ಶಾಲಾ ದಿನಗಳಿಂದಲೇ ನಮ್ಮ ಗೆಳೆತನ ಆರಂಭವಾಯಿತು. ಹಾಗಾಗಿ ಇವನು ನನ್ನ ಚಡ್ಡಿ ದೋಸ್ತ್ ಎನ್ನಬೇಕು. ಚಿಕ್ಕಂದಿನಿಂದಲೇ ನನ್ನ ಮತ್ತಿವನ ಆಸಕ್ತಿಗಳು ಹೆಚ್ಚು ಕಡಿಮೆ ಒಂದೇ ಆಗಿದ್ದವು. ಅದೇ ಕಾರಣಕ್ಕೆ ನಮ್ಮ ಬಾಂಧವ್ಯ ಬೆಳೆಯಿತು. ದೇವಸ್ಥಾನ, ಜಾತ್ರೆ, ನೇಮ, ಕೋಲ, ಹಬ್ಬಗಳು ಎಲ್ಲವೂ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಬಿಟ್ಟವು.
ಇವನಿಗೆ ಚಿಕ್ಕಂದಿನಿಂದಲೂ ಹುಲಿವೇಷ ಅಂದ್ರೆ ಪಂಚ ಪ್ರಾಣ. ಆಗೆಲ್ಲಾ ಒಂದು ಹುಲಿ ತಂಡ ಕಂಡರೆ ಸಾಕು ಇಡೀ ದಿನ ಅವರ ಹಿಂಬಾಲಕನಂತೆ ಸುತ್ತುವುದು, ಅವರ ದೇಖ್ ಪಾಲ್ ಮಾಡುವುದು, ಜೊತೆಗೆ ಅಲ್ಲಲ್ಲಿ ಕುಣಿಯುವುದು ಒಂದು ರೀತಿಯ ಹುಚ್ಚು. ಅದರಲ್ಲೇ ಖುಷಿ ಕಾಣುತ್ತಿದ್ದ ಆರೀಫ್ ಉದ್ಯೋಗ ಅರಸಿ ವಿದೇಶಕ್ಕೆ ಹೋದ. ದೇಹ ಅಲ್ಲಿದ್ದರೂ ಊರಿನದ್ದೇ ಧ್ಯಾನ! ಇಲ್ಲಿಯ ಪ್ರತಿ ಸಂಗತಿಗಳ ಕುರಿತು Youtube, Whatsapp ಗಳ ಮೂಲಕ ಅಪ್ಡೇಟ್ ಆಗಿರುವುದು ಇವನ ವಿಶೇಷತೆ.
ಊರಿಗೆ ಬರುವಾಗ ಅಷ್ಟಮಿ, ಚೌತಿ ಹಬ್ಬಗಳು ಸಿಗುವಂತೆ ರಜೆಯನ್ನು ಹೊಂದಿಸಿಕೊಂಡೇ ಬರುತ್ತಾನೆ. ವೇಷಧಾರಿಗಳನ್ನು ನೋಡುವುದು, ತನ್ನಿಂದಾದ ದೇಣಿಗೆ ನೀಡುವುದು ವರ್ಷಗಳಿಂದ ನಡೆದುಕೊಂಡು ಬಂದಿದೆ. ಒಳ್ಳೆಯ ಚಟುವಟಿಕೆಗಳು ಯಾವುದೇ ಇರಲಿ! ಒಂದು ಮಾತು ಅವನ ಕಿವಿಗೆ ಬಿದ್ದರೆ ಸಾಕು ಬೇಷರತ್ ಬೆಂಬಲ ಸೂಚಿಸಿಬಿಡುತ್ತಾನೆ. ಖರ್ಚಿಗೆ ಹಿಂದೆ ಮುಂದೆ ನೋಡುವ ಜಾಯಮಾನ ಇವನದ್ದಲ್ಲ. ಜಾತಿ, ಮತ, ಧರ್ಮ, ಭೇದ ಇವನ Dictionaryಯಲ್ಲಿ ಇಲ್ಲ. ಇಂತಹ ಗೆಳೆಯನನ್ನು ಪಡೆದಿರುವುದು ನನ್ನ ಪುಣ್ಯ.
ಈ ಬಾರಿ ಊರಿಗೆ ಬಂದು ವಾರದ ನಂತ್ರ ಕರೆ ಮಾಡಿದ. ಅದೇ ಮಧ್ಯಾಹ್ನ ಬ್ರಹ್ಮಾವರದ ಹೋಟೆಲ್ ನಲ್ಲಿ ಚಹಾ ಸವಿಯುತ್ತ ಕೂತಿದ್ದಾಗ ಕಾಂತಾರ, ಕೆರಾಡಿ ಹಾಗೆ ಹೀಗೆ ಅಂತ ಮಾತು ಆರಂಭವಾಗಿ … ‘ ಕೆರಾಡಿಗೆ ಕರೆದುಕೊಂಡು ಹೋಗ್ತೀಯ ?’ ಅಂದ. ‘ ಯಾವಾಗ’ ಎನ್ನಲು ‘ ಈಗಲೇ ಹೋಗೋಣ’ ಅಂದ. ಹೊರಟೇ ಬಿಟ್ಟೆವು !
ಕೆಲವೊಮ್ಮೆ ತಲುಪೋ ಜಾಗಕ್ಕಿಂತ ನಾವು ಹೋಗ್ತಾ ಇರೋ ದಾರಿನೇ ಇಷ್ಟವಾಗುತ್ತೆ. ಕೆರಾಡಿ ತಲುಪಿ ಇಡೀ ಊರಿನ ಸೌಂದರ್ಯ ಸವಿದೆವು. ಗದ್ದೆ, ತೋಟ, ಹಸಿರು, ರಿಷಬ್ ಶೆಟ್ಟರ ಮನೆ, ದೂರದಲ್ಲೊಂದು ದೇವಸ್ಥಾನ ಹೀಗೆ ಒಂದಿಡೀ ದಿನವನ್ನು ನಿರಾಯಾಸವಾಗಿ ಖುಷಿಯಿಂದ ಕಳೆದೆವು. ನಮ್ಮ ಪ್ರಯಾಣದ ವಿಡಿಯೋ ತುಣುಕುಗಳು ಇಲ್ಲಿವೆ ನೋಡಿ…
ಈ ವರ್ಷ ಅಷ್ಟಮಿಗೆ ನಿಟ್ಟೂರಿನ ಓಂಕಾರೇಶ್ವರ ಭಜನಾ ಮಂದಿರದ ಹುಲಿವೇಷ ತಂಡವನ್ನು ಮನೆಗೆ ಕರೆಸಿದ. ಅವನ ಹೆಂಡತಿ, ಮಕ್ಕಳು, ತಂದೆ, ತಾಯಿ, ತಮ್ಮ, ಅವನ ಕುಟುಂಬ ನೆರೆಮನೆಯವರು ಎಲ್ಲರೂ ಸೇರಿ ಕುಣಿದದ್ದು ಮಾತ್ರ ಅಲ್ಲ ಹುಲಿ ತಂಡಕ್ಕೆ ಆಶ್ಚರ್ಯವೆಂಬಂತೆ 29 ಸಾವಿರ ದೇಣಿಗೆ ನೀಡಿದ!!
ಬಡವರು, ಅಸಹಾಯಕರು ಹೀಗೆ ಯಾರೇ ಬಂದು ಕಷ್ಟ ತೋಡಿಕೊಂಡರೂ ಕೈಯೆತ್ತಿ ನೀಡುವ ಗುಣವನ್ನು ಕಂಡಾಗೆಲ್ಲ ನನಗನಿಸುವುದು.. ಇವನೊಬ್ಬ ಹೃದಯವಂತ.
3 ತಿಂಗಳ ಹಿಂದೆ ತುರ್ತು ಹಣದ ಅವಶ್ಯಕತೆ ನನಗಿತ್ತು. ಮನೆಯವರು, ಸಂಬಂಧಿಗಳು ಯಾರೂ ನೆನಪಾಗಲಿಲ್ಲ. ಒಂದು ಮೆಸೇಜ್ ಕಳುಹಿಸಿದೆ. ಕರೆ ಮಾಡಿದ, ವಿಚಾರಿಸಿದ. ಮತ್ತೊಂದರ್ಧ ಗಂಟೆ ಒಳಗಾಗಿ ಬೇಕಿದ್ದ ಬಹುದೊಡ್ಡದೆನಿಸುವ ಮೊತ್ತವೊಂದನ್ನು ಕಳುಹಿಸಿ ಬಿಟ್ಟ! ಈಗ ಅದರ ಅರ್ಧದಷ್ಟು ಮೊತ್ತವನ್ನು ಹಿಂದಿರುಗಿಸಿದ್ದೇನೆ. ಸದ್ಯದಲ್ಲೇ ಉಳಿದದ್ದನ್ನು ತೀರಿಸಿಬಿಡುತ್ತೇನೆ.
ಅವನ ದಿಲ್ದಾರ್ ಗುಣ, ಪಾಪ ಪುಣ್ಯಕ್ಕೆ ಕರಗುವ ಮನಕ್ಕೆ ಎಂದಿಗೂ ಜನರು ಇವನ ‘ಲಾಭ’ ಪಡೆಯದಿರಲಿ. ಈ ಬಗ್ಗೆ ನೀನೇ ಜಾಗ್ರತೆ ವಹಿಸಬೇಕೆಂದು ಎಚ್ಚರಿಕೆ ನೀಡಿದ್ದೇನೆ. ಒಳ್ಳೆಯ ಗೆಳೆಯರ ಸಂಪಾದನೆ ಬದುಕಿನ ಬಹು ದೊಡ್ಡ ಆಸ್ತಿಗಳಲ್ಲಿ ಒಂದು! ನಮ್ಮಿಬ್ಬರ ಗೆಳೆತನ ಹಸಿರಾಗಿರಲಿ ಎನ್ನುವ ಆಶಯದೊಂದಿಗೆ ಈ ವಿಡಿಯೋಗಳು ನಮಗಾಗಿ, ನಿಮಗಾಗಿ…