ಕುಪ್ಪಳಿ. ಹೀಗೊಂದು ಸ್ವರ್ಗ ಭೂಮಿ ಮೇಲಿದೆ ಅಂತ ಹೆಚ್ಚಿನ ಕನ್ನಡಿಗರಿಗೆ ತಿಳಿದಿರಲಿಕ್ಕಿಲ್ಲ. ತೀರ್ಥಹಳ್ಳಿಯಿಂದ ಕೇವಲ 15 ಕಿಮಿ ಸಾಗಿದರೆ, ಲೋಕಕ್ಕೆ ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರ ಹುಟ್ಟೂರು ಕುಪ್ಪಳಿ ಸಿಗುತ್ತದೆ. 7 ವರ್ಷಗಳ ಹಿಂದೆ ಇಲ್ಲಿಗೊಮ್ಮೆ ಭೇಟಿ ನೀಡುವ ಇರಾದೆ ಇತ್ತು. ಅಪ್ಪ, ಅಮ್ಮನ ಜೊತೆ ಅಲ್ಲಿಗೆ ಭೇಟಿ ನೀಡಿದಾಗ ಮಂತ್ರ ಮಾಂಗಲ್ಯ ಕುರಿತು ತಿಳಿದ ಆ ದಿನವೇ ‘ ಬದುಕಿನಲ್ಲಿ ಮದುವೆ ಆದರೆ ಇದೇ ಪದ್ಧತಿ ಅನುಸರಿಸುತ್ತೇನೆ’ ಅಂತ ನಿರ್ಧರಿಸಿದ್ದೆ. ಅದಕ್ಕೆ ನನ್ನ ಅಪ್ಪ, ಅಮ್ಮ ಸಮ್ಮತಿಸಿದರು.
ಏನಿದು ‘ಮಂತ್ರ ಮಾಂಗಲ್ಯ’ ?
ಇದು ರಾಷ್ಟ್ರಕವಿ ಕುವೆಂಪು ಅವರ ಪರಿಕಲ್ಪನೆಯ ಜಾತಿ, ಮತ, ಧರ್ಮ ಮೀರಿದ ಅತ್ಯಂತ ಸರಳ ವಿವಾಹ ಪದ್ಧತಿಯಾಗಿದೆ. ವರದಕ್ಷಿಣೆ, ಅದ್ದೂರಿ, ಅರ್ಥಹೀನ ಸಂಪ್ರದಾಯಗಳಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ ಎನ್ನುವ ಕಾರಣಕ್ಕಾಗಿ 1960 ರ ಆಸುಪಾಸಿನಲ್ಲಿ ಅವರು ಈ ಕ್ರಾಂತಿಕಾರಿ ಪದ್ಧತಿಯನ್ನು ಜಾರಿಗೆ ತಂದರು. ನಾವು ಹೆಚ್ಚಾಗಿ ಕೇವಲ ಆಡಂಬರದ, ಶ್ರೀಮಂತಿಕೆ ಸಾರುವ, ಸಂಬಂಧಗಳನ್ನು ಬೆಸೆಯದ ವಿವಾಹಗಳನ್ನು ಕಾಣುತ್ತಿರುವ ಈ ಹೊತ್ತಿನಲ್ಲಿ ಕುವೆಂಪು ಅವರ ‘ ಮಂತ್ರ ಮಾಂಗಲ್ಯ ‘ ನಿಜಕ್ಕೂ ಪ್ರಸ್ತುತ. ಅರ್ಥ ಮಾಡಿಕೊಂಡಲ್ಲಿ ನೆಮ್ಮದಿ ನಿಶ್ಚಿತ.
ಏನಿದರ ಆಶಯ ಹೇಗಿದೆ ಪದ್ಧತಿ ?
* ಈ ರೀತಿ ವಿವಾಹವಾಗಲು ಮೊದಲು ಎರಡು ಮನಸುಗಳು ಮತ್ತು ಮನೆಯವರು ಒಪ್ಪಿ ಒಂದಾಗಬೇಕು
* ಇಲ್ಲಿ ಲಕ್ಷಗಟ್ಟಲೆ ಹಣ ವ್ಯಯಿಸುವ ಅವಶ್ಯಕತೆ ಇರುವುದಿಲ್ಲ
* ಎರಡೂ ಕಡೆಯವರು ಒಪ್ಪಿದ ಮೇಲೆ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಗಮನಕ್ಕೆ ತರಬೇಕು. ಕುಪ್ಪಳಿಯ ಅವರ ಮನೆ ಅಥವಾ ಅಲ್ಲೇ ಪಕ್ಕದ ದೇವಂಗಿ ಎಂಬ ಪುಟ್ಟ ಊರಿನಲ್ಲಿರುವ ಅವರ ಕಚೇರಿಗೆ ಭೇಟಿ ನೀಡಬಹುದು.
* ಅನುಕೂಲದ ಆಧಾರದ ಮೇಲೆ ದಿನಾಂಕ ನಿಗದಿಯಾಗುತ್ತದೆ
* ಪಾಲಿಸಬೇಕಾದ ಕೆಲವು ಮುಖ್ಯ ಅಂಶಗಳೆಂದರೆ : ಸುಮಾರು 250 ಮಂದಿ ಭಾಗಿಯಾಗಬಹುದು, ವೈದಿಕ ಆಚರಣೆಗಳು ಇರುವುದಿಲ್ಲ, ವಾದ್ಯ ವೃಂದದವರು ಇಲ್ಲ, ಅದ್ಧೂರಿ Decoration ಮತ್ತು ಆಡಂಬರಕ್ಕೆ ಅವಕಾಶ ಇಲ್ಲ.
* ವೇದಿಕೆಯಲ್ಲಿ ಕುವೆಂಪು ಅವರ photo ಜೊತೆಗೆ ನೀವು ಬಯಸಿದ ಆದರ್ಶ ದಂಪತಿಗಳ ಭಾವ ಚಿತ್ರಗಳನ್ನು ಇಡಬಹುದು. ಕುವೆಂಪು ಅವರು ನಂಬಿದ್ದ ರಾಮಕೃಷ್ಣ ಪರಮಹಂಸ, ಶಾರದಾ ದೇವಿ ಅವರ ಭಾವಚಿತ್ರದ ಜೊತೆಗೆ ನೀವು ನಂಬಿದ ಗುರುಗಳ ಚಿತ್ರಗಳನ್ನು ಇಡಲು ಅಭ್ಯಂತರ ಇರುವುದಿಲ್ಲ. (ಸಾಮಾನ್ಯವಾಗಿ ಪೂರ್ಣಚಂದ್ರ ತೇಜಸ್ವಿ, ಬಸವಣ್ಣ, ಅಂಬೇಡ್ಕರ್, ಬುದ್ಧ, ವಿವೇಕಾನಂದ ಹೀಗೆ ಹಲವಾರು ಮಹಾಪುರುಷರ ಫೋಟೋಗಳನ್ನು ಇಡುವುದು ರೂಢಿಯಲ್ಲಿದೆ).
* ವಿಶ್ವಮಾನವ ಗೀತೆಯನ್ನು ( ಓ ನನ್ನ ಚೇತನ ಆಗು ನೀ ಅನಿಕೇತನ ) ಹಾಡಬಹುದು. ಟ್ರಸ್ಟ್ ಕಡೆಯವರು ಮಂತ್ರ ಮಾಂಗಲ್ಯದ ಮಹತ್ವ ಸಾರುತ್ತಾರೆ. ದೀಪ ಬೆಳಗಿ, ಹಾರ ಬದಲಾಯಿಸಿ,ತಾಳಿ ಕಟ್ಟುವ ವಿಧಾನವಿದೆ. ಈ ಕ್ಷಣಗಳಿಗೆ ನಿಗದಿತ ಸಮಯ ಇರುವುದಿಲ್ಲ. ಇಲ್ಲಿ ರಾಹುಕಾಲ, ಗುಳಿಕಕಾಲ, ಯಮಗಂಡಕಾಲ ಯಾವುದೂ ಇಲ್ಲ. ನೀವು ಬಯಸಿದಂತೆ ನಡೆಯುತ್ತದೆ.

* ಈ ನಡುವೆ ಕುವೆಂಪು ವಿರಚಿತ ‘ ಮಂತ್ರ ಮಾಂಗಲ್ಯ’ ಕೃತಿಯನ್ನು ಓದುವ ಕ್ರಮ ಇದೆ.ಇದನ್ನು ನೀವು ಬಯಸಿದ ಯಾರೊಬ್ಬರೂ ಓದಬಹುದು. ಕೃತಿಯಲ್ಲಿ ಆಯ್ದ ಸಂಸ್ಕೃತ ಮಂತ್ರಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಲಾಗಿದೆ. ಜೊತೆಗೆ ಕುವೆಂಪು ಅವರು ನೂತನ ವಧು ವರರಿಗೆ ಕಿವಿಮಾತು ಹೇಳಿದ್ದಾರೆ. ಹಿರಿಯರು ಬೋಧಿಸಿದ ಮಂತ್ರಮಾಂಗಲ್ಯದ ಪ್ರತಿಜ್ಞಾ ವಿಧಿಯನ್ನು ವಧು-ವರರು ಓದಿದ ನಂತರ ತಾಳಿ ಕಟ್ಟಬೇಕು. ತಪ್ಪದೇ ಪುಸ್ತಕದ ಕೊನೆಯಲ್ಲಿ ವಧು-ವರರು ಮತ್ತು ಸಾಕ್ಷಿಗಳು ಸಹಿ ಮಾಡಬೇಕು.


* ಭಾರತದ ಸಂವಿಧಾನದಲ್ಲಿ ಖಚಿತಪಡಿಸಿರುವಂತೆ ಮದುವೆ ಆಗುತ್ತಿರುವ ವಧು-ವರರ ವಯಸ್ಸು ಇರಬೇಕು.
* ಕುವೆಂಪು ಪ್ರತಿಷ್ಠಾನ (R)ವತಿಯಿಂದ ವಿವಾಹ ನೋಂದಣಿ ಪ್ರಮಾಣ ಪತ್ರ ನೀಡಲಾಗುತ್ತದೆ. ಕಾನೂನು ಬದ್ಧವಾಗಿ ನೋಂದಾವಣಿ ಮಾಡಿಕೊಳ್ಳಲು ಈ ಪತ್ರ ಸಹಕಾರಿಯಾಗುತ್ತದೆ.
* ಲಘ್ನ ಪತ್ರಿಕೆ ಕೂಡ ಅತ್ಯಂತ ಸರಳವಾಗಿರಬೇಕು.
* ಈ ವಿವಾಹ ಪದ್ಧತಿಯನ್ನು ಇನ್ನಷ್ಟು ಅರ್ಥಪೂರ್ಣವಾಗಿಸಲು ನೀವು ಬಯಸಿದ ಸಾಮಾಜಿಕ ಚಟುವಟಿಕೆಗಳನ್ನು ನೆರವೇರಿಸಬಹುದು.


- ಇದನ್ನು ನೀವಿದ್ದಲ್ಲಿ ಅಂದ್ರೆ ನೀವು ಬಯಸಿದ ಜಾಗದಲ್ಲಿ ಆಯೋಜಿಸಬಹುದು . ಆದರೆ ಕುವೆಂಪು ಪ್ರತಿಷ್ಠಾನದ ಗಮನಕ್ಕೆ ತಂದು ಒಪ್ಪಿಗೆ ಪಡೆಯಬೇಕು. ಇತ್ತೀಚಿಗೆ ಛಾಯಾಗ್ರಾಹಕ ಗೆಳೆಯ ವಿವೇಕ್ ಗೌಡ ಮಂಗಳೂರು ಭಾಗದಲ್ಲಿ ಸುಂದರ ಪರಿಸರದ ನಡುವೆ ಕಾರ್ಯಕ್ರಮ ಆಯೋಜಿಸಿ ಮಂತ್ರ ಮಾಂಗಲ್ಯ ರೀತಿ ವಿವಾಹವಾಗಿದ್ದಾರೆ.

ಹೀಗೆ ಸರಳವಾಗಿ ವಿವಾಹವಾಗಬಯಸಿದವರಿಗೆ ಈ ಪದ್ಧತಿ ನಿಜಕ್ಕೂ ದಾರಿದೀಪ. ಇದೇ ಸರಿ, ಇದನ್ನು ಪಾಲಿಸಿ ಎಂದು ನಾನು ಹೇಳುವುದಿಲ್ಲ. ಆದರೆ ಈ ರೀತಿ ವಿವಾಹವಾದಲ್ಲಿ ಬದುಕಿಗೊಂದು ಅರ್ಥ ಮತ್ತು ಸಾರ್ಥಕತೆ ಮೂಡುವುದರಲ್ಲಿ ಅನುಮಾನವಿಲ್ಲ.ನನ್ನ ಪಾಲಿಗೆ ಕುಪ್ಪಳಿಯಲ್ಲಿರುವ ಕುವೆಂಪು ಅವರ ಮನೆ ಕುಲದೇವಸ್ಥಾನವಿದ್ದ ಹಾಗೆ. ಇರೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ ಎಂದ ಹಾಗೆ ಕುಪ್ಪಳಿ ಎಂಬ ಸ್ವರ್ಗಕ್ಕೆ ಒಮ್ಮೆಯಾದರೂ ಭೇಟಿ ನೀಡಿ ಎನ್ನುತ್ತಾ ಈ ಲೇಖನ ಓದಿ ಮಂತ್ರ ಮಾಂಗಲ್ಯ ರೀತಿ ವಿವಾಹವಾಗುವ ಮನಸ್ಸಾದರೆ ನನ್ನನ್ನು ಸಂಪರ್ಕಿಸಿ. ನನ್ನಿಂದ ನಿಮಗೆ ಸಹಕಾರ ಸಿಗುವುದು ಖಂಡಿತ.ತಮ್ಮ ಸಮಾಜಮುಖಿ ಚಿಂತನೆಗಳ ಮೂಲಕ ಯುವಪೀಳಿಗೆಯ ಮನಸ್ಸಿನಲ್ಲಿ ಹೊಸ ಆದರ್ಶಗಳನ್ನು ಬಿತ್ತಿ ಬೆಳೆದ ಕವಿ ಕುವೆಂಪುರವರ ಈ ಮಂತ್ರ ಮಾಂಗಲ್ಯ ಎಂಬ ವಿವಾಹ ಪದ್ದತಿಯ ಕುರಿತು, ಕುಪ್ಪಳಿಯ ನಿರ್ಮಲ ಪ್ರಕೃತಿಯ ನಡುವೆ ದೊರೆಯುವ ಪ್ರಶಾಂತ ಅನುಭವದ ಕುರಿತು ಹೇಳಲು ಹೋದರೆ ಸಾವಿರ ಮಾತಿದೆ .
ಮನ ಮೆಚ್ಚುವಂಥಹ ಲೇಖನ ಅವಿನಾಶ್…
ಸುಂದರ ಮತ್ತು ಅರ್ಥಪೂರ್ಣ ಆಚರಣೆ ನಿಜವಾಗಿ ಪ್ರಶಂಸನಾರ್ಹ👍
“ಮಂತ್ರ ಮಾಂಗಲ್ಯ” ದ ಸುಂದರ ಅನಾವರಣ ಅವಿನಾಶ್ 👏👏
ಸಮಯ ಕೂಡಿದರೆ,ಎರಡೂ ಕುಟುಂಬದವರ ಸಹಯೋಗವಿದ್ದರೆ ,ಮಾದರಿ ಮದುವೆಗೆ ನಾಂದಿಹಾಡುವ ಮನಸ್ಸಿದೆ ❤ಸಮಯದ ಬರುವಿಕೆಗೆ ಶುಭ ಹಾರೈಕೆ 🙏🤗ಅರ್ಥಪೂರ್ಣ – ಉಪಯುಕ್ತ ಮಾಹಿತಿಗೆ ಧನ್ಯವಾದಗಳು ಅವಿನಾಶ್.