Home Thoughts ಸ್ವಲ್ಪ ಮಾತಾಡಿ ಪ್ಲೀಸ್… Come Let’s Talk!

ಸ್ವಲ್ಪ ಮಾತಾಡಿ ಪ್ಲೀಸ್… Come Let’s Talk!

2
Avinash Kamath with Dr Virupaksha Devaramane

9 ವರ್ಷಗಳ ಹಿಂದಿನ ಮಾತು. ಎಂಜಿಎಂ ಕಾಲೇಜಿಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಒಂದಕ್ಕೆ ಹೋಗಿದ್ದೆ. ಕಾರಣ ಕೃತಿಯ ಶೀರ್ಷಿಕೆ ‘ ನೀನಿಲ್ಲದೆ ನನಗೇನಿದೆ’. ಮಜಾ ಅಂದ್ರೆ ನಾನಲ್ಲಿ ತಲುಪಿದಾಗ ಅತಿಥಿಯಾಗಿದ್ದ ಡಾ. ಮಹಾಬಲೇಶ್ವರ ರಾವ್ ‘ ಈ ಕೃತಿಯ ಶೀರ್ಷಿಕೆ ತುಂಬಾ ಚೆನ್ನಾಗಿದೆ, ಅರ್ಥಪೂರ್ಣವಾಗಿದೆ .ಆದ್ರೆ ಈಗ ಹೇಗಾಗಿದೆ ಅಂದ್ರೆ ನೀನಿಲ್ಲದೆ ಇದ್ರೆ ನನಗೆ ಒಳ್ಳೇದು’ ಎಂದು ಹಾಸ್ಯ ಚಟಾಕಿ ಹಾರಿಸಿಬಿಟ್ಟರು. ಆಗ  ಸಭೆಯಲ್ಲಿ ಜೋರು ನಗು…ಸಭಾಂಗಣ ತುಂಬಿತ್ತು. ಹಾಗಾಗಿ ಹೊರಗೆ ನಿಂತು ವೇದಿಕೆ ಗಮನಿಸುತ್ತಿದ್ದಾಗ ಪಕ್ಕದಲ್ಲಿದ್ದ ಪುಸ್ತಕ ಮಳಿಗೆ ಕಣ್ಣಿಗೆ ಬಿತ್ತು. ಅಷ್ಟೂ ಕೃತಿಗಳಲ್ಲಿ ಮೊದಲಿಗೆ ಗಮನ ಸೆಳೆದದ್ದು ‘ ಸ್ವಲ್ಪ ಮಾತಾಡಿ ಪ್ಲೀಸ್‘..

Swalpa Matadi Please Cover Page
Swalpa Matadi Please Cover Page

ಈ ಹೆಸರೇ ಎಷ್ಟು ಆಕರ್ಷಕವಾಗಿದೆ ಅಲ್ವಾ ? ಕೈಗೆತ್ತಿಕೊಂಡೆ, ಬೆಲೆ ನೀಡಿ ಮನೆಗೆ ಬಂದು ಕೇವಲ 2 ದಿನಗಳಲ್ಲಿ ಓದಿ ಮುಗಿಸಿ ಲೇಖಕ ಡಾಕ್ಟರರಿಗೆ ಕರೆ ಮಾಡಿ ಅಭಿನಂದಿಸಿ ಇದರಲ್ಲಿನ ವಿಷಯಗಳ ಕುರಿತು ಏನಾದರೂ ಮಾಡಬೇಕು, ಸಮಾಜಕ್ಕೆ ಏನಾದರೂ ನೀಡಬೇಕು ಎನ್ನುವ  ನಿರ್ಧಾರಕ್ಕೆ ಬಂದೆ. ಆದರೆ ಏನು ? ಹೇಗೆ ? ಎನ್ನುವ ಕಲ್ಪನೆ ನನ್ನಲ್ಲಿರಲಿಲ್ಲ.

ಇದಾಗಿ ಸುಮಾರು ಒಂದು ತಿಂಗಳಲ್ಲಿ ಕೆಎಂಸಿ ಮಣಿಪಾಲದ ಪ್ರಸಿದ್ಧ ಮನೋವೈದ್ಯರಾದ ಡಾ. ರಾಜೇಶ್ ಭಂಡಾರಿ (Dr Rajesh Bhandary) ಜೊತೆ ನೇರ ಪ್ರಸಾರ ಕಾರ್ಯಕ್ರಮದ ಕೊನೆಯ ಕರೆ ಭದ್ರಾವತಿಯಿಂದ ಬಂದಿತ್ತು. ‘ ನನಗೆ ಇಬ್ಬರು ಮಕ್ಕಳು, ಗಂಡ ಬಿಟ್ಟು ಹೋದರು, ಅಂಗವಿಕಲೆ. ಬದುಕು ತೀರಾ ಕಷ್ಟವಾಗಿದೆ, ಆತ್ಮಹತ್ಯೆ ಒಂದೇ ದಾರಿ, ದಯವಿಟ್ಟು ನನಗೆ ದಾರಿ ತೋರಿಸಿ’ ಎಂದಾಗ ಟಿವಿಯಲ್ಲಿ ಈ ಸಂಬಂಧಿ ಕಾರ್ಯಕ್ರಮ ಮಾಡೋಣ ಎನ್ನುವ ವಿಚಾರ ದೃಢವಾಯಿತು. ಹೀಗೆ ಟಿವಿ ವಾಹಿನಿಯಲ್ಲಿ ಕರಾವಳಿ ಭಾಗದ ಪ್ರಸಿದ್ಧ ಮನೋವೈದ್ಯ, ಲೇಖಕರು ಡಾ. ವಿರೂಪಾಕ್ಷ ದೇವರಮನೆ (Dr Virupaksha Devaramane) ಜೊತೆ ಒಟ್ಟು 60 ಸಂಚಿಕೆಗಳನ್ನು ನಡೆಸಿಕೊಟ್ಟ ಸಮಾಧಾನ ನನ್ನ ವೃತ್ತಿ ಬದುಕಿನ ಮೈಲಿಗಲ್ಲು ಎಂದೇ ಭಾವಿಸಿದ್ದೇನೆ.

ಈ ಭೂಮಿ ಮೇಲೆ  ಮನುಷ್ಯನನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರಾಣಿ, ಪಕ್ಷಿ, ಜೀವ, ಜಂತು ರಾಶಿಗಳಿಗೆ ಮಾತನಾಡುವ ಯೋಗ ಭಗವಂತ ಕರುಣಿಸಿಲ್ಲ. ಆದರೆ ನಾವು ಮಾತನ್ನೇ ಸರಿಯಾಗಿ ಆಡೋದಿಲ್ಲ! ಮಾತೇ ಎಲ್ಲ, ಮಾತಿಲ್ದೆ ಏನೂ ಇಲ್ಲ ! ಹೀಗಂತ ಒಮ್ಮೆ ಜಯಂತ ಕಾಯ್ಕಿಣಿ (Jayant Kaikini) ಸರ್ ಹೇಳಿದ್ದರು. ಈ ಜಗತ್ತಿನಲ್ಲಿ ಅನಾಹುತಗಳೇನಾದರೂ ನಡೆದಿದ್ದರೆ ಅದು ಬಂದೂಕಿನಿಂದಲ್ಲ, ಅಣುಬಾಂಬಿನಿಂದಲ್ಲ ಅವೇನಿದ್ದರೂ ಆಡಿದ, ಆಡದ ಮಾತುಗಳಿಂದ ಎಂದು ಈ ಕೃತಿ ಓದಿ ಮುಗಿಸಿದಾಗ ಅನಿಸಿತ್ತು. ಹೀಗೆ ಈ ಕೃತಿ ಒಂದು ಇತಿಹಾಸಕ್ಕೆ ನಾಂದಿ ಹಾಡಿತು.

Poster of TV program
Poster of TV program

ಟಿವಿ ಕಾರ್ಯಕ್ರಮದ ಹಿಂದು ಮುಂದು

* ಮೊದಲ 30 ಸಂಚಿಕೆಗಳು ‘ಸ್ವಲ್ಪ ಮಾತಾಡಿ ಪ್ಲೀಸ್‘ ಶೀರ್ಷಿಕೆಯಲ್ಲಿ ನಡೆದರೆ ಇನ್ನುಳಿದ 30 ಕ್ಕೆ ‘ ಮತ್ತೊಮ್ಮೆ ಮಾತಾಡಿ ಪ್ಲೀಸ್’ ಎಂದು ಹೆಸರಿಟ್ಟೆವು
* ಪ್ರತೀ ಗುರುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮಕ್ಕೆ ಬಹಳ ದೊಡ್ಡ ವೀಕ್ಷಕ ವರ್ಗ ಸೃಷ್ಟಿಯಾಗಿತ್ತು
* ಸಂಬಂಧಗಳು, ಮುನಿಸು, ಮನಸ್ತಾಪ, ಖಿನ್ನತೆ, ಗೀಳು, ವಿವಾಹ, ಅನೈತಿಕ ಸಂಬಂಧ, ಚಾಟಿಂಗ್, ಹದಿಹರೆಯದ ಸಮಸ್ಯೆ ,ಪ್ರೇಮ, ಕಾಮ ಸೇರಿದಂತೆ ಒಂದಷ್ಟು ಮಾನಸಿಕ ಸಮಸ್ಯೆಗಳ ಕುರಿತು ಮುಕ್ತವಾಗಿ ಯಾವುದೇ ಮುಚ್ಚುಮರೆ, ಮುಜುಗರವಿಲ್ಲದೆ  ವೀಕ್ಷಕರೊಂದಿಗೆ ಮಾತನಾಡಿ ಪರಿಹಾರ ಸೂಚಿಸುತ್ತಿದ್ದರು ಡಾ. ವಿರೂಪಾಕ್ಷ ಅವರು
* ಒಂದು ಗಂಟೆಯಲ್ಲಿ ಕನಿಷ್ಠ 10 ಕರೆಗಳು. ಕೆಲವರು ತಮ್ಮ ಗುರುತು ಹೇಳಿದರೆ ಇನ್ನು ಕೆಲವು ಅನಾಮಿಕ ಕರೆಗಳು. ಪ್ರತೀ ವಾರ ಕನಿಷ್ಠ 10 ಪತ್ರಗಳು ಬರುತ್ತಿದ್ದವು
* ನಾವು ಹೋದಲ್ಲೆಲ್ಲಾ ಜನ ಈ ಕಾರ್ಯಕ್ರಮದ ಬಗ್ಗೆ ಮಾತನಾಡಿಸುತ್ತಿದ್ದರು. ತಮ್ಮದೇ ಕೆಲವು ಪ್ರಶ್ನೆಗಳನ್ನು ಸುತ್ತಿ ಬಳಸಿ ಕೇಳುತ್ತಿದ್ದರು! ‘ ಇದಕ್ಕೆ ಡಾಕ್ಟರ್ ಅವರಲ್ಲಿ ಉತ್ತರ ಕೇಳಿ ಟಿವಿಯಲ್ಲಿ ಹೇಳಿ’ ಎನ್ನುತ್ತಿದ್ದರು.
* ಕಾರ್ಯಕ್ರಮಕ್ಕೆ ಕರೆ ಮಾಡಿ ಪ್ರಶ್ನೆ ಕೇಳಿದರೆ ಅದೇ ಪ್ರಶ್ನೆ ಎಷ್ಟೋ ಜನರ ಪ್ರಶ್ನೆಯಾಗಿರುವುದು ವಿಶೇಷವಾಗಿತ್ತು
* ಶಿರ್ವದ ಮಹಾಲಸಾ ನಾರಾಯಣಿ ದೇವಳದ ಅರ್ಚಕರು ಅಲ್ಲಿ ಬರುವ ಭಕ್ತರಿಗೆ ಈ ಕಾರ್ಯಕ್ರಮದ ಕುರಿತು ತಿಳಿ ಹೇಳುತ್ತಿದ್ದರಂತೆ. ದೇವರಲ್ಲಿಗೆ ಬನ್ನಿ ಆದರೆ ಆ ಕಾರ್ಯಕ್ರಮವನ್ನು ತಪ್ಪದೆ ನೋಡಿ ಎನ್ನುತ್ತಿದ್ದರಂತೆ
* ವೀಕ್ಷಕ ಬಳಗ ಹೆಚ್ಚಾಗುತ್ತಾ ಹೋದಂತೆ ಜನರು ನನ್ನಲ್ಲಿಯೂ ಕಠಿಣ ಪ್ರಶ್ನೆಗಳನ್ನು ಗುಪ್ತವಾಗಿ ಕೇಳುತ್ತಿದ್ದರು !!
* ಒಮ್ಮೆ OCD ( Obsessive Compulsive Disorder ) ಕುರಿತ ಸಂಚಿಕೆಯಲ್ಲಿ ನನ್ನಲ್ಲೂ ಮನಸಿಗೆ ಸಂಬಂಧಿಸಿದ ಆ ಖಾಯಿಲೆ ಇರುವುದು ಖಾತ್ರಿಯಾಗಿ ಡಾಕ್ಟರ್ ಮೂಲಕ ಅವರ ಆಸ್ಪತ್ರೆಯ ಆಪ್ತ ಸಲಹೆಗಾರರಾದ ಪದ್ಮ ಅವರಲ್ಲಿ ಒಂದು ವರ್ಷ ಸಮಾಲೋಚನೆ ಮೂಲಕ ಚಿಕಿತ್ಸೆ ಪಡೆದು OCD ಇಂದ ಹೊರ ಬಂದೆ
* ಹೀಗೆ ಈ ಕಾರ್ಯಕ್ರಮದ ಮೂಲಕ ಅದೆಷ್ಟೋ ಜನರ ಮನೆ,ಮನಸ್ಸುಗಳನ್ನು ಬೆಸೆದ ಸಮಾಧಾನ ನಮ್ಮಿಬ್ಬರಿಗೂ ಇದೆ

Poster of TV program
Poster of TV program

ನೀವು ನಿಮ್ಮವರಿಗೆ ಕೊಡಬಹುದಾದ ಅಮೂಲ್ಯ ಉಡುಗೊರೆ ಯಾವುದು ಗೊತ್ತೇ ?

ಪ್ರತಿಯೊಬ್ಬರಿಂದ ಒಂದೊಂದು ಉತ್ತರ ಸಿಗಬಹುದು ಆದ್ರೆ ನನ್ನ ಪ್ರಕಾರ ನೀವು ನಿಮ್ಮ ಪ್ರೀತಿಪಾತ್ರರಿಗೆ ಕೊಡಬಹುದಾದ ಅತ್ಯಂತ ಮಹತ್ವದ ಉಡುಗೊರೆ ಅಂದ್ರೆ ಅದು ‘ ಸಮಯ’ ಮತ್ತು ಈ ಕೃತಿ. ಪ್ರತೀ ಮನೆಯಲ್ಲಿರಬೇಕಾದ ಕೃತಿ ಇದು. ಈ ನಿಟ್ಟಿನಲ್ಲಿ ನಾನು ಕಳೆದ 7  ವರ್ಷಗಳಿಂದ ಈ ಪ್ರಯತ್ನ ಜಾರಿಯಲ್ಲಿಟ್ಟಿದ್ದೇನೆ. ಮದುವೆ, ಮುಂಜಿ, ನಿರೂಪಿಸುವ ಕಾರ್ಯಕ್ರಮಗಳು, ಹಬ್ಬ ಹರಿದಿನಗಳು ಹೀಗೆ ಸಂದರ್ಭ, ಸಂಗತಿ ಯಾವುದೇ ಇರಲಿ ಈ ಕೃತಿಯನ್ನು ಉಡುಗೊರೆಯಾಗಿ ನೀಡಿದ್ದೇನೆ, ನೀಡುತ್ತಲೇ ಇರುತ್ತೇನೆ. ಒಮ್ಮೆ ನೀವೂ ಪ್ರಯತ್ನಿಸಿ. ಈ ಕೃತಿ ಪಡೆದು ಓದಿದವರು ನಿಮ್ಮನ್ನು ಜೀವನದುದ್ದಕ್ಕೂ ಮರೆಯಲಾರರು.

ಆಧ್ಯಾತ್ಮಿಕ ಗುರು Mahatriara ‘ಮಾತಿನ’ ಕುರಿತು –

‘ಮನುಷ್ಯನ ಮಲ, ಮೂತ್ರ, ಬೆವರು, ಎಂಜಲು, ನೆತ್ತರು ಎಲ್ಲವೂ ಒಂದು ರೀತಿಯ ದುರ್ವಾಸನೆ ಬೀರುತ್ತವೆ.. ಆದರೆ ನಮ್ಮಿಂದ ಹೊರಹೊಮ್ಮುವ ಮಾತುಗಳು ನಮಗೂ, ಇತರರಿಗೂ ಖುಷಿ, ಸಮಾಧಾನ ನೀಡಬಲ್ಲದು. ಹಾಗಾಗಿ ಮಾತುಗಳನ್ನು ಚೆನ್ನಾಗಿ ಆಡೋಣ, ಧ್ವನಿಯ ಏರಿಳಿತ, ಬಳಸುವ ಪದಗಳನ್ನು ಗಮನಿಸೋಣ’ ಎನ್ನುತ್ತಾರೆ. ಅವರ ಈ ಮಾತಿನ ಕುರಿತು ಒಂದೆರಡು ನಿಮಿಷ ಹಾಗೆ ಸುಮ್ನೆ ಆಲೋಚಿಸಿ. ನಿಮ್ಮ ಮನಸಿನಲ್ಲಿ ಈ ಕುರಿತು ನೂರು ಆಯಾಮ ಸೃಷ್ಟಿಯಾಗಬಹುದು.

Mahatriara, Spiritual Guru
Mahatriara, Spiritual Guru

ಮಾತು ಆಡದೆ ಇರುವುದು ಕೂಡ ಒಂದು ರೀತಿಯ ಸಂವಹನ. ಅದನ್ನು ಎಲ್ಲಿ ಆಡಬೇಕು, ಆಡಬಾರದು ಎನ್ನುವ ವಿವೇಚನೆ ನಮ್ಮಲ್ಲಿದ್ದರೆ ಆ ಸನ್ನಿವೇಶವನ್ನು ನಾವು ಗೆದ್ದಂತೆ. ಕೃತಿಯ ಬೆನ್ನುಡಿಯಲ್ಲಿ ಡಾ. ವಿರೂಪಾಕ್ಷ ಹೀಗೆನ್ನುತ್ತಾರೆ –
ಸಮಸ್ಯೆಗಳ ಕಾರಣ ಏನೇ ಇರಲಿ – ಪರಿಹಾರ ಒದಗಿಸುವ ಬೀಜಮಂತ್ರ ಒಂದೇ ,ಅದು ಮಾತು. ಮಾತು ಮನೆ ಕೆಡಿಸಿತು ಅಂತಾರೆ. ಆದರೆ ಮಾತೇ ಆಡದಿದ್ದರೆ ನಾವೇ ಪ್ರೀತಿಯಿಂದ ಕಟ್ಟಿದ ಸಂಬಂಧಗಳ ಸೌಧಗಳು ನಮ್ಮ ಕಣ್ಣೆದುರಲ್ಲೇ ಕುಸಿದು ಹೋಗಬಹುದು ! ಮಾತಿನ ಮಹಿಮೆ ಅರಿಯಿರಿ’

ಮಾತನಾಡದೆ ಸಂಬಂಧ ಕಳೆದುಕೊಂಡಿದ್ದೆ !

2009 ರಿಂದ 2011 ರವರೆಗೆ ನಾನು ಮಂಗಳೂರಿನ ಪ್ರತಿಷ್ಠಿತ 92.7 Radio Station ನಲ್ಲಿ ಕಾರ್ಯನಿರ್ವಹಿಸುತಿದ್ದೆ. ಆಗ ನನಗೆ ಪರಿಚಯ ಆಗಿದ್ದು ಈಗಿನ ಪ್ರತಿಭಾನ್ವಿತ ಕಿರುತೆರೆ, ಸಿನಿಮಾ ನಟ, ನಿರ್ದೇಶಕ ಪ್ರಸ್ತುತ Colors Kananda ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ ರಾಜ ರಾಣಿ’ (Raja Rani Reality Show) ಮೂಲಕ ರಂಜಿಸುತ್ತಿರುವ ವಿಜಯ್ ಶೋಭರಾಜ್ ಪಾವೂರು (Vijay Shobraj Pavoor). ಪ್ರತಿದಿನ ಎನ್ನುವಂತೆ ನಾವು ಭೇಟಿಯಾಗುತ್ತಿದ್ದೆವು. ಇಬ್ಬರ ಮನಸ್ಥಿತಿ ಹೆಚ್ಚು ಕಮ್ಮಿ ಒಂದೇ ಆಗಿದ್ದ ಕಾರಣ ಪರಿಚಯ ಸ್ನೇಹವಾಯ್ತು. ಅದ್ಯಾವುದೋ ಕಾರಣಕ್ಕೆ ಭಿನ್ನಾಭಿಪ್ರಾಯ ಮೂಡಿ ( ನನಗೀಗ ಕಾರಣ ನೆನಪಿಲ್ಲ) ಒಂದೆರಡು ವರ್ಷ ನಾವು ಮಾತೇ ಆಡಲಿಲ್ಲ.

ಆದರೆ ವಿಷಯ ಅದಲ್ಲ. ಮಾತು ಮುರಿದ ಕಾರಣ ನನಗೆ ಒಳಗೊಳಗೇ ಆ ಕುರಿತು ನೋವು, guilt ಕಾಡುತ್ತಲೇ ಇತ್ತು. ಸರಿಪಡಿಸಿಕೊಳ್ಳಬೇಕು ಎಂದು ಹಲವು ಬಾರಿ ಅಂದುಕೊಂಡರೂ ನನ್ನೊಳಗಿರುವ ‘ego’ ತಡೆಯುತ್ತಿತ್ತು. ಈ ಇಗೋ ಅನ್ನುವುದು ನಮ್ಮನ್ನು ಆಕ್ರಮಿಸಿಕೊಳ್ಳುವುದಕ್ಕಿಂತ ಮೊದಲು ನಾವದನ್ನು ಮೆಟ್ಟಿ ನಿಂತರೆ ಎಷ್ಟೋ ಸಂಬಂಧಗಳನ್ನು ಉಳಿಸಿಕೊಳ್ಳಬಹುದು.

ಕೊನೆಗೆ ಶೋಭರಾಜ್ ಮದುವೆಯ ಆಮಂತ್ರಣ ಪತ್ರಿಕೆ ಕಳಿಸುತ್ತಾರೆ. ಇದೇ ಒಳ್ಳೆಯ ಅವಕಾಶ ಎಂದು ಭಾವಿಸಿ facebook ನಲ್ಲಿ ಉದ್ದ ಲೇಖನಒಂದನ್ನು ಬರೆದು ಅವರಲ್ಲಿ ನೇರವಾಗಿ ಕ್ಷಮೆ ಕೇಳಿ ಬಿಟ್ಟೆ. ತಪ್ಪು ನನ್ನದೋ, ಅವರದ್ದೋ ಎನ್ನುವ ಪ್ರಶ್ನೆ ಅಲ್ಲ. ನನಗೆ ಅವರ ಸಂಬಂಧ ಬೇಕಿತ್ತು. ಆ ಕಾರಣಕ್ಕೆ ನನ್ನೊಳಗೆ ಇದ್ದು ಕಟ್ಟೆ ಕಟ್ಟಿಕೊಂಡಿದ್ದ ಆ Egoವನ್ನು ಒಡೆದು ಬಿಟ್ಟೆ. ಆ ದಿನ ನನಗಾದ ನೆಮ್ಮದಿ, ನಿರಾಳತೆ ಬದುಕಿನಲ್ಲಿ ಸಾಕಷ್ಟು ಪಾಠ ಕಲಿಸಿಕೊಟ್ಟಿತು.

Renowned Actor, Director Vijay Shobaraj Pavoor & His wife Deepika
Renowned Actor, Director Vijay Shobaraj Pavoor & His wife Deepika

ಅಂದ ಹಾಗೆ  ಮಾತು ಆಡದೆ ಹಲವು ಸಂಬಂಧಗಳನ್ನು ಉದ್ದೇಶಪೂರ್ವಕವಾಗಿ ಕಳೆದುಕೊಂಡಿದ್ದೇನೆ. ಇಲ್ಲಿ ನಾವು ಗಮನಿಸಬೇಕಾದದ್ದು ಯಾವ ಸಂಬಂಧ ಬೇಕು, ಬೇಡ ಎನ್ನುವುದು. ನಿಮ್ಮಲ್ಲೂ ಇಂತಹ ಗೊಂದಲಗಳಿರಬಹುದು. ಅದನ್ನು ಆದಷ್ಟು ಶೀಘ್ರ ಬಗೆಹರಿಸಿಕೊಳ್ಳಿ ಯಾಕಂದ್ರೆ ನಾವೆಷ್ಟು ದಿನ ಇರುತ್ತೇವೋ ಗೊತ್ತಿಲ್ಲ! ಇದ್ದಾಗ ಸರಿಪಡಿಸಿಕೊಂಡರೆ ಚಂದ, ಇಲ್ಲದ  ಮೇಲೆ ಪಶ್ಚತ್ತಾಪ ! – So, let the e ‘go’..

ಎಲ್ಲಾ ಸಂಬಂಧಗಳನ್ನು ಜೀವಂತವಾಗಿಡಬಲ್ಲ ದಿವ್ಯ ಶಕ್ತಿ ಇರುವುದು ಈ ಮಾತುಗಳಿಗೆ ಮಾತ್ರ ಎಂದು ಈ ಕೃತಿಯೊಳಗಿನ  30 chapterಗಳು ಸಾರಿ ಹೇಳುತ್ತವೆ. ಓದುತ್ತಾ ಹೋದಂತೆ ಇಲ್ಲಿನ ಒಂದೊಂದು ಸಾಲು ನಿಮಗೆ ನಿಮ್ಮ ಸಂಬಂಧಗಳನ್ನು ನೆನಪಿಸುತ್ತದೆ. ನೀವು ಅದರೊಳಗೆ ಆಳವಾಗಿ ಇಳಿದಂತೆ ಕಳೆದು ಹೋಗಿರುವ, ಹೋಗಬಹುದಾದ ಸಂಬಂಧಗಳ ಕುರಿತು ನೆನಪಾಗಿ ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನೀವು ಕಾರ್ಯರ್ಪ್ರವೃತ್ತರಾಗುವುದು ಮಾತ್ರ ಖಂಡಿತ, I  promise ..

ಕೊನೆಯಲ್ಲಿ

Swalpa Matadi Please ಕೃತಿಯನ್ನು ಪ್ರಚಾರಪಡಿಸುವುದು ನನ್ನ ಈ ಲೇಖನದ ಇರಾದೆಯಲ್ಲ. ಆಗ್ಲೇ ಅದು 10 ಮರುಮುದ್ರಣವನ್ನು ಕಂಡಾಗಿದೆ!! ಅದರ journey ಬೇರೆಯೇ ಇದೆ..ಈ ಕೃತಿ ನನ್ನಲ್ಲಿ ತಂದ ಬದಲಾವಣೆಯನ್ನು ನಿಮ್ಮಲ್ಲಿ ಹಂಚಿಕೊಳ್ಳಬೇಕಿತ್ತು, ಅಷ್ಟೇ

ಎಷ್ಟು ದಿನ ಆಯ್ತು ನೀವು ಅವರೊಂದಿಗೆ ಮಾತನಾಡಿ ?
ಕೊಂಡಿ ಕಳಚುವ ಮುನ್ನ .. ಸ್ವಲ್ಪ ಮಾತಾಡಿ ಪ್ಲೀಸ್


 

2 COMMENTS

  1. Very nicely written Avinash. Appreciate your sincerity and hones efforts in valuing and saving a relationship. Yes TV talks on communication with you is wonderful memory and has taught many things to me . Thanks for the opportunity. Can’t believe now that it went on for 50 episodes. Keep writing!!!

LEAVE A REPLY

Please enter your comment!
Please enter your name here