸಂಗತಿ. ಕುಣಿತ, ವಾದ್ಯದಲ್ಲೂ ಈಗ ವ್ಯತ್ಯಾಸ ಇದೆ. ಆ ದಿನಗಳಲ್ಲಿ ಪೂರ್ತಿ ಪಾಡ್ದನ ಹೇಳುತ್ತಿದ್ದರು. ಆಗ ದೈವ ಸಂಪೂರ್ಣ ಸಂತುಷ್ಟವಾಗಿ ಕೋಲಕ್ಕೊಂದು ವಿಶೇಷ ಕಳೆ ಬರುತ್ತಿತ್ತು. ಈಗ ಪೂರ್ತಿ ಕೇಳಿ ಬರುತ್ತಿಲ್ಲ. ಕೋಲಾರಾಧನೆಯಲ್ಲಿ ಈ ಪಾಡ್ದನ ಪ್ರಮುಖ ಪಾತ್ರ ವಹಿಸುತ್ತದೆ. ದೈವದ ಕತೆ, ಚರಿತ್ರೆ ಸಾರುವ ಪಾಡ್ದನಗಳಿಗೆ ವಿಶೇಷ ಮಹತ್ವ ಇದೆ. ಕೋಲದ ಕುರಿತ ವಿಶೇಷ ಆಸಕ್ತಿ ಇರುವವರು ಪಾಡ್ದನಗಳನ್ನು ವಿಡಿಯೋ ಮೂಲಕ ಸಂಗ್ರಹಿಸುವ ಅವಶ್ಯಕೆತೆ ಇದೆ. ಕೆಲವರು ‘ಕಟ್ಟು ಕಟ್ಟಳೆ ಮಾತ್ರ ಸಾಕು, ನಮಗೆ ಹೊರಡಬೇಕು, ರಾತ್ರಿ ಬಸ್ಸು ಇಂತಿಷ್ಟು ಗಂಟೆಗಿದೆ ಎನ್ನುವವರೂ ಇದ್ದಾರೆ. ಇದೆಲ್ಲ ಒಳ್ಳೆಯ ಬೆಳವಣಿಗೆಗಳಲ್ಲ ಎಂದೆನಿಸುತ್ತದೆ.

ಬೀರ ಕಲ್ಕುಡ ‘ವೀರ ಕಲ್ಕುಡ’ ಆದದ್ದು ಹೇಗೆ ?

ಆತನ ಕುರಿತು ಒಟ್ಟು 4 ಕತೆಗಳಿವೆ. ಅದರಲ್ಲಿ 3 ತಪ್ಪು ಒಂದು ಮಾತ್ರ ಸರಿ.

ವೇಣೂರಿನಲ್ಲಿ ಕಾರ್ಕಳದ ಅರಸನ ಹಠಕ್ಕೆ ಮಣಿದು ಕಲ್ಕುಡ ತನ್ನ ಒಂದು ಕೈ ಮತ್ತು ಮತ್ತು ಒಂದು ಕಾಲಿನಿಂದ ಗೊಮ್ಮಟನನ್ನು ಕೆತ್ತುವ ಕೆಲಸ ಮಾಡಿ ಮುಗಿಸುತ್ತಾನೆ. ಅರಸ ಸುತ್ತಲಿದ್ದವರಲ್ಲಿ ಗೊಮ್ಮಟನನ್ನು ನಿಲ್ಲಿಸಿ ಎಂದು ಆಜ್ಞಾಪಿಸುತ್ತಾನೆ. ಎಲ್ಲರೂ ಜೊತೆಯಾಗಿ ಕೈ ಜೋಡಿಸಿದರೂ ಈ ಕಾರ್ಯ ಸಾಧ್ಯವಾಗದಿದ್ದಾಗ ಕಲ್ಕುಡ ತನ್ನ ತಂದೆ ಶಂಭು ಕಲ್ಕುಡ ಮತ್ತು ಕುಲದೇವಿ ಕಾಳಿಕಾಂಬಾನನ್ನು ನೆನೆದು ಒಂದೇ ಕೈಯಲ್ಲಿ ಗೊಮ್ಮಟನನ್ನು ನಿಲ್ಲಿಸುತ್ತಾನೆ. ಈ ಸಂಗತಿಯನ್ನು ಕಂಡ ಎಲ್ಲರೂ ಬೆಚ್ಚಿಬಿದ್ದು, ಆಶ್ಚರ್ಯಚಕಿತರಾಗಿ ‘ನೀನು ಬೀರ ಅಲ್ಲ ವೀರ ಕಲ್ಕುಡ’ ಎಂದು ಉದ್ಘೋಷಿಸುತ್ತಾರೆ. ಈ ವಿಚಾರ ನಿಮಗೆ ಹೆಚ್ಚಾಗಿ ಕೇಳಸಿಗುವುದಿಲ್ಲ. ಕೆಲವೊಮ್ಮೆ ಕತೆ ಹೇಳುವ ಭರದಲ್ಲಿ ತಪ್ಪಾಗಿ ಹೇಳುವುದಿದೆ. ( ಒಂದು ಕೈ, ಒಂದು ಕಾಲು ಕಳೆದುಕೊಳ್ಳುವುದು ಒಂದು ಬೇರೆಯದೇ ಕತೆ )

Beeru Panara
Beeru Panara as kalkuda during kola

ಕಲ್ಕುಡ ಕನಸಲ್ಲಿ ಕಾಣಿಸಿಕೊಂಡಿದ್ದು, ಆತನ ಇರುವಿಕೆಯ ಅನುಭವ ನಿಮಗೆ ಆಗಿದೆಯಲ್ಲವೇ ?

# ನಾನು ನಾಟಕ ಕಲಾವಿದನೂ ಹೌದು. ಆ ದಿನಗಳಲ್ಲಿ ನಾವು ಉಡುಪಿ ಹಾವಂಜೆಯ ಗೋಳಿಕಟ್ಟೆ ಎಂಬಲ್ಲಿ ಹಿಂದೂ, ಮುಸಲ್ಮಾನರೆಲ್ಲರೂ ಒಟ್ಟಾಗಿ ನಾಟಕವಾಡುತ್ತಿದ್ದೆವು. ಆಗ ಏಕಾಏಕಿ ಕಲ್ಲು ಬೀಳುತಿತ್ತು. ( ಗೋಳಿಕಟ್ಟೆಯಲ್ಲಿ ಒಂದು ಕಲ್ಕುಡ ಸ್ಥಾನ ಇದೆ. ಅದನ್ನು ಅಲ್ಲಿನ ನಾಟಕ ಸಂಘದವರು ಸೇರಿ ಪ್ರತಿಷ್ಠಾಪಿಸಿದ್ದು). ಈಗಲೂ ಅಷ್ಟೇ, ಸ್ವಲ್ಪ ಎಡವಟ್ಟಾದರೂ ಅಲ್ಲಿ ಕಲ್ಲು ಬೀಳುತ್ತದೆ! ಒಂದು ವರ್ಷ ಆ ಅನುಭವ ಅಲ್ಲಿ ಯಾರಿಗೂ ಆಗಲಿಲ್ಲ. ಆಗ ನಾನು ಹುಡುಗಾಟಿಕೆಯಲ್ಲಿ’ ಕಲ್ಕುಡ ಕಲ್ಲು ಎಸೆಯುತ್ತಾನಂತೆ. ಈಗ ಎಲ್ಲಿ ಹೋಗಿದ್ದಾನೆ’? ಎಂದಿದ್ದೆ. ಆ ರಾತ್ರಿ ನಾನು ಮಲಗಿದಲ್ಲಿ ಕಲ್ಲು ಬೀಳಲು ಆರಂಭವಾಯಿತು! ನಮ್ಮದು ಹಂಚಿನ ಮನೆ. ಜಾಗ ಬದಲಿಸಿದರೂ ಕಲ್ಲು ಬೀಳುತ್ತಿತ್ತು. ಆಗ ನನ್ನ ತಂದೆಯವರು ಕಲ್ಕುಡನಲ್ಲಿ ಪ್ರಾರ್ಥನೆ ಮಾಡಿದ ನಂತ್ರ ಎಲ್ಲವೂ ಸಮ ಸ್ಥಿತಿಗೆ ಬಂತು. ನನ್ನ ತಂದೆಯವರ ಭಕ್ತಿ, ಶ್ರದ್ಧೆಗೆ ನಾನು ಸರಿಸಾಟಿಯಲ್ಲ. ಅವರು ಕಲ್ಕುಡನೊಂದಿಗೆ ಮಾತನಾಡುತ್ತಿದ್ದರು. ಅವರಿಗೆ ಕಲ್ಕುಡ ಕಾಳು ಎಂದೇ ಹೆಸರು. ಅವರು ‘ಹಾಗೆಲ್ಲ ಮಾಡಬೇಡ, ಕ್ಷಮಿಸು’ ಎಂದರೆ ಸಾಕು, ಎಲ್ಲವೂ ಸರಿ ಹೋಗುತ್ತಿತ್ತು. ಬನ್ನಂಜೆ ಕಲ್ಕುಡ ಮನೆಯಲ್ಲಿ ಮೊದಲು ದರ್ಶನ ಸೇವೆ ನಡೆಸಿ ಕೊಡುತ್ತಿದ್ದದ್ದು ಅವರೇ. ಅಲ್ಲಿ ದರ್ಶನಕ್ಕೆ ನಿಲ್ಲಲು ಹಾಗೆಲ್ಲ ಎಲ್ಲರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಆ ವ್ಯಕ್ತಿಯಲ್ಲಿ ಅಷ್ಟೊಂದು ಸತ್ಯವಿದ್ದರೆ ಮಾತ್ರ ಸಾಧ್ಯ.

# ನಮ್ಮ ಈ ಮನೆಯಲ್ಲಿ ನಡೆದ ಘಟನೆ ಅಂದ್ರೆ .. ನನ್ನ ತಂದೆಯವರು ಪೂಜೆ ಮಾಡುವಾಗ ನಾನೂ ಅವರೊಂದಿಗೆ ಸೇರಿಕೊಳ್ಳುತ್ತಿದ್ದೆ.ಆಗ ಕೆಲವೊಮ್ಮೆ ಯಾರೋ ಕರೆದ ಹಾಗೆ ಭಾಸವಾಗುತ್ತಿತ್ತು! ಇನ್ನು ಕೆಲವೊಮ್ಮೆ ರಾತ್ರಿ 12ರ ಸುಮಾರಿಗೆ ಗಗ್ಗರದ ಸದ್ದು ಕೇಳಿಸುತ್ತಿತ್ತು. ಗಗ್ಗರ ಕಾಲಿಗೆ ಕಟ್ಟಿಕೊಂಡು ನಡೆದಾಡಿದ ಶಬ್ದ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಆದರೆ ನನಗೆ ಯಾವುದೇ ರೀತಿಯ ಭಯವಾಗುತ್ತಿರಲಿಲ್ಲ. ಒಮ್ಮೆ ನನ್ನ ಹಿರಿಯಣ್ಣನಿಗೆ ಕರೆ ಮಾಡಿ ವಿಚಾರ ತಿಳಿಸಿದೆ. ಆಗವನು ‘ನೀನು ಹೆದರಬೇಡ, ನಾನು ಕಲ್ಕುಡನಿಗೆ ಪ್ರಾರ್ಥನೆ ಮಾಡುತ್ತೇನೆ’ ಎಂದ. ನಂತ್ರ ಈ ಸಂಗತಿ ನಿಂತಿತು.

# ಕಟಪಾಡಿ ವಿಶ್ವನಾಥ ಕ್ಷೇತ್ರದ ಜಾತ್ರೆ ಬಹುದೊಡ್ಡ ಜಾತ್ರೆಗಳಲ್ಲಿ ಒಂದು. ಅಲ್ಲಿ ಕೋಲ ನೋಡಲು ಸಹಸ್ರ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಸೇರುತ್ತಾರೆ. ಕೋಲ ಕಟ್ಟುವುದು ಯಾರೆಂದು ತಿಳಿದ ನಂತ್ರ ಎಷ್ಟೋ ಮಂದಿ ನನ್ನಲ್ಲಿಗೆ ಬಂದು ಮಾತನಾಡಿಸುತ್ತಾರೆ. ಕೆಲವೊಮ್ಮೆ ಕೋಲದ ಹಿಂದಿನ ದಿನ ನನಗೆ ಅನಾರೋಗ್ಯವಾದಾಗ ‘ ನಾಳೆ ಕೋಲ ಇದೆ, ಹೀಗಾದರೆ ಹೇಗೆ ಕಲ್ಕುಡ’ ಎಂದಾಗ ಆ ರಾತ್ರಿ ನನಗೆ ಕನಸಿನಲ್ಲಿ ಆತ ಕಾಣಿಸಿಕೊಂಡು ಅನುಗ್ರಹಿಸಿದ ಸಂಗತಿ ಎಷ್ಟೋ ಬಾರಿ ನನ್ನ ಬದುಕಿನಲ್ಲಿ ನಡೆದಿದೆ.

# ಇತ್ತೀಚಿಗೆ ನನ್ನ ಅರೋಗ್ಯ ಹದಗೆಟ್ಟು ಕನಿಷ್ಠ ದರ್ಶನ ಸೇವೆ ನೆರವೇರಿಸಲೂ ಸಾಧ್ಯವಾಗದೆ ಇದ್ದಾಗ ‘ಇಷ್ಟು ವರ್ಷ ನಿನ್ನ ಸೇವೆ ಮಾಡಿದೆ. ನನಗೆ ಅರೋಗ್ಯ ಕೊಡು’ ಎಂದು ದುಃಖದಿಂದ ಕೇಳಿಕೊಂಡಿದ್ದೆ. ಅದೇ ರಾತ್ರಿ ಸ್ವಪ್ನದಲ್ಲಿ ಕಪ್ಪು ಆಕಾರವಾಗಿ ತೋರಿ ನನಗೆ ಆಶೀರ್ವದಿಸುವಂತೆ ಕಂಡು ಬಂದ. ಮಾರನೇ ದಿನ ಮಲ್ಪೆಯ ಚಿಕ್ಕಮ್ಮ, ಕಲ್ಕುಡ ಸ್ಥಾನದಲ್ಲಿ ದರ್ಶನ ಸೇವೆಗೆಂದು ಮತ್ತೊಬ್ಬರನ್ನು ನೇಮಿಸಿದ್ದೆ. ಆದರೆ ಸೇವೆ ನಡೆಯುವಾಗ ನಾನು ಹಾಜರಿರಬೇಕೆಂದು ಅಲ್ಲಿನ ಸಮಿತಿಯವರ ಒತ್ತಾಯದ ಮೇರೆಗೆ ತೆರಳಿದ್ದೆ. ಚಿಕ್ಕಮ್ಮನ ದರ್ಶನದಲ್ಲಿ ‘ಆತ ಕನಸಿನಲ್ಲಿ ಕಂಡಿದ್ದ ಅಲ್ವಾ? ನೀವು ಹೀಗೇ ಇಲ್ಲಿಗೆ ಬಂದು ಹೋಗುತ್ತಿರಬೇಕು’ ಎನ್ನುವ ನುಡಿ ಕೇಳಿ ಬಂತು.

# ಕಟಪಾಡಿ ವಿಶ್ವನಾಥ ಕ್ಷೇತ್ರಕ್ಕೆ ಸಂಬಂಧಪಟ್ಟವರು ‘ನೀವೇ ಕೋಲ ಕಟ್ಟಬೇಕು, ಬೇರೆಯವರಿದ್ದರೆ ನಮಗೆ ಯಾಕೋ ಮನಸಿಗೆ ಸಮಾಧಾನವೆನಿಸುವುದಿಲ್ಲ. ನೀವು ಗಗ್ಗರ ಕಟ್ಟಿ, ಅಣಿ ಏರಿಸಿ ನುಡಿ ಕೊಟ್ಟರೂ ಸಾಕು’ ಎಂದಿದ್ದರು. ನನ್ನ ಕಾಲು ಊದಿಕೊಂಡಿತ್ತು. ಆದರೆ ಎಣ್ಣೆ ಸ್ವೀಕರಿಸಿದ ನಂತ್ರ ನನಗೆ ಎಲ್ಲಿಲ್ಲದ ಹುಮ್ಮಸ್ಸು ಬರುತ್ತದೆ. ಎಲ್ಲಾ ಭಾರವನ್ನು ಅವನ ಮೇಲೆ ಹಾಕಿ ಊದಿಕೊಂಡ ಕಾಲಿಗೆ ಎಣ್ಣೆ ಹಚ್ಚಿ ಗಗ್ಗರ ಏರಿಸಿ ಬಿಟ್ಟೆ. ಹೀಗೆ ಅವನ ಸೇವೆ ಮಾಡುತ್ತಲೇ ಇದ್ದರೆ ನನಗೆ ಸಮಾಧಾನ.

Beeru Panara offering paryers at Kalkuda House Bannanje (Yenne Boolya)
Beeru Panara offering paryers at Kalkuda House Bannanje (Yenne Boolya)

ಸಂದರ್ಶನದ ವೇಳೆ ವಿಸ್ಮಯ ಎನಿಸುವ ಸಂಗತಿಯೊಂದು ನಡೆದೇ ಹೋಯಿತು !!

ಅವರೇ ನಿರ್ಮಿಸಿದ ದೈವಸ್ಥಾನದ ಜಗಲಿಯ ಮೇಲೆ ಅವರು ಕೂತಿದ್ದರೆ ಎದುರುಗಡೆ ನಾನು ಮತ್ತು ಗೆಳೆಯರಾದ ಸುಧೀರ್ ಮತ್ತು ಭುವನೇಶ್ ಕೂತಿದ್ದರು. ಮಾತು ಮುಗಿದ ನಂತ್ರ ಸುಧೀರ್ ಅವರು ‘ದೈವಸ್ಥಾನದ ಒಳಾಂಗಣವನ್ನು ಚಿತ್ರೀಕರಿಸಬಹುದೇ’ ಎಂದು ಕೇಳಿದಾಗ ಅವರು ಒಪ್ಪಿದರು. ಅವರ monopod ನ ಮೇಲೆ gimble ಗೆ ಮೊಬೈಲ್ ಸಿಕ್ಕಿಸಿ ಒಳಗಿನ ಚಿತ್ರೀಕರಣಕ್ಕೆ ಪ್ರಯತ್ನ ಪಟ್ಟಾಗ ಗಟ್ಟಿಮುಟ್ಟಾದ monopod ಸಡಿಲವಾಗಿ ಮೊಬೈಲ್ ಸಹಿತ ಗರ್ಭಗುಡಿಯೊಳಗೆ ಚಿಮ್ಮಿ ಬಿದ್ದೇ ಬಿಟ್ಟಿತು. ಅಲ್ಲಿದ್ದ ನಮಗೆ ದಿಗಿಲು !! ಬಿದ್ದ ರಭಸಕ್ಕೆ ಮೊಬೈಲ್ ಒಡೆದು ಹೋಗಬೇಕಿತ್ತು ಆದ್ರೆ ವಿಶೇಷ ಅಂದ್ರೆ ರಕ್ಷಾಕವಚ ಇಲ್ಲದ ಮೊಬೈಲ್ ಗೆ ಒಂದು ಸಣ್ಣ ಗೀಟು ಕೂಡ ಬೀಳಲಿಲ್ಲ !! ( ಗಟ್ಟಿಮುಟ್ಟಾದ monopod ಮತ್ತು gimble ಬೀಳುವ ಸಾಧ್ಯತೆ ತೀರಾ ಕಡಿಮೆ) ಈ ಕೆಳಗಿನ ವಿಡಿಯೋ ಗಮನಿಸಿ…

‘ಹೀಗೆ ಯಾಕಾಗಿರಬಹುದು ಪಾತ್ರಿಗಳೇ ?’ ಎಂದು ಪ್ರಶ್ನಿಸಿದಾಗ ‘ನಿಮ್ಮ ಪರಿಕರಗಳು ಸುಸ್ಥಿತಿಯಲ್ಲಿದೆ ಅಲ್ವಾ ? ಹಾಗಾದ್ರೆ ಚಿಂತೆ ಬೇಡ. ಅವನು ಹೀಗೆಲ್ಲಾ ಕೆಲವೊಮ್ಮೆ ಕೆಲವರೊಂದಿಗೆ ಮಕ್ಕಳಂತೆ ಆಟವಾಡುತ್ತಾನೆ. ಈಗ ಆಗಿದ್ದೂ ಅಷ್ಟೇ, ಹೆದರಬೇಡಿ’ ಎಂದು ಸಮಾಧಾನ ಪಡಿಸಿದರು.

ಅಂದ ಹಾಗೆ ಈ ಲೇಖನದಲ್ಲಿ ಅವರೊಂದಿಗಿನ ಮಾತುಕತೆಯ ಕೆಲವು ಆಯ್ದ ವಿಷಯಗಳ್ಳನ್ನಷ್ಟೇ ಬರೆದಿದ್ದೇನೆ. ಈಗ ಮುಖ್ಯವಾಗಿ ಆಗಬೇಕಿರುವುದು ಅವರ ಅರೋಗ್ಯ ಸುಧಾರಣೆ. ಯಾಕಂದರೆ ಅವರ ದರ್ಶನ ಮತ್ತು ಕೋಲ ಸೇವೆಯನ್ನು ಕಾಣಲು ನನ್ನಂತಹ ಎಷ್ಟೋ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.ಒಂದು ಸಮಾಧಾನಕರ ಸಂಗತಿಯೆಂದರೆ ಮೊದಲಿಗಿಂತ ಈಗವರ ಅರೋಗ್ಯ ಸುಧಾರಿಸಿದೆ.

ತಾವೇ ನಿರ್ಮಿಸಿದ ಕಲ್ಕುಡ, ವರ್ತೆ ಗುಡಿಯಲ್ಲಿ ಕಲ್ಕುಡ ಸ್ವಾಮಿಯ ಮೂರ್ತಿಯೊಂದನ್ನು ಪ್ರತಿಷ್ಠಾಪಿಸಬೇಕು ಎನ್ನುವುದು ಅವರ ಹಲವು ವರ್ಷಗಳ ಕನಸಾಗಿದೆ. ಹತ್ತಿಪ್ಪತ್ತು ಸಾವಿರ ಬೇಕಾಗಬಹುದು. ಅವರ ಈ ಕನಸನ್ನು ನಾವೆಲ್ಲರೂ ಸೇರಿ ಸುಲಭವಾಗಿ ನನಸು ಮಾಡಬಹುದು.ಈ ಲೇಖನ ಓದಿದ ನೀವು ಸಾಧ್ಯವಾದರೆ ನಿಮ್ಮಿಂದಾದ ದೇಣಿಗೆಯನ್ನು ‘ ಗುರು ಕಾಣಿಕೆ’ ಎಂದು ಭಾವಿಸಿ ನೀಡಿ ಎನ್ನುವುದು ನನ್ನ ವಿನಂತಿಯಾಗಿದೆ.ನಮ್ಮ ಪಾಲಿನ ಸಣ್ಣ ದೇಣಿಗೆಯನ್ನು ಸಂದರ್ಶನ ಮುಗಿಸಿ ನೀಡಿ ಬಂದೆವು.

Shanthi
State Bank of india, Manipal
Account Number: 20227598810
IFSC:SBIN0004426

ಮುಗಿಸುವ ಮುನ್ನ…

ದೈವಾರಾಧನೆ ಕುರಿತು Youtube Videoಗಳು, ವೇದಿಕೆಯ ಭಾಷಣಗಳ ಮೂಲಕ ಸಾಕಷ್ಟು ಅರಿವು ಮೂಡಿಸುತ್ತಿರುವ ಮಂಗಳೂರಿನ Thammanna Shettyರ ಜೊತೆ ಮೊನ್ನೆ ಮಾತನಾಡುತ್ತಿದ್ದಾಗ ಅಮೇರಿಕಾ ದೇಶದ ವಿದ್ವಾಂಸರಾದ Peter Claus ಅವರು ತುಳುನಾಡಿನ ದೈವಾರಾಧನೆ ಕುರಿತು ಹೇಳಿದ ಮಾತೊಂದನ್ನು ಉಲ್ಲೇಖಿಸಿದ್ದರು – ‘ ದೈವಾರಾಧನೆ ಎಂದರೆ ಮಾಂತ್ರಿಕ ಶಕ್ತಿಯಲ್ಲ. ಅದೊಂದು ಕಾರಣಿಕ ಶಕ್ತಿ. ಅದರಲ್ಲಿ ಬಣ್ಣ, ಅನ್ನ, ಹಾರ, ವೇಷ, ಭೂಷಣ, ನಡೆ, ನುಡಿ, ಆಚಾರ, ವಿಚಾರ ಇದೆ, ಆಚರಣೆ ಇದೆ, ವಿಚಾರಣೆಯೂ ಇದೆ’. ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲದಲ್ಲಿ ಹಲವು ವರ್ಷಗಳ ಕಾಲ ಮಾನವ ಶಾಸ್ತ್ರ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದು ತುಳುನಾಡಿನ ದೈವಾರಾಧನೆ ಕುರಿತು ಆಸಕ್ತಿ ಹುಟ್ಟಿದ ಕಾರಣಕ್ಕೆ ಇಲ್ಲಿಗೆ ಬಂದು ಅಧ್ಯಯನ ನಡೆಸಿದ ಮೇಧಾವಿ Peter Claus ಅವರು. ಈಗವರು ಗತಿಸಿ ಸುಮಾರು 4 ವರ್ಷಗಳಾಗಿವೆ.

Peter J Claus interacting with Siri Paddana artiste Kargi Pujarthi.
Peter J Claus interacting with Siri Paddana artiste Kargi Pujarthi. Photo credit: S A Krishnaiah, senior folklorist, Udupi.

ಬೀರು ಪಾಣಾರರಂತಹ ನಿಷ್ಠಾವಂತರ ಸೇವೆ ದೈವಕ್ಕೆ ಬೇಕು – ಆ ಕಲ್ಕುಡನ ಅನುಗ್ರಹದಿಂದಲೇ ಅವರ ಅರೋಗ್ಯ ಸುಧಾರಿಸಿದರೆ ಸಾಕು ಎನ್ನುವ ಶುಭ ಹಾರೈಕೆಗಳೊಂದಿಗೆ

ಬೀರು ಪಾತ್ರಿಗಳೇ ನಿಮಗೆ ನನ್ನ ಪ್ರೀತಿ ಪೂರ್ವಕ ನಮಸ್ಕಾರ …

Disclaimer: The views and opinions expressed in this article are those of the interviewee and do not necessarily reflect the views or positions of this website (avinashkamath.in)

LEAVE A REPLY

Please enter your comment!
Please enter your name here