
ಒಂದೂವರೆ ದಶಕಗಳ ಹಿಂದೆ ಮನೋರಂಜನೆ, ದುಡಿಮೆ ಮತ್ತು ಹರಕೆ ತೀರಿಸಲು ವೇಷ ಹಾಕುವುದು ವಾಡಿಕೆಯಲ್ಲಿತ್ತು. ಕಾಲ ಬದಲಾದಂತೆ ವೇಷ ಮತ್ತದರ ಸುತ್ತಲಿನ ಕಲ್ಪನೆಗೆ ಹೊಸ ಮೆರುಗು ಬಂತು. ಅದೇನಂದ್ರೆ ವೇಷ ಧರಿಸಿ ಚಂದಾ ಎತ್ತಿ, ಅಸಹಾಯಕರಿಗೆ, ಅರ್ಹರಿಗೆ ನೀಡಿ ಸಾಮಾಜಿಕ ಕಳಕಳಿಯ ಸೇವೆಯೊಂದನ್ನು ಮಾಡುವುದು ಚಾಲ್ತಿಗೆ ಬಂತು. ಈಗಂತೂ ಈ ಯೋಜನೆ ಅಲ್ಲಲ್ಲಿ ಕಾಣಸಿಗುತ್ತಿದೆ ಮತ್ತು ಜನರಿಂದ ಭರಪೂರ ಬೆಂಬಲವೂ ವ್ಯಕ್ತವಾಗುತ್ತಿದೆ. ಈಗ ವಿಷಯಕ್ಕೆ ಬರುತ್ತೇನೆ.
ರವಿ ಕಟಪಾಡಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ?
ಪ್ರತಿ ವರ್ಷ ಅಷ್ಟಮಿ ಸಂದರ್ಭ ಇಂಗ್ಲಿಷ್ ಸಿನೆಮಾದಿಂದಾಯ್ದ ಪಾತ್ರವೊಂದರ ವೇಷ ಧರಿಸಿ ಜನರೆದುರು ಪ್ರದರ್ಶಿಸಿ ಅವರಿಂದ ಹಣ ಸಂಗ್ರಹಿಸಿ ತಾನು ಮತ್ತು ಸ್ನೇಹಿತರು ನಿರ್ಧರಿಸಿದ ತೀರಾ ಅಗತ್ಯವಿರುವ ಮಕ್ಕಳ ಚಿಕಿತ್ಸೆಗೆ ನೀಡುವ ಮೂಲಕ ದೇಶಕ್ಕೇ ಪರಿಚಯವಾದವರು . ಅವರ ಈ ಕಾರ್ಯಕ್ಕಾಗಿ Kaun Banega Crorepatiಯ Hotseatನಲ್ಲಿ ಕೂರುವ ಅವಕಾಶವೂ ಸಿಕ್ಕಿತು. ಈವರೆಗೆ ಅವರು ಸುಮಾರು 90 ಲಕ್ಷ ರೂಪಾಯಿ ಸಂಗ್ರಹಿಸಿದ್ದಾರೆ! ಈ ವರ್ಷ 10 ಲಕ್ಷದ ಗುರಿ ಇಟ್ಟುಕೊಂಡಿದ್ದಾರೆ. ಅದನ್ನವರು ತಲುಪಲಿ ಎನ್ನುವ ಹಾರೈಕೆ ನನ್ನದು. ಈಗಂತೂ ಈ ರೀತಿಯ ಚಟುವಟಿಕೆ ನಮ್ಮ ಭಾಗದಲ್ಲಿ ಒಂದು ಟ್ರೆಂಡ್ ಆಗಿ ಬಿಟ್ಟಿದೆ.

ನೀವು ನೋಡದ ರವಿ
ಅವರ ಪರಿಚಯ ನನಗಾಗಿದ್ದು 2014ರಲ್ಲಿ. ಹೆಸರು, ಕೀರ್ತಿ ಸಂಪಾದಿಸಿದರೂ ಅವರ ವ್ಯಕ್ತಿತ್ವ ಮಾತ್ರ ಸ್ವಲ್ಪವೂ ಬದಲಾಗಲಿಲ್ಲ.ಅತ್ಯಂತ ಸಾಮಾನ್ಯನಾದರೂ ಅಸಾಮಾನ್ಯನಾಗಿ ಬದುಕುತ್ತಿರುವ ಅವರಲ್ಲಿ ನಾ ಕಂಡ ಸೂಕ್ಷ್ಮ ವಿಚಾರಗಳೆಂದ್ರೆ..
* ಶಾಲೆ ಹೆಚ್ಚು ಕಲಿತಿಲ್ಲ. ದಿನಗೂಲಿ ಕಾರ್ಮಿಕ ಎನ್ನುವ ಕೀಳರಿಮೆ ಅವರಲ್ಲಿ ಯಾವತ್ತಿಗೂ ಬಂದಿಲ್ಲ.
* ಅವರೊಬ್ಬ ಒಳ್ಳೆಯ ಮಾತುಗಾರ
* ಸಮಯ ಮತ್ತು ಹಾಸ್ಯ ಪ್ರಜ್ಞೆ ಅವರ ಮಾತುಗಳಲ್ಲಿ ಪ್ರತಿಕ್ಷಣ ಕಂಡುಬರುತ್ತದೆ
* ಮದುವೆ ಆಗುವುದಿಲ್ಲ ಎಂದಿದ್ದಾರೆ. ಒಂದು ವೇಳೆ ಆದರೆ ಇಂತಹ ಸಾಮಾಜಿಕ ಚಟುವಟಿಕೆ ನಡೆಸಲು ಕಷ್ಟವಾಗುತ್ತದೆ ಎನ್ನುವುದು ಅವರ ಅಭಿಪ್ರಾಯ
* ‘ಪ್ರತಿ ದಿನ ಸಂಜೆ ಕೋಳಿ ತನ್ನಿ, ಕಬಾಬ್ ತನ್ನಿ ಅಂತ ಆರ್ಡರ್ ಮಾಡಿದ್ರೆ ದಿನಗೂಲಿ ಕಾರ್ಮಿಕ ನಾನೆಲ್ಲಿ ಹೋಗಲಿ?’ ಎಂದು ನನ್ನದೇ ಸಂದರ್ಶನ ಒಂದರಲ್ಲಿ ನಗೆ ಚಟಾಕಿ ಹಾರಿಸಿದ್ದರು
* ತಾಯಿ, ಅಣ್ಣಂದಿರ ಜೊತೆ ಹಾಯಾಗಿದ್ದೇನೆ. ಪ್ರತಿದಿನ ಅವರ ಜೊತೆ ಕೂತು ಅನ್ನ, ಮೀನು ಸಾರಿನ ಊಟ ಪ್ರಪಂಚದ ಎಲ್ಲಾ ಸುಖ ನನಗೆ ನೀಡಿದೆ ಎನ್ನುತ್ತಾರೆ
* Kaun Banega Crorepatiಯಲ್ಲಿ Amitabh Bacchan ಅವರು ‘ ನೀವು ಹೃದಯ ಶ್ರೀಮಂತರು’ ಎಂದಾಗ ‘ನಿಜ ಸರ್ ನಾನು ಶ್ರೀಮಂತ ಯಾಕೆ ಅಂತ ಕೇಳಿ’ ಎಂದಾಗ ‘ ನನ್ನ ತಲೆಯಿಂದ ಕಾಲಿನವರೆಗೆ ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತಿದೆ’ ಎಂದಿದ್ದರು. ಇದೆಷ್ಟು ಸೂಕ್ಷ್ಮ ಮತ್ತು ಕಣ್ಣು ತೆರೆಸುವ ವಿಚಾರ ಅಲ್ವೇ ?
* ನಾನು ಈ ದಿನ,ಈ ಕ್ಷಣಕ್ಕಾಗಿ ಬದುಕುತ್ತೇನೆ ನಾಳಿನ ಚಿಂತೆ ನನಗಿಲ್ಲವೇ ಇಲ್ಲ ಎಂದು ಆಗಾಗ ವೇದಿಕೆಯಲ್ಲಿ ಹೇಳಿದ್ದಾರೆ
* ಅಷ್ಟಮಿ ಸಂದರ್ಭ ತನಗೆ ವೇಷ ಧರಿಸಲು ಅವಕಾಶ ಸಿಗದೆ ಹೋಗಬಹುದು ಎನ್ನುವ ಕಾರಣಕ್ಕಾಗಿ ಗಲ್ಫ್ ರಾಷ್ಟ್ರದಲ್ಲಿ ತನಗೆ ಸಿಕ್ಕ ಉದ್ಯೋಗವನ್ನು ವರ್ಷದೊಳಗೆ ತ್ಯಜಿಸಿ ಊರಿಗೆ ಬಂದು ಬಿಟ್ಟರು
* ನಾನು ವರ್ಷದಲ್ಲಿ ಹೆಚ್ಚೆಂದರೆ 4 ದಿನ ನೋವನ್ನನುಭವಿಯಬಹುದು ಆದ್ರೆ ನಮ್ಮ ದೇಣಿಗೆ ಪಡೆಯುವ ಮನೆಯವರು ವರ್ಷಪೂರ್ತಿ ನೋವನ್ನನುಭವಿಸುತ್ತಾರಲ್ಲವೇ ? ಎಂದಿದ್ದರು
* ದಿನಗೂಲಿ ಕಾರ್ಮಿಕನಾದ ನಾನು ದುಡಿದು ಹಣ ಸಂಗ್ರಹಿಸಿ ಆರ್ಥಿಕ ಸಹಾಯ ಮಾಡಲು ಸಾಧ್ಯವಿಲ್ಲ. ಕನಿಷ್ಠ ಈ ರೀತಿಯಾದರೂ ಮಾಡಬಹುದಲ್ಲವೇ ? ಎಂದು ನನ್ನಲ್ಲಿ ಆಗಾಗ ಹೇಳಿದ್ದಾರೆ. ಇದನ್ನು ಕೇಳಿದಾಗಲೆಲ್ಲಾ ಜಯಂತ ಕಾಯ್ಕಿಣಿ ಸರ್ ರಚಿಸಿದ ‘ಎಲ್ಲರ ನೋವನು ಬಲ್ಲವನಾದರೆ ಗೆಲ್ಲುವೆ ನೀನು ಬಾಳಲ್ಲಿ’ ಎನ್ನುವ ಹಾಡಿನ ಸಾಲು ನೆನಪಾಗುತ್ತದೆ

ರಾಮಾಂಜಿ ಎಂಬ ತೆರೆ ಮರೆಯ ಸಮಾಜ ಸೇವಕ
ಇವರದ್ದು ಪ್ರತಿ ಕ್ಷಣದ ಹೋರಾಟದ ಬದುಕು. ನನಗಿವರ ಪರಿಚಯ 7 ವರ್ಷಗಳಿಂದೀಚೆಗಾದರೂ ಇವರ ಕುಟುಂಬದ ಹಿನ್ನೆಲೆ ಕುರಿತು ತಿಳಿದಿಲ್ಲ. ಅಂತಾರಾಷ್ಟ್ರೀಯ ದುಡಿಯುವ ಮಕ್ಕಳ ಸಂಸ್ಥೆಯಾದ ‘ನಮ್ಮಭೂಮಿ’ ಎಂಬ ಖಾಸಗಿ ಸಂಸ್ಥೆಯಲ್ಲಿ ದುಡಿದು ತನ್ನ ಪಾಡಿಗಿದ್ದು ಆಸಕ್ತಿಯ ಕ್ಷೇತ್ರಗಳಾದ ಹಾಡುಗಾರಿಕೆ, ನಿರೂಪಣೆ, ರಂಗಭೂಮಿ ಇತ್ಯಾದಿಗಳಲ್ಲಿ ಅತ್ಯಂತ ಸಕ್ರಿಯರಾಗಿದ್ದಾರೆ. ಒಂದು ಕಾಲದಲ್ಲಿ ಶಿರೂರು ಲಕ್ಷ್ಮೀವರತೀರ್ಥ ಶ್ರೀಪಾದರಿಗೆ ಅತ್ಯಂತ ಆಪ್ತರಾಗಿದ್ದು ಅವರ ಬೆಂಬಲದಿಂದ ವೇಷ ಧರಿಸಿ ಉಡುಪಿಯಲ್ಲಿ ಸಂಚಲನ ಮೂಡಿಸಿದ್ದರು. ಅವರ ವೇಷಕ್ಕೆ ಅಂತಹದ್ದೊಂದು ಆಕರ್ಷಣೆ ಇತ್ತು.ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ರವಿ ಕಟಪಾಡಿ ವೇಷ ಧರಿಸಿ ಪ್ರಸಿದ್ಧಿ ಪಡೆಯುವ ಮುನ್ನ ರಾಮಾಂಜಿ ಆ ಕೆಲಸ ಮಾಡಿ ಗೆದ್ದಿದ್ದರು. ಆದರೆ ತೆರೆ ಮರೆಯಲ್ಲೇ ಉಳಿದು ಹೋಗಿದ್ದರು.10 ವರ್ಷಗಳ ಹಿಂದೆ ಸುಮಾರು 50 ಸಾವಿರ ದೇಣಿಗೆಯನ್ನು ಅರ್ಹರಿಗೆ ನೀಡಿ ಪ್ರಚಾರ ಪಡೆಯದೇ ಕೆಲಸ ಮಾಡಿದ ತೃಪ್ತಿಯಿಂದ ಸುಮ್ಮನಾಗಿ ಬಿಟ್ಟಿದ್ದರು.
ಅಷ್ಟಮಿ ಸಂದರ್ಭ ನನಗೆ ಪದೇಪದೇ ನೆನಪಾಗುವುದು ಲಕ್ಷ್ಮೀವರತೀರ್ಥರು. ಮಠದ ಮುಂದೆ ಅವರದೇ ವೇದಿಕೆ, ಹುಮ್ಮಸ್ಸಿನ ಪಾಲ್ಗೊಳ್ಳುವಿಕೆ, ವೇಷಧಾರಿಗಳಿಗೆ ಅವಕಾಶದ ಜೊತೆಗೆ ದೇಣಿಗೆಯನ್ನು ಭರಪೂರವಾಗಿ ನೀಡಿ ಹಬ್ಬದ ಗೌಜಿ ದುಪ್ಪಟ್ಟಾಗುವಂತೆ ಮಾಡುತ್ತಿದ್ದರು. ಕನಿಷ್ಠ ಅವರನ್ನು ನೆನಪುಮಾಡಿಕೊಳ್ಳುವಷ್ಟರ ಮಟ್ಟಿಗಿನ ಋಣ ಉಡುಪಿ ಜನರ ಮೇಲಿದೆ ಎಂದು ನನಗನಿಸುತ್ತದೆ.
ಕೊನೆಯಲ್ಲಿ
ರವಿ ಮತ್ತು ರಾಮಾಂಜಿ ಸಾಮಾನ್ಯ ವ್ಯಕ್ತಿಗಳಾಗಿದ್ದು ಅಸಾಮಾನ್ಯ ಕಾರ್ಯ ಮಾಡಿ ಪ್ರತಿಯೊಬ್ಬರಿಗೂ ಮಾದರಿಯಾಗಿ ಬದುಕುತ್ತಿರುವವರು. ಡಬಲ್ ಡಿಗ್ರಿ, ಲಕ್ಷಗಟ್ಟಲೆ ಸಂಬಳ, ಐಷಾರಾಮಿ ಜೀವನ ಹೀಗೆ ಯಾವುದನ್ನೂ ಕಾಣದ ಇವರಲ್ಲಿ ಸಾಮಾಜಿಕ ಪ್ರಜ್ಞೆ, ಕಳಕಳಿ, ಹೋರಾಟದ ಮನೋಭಾವ, ನಿಸ್ವಾರ್ಥತೆ ಸೇರಿದಂತೆ ಬದುಕಿಗೆ ಬೇಕಾದ ನೂರೆಂಟು ಸೂಕ್ಷ್ಮ ವಿಚಾರಗಳನ್ನು ಇವರಿಂದ ಕಲಿಯಬೇಕು.
ಇವರಿಬ್ಬರೂ
* ನಮ್ಮೊಳಗೇ ಸುಪ್ತವಾಗಿರುವ ‘ಕೊಡುವ’ ಮನಸ್ಥಿತಿಯನ್ನು ಜಾಗೃತಗೊಳಿಸಿದವರು
* ನಮ್ಮ ದೇಣಿಗೆಯನ್ನು ಅರ್ಹರಿಗೆ ತಲುಪಿಸಿ ನಮ್ಮ ಪುಣ್ಯದ ಖಾತೆಗೆ ಕಿಂಚಿತ್ ಜಮಾ ಮಾಡಿದವರು
* ಇಂತಹ ಯೋಜನೆಗಳನ್ನು ಕೈಗೊಂಡು ಇತರರಿಗೆ ಪ್ರೇರಣೆಯಾದವರು
* ತಮ್ಮೂರಿನ ಹೆಸರನ್ನು ವಿಶ್ವದಾದ್ಯಂತ ಪಸರಿಸಿದವರು
ಈ ಅಷ್ಟಮಿಯಂದು ನಮ್ಮಿಂದಾಗುವ ಕಿಂಚಿತ್ ದೇಣಿಗೆಯನ್ನು ರವಿ, ರಾಮಾಂಜಿಯಂತಹ ಯಾರೇ ಸಿಕ್ಕರೂ ಮನಃಪೂರ್ವಕವಾಗಿ ನೀಡೋಣ ಆ ಮೂಲಕ ಕೆರೆಯ ನೀರನ್ನು ಕೆರೆಗೆ ಚೆಲ್ಲೋಣ
2015 ರಲ್ಲಿ ಸ್ಪಂದನ ವಾಹಿನಿಯಲ್ಲಿ ಸಂದರ್ಶನ ಮುಗಿಸಿ ಸ್ಟುಡಿಯೋ ಹೊರಾಂಗಣದಲ್ಲಿ ನೀಡಿದ ಮೊದಲ ದೇಣಿಗೆ
ಅಂದ ಹಾಗೆ ಇವರಿಬ್ಬರ ಕುರಿತು ಹೇಳಲು ಹೋದರೆ ಸಾವಿರ ಮಾತಿದೆ ..