ವಿಭಿನ್ನ ಆಶಯ ಹೊತ್ತ
ನಡಿಗೆ – ಸಾವಿರ ಹೆಜ್ಜೆಗಳಿಗೆ ನಿಮ್ಮ ಕೊಡುಗೆ ಅಭಿಯಾನದ ಒಳಗೂ ಹೊರಗೂ..
ಜನಪರ ಕಾಳಜಿಯ ಅತಿ ವಿಶಿಷ್ಟ ಅಭಿಯಾನವೆಂದು ಕೊಂಡಾಡಲ್ಪಟ್ಟ ‘ನಡಿಗೆ’, ಸಾಮಾಜಿಕ ಮಾಧ್ಯಮಗಳ ಮೂಲಕ ನಮ್ಮೆದುರು ಅಂಬೆಗಾಲಿಡುತ್ತಾ ಬಂದು, ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತ ನಡೆದಾಡಿ, ಅಭಿಯಾನದ ದಿನಗಳಲ್ಲಿ ಜೋರಾಗಿಯೇ ದಾಪುಗಾಲಿಟ್ಟು ಓಡಾಡಿ, ಮುಗಿಯುವ ಹೊತ್ತಿಗೆ ನಾಗಾಲೋಟವಾಗಿ, ಸಮಾರೋಪದ ದಿನ ಸುಂದರ ಬಣ್ಣದ ಚಿಟ್ಟೆಯಾಗಿ ಕಣ್ಣೆದುರು ಕುಣಿದು ಆಕಾಶಕ್ಕೇರಿದ್ದನ್ನು ಎವೆಯಿಕ್ಕದೆ ನೋಡಿದವರಲ್ಲಿ ನಾನೂ ಒಬ್ಬಳು. ಸಾಮಾಜಿಕ ಮಾಧ್ಯಮಗಳನ್ನು ಸಾಮಾಜಿಕ ಪ್ರಗತಿಗಾಗಿ ಅದ್ಭುತವಾಗಿ ಬಳಸಿಕೊಳ್ಳಬಹುದೆಂಬ ಚಿಂತನೆಯನ್ನು ಹೊಂದಿರುವ ಯುವಕ, ಕಾರ್ಯಕ್ರಮ ನಿರೂಪಕ, ಮಾತಿನ ಮಿಂಚು ಎಂಬ ಖ್ಯಾತಿಯನ್ನು ಪಡೆದಿರುವ ಅವಿನಾಶ್ ಕಾಮತ್ ಈ ‘ನಡಿಗೆ’ ಅಭಿಯಾನದ ರೂವಾರಿ. ಈ ಮೊದಲೇ ‘ನೆರಳು ನೆರವು’, ‘ನಮ್ಮ ಮನೆ ನಮ್ಮ ಮರ’, ‘ಉತ್ತರ ನಮ್ಮದು’, ‘ಹಳೆಬೇರು ಹೊಸಚಿಗುರು’ ಎಂಬ ಹಲವು ಅಭಿಯಾನಗಳನ್ನು ಆಯೋಜಿಸಿದ ಅನುಭವ ಅವರಿಗಿತ್ತಾದರೂ ಈ ‘ನಡಿಗೆ’ ಸಂಪೂರ್ಣ ವಿಭಿನ್ನ ಅಭಿಯಾನ. ಇಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಅತ್ಯುತ್ತಮ ರೀತಿಯಲ್ಲಿ ಬಳಸಿಕೊಳ್ಳಲಾಯಿತು! ನಿರೀಕ್ಷೆಯಂತೆ ಕೈಬಿಡದೆ ಸಲಹಿದ ಸಾಮಾಜಿಕ ಮಾಧ್ಯಮಗಳು ಅಭಿಯಾನಕ್ಕೆ ಅದ್ಭುತ ಯಶಸ್ಸನ್ನು ತಂದುಕೊಟ್ಟವು. ಈ ಅಭಿಯಾನದ ಉದ್ದೇಶವೇ ವಿಶಿಷ್ಟ. ನಾವು ಬಳಸಿ ಬದಿಗಿಟ್ಟ ಹಳೆಯ ಪಾದರಕ್ಷೆಗಳಿಗೆ ಮುಂಬೈನ Green Sole Foundationನಲ್ಲಿ ಮರುಜೀವ ತುಂಬಿ, ಹೊಸ ರೂಪ ಕೊಟ್ಟು ಬಡಮಕ್ಕಳ, ಅಶಕ್ತರ, ಅನಾಥರ ದುರ್ಬಲರ ಪಾದಗಳಿಗೆ ಆಸರೆಯಾಗಿಸುವ ಈ ಪರಿಕಲ್ಪನೆ ಹಾಗೂ ಇದರ ಹಿಂದಿನ ದುಡಿಮೆಯೇ ಒಂದು ಪುಣ್ಯಕಾರ್ಯ.
ಕಣ್ಣೆದುರೇ ಜರುಗಿದ, ಕ್ಷಣ ಕ್ಷಣವೂ ಕುತೂಹಲ ತುಂಬುತ್ತಿದ್ದ, ಏನಾಯಿತು, ಎಷ್ಟಾಯಿತು, ಜನರ ಪ್ರತಿಕ್ರಿಯೆ ಏನು, ಹೇಗಿದೆ ಎಂಬ ಅಸಕ್ತಿ ಕೆರಳಿಸುತ್ತ ಬೆರಗನ್ನು ಕಾಪಿಟ್ಟುಕೊಂಡೇ ಮುನ್ನಡೆಯುತ್ತಿದ್ದ ಈ ಅಭಿಯಾನದಿಂದ ನಾವು ಕಲಿಯಬೇಕಾದ್ದು ಬಹಳಷ್ಟಿದೆ.
* Where there is a will there is a way : ಯಾವುದನ್ನೇ ಆಗಲಿ, ಮಾಡಬೇಕೆಂಬ ಹಂಬಲವೊಂದು ಇದ್ದರೆ ಎಂಥದ್ದನ್ನೂ ಸಾಧಿಸಬಹುದೆಂಬ ಮಹಾನ್ ಪಾಠವನ್ನು ನಮ್ಮೆದುರಿರುವ ಕಿರಿಯರಿಗೆ ತಿಳಿಸಬಹುದಾದ ಅಭಿಯಾನ ಇದು. ಅದಿಲ್ಲ ಇದಿಲ್ಲವೆಂದು ದೂರುತ್ತ, ಇರುವುದೆಲ್ಲವ ಬಿಟ್ಟು ಇರದುದನ್ನು ಕುರಿತು ಯೋಚಿಸುತ್ತ, ಮಾಡಬೇಕಾದ ಕೆಲಸಕ್ಕೆ ಕೈಹಾಕದೆ ಕುಳಿತ ಕಿರಿಯರಿಗೆ, ಇಲ್ಲದುದನ್ನು ನೆನೆದು ಹಿಡಿದ ಕಾರ್ಯವನ್ನು ಮಾಡದೆ ಕೈಬಿಡುವ ಯುವಜನತೆಗೆ ಇದು ಬುದ್ಧಿಪಾಠ.
*Good Friends are our Assets : ಶ್ರೇಷ್ಠ ಕಾರ್ಯವೊಂದನ್ನು ಮಾಡಲು ಹೊರಟರೆ ಉಳಿದದ್ದೆಲ್ಲ ಒಂದೊಂದಾಗಿ ಬಂದು ಸೇರುತ್ತದೆ ಎಂಬುದಕ್ಕೆ ಈ ಅಭಿಯಾನವೊಂದು ಉದಾಹರಣೆ. ಇಲ್ಲಿ ಬರೇ ಪಾದರಕ್ಷೆ ಸಂಗ್ರಹ ಮಾತ್ರವಲ್ಲ. ಅದಕ್ಕೆ ಸಂಬಂಧಿಸಿದ ಪೂರ್ವತಯಾರಿಯ ಹತ್ತುಹಲವು ಕೆಲಸಗಳಿದ್ದವು. ಮೊದಲ poster ತಯಾರಿಸಿ ಬಿಡುಗಡೆಗೊಳಿಸುವ ಕೆಲಸದಿಂದ ಪ್ರಾರಂಭವಾಗಿ ಕೊನೆಯ ದಿನ ಪಾದರಕ್ಷೆಗಳನ್ನು ಮುಂಬೈಗೆ ಟ್ರಕ್ ಹತ್ತಿಸಿ ಬೀಳ್ಕೊಡುವವರೆಗೂ ನೂರಾರು ಬಗೆಯ ಕೆಲಸಗಳು, ಹತ್ತಾರು ಅರ್ಥಿಕ ಅಗತ್ಯಗಳು ಇದ್ದವು. ದೇಣಿಗೆಯಿಂದಲೇ ನಡೆಯಬೇಕಾಗಿದ್ದ ಈ ಕಾರ್ಯಕ್ಕೆ ಅವಿನಾಶ್ ಅವರ ಸ್ನೇಹಿತ ಬಳಗ ಸಾಥ್ ಕೊಟ್ಟಿತು. ಇಲ್ಲಿ ಇನ್ನೊಂದು ವಿಚಾರ ನಾವು ಗಮನಿಸಬೇಕು. ಸ್ನೇಹಿತ ಬಳಗ ಸಾಥ್ ಕೊಟ್ಟ ಹಾಗೆಯೇ ಉಳಿದವರ ಕಾರ್ಯಗಳಲ್ಲಿ ಒಂದಲ್ಲ ಒಂದು ಬಗೆಯಲ್ಲಿ ತನ್ನ ಕೈಲಾದ ಸಹಾಯವನ್ನು ವರ್ಷವಿಡೀ ಅವಿನಾಶ್ ಮಾಡುತ್ತಲೇ ಇರುತ್ತಾರೆ, ಅಗತ್ಯವಿದ್ದವರಿಗೆ ನೀಡುತ್ತಲೇ ಇರುತ್ತಾರೆ ಎಂಬುದು ಇಲ್ಲಿನ ವಿಶೇಷ.
* Planting a Sapling : ನಡಿಗೆಯ ಉದ್ಘಾಟಕರು ಖ್ಯಾತ ಪರಿಸರವಾದಿ ದಿನೇಶ್ ಹೊಳ್ಳ ಹಾಗೂ ಸಮಾರೋಪದಲ್ಲಿ ಉಪಸ್ಥಿತರಿದ್ದ ಇನ್ನೊಬ್ಬ ಪರಿಸರ ಪ್ರೇಮಿ ಜೀತ್ ಮಿಲನ್ ರೋಶ್ ಇಬ್ಬರೂ ನಮ್ಮ ನಡುವಿನ ಮೇರು ವ್ಯಕ್ತಿತ್ವಗಳು. ಉಡುಪಿಯ MGM ಕಾಲೇಜಿನ ಆವರಣದಲ್ಲಿರುವ ಮಾವಿನ ಮರಗಳ ತಂಪು ನೆರಳಿನಲ್ಲಿ ಈ ಎಲ್ಲ ಕಾರ್ಯಕ್ರಮಗಳು ಸರಳವಾಗಿ ನಡೆದು, ಎರಡೂ ದಿನಗಳ ನೆನಪಿಗಾಗಿ ಕಾಲೇಜು ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.ಪ್ರತಿ ಕಾರ್ಯಕ್ರಮದಲ್ಲೂ ಈ ರೀತಿ ಗಿಡಗಳನ್ನು ನೆಟ್ಟು ನೀರೆರೆದು ಪೋಷಿಸುವ ಕಲ್ಪನೆ ಬಲು ಸುಂದರವೆನಿಸಿತು.
*Community Development Campaign: ಅಭಿಯಾನಕ್ಕೆ ಸಹಕಾರ ನೀಡಿದವರಲ್ಲಿ ಸಮಾಜದ ಎಲ್ಲ ಜಾತಿ, ಮತ, ಧರ್ಮಗಳಿಗೆ ಸೇರಿದ ಜನರಿದ್ದರು. ಪಾದರಕ್ಷೆಗಳನ್ನು ತಂದು ಒಪ್ಪಿಸುವುದರಲ್ಲೂ ಸಾಮಾಜಿಕ ತರತಮ ಭಾವನೆ ಜನರಲ್ಲಿ ಕಾಣಿಸಲಿಲ್ಲ.ಒಂದು ಸಾಮಾಜಿಕ ಒಳಿತಿಗಾಗಿ ಜಾತಿಮತಗಳ ಭೇದವಿಲ್ಲದೆ ಹೇಗೆ ಒಗ್ಗೂಡಬಲ್ಲೆವು ಎಂಬುದಕ್ಕೆ ಈ ಅಭಿಯಾನವೊಂದು ನಿದರ್ಶನ.
3 months & Creativity
ಅಭಿಯಾನದ ಸಂಕಲ್ಪ ಮನಸಿಗೆ ಬಂದಾಗಲೇ ಅವಿನಾಶ್ ಅವರು Green Sole ಸಂಸ್ಥೆಯ ಮುಖ್ಯಸ್ಥರಾದ ಶ್ರೀಯಾನ್ಸ್ ಭಂಡಾರಿಯವರಿಗೆ E mail ಬರೆದರು. ಒಂದು ದಿನ ಅನಿರೀಕ್ಷಿತವಾಗಿ ಅವರಿಂದ ಕರೆ ಬಂತು. ಅಭಿಯಾನದ ಉದ್ದೇಶ ತಿಳಿದು ಪ್ರಭಾವಿತರಾಗಿ ಇವರನ್ನು ಮುಂಬೈಗೆ ಅಹ್ವಾನಿಸಿದರು. ಅಕ್ಟೋಬರ್ ತಿಂಗಳಲ್ಲಿ ಅಲ್ಲಿಗೆ ಹೋಗಿ Greensole ಸಂಸ್ಥೆ ಪಾದರಕ್ಷೆಗಳನ್ನು ತಯಾರಿಸುವ ರೀತಿ ಹಾಗೂ ಅವರು ಮಾಡುವ ಸೇವೆಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದರು. ಮುಂಬೈಗೆ ಹೋಗುವ ಮೊದಲು ಅಭಿಯಾನದ teaser poster ನ್ನು ಬಿಡುಗಡೆಗೊಳಿಸಿದ್ದರು. ಮೊದಲ poster ನ್ನು ಮುಂಬೈನ Greensole ಆಫೀಸಿನಲ್ಲೇ Greensole ಸಂಸ್ಥಾಪಕರೂ, ದೇಶದ Youth Iconಗಳೂ ಆದ ಶ್ರೀಯಾನ್ಸ್ ಭಂಡಾರಿ ಹಾಗೂ ರಮೇಶ್ ಧಾಮಿಯವರ ಕೈಯಲ್ಲೇ ಅನಾವರಣಗೊಳಿಸಿದರು.ಆ ನಡುವೆ Chosen Generation Charitable Trust ಇವರೊಂದಿಗೆ ಸೇರಿಕೊಂಡಿತು. ಉಡುಪಿಯ ಸರಸ್ವತೀ ಶಾಲೆಯ ಮಕ್ಕಳನ್ನು ಅಭಿಯಾನಕ್ಕೆ ರೂಪದರ್ಶಿಗಳನ್ನಾಗಿಸಿ photo shoot ಮಾಡಿದರು. Facebookನಲ್ಲಿ live ಬಂದು ಜನರಿಗೆ ಅಭಿಯಾನದ ಬಗ್ಗೆ ಕೂಲಂಕುಷ ಮಾಹಿತಿ ನೀಡಿದರು. ಇಡೀ ಸಮುದಾಯ ಇದರಲ್ಲಿ ಏಕೆ ಭಾಗಿಯಾಗಬೇಕೆಂಬುದನ್ನು ಜನರಿಗೆ ಮನದಟ್ಟಾಗುವಂತೆ ವಿವರಿಸಿದರು. ತದನಂತರ ಸಮಾಜದ ಗೌರವಾನ್ವಿತ ವ್ಯಕ್ತಿಗಳನ್ನು ಸಂಪರ್ಕಿಸಿ ಅಭಿಯಾನದ ಬಗ್ಗೆ ಅವರ ಅಭಿಪ್ರಾಯ ಸಂಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಒಂದೊಂದಾಗಿ ಹರಿಬಿಟ್ಟರು. ಆಮೇಲೆ ಅಭಿಯಾನ ದಿನಕ್ಕೆ ಬೇಕಾಗುವ ತಯಾರಿಯನ್ನು ಮಾಡಲಾರಂಭಿಸಿದರು. MGM ಕಾಲೇಜಿನ NSS volunteers ಅವರ ಸೇವೆಯನ್ನು ನಿಗದಿಮಾಡಿಕೊಂಡರು. ಆಕರ್ಷಕ ಬಣ್ಣ, ಅಂದವಾದ ಅಕ್ಷರ ಉತ್ತಮ ವಿನ್ಯಾಸವುಳ್ಳ poster ಸಿದ್ದಪಡಿಸಲು ಡಿಸೈನರ್ ಜೊತೆ ಗಂಟೆಗಟ್ಟಲೆ ಕೂತರು. ಸಮಾರೋಪ ಸಮಾರಂಭ ಹಾಗೂ ಮರುದಿನದ ಮಾತುಕತೆಯಲ್ಲಿ ಶ್ರಿಯಾನ್ಸ್ ಭಂಡಾರಿ ಮತ್ತು ರಮೇಶ್ ಧಾಮಿ ಇಬ್ಬರೂ ಭಾಗವಹಿಸುವ ನಿರ್ಧಾರ ಈ ಎಲ್ಲ ಕೆಲಸ ಕಾರ್ಯಗಳಿಗೆ ಹುರುಪು ತುಂಬುತ್ತಿದ್ದ ಮತ್ತೊಂದು ವಿಶೇಷತೆಯಾಗಿತ್ತು.
* Greensole gets Introduced to Coastal Karnataka: Greensole ಎಂಬ ಸದ್ದಿಲ್ಲದೆ ಸಹಾಯ ಮಾಡುವ, ಅಕ್ಷರಶಃ ಬಡಮಕ್ಕಳ ಪಾದಸೇವೆ ಮಾಡುವ ಕಂಪೆನಿಯ ಸೇವೆಗೆ ಕೈಜೋಡಿಸಿ,ಅವರಿಗೆ ಕಚ್ಛಾವಸ್ತುಗಳನ್ನು ಪೂರೈಸಿ ಅವರಿಂದ ಇನ್ನೂ ಹೆಚ್ಚು ಸೇವೆ ಸಾಧ್ಯವಾಗಲು ಕಾರಣೀಕರ್ತರಾಗಿ ಕೃತಾರ್ಥರಾದರು ನಮ್ಮ ಉಡುಪಿ ಹಾಗೂ ಮಂಗಳೂರಿನ ಜನ ಎಂಬುದು ನಾವು ಹೆಮ್ಮೆ ಪಡಬೇಕಾದ ವಿಚಾರ.
* Great things to happen takes time: ನಾಲ್ಕು ವರ್ಷಗಳ ಹಿಂದೆಯೇ ಹೊಳೆದಿದ್ದ ಯೋಚನೆಯನ್ನು ತಲೆಯಲ್ಲೇ ಹೊತ್ತು ಸುತ್ತಾಡುತ್ತಾ ಹೀಗೊಂದು ಕಾಲ ಕೂಡಿ ಬಂದಾಗ ಅದಕ್ಕಾಗಿ ಮೂರು ತಿಂಗಳು ಅವಿರತವಾಗಿ ದುಡಿಯಬೇಕಿದ್ದರೆ, ಅಂದುಕೊಂಡಂತೆ ಅಭಿಯಾನವನ್ನು ದಡಸೇರಿಸಬೇಕಿದ್ದರೆ ಅಪಾರವಾದ ಇಚ್ಛಾಶಕ್ತಿ ಹಾಗೂ ಬದ್ಧತೆ ಬೇಕು. ಅಷ್ಟೂ ದಿನಗಳ ಕಾಲ ಅವಿನಾಶ್ ಅವರ ಅವಿರತ ದುಡಿಮೆ ಕಿರಿಯರಿಗೆ ಆದರ್ಶ.
Breaking the Borders
ನಮ್ಮ ಚಪ್ಪಲಿಗಳನ್ನು ತೊಳೆದುಕೊಳ್ಳಬೇಕೆಂದರೆ ನಮಗದು ಕಷ್ಟದ ಕೆಲಸ. ಬೇರೆಯವರ ಚಪ್ಪಲಿ ಮುಟ್ಟುವ ಬಗ್ಗೆ ನಾವು ಯೋಚಿಸಲೂ ಸಾಧ್ಯವಿಲ್ಲ. ಹೀಗಿರುವಾಗ ಉಡಪಿಯ MGM ಕಾಲೇಜಿನ NSS ಸ್ವಯಂಸೇವಕರು ಅಭಿಯಾನದ ಅಷ್ಟೂ ದಿನಗಳಲ್ಲಿ ನಮ್ಮ ಮನೆಯ ಮಕ್ಕಳ ಹಾಗೇ ಇರುವ ಆ ಮಕ್ಕಳು, ಆ ಹದಿನೈದು ಸಾವಿರ ಪಾದರಕ್ಷೆಗಳನ್ನು ಮುಟ್ಟಿದರು, ಬೇರ್ಪಡಿಸಿದರು, ಆಚೆ ಈಚೆ ಎತ್ತಿಟ್ಟರು, ಗೋಣಿಚೀಲಗಳಲ್ಲಿ ತುಂಬಿಸಿದರು. ತಲೆಯ ಮೇಲೋ ಹೆಗಲ ಮೇಲೋ ಹೊತ್ತು ಸಾಗಿ ಒಂದೆಡೆ ರಾಶಿ ಹಾಕಿದರು. ನಂತರ ಅವುಗಳನ್ನು ಟ್ರಕ್‌ಗೆ ತುಂಬಿಸಿ ಬೀಳ್ಕೊಟ್ಟರು. ಬೇರೆಯವರ ಚಪ್ಪಲಿಗಳನ್ನು ಹೊತ್ತ ಈ ಮಕ್ಕಳಸೇವೆ ಅಭಿಯಾನಕ್ಕೆ ಬಹುದೊಡ್ಡ ಬಲ ನೀಡಿತು.
* Importance of Footwear : ತಲೆಗೆ ಧರಿಸುವ ಕಿರೀಟ ಶ್ರೇಷ್ಠವಾಗಿಯೂ ಕಾಲಿಗೆ ಧರಿಸುವ ಚಪ್ಪಲಿ ನಿಕೃಷ್ಟವಾಗಿಯೂ ಕಾಣುವುದಿದೆ. ಈ ಅಭಿಯಾನದಲ್ಲಿ ಚಪ್ಪಲಿಯೂ ಮಾನವ ಬದುಕಿಗೆ ಒಂದು ದೊಡ್ಡ ಅಗತ್ಯ ಎಂಬ ಅರಿವು ಹಲವರಿಗಾಯಿತು. ಪಾದರಕ್ಷೆಗಳಿಲ್ಲದೆ ಬರಿಗಾಲಲ್ಲಿ ಕಲ್ಲು ಮುಳ್ಳುಗಳ ನಡುವೆ ಶಾಲೆಗೆ ನಡೆದು ಹೋಗುವ ಮಕ್ಕಳ ಬವಣೆ ಇನ್ನೊಮ್ಮೆ ಎಲ್ಲರಿಗೂ ನೆನಪಾಯಿತು. ಹಲವರಿಗೆ ತಮ್ಮ ಬಾಲ್ಯದ ದಿನಗಳು ನೆನಪಾದವು. ಬಡತನದಲ್ಲಿರುವ ಮಕ್ಕಳಿಗೆ ಪುಸ್ತಕಗಳನ್ನು ಬ್ಯಾಗುಗಳನ್ನು ದಾನ ನೀಡುವ ದಾನಿಗಳಿದ್ದಾರೆಯೇ ಹೊರತು ಚಪ್ಪಲಿ ನೀಡಿದವರು ಕಡಿಮೆ. ಈ ಅಭಿಯಾನದಿಂದ ಚಪ್ಪಲಿಯ ಮಹತ್ವ ಮರೆತಿದ್ದವರಿಗೂ ಮತ್ತೊಮ್ಮೆ ನೆನಪಾಯಿತು.
ಸಮಾರೋಪದಲ್ಲಿ ಉಡುಪಿ ಸುತ್ತಮುತ್ತಲಿನ ಅಶಕ್ತ ಶಾಲಾಮಕ್ಕಳು ಹಾಜರಿದ್ದರು. Greensole Foundation ವತಿಯಿಂದ ಅವರಿಗೆ ಚಪ್ಪಲಿ, ಬ್ಯಾಗ್ ಹಾಗೂ ಕುಳಿತುಕೊಳ್ಳುವ ಮ್ಯಾಟ್ ವಿತರಣೆಯಾಗುವುದಿತ್ತು. ಮಕ್ಕಳು ಖಾಲಿ ಕಾಲಲ್ಲಿದ್ದರು. ಬೆತ್ತಲೆ ಪಾದಗಳನ್ನು ಕಂಡು ಕರುಳು ಕಿವುಚಿತು. ಹಬ್ಬ, ಕಾರ್ಯಕ್ರಮ, ಹುಟ್ಟಿದ ದಿನ, ಪ್ರತಿಭಾ ದಿನ ಅಂತ ಪ್ರತಿಸಲವೂ ಮಕ್ಕಳಿಗೆ ಬಟ್ಟೆ ತೆಗೆದುಕೊಳ್ಳುವಾಗ ಅದಕ್ಕೆ ಮ್ಯಾಚಿಂಗ್ ಚಪ್ಪಲಿಗಳನ್ನೂ ಖರೀದಿಸುತ್ತೇವೆ. ಈ ಮಕ್ಕಳ ಪಾದಗಳು ಅದನ್ನೆಲ್ಲ ನೆನಪಾಗಿಸಿದವು. ಕಲ್ಲುಮುಳ್ಳುಗಳಿಂದ ಕಾಪಾಡಬಲ್ಲ ಚಪ್ಪಲಿಗಳಿಲ್ಲದ ಎಷ್ಟು ಮಕ್ಕಳು ನಮ್ಮ ದೇಶದಲ್ಲಿದ್ದಾರೆ ಎಂಬ ಲೆಕ್ಕಾಚಾರ ತಿಳಿದ ಮೇಲೆ ಮನಸ್ಸು ಗಾಬರಿ. Greensole Foundation ಮಾಡುತ್ತಿರುವ ಈ ಕಾರ್ಯ ಪುಣ್ಯದಾಯಕ.
* Environment Friendly: ಕೊನೆಯ ದಿನದ ಪ್ರೇರಣಾ ಮಾತುಕತೆಯಲ್ಲಿ Greensole Foundation ನ MD ರಮೇಶ್ ಧಾಮಿಯವರು ಮಾತಿನ ನಡುವೆ ಹೇಳಿದರು..‘ ಎಪ್ರಿಲ್ ತಿಂಗಳಲ್ಲಿ ಇರುತ್ತಿದ್ದ ಸೆಕೆ ಈಗ ನವೆಂಬರ್ ತಿಂಗಲ್ಲೇ ಕಾಣುತ್ತಿದೆ. ಇನ್ನು ಮುಂದಿನ ವರ್ಷಗಳಲ್ಲಿ ಇದು ಏನಾಗುತ್ತದೋ.. ಸಮಸ್ಯೆ ಕಾಲಬುಡದಲ್ಲಿರುವಾಗ ನಾವು ಎಚ್ಚರಗೊಳ್ಳುವುದಿಲ್ಲ. ಮೂಗಿನವರೆಗೂ ಬಂದು ಮುಳುಗುವ ಸ್ಥಿತಿ ಎದುರಾದಾಗ ಬೊಬ್ಬೆ ಹೊಡೆಯುತ್ತೇವೆ. ಭೂಮಿಗೆ ಸೇರಿ ಅದನ್ನು ಹಾಳುಗೆಡವುತ್ತಿದ್ದ 15000 ಚಪ್ಪಲಿಗಳು ಈಗ ಬಡವರ ಪಾದಕ್ಕೆ ಆಸರೆಯಾಗುತ್ತವೆ. ಮೊದಲೇ ಎಚ್ಚರಾಗೋಣ. ಇಂತಹ ಹತ್ತು ಹಲವು ಪರಿಸರ ಸ್ನೇಹಿ ಚಟುವಟಿಕೆಗಳನ್ನು ಕೈಗೊಳ್ಳೋಣ’ .
*Preventing Landfills: ನಾವು ಬಳಸಿ ಬದಿಗಿಟ್ಟ ನಮಗೆ ಬೇಡವಾದ ಪಾದರಕ್ಷೆಗಳು ಒಂದಲ್ಲ ಒಂದು ದಿನ ಮಣ್ಣು ಸೇರುತ್ತಿದ್ದವು. ಇಲ್ಲವೇ ನಗರಪಾಲಿಕೆಯ ಕಸದ ವಾಹನಕ್ಕೆ ನೀಡುತ್ತಿದ್ದೆವು. ಹದಿನೈದು ಸಾವಿರ ಚಪ್ಪಲಿಗಳು ಪರಿಸರಕ್ಕೆ ಮಾರಕವಾಗುವುದನ್ನು ತಡೆದೆವು.
*Educational & Social Service Organizations, a great support: ಆರಂಭದಿಂದಲೂ ಶೈಕ್ಷಣಿಕ ಹಾಗೂ ಸಾಮಾಜಿಕ ಸೇವಾ ಸಂಸ್ಥೆಗಳು ಅಭಿಯಾನಕ್ಕೆ ಕೈಜೋಡಿಸಿದ್ದು ಒಂದು ಉತ್ತಮ ಬೆಳವಣಿಗೆ. ಇವರೆಲ್ಲರೂ ಸಕ್ರಿಯವಾಗಿ ಭಾಗಿಯಾದ ಕಾರಣ ಉನ್ನತ ಸಂದೇಶವೊಂದು ಯುವಜನತೆ ಮತ್ತು ಸಮಾಜಕ್ಕೆ ರವಾನೆಯಾಯಿತು ಎನ್ನೋಣ.
* Khan Bahadur Haji Abdulla Saheb : ಅಭಿಯಾನದ ಉದ್ಘಾಟನೆ ಹಾಗೂ ಸಮಾರೋಪಕ್ಕೆಂದು ಸಿದ್ಧಪಡಿಸಲಾಗಿದ್ದ ವೇದಿಕೆ ಬಲು ವಿಶಿಷ್ಟವಾಗಿತ್ತು. ಮಾವಿನ ಮರದ ನೆರಳಲ್ಲಿ ಗೋಡೆ ಮಾಡುಗಳ ಹಂಗಿಲ್ಲದ, ತೆರೆದ ವೇದಿಕೆಗೆ ಉಡುಪಿಯನ್ನು ಕಟ್ಟಿ ಬೆಳೆಸಿದ ಕೊಡುಗೈ ದಾನಿ ದಿ| ಖಾನ್ ಬಹಾದ್ದೂರ್ ಹಾಜಿ ಅಬ್ದುಲ್ಲಾ ಸಾಹೇಬರ ಹೆಸರನ್ನು ಇಡಲಾಗಿತ್ತು. ತನ್ಮೂಲಕ ಉಡುಪಿ ಜನತೆಗೆ ತಿಳಿಯದ ಅಥವಾ ತಿಳಿದೂ ಮರೆತಿರುವ ಅತಿ ಪ್ರಮುಖ ವ್ಯಕ್ತಿತ್ವವನ್ನು ಸ್ಮರಿಸಲಾಗಿದ್ದು ಅಭಿಯಾನದ ವಿಶೇಷ.
* Everyone can be a Donor: ಯಾವುದೇ ಬೆಲೆ ಬಾಳುವ ವಸ್ತುವನ್ನಾಗಲೀ ಹಣದ ಮೊತ್ತವನ್ನಾಗಲೀ ಬೇಡದ ಈ ಅಭಿಯಾನ ಜನರು ಬಳಸಿ ಬದಿಗಿಟ್ಟ ಪಾದರಕ್ಷೆಗಳನ್ನಷ್ಟೇ ಕೇಳಿತು.ಯಾವುದೇ ಖರ್ಚಿಲ್ಲದೆ ಯಾವುದೇ ಬಗೆಯ ನಷ್ಟವೂ ಇಲ್ಲದೆ ದಾನ ನೀಡಿದ ತೃಪ್ತಿ ಕೊಟ್ಟಿತು. ಈ ಕಾರಣಕ್ಕೆ ನಡಿಗೆ ಅಭಿಯಾನ ಸಂಪೂರ್ಣ ವಿಭಿನ್ನವಾಗಿ ಕಾಣಿಸಿತು.
* Concept – A Hero : ಜನಪರ ಕಾಳಜಿ ಹಾಗೂ ಪರಿಸರ ಕಾಳಜಿ ಎಂಬ ಎರಡು ಘನ ಉದ್ದೇಶಗಳನ್ನು ಹೊಂದಿದ್ದ ಈ ಅಭಿಯಾನ ಎಲ್ಲಿಯೂ ಶ್ರೀಮಂತ ವ್ಯಕ್ತಿಗಳನ್ನಾಗಲೀ, ಸಿನಿಮಾ ತಾರೆಯರನ್ನಾಗಲೀ, ರಾಜಕೀಯ ನಾಯಕರನ್ನಾಗಲೀ ಪ್ರಚಾರಕ್ಕೆ ಬಳಸಲಿಲ್ಲ. ಅಭಿಯಾನದ ಉದ್ದೇಶವನ್ನು ಜನ ಅರಿತುಕೊಂಡರು. ತಾವಾಗಿಯೇ ಬಂದರು, ಸೇರಿದರು, ನೀಡಿದರು, ತೃಪ್ತಿಪಟ್ಟರು. ‘ನಡಿಗೆ’ಯ ರೂವಾರಿ, ಅದಕ್ಕಾಗಿ ಹಗಲಿರುಳು ದುಡಿದ ಅವಿನಾಶ್ ಕೂಡ ಇದನ್ನೇ ಹೇಳುತ್ತಾರೆ. ” ಇಲ್ಲಿ ಪರಿಕಲ್ಪನೆಯೇ ಹೀರೋ. ನಾವ್ಯಾರೂ ಅಲ್ಲ.”
ಸಮಾರೋಪದ ದಿನ Greensole ಮುಖ್ಯಸ್ಥ ರಮೇಶ್ ಧಾಮಿಯವರನ್ನು ಕಂಡು ‘ ಅಬ್ಬ.. ಇವರೆಷ್ಟು ಸಿಂಪಲ್..’ ಅನಿಸಿತ್ತು. ಮರುದಿನದ ಸಂವಾದದಲ್ಲಿ ತಮ್ಮ ಚಿಂತನೆಗಳನ್ನು, ಕೆಲಸದ ವೈಖರಿಯನ್ನು, ಬೆಳೆದು ಬಂದ ಬಡತನದ ಕಥೆಯನ್ನು ಅಲೆಅಲೆಯಾಗಿ ಬಿಡಿಸಿ ಹೇಳಿದ ರಮೇಶ್ ಧಾಮಿಯವರು ಆದರ್ಶ ವ್ಯಕ್ತಿಯಾಗಿ ಕಂಡರು. ‘ಅಭಿಯಾನದ ಮುಖಾಂತರ Greensole ನ ಸೇವೆಯಲ್ಲಿ ಕೈಜೋಡಿಸಿದ ಅವಿನಾಶ್ ದೇಶಕ್ಕೇ ಮೊದಲಿಗರು ! ಇಡೀ ದೇಶದಲ್ಲಿ ಈ ರೀತಿಯ ಪ್ರಯತ್ನ ಇದೇ ಮೊದಲು’ ಎಂದು ನಡಿಗೆಯನ್ನೂ, ಅವಿನಾಶರನ್ನೂ ಕೊಂಡಾಡಿದರು.”ಉಡುಪಿಗೆ ಬಂದು ಮನಸ್ಸು ತುಂಬಿದೆ. ಖಾಲಿ ಕೈ ಬಂದಿದ್ದೆ. ಈಗ ಬಹಳಷ್ಟನ್ನು ನನ್ನೊಂದಿಗೆ ಒಯ್ಯುತ್ತಿದ್ದೇನೆ ” ಎಂದ ಧಾಮಿಯವರು ಉಡುಪಿಯಿಂದ ಸುಂದರ ನೆನಪುಗಳನ್ನು ಹೊತ್ತೊಯ್ದರು. ಅದಕ್ಕೂ ಹೆಚ್ಚಿನ ಮೌಲ್ಯಗಳನ್ನು ನಮಗೆ ಕಲಿಸಿ ಹೋದರು.