ನಿರೂಪಣೆ ಅಂದ್ರೆ ಕೇವಲ ಮಾತಲ್ಲ. ಅಲ್ಲಿ ಕಾರ್ಯಕ್ರಮವನ್ನು ಗೆಲ್ಲಿಸುವ ಜವಾಬ್ದಾರಿ, ಮುನ್ನಡೆಸುವ ಕೌಶಲ್ಯ, ಭಾಷೆಯ ಲೇಪನ, ಜನರ ಮನಸ್ಸು ತಲುಪುವ ಸವಾಲು ಹೀಗೆ ಹಲವು ವಿಷಯಗಳಿವೆ.
16 ವರ್ಷಗಳ ವೇದಿಕೆ ಕಾರ್ಯಕ್ರಮಗಳ ನಿರೂಪಣೆಯ ಕ್ಷೇತ್ರದ ಪ್ರಯಾಣದಲ್ಲಿ ನಾನು ಕಲಿತು ಅಳವಡಿಸಿಕೊಂಡು ಬಂದಿರುವ, ಬರುತ್ತಿರುವ, ಕಲಿಯುತ್ತಿರುವ ಕೆಲವು ಪ್ರಮುಖ ವಿಚಾರಗಳು :
*ಪ್ರತಿ ಕಾರ್ಯಕ್ರಮ ಮತ್ತು ವೇದಿಕೆ ಹೊಸತು. ಹಿಂದಿನ ಯಶಸ್ಸು ಹೊಸ ವೇದಿಕೆ ಏರಿದಾಗ ಆತ್ಮವಿಶ್ವಾಸ ಕೊಡಬಲ್ಲದೇ ಹೊರತು ಹಿಂದಿನ ಯಶಸ್ಸಿನ ಆಧಾರದ ಮೇಲೆ ಪ್ರಸ್ತುತ ಕಾರ್ಯಕ್ರಮ ಯಶಸ್ವಿಯಾಗುವುದಿಲ್ಲ !
*ಪ್ರತಿ ಕಾರ್ಯಕ್ರಮಕ್ಕೆ ಸಾಕಷ್ಟು ತಯಾರಿಯ ಅಗತ್ಯತೆ ಇದೆ. ತಯಾರಿ ಮಾಡಿಕೊಂಡಾಗ ಮಾತ್ರ ಹುಮ್ಮಸ್ಸು, ಆತ್ಮವಿಶ್ವಾಸ ಹೆಚ್ಚುತ್ತದೆ. ತಯಾರಿ ಹಲವು ಪ್ರಕಾರಗಳದ್ದಾಗಿರುತ್ತದೆ. ಮಾನಸಿಕ ತಯಾರಿ ಬಹಳ ಮುಖ್ಯ. ಕನಿಷ್ಠ ಇದನ್ನು ಮಾಡದೇ ಇದ್ದಲ್ಲಿ ಕಾರ್ಯಕ್ರಮ ಗೆಲ್ಲಿಸಿಕೊಡುವುದು ಸುಲಭದ ಮಾತಲ್ಲ.
*ಒಬ್ಬ ಒಳ್ಳೆಯ ಕಾರ್ಯಕ್ರಮ ನಿರೂಪಕ ಓದಿನ ಹವ್ಯಾಸ ಬೆಳೆಸಿಕೊಂಡು, ಬದುಕು ಮತ್ತು ಸುತ್ತ ಮುತ್ತಲಿನ ಆಗು ಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು.
*ಕಾರ್ಯಕ್ರಮ ಆಯೋಜಕರ ಕುರಿತು ಕನಿಷ್ಠ ಮಾಹಿತಿಯಾದರೂ ಇರಬೇಕು. ಕಾರ್ಯಕ್ರಮದ ಕುರಿತ ಅವರ ನಿರೀಕ್ಷೆಗಳನ್ನು ಮುಂಚಿತವಾಗಿ ತಿಳಿದುಕೊಂಡಿರಬೇಕು.
*ಕೆಲವು ಸಂಗತಿಗಳನ್ನು ಆಯೋಜಕರಿಗೆ ನಾವೇ ಸಲಹೆ ರೂಪದಲ್ಲಿ ನೀಡಬಹುದು.ಕಾರ್ಯಕ್ರಮ ಚೆನ್ನಾಗಿ ಮೂಡಿಬರಲು ‘ಇಂತಿಂತಹ ವಿಚಾರಗಳನ್ನು ಅಳವಡಿಸಿಕೊಂಡರೆ ಉತ್ತಮ’ ಎಂದು ಅವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಯಬೇಕು. ನಂತರದ ನಿರ್ಧಾರ ಅವರಿಗೆ ಬಿಟ್ಟದ್ದು.
*ಕಾರ್ಯಕ್ರಮ ಜರುಗುವ ಸಂದರ್ಭ ಒಬ್ಬ ನಿರೂಪಕ ವೇದಿಕೆ ಸುತ್ತ ನಡೆಯುವ ಎಲ್ಲಾ ಸಂಗತಿಗಳನ್ನು ಗಮನಿಸುತ್ತಲೇ ಸಣ್ಣ ಪುಟ್ಟ ನಿರ್ಧಾರಗಳನ್ನು ಅಲ್ಲಲ್ಲೇ ತೆಗೆದುಕೊಂಡು ಅನುಷ್ಠಾನಗೊಳಿಸಬೇಕು.
*Formal, Semi Formal, Informal, Music, Orchestra, Birthdays, Get Together, Corporate Programs, Mehendi, Reception ಇತ್ಯಾದಿ ಬೇರೆ ಬೇರೆ ಪ್ರಕಾರದ ಕಾರ್ಯಕ್ರಮಗಳಿವೆ. ಆ ಪ್ರಕಾರಗಳಿಗೆ ತಕ್ಕುದಾದ ಪ್ರಸ್ತುತಿಯನ್ನು ಕರಗತಗೊಳಿಸಿಕೊಂಡಿರಬೇಕು. ಒಂದರಂತೆ ಮತ್ತೊಂದನ್ನು ಪ್ರಸ್ತುತಪಡಿಸಲು ಸಾಧ್ಯವಿಲ್ಲ. ನಾವು ಯಾವುದಕ್ಕೆ ಸರಿಹೊಂದುತ್ತೇವೆ ಎಂದು ಸ್ಪಷ್ಟವಾಗಿ ನಮಗೆ ಅರಿವಿರಬೇಕು.
*ವೇದಿಕೆಯಲ್ಲಿ ಏನೇ ‘ಹೆಚ್ಚು ಕಮ್ಮಿ’ಗಳಾದಾಗ ಅದನ್ನು ಸಲೀಸಾಗಿ ನಿಭಾಯಿಸಿ ಮುಂದುವರಿಸಿಕೊಂಡು ಹೋಗುವ ಚಾಕಚಕ್ಯತೆ ಇರಬೇಕು.
*ನಿರೂಪಕನಿಗೆ ಪದಗಳ ಕೊರತೆಯಾಗಬಾರದು. ಕೆಲವು ಪದಗಳನ್ನು ಪದೇ ಪದೇ ಪುನರುಚ್ಚರಿಸಬಾರದು. ಈ ವಿಚಾರದಲ್ಲಿ ಸಾಕಷ್ಟು ಜಾಗ್ರತೆ ವಹಿಸಬೇಕು.
*ಆರಂಭದಿಂದ ಅಂತ್ಯದವರೆಗೆ ಕಾರ್ಯಕ್ರಮ ವಿವಿಧ ಹಂತಗಳಲ್ಲಿ ಸಾಗುತ್ತದೆ. ಯಾವ ಹಂತದಲ್ಲಿ ಏನು, ಹೇಗೆ ಮಾತಾಡಬೇಕು ಹೇಗೆ ನಿಭಾಯಿಸಬೇಕು ಎಂಬ ಜಾಣ್ಮೆ ಆತನಿಗಿರಬೇಕು.
*ಹಿತವೆನಿಸುವ ಪದಗಳ ಬಳಕೆ,ಸ್ವರದ ಮೇಲೆ ಹಿಡಿತ, ಧ್ವನಿಯಲ್ಲಿ ಏರಿಳಿತ, ಮೈಕನ್ನು ಹಿಡಿಯುವ ರೀತಿ ಮತ್ತು ಬಾಯಿಯಿಂದ ಎಷ್ಟು ದೂರದಲ್ಲಿ ಹಿಡಿಯಬೇಕು ಎನ್ನುವುದು ಬಹುದೊಡ್ಡ ಕಲೆ. ಇದನ್ನು ರೂಢಿಸಿಕೊಳ್ಳುವುದು ಅತಿ ಮುಖ್ಯ ವಿಚಾರಗಳಲ್ಲೊಂದು.
*ನಿರೂಪಕನೇ ಒಟ್ಟು ಕಾರ್ಯಕ್ರಮದ ಸಾರಥಿ. ಕಾರ್ಯಕ್ರಮ ಆರಂಭದ ಕನಿಷ್ಠ 30 ನಿಮಿಷಗಳ ಮುನ್ನ ಆತ ಅಲ್ಲಿ ಹಾಜರಿರಬೇಕು. ವೇದಿಕೆ, ಧ್ವನಿವರ್ಧಕ, ಇತರ ತಯಾರಿಗಳು ಎಲ್ಲವೂ ಸರಿಯಾಗಿದೆಯೇ ಎಂದು ಗಮನಿಸಿ ಆರಂಭದ 15 ನಿಮಿಷಗಳ ಮುನ್ನ ದೀರ್ಘ ಉಸಿರೆಳೆದುಕೊಂಡು ವೇದಿಕೆಯೇರಲು ಮಾನಸಿಕವಾಗಿ ಸಿದ್ಧನಾಗಿರಬೇಕು.
*ಆರಂಭದ 20 ನಿಮಿಷಗಳು ನಿರ್ಣಾಯಕ. ಇದನ್ನು ಗೆದ್ದರೆ ಅರ್ಧ ಕಾರ್ಯಕ್ರಮ ಗೆದ್ದಂತೆ.
*ಎಷ್ಟೇ ಅನುಭವವಿದ್ದರೂ ‘ ಭಯ’ ಎನ್ನುವುದು ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತಿರುತ್ತದೆ. ಜಯ ಇರುವುದು ಭಯದ ಮುಂದೆ ಎನ್ನುವ ಮಾತು ನೆನಪಲ್ಲಿರಬೇಕು. ಈ ಹಿಂದೆ ನಮ್ಮ ಅತ್ಯದ್ಭುತ ಅಥವಾ ಬೇರೆ ನಿರೂಪಕರ ಯಶಸ್ವೀ ಪ್ರಸ್ತುತಿಯ ಕುರಿತು ಇನ್ನೊಮ್ಮೆ ನೆನಪು ಮಾಡಿಕೊಂಡು ವೇದಿಕೆ ಏರಬೇಕು.
*ಜನರಿಗೆ ಮನಮುಟ್ಟುವ, ನೇರ ಹೃದಯವನ್ನು ಆಕ್ರಮಿಸಿ ಬಿಡುವ ಮಾತುಗಳನ್ನು ಆಡಬೇಕು. ಆವಾಗಲೇ ನಿರೂಪಕ ಗೆಲ್ಲುವುದು.
ಇಲ್ಲಿ ಹೇಳಿರುವ ಅಷ್ಟೂ ವಿಚಾರಗಳು ನನ್ನದೇ ಅನುಭವಗಳಾಗಿವೆ. ಇದೇ ಸತ್ಯ, ಸರಿ ಎಂದು ಹೇಳುತ್ತಿಲ್ಲ. ಇವಿಷ್ಟು ಮಾತ್ರ ಅಲ್ಲ. ಇನ್ನೂ ಇವೆ, ಬರೆದಷ್ಟೂ ಇದೆ. ಮಾತುಗಾರಿಕೆಯ ಕಲೆಗೆ ‘ Presentation’ ಸ್ಪರ್ಶ ನೀಡಿದಾಗ ಮಾತ್ರ ಆತ ಒಬ್ಬ ಒಳ್ಳೆಯ ನಿರೂಪಕನಾಗಬಲ್ಲ. ಈ ಲೇಖನದಲ್ಲಿ Body Language ಕುರಿತು ಬರೆದಿಲ್ಲ. ಅದನ್ನು ಇನ್ನೊಂದು ಲೇಖನದಲ್ಲಿ ತೆರೆದಿಡುವ ಪ್ರಯತ್ನ ಮಾಡುತ್ತೇನೆ. ಕಲಿಯಬೇಕಾದದ್ದು ಬಹಳಷ್ಟಿದೆ. ನಿರೂಪಣೆಯ ಕುರಿತು ಹೇಳಲು ಹೋದರೆ ಸಾವಿರ ಮಾತಿದೆ.
Life is full of experiences and I have stories to say.