ಈ ಹೊತ್ತಿಗೆ ಒಂದು ಕತೆ ನೆನಪಾಗುತ್ತಿದೆ. ಲತಾ ಮಂಗೇಶ್ಕರ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಪಂಡಿತ್ ಭೀಮಶೆನ್ ಜೋಶಿ ಕೂಡ ಸಭಿಕರ ಸಾಲಿನಲ್ಲಿ ಕೂತಿದ್ರಂತೆ. ಕಾರ್ಯಕ್ರಮ ಮುಗಿದ ನಂತ್ರ ವೇದಿಕೆ ಏರಿ ಬಂದು ಲತಾ ಅವರಿಗೆ ಕೈ ಮುಗಿದು ಶಿರ ಬಾಗಿ ನಮಸ್ಕರಿಸಿದ್ರಂತೆ. ಲತಾ ಅವರು ‘ನೀವು ಹಿರಿಯರಿದ್ದೀರಿ ಈ ರೀತಿ ನನಗೆ ಕೈ ಮುಗಿಯುವುದು ಸರಿ ಅಲ್ಲ’ ಅಂದ್ರು. ತಕ್ಷಣ ಜೋಶಿ ಅವರು ನನ್ನ ಸಂಗೀತ ಪ್ರಕಾರವನ್ನು ಕೇವಲ ಒಂದು ವರ್ಗದ ಜನ ಆಸ್ವಾದಿಸಿದರೆ ನಿಮ್ಮ ಸಿನಿಮಾ ಗೀತೆಗಳನ್ನು ಆಲಿಸುವ ವರ್ಗ ಬಹಳ ದೊಡ್ಡದಿದೆ, ನಿಮ್ಮ ಅಭಿಮಾನಿ ವರ್ಗವೂ ದೊಡ್ಡದಿದೆ ಅಂದ್ರಂತೆ.. !
ಹೌದು.. ನಮ್ಮ ದೇಶದಲ್ಲಿ ಸಿನಿಮಾ ಗೀತೆಗಳಿಗೆ ಒಂದು ಪರಂಪರೆ ಇದೆ. ದೇಶದಲ್ಲಿ ಪ್ರಚಲಿತದಲ್ಲಿರುವ ಅದೆಷ್ಟೋ ಭಾಷೆಗಳು, ಅವುಗಳ ಮೇಲೆ ಬಂದಿರುವ ಸಿನಿಮಾಗಳು, ಆ ಭಾಷೆಗಳಲ್ಲಿನ ಹಾಡುಗಳನ್ನು ಲೆಕ್ಕ ಹಾಕಿದರೆ ಈ ವರೆಗೆ ಬಂದಿರುವ ಹಾಡುಗಳ ಸಂಖ್ಯೆ ಅಂದಾಜು ಎಷ್ಟಾಗಬಹುದು ?
ಸಿನಿಮಾ ಗೀತೆಗಳು ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿವೆ. ಅವುಗಳನ್ನು ಕೇಳಿಕೊಂಡೇ ಬೆಳೆದಿದ್ದೇವೆ, ಬೆಳಗಿದ್ದೇವೆ. ಈ ಬಗ್ಗೆ ಇನ್ನೊಂದು ಲೇಖನದಲ್ಲಿ ವಿವರಿಸುತ್ತೇನೆ.
ಕನ್ನಡದ ಸಿನಿಮಾ ಗೀತೆಗಳಿಗೆ ಅನನ್ಯ ಕೊಡುಗೆ ನೀಡಿದ ಸಾಹಿತಿಗಳ ಪಟ್ಟಿ ಬಹಳ ದೊಡ್ಡದೇ ಇದೆ. 70, 80 ರ ದಶಕದಿಂದ ಗಮನಿಸಿದರೆ ಕರೀಂ ಖಾನ್, ಆರ್. ಎನ್. ಜಯಗೋಪಾಲ್, ಚಿ. ಉದಯಶಂಕರ್, ದೊಡ್ಡರಂಗೇಗೌಡ, , ಸಿದ್ದಲಿಂಗಯ್ಯ, ಹಂಸಲೇಖ, ವಿ. ಮನೋಹರ್, ಕಲ್ಯಾಣ್, ನಾಗತಿಹಳ್ಳಿ ಚಂದ್ರಶೇಖರ್, ಡಾ. ನಾಗೇಂದ್ರ ಪ್ರಸಾದ್, ಉಪೇಂದ್ರ, ಯೋಗರಾಜ್ ಭಟ್, ಕವಿರಾಜ್, ಜಯಂತ ಕಾಯ್ಕಿಣಿ ಹೀಗೆ ದಶಕಗಳು ಕಳೆದಂತೆ ಇವರೆಲ್ಲರ ಹಾಡುಗಳ ಪ್ರಸ್ತುತಿ, ಅವುಗಳು ನಮ್ಮನ್ನು ತಲುಪುವ ರೀತಿ, ಅರಳಿಸುವ ಭಾವ, ಉಕ್ಕಿಸುವ ಮೌನ, ನೀಡುವ ಚೈತನ್ಯ , ಹೇಳುವ ಸಾಂತ್ವನ ನಮಗೆ ನಮ್ಮನ್ನು ಹುಡುಕುವ ಪ್ರಯತ್ನದಲ್ಲಿ ಸಾಥ್ ನೀಡಿವೆ.
ಪ್ರಮೋದ್ ಮರವಂತೆ (Pramod Maravante) ಎನ್ನುವ ಸ್ಪುರದ್ರೂಪಿ ಅಪ್ಪಟ ಹಳ್ಳಿ ಪ್ರತಿಭೆ
ಈ ಸಾಲಿಗೆ ಈಗ ಹೊಸ ಸೇರ್ಪಡೆ ನನ್ನೂರು ಕುಂದಾಪುರದಿಂದ ಸ್ವಲ್ಪ ದೂರದಲ್ಲಿರುವ ಮರವಂತೆಯ ಪ್ರಮೋದ್. ಆಧುನಿಕ ಜಗತ್ತಿನಲ್ಲಿ ನಿಮಗೆ ಒಂದು ಕ್ಷೇತ್ರದಲ್ಲಿ ಆಸಕ್ತಿ ಇದ್ದರೆ ಸಾಕು ಅಲ್ಲಿ ಬೇಕಾದದ್ದನ್ನು ಸಾಧಿಸಬಹುದು ಅನ್ನೋದಕ್ಕೆ ಇವರು ಒಳ್ಳೆ ಉದಾಹರಣೆ.
ನನ್ನ ಮತ್ತು ಪ್ರಮೋದ್ ಭೇಟಿಯಾಗಿದ್ದು ಬೆಂಗಳೂರಿನಲ್ಲಿ 2014 ರಿಂದ 2019 ರ ವರೆಗೆ ಅದ್ಧೂರಿಯಾಗಿ ಜರಗಿದ ‘ ನಮ್ಮೂರ ಹಬ್ಬ’ ಎಂಬ ಬೃಹತ್ ಭಾವ, ಬಣ್ಣಗಳನ್ನು ಬೆಸೆಯುವ ಕಾರ್ಯಕ್ರಮದಲ್ಲಿ. ಸಿನಿಮಾ, ಗೀತೆಗಳು, ಸಾಲುಗಳು, ಸಂಗೀತ ಹೀಗೆ ಸೂಕ್ಷ್ಮ ವಿಚಾರಗಳನ್ನು ಆಗಾಗ ಚರ್ಚಿಸುತ್ತಿರುತ್ತೇವೆ. Mechanical Engineering ಪದವಿ ಪಡೆದರೂ ಅವರಿಗೆ ಸಿನಿಮಾ ಸಾಹಿತಿ ಆಗಬೇಕು ಅನ್ನೋ ಹಂಬಲ. ಕಳೆದೈದು ವರ್ಷದಿಂದ ತನ್ನ ಪ್ರತಿಭೆ ಸಾಬೀತುಪಡಿಸುವಲ್ಲಿ ಜೋರು ಹೋರಾಟವನ್ನೇ ಕೊಟ್ಟಿರುವ ಪ್ರಮೋದ್ ಈ ಹಿಂದೆ ಒಂದು ಹಂತಕ್ಕೆ ಗೆದ್ದಿದ್ದರು. ಆದ್ರೆ ಒಂದೆರಡು ದಿನದ ಹಿಂದೆ ಬಿಡುಗಡೆಯಾದ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ (Kantara) ಚಿತ್ರದ ‘ ಸಿಂಗಾರ ಸಿರಿಯೆ , ಅಂಗಾಲಿನಲೆ ಬಂಗಾರ ಅಗೆವ ಮಾಯೆ’ ಹಾಡು ಎಲ್ಲರನ್ನು ಅದೇ ಹಾಡಿನ ಗುಂಗಲ್ಲಿರುವಂತೆ ಮಾಡಿದೆ. ಅದರಲ್ಲಿ ನೀವೂ ಒಬ್ಬರಲ್ವೇ? ಕುಂದಾಪ್ರ ಸೊಗಡಿನ ಈ ಸುಂದರ ಹಾಡನೂಮ್ಮೆ ನೋಡಿಬಿಡಿ..
ಸಿನಿಮಾ ಸಾಹಿತ್ಯ ಹೇಗಿರಬೇಕು ?
ಸಿನಿಮಾ ಸಾಹಿತ್ಯ ರಚಿಸಲು ಕನಿಷ್ಠ bathroomನಲ್ಲಾದರೂ ನಾಲ್ಕು ಸಾಲು ಗುನುಗಬೇಕು ಅನ್ನೋ ಮಾತನ್ನು ಜಯಂತ ಕಾಯ್ಕಿಣಿ ಸರ್ ಒಮ್ಮೆ ಹೇಳಿದ್ರು. ಸಿನಿಮಾ ಗೀತೆಗಳನ್ನು ರಚಿಸುವುದು ಒಂದು ಸವಾಲು. ಆ ಹಾಡು ಸಿನಿಮಾದ ಸನ್ನಿವೇಶವನ್ನು ಸ್ಫಷ್ಟವಾಗಿ ವಿವರಿಸಬೇಕು, ಹಾಡು ಹೊಸತು ಅಂತನಿಸಬೇಕು, ಹೊಸ ಪದಗಳಿರಬೇಕು, ಸಂಗೀತದ ಮೀಟರ್ ಗೆ ಸರಿಯಾಗಿ ಹೊಂದಬೇಕು ಇದೆಲ್ಲದಕ್ಕಿಂತ ಹೆಚ್ಚಾಗಿ ಪದೇ ಪದೇ ಗುನುಗುವಂತಿರಬೇಕು. ಈ ಸವಾಲುಗಳನ್ನು ಸ್ವೀಕರಿಸಿ ಎಲ್ಲಾ ಪ್ರಕಾರದ ಗೀತೆಗಳನ್ನು ರಚಿಸಿ ಗೆದ್ದ ಪ್ರಮೋದ್ ನಲ್ಲಿ ಆಳವಾದ ಅಧ್ಯಯನ ಇದೆ, ಭಾಷೆಯ ಮೇಲೆ ಪ್ರೀತಿ ಇದೆ, ಸೂಕ್ಷ್ಮ ಸಂವೇದನೆ ಇದೆ ಮತ್ತು ಪದ ಜೋಡಣೆಯ ಕೌಶಲ್ಯ ಹಾಸು ಹೊಕ್ಕಾಗಿದೆ.. ಅವರ ಇತ್ತೀಚೆಗಿನ ಹಾಡುಗಳು :
ಚಂದ ಚಂದ ನನ್ ಹೆಂಡ್ತಿ – ಸಂಗೀತ : ರವಿ ಬಸ್ರೂರ್
ಇನ್ನೂನು ಬೇಕಾಗಿದೆ – ಸಂಗೀತ : ವಾಸುಕಿ ವೈಭವ್
Rhythm of Shivappa – ಸಂಗೀತ : ಅನೂಪ್ ಸೀಳಿನ್
ಗ್ರಹಣ ( ಬೈರಾಗಿ) – ಸಂಗೀತ :ಅನೂಪ್ ಸೀಳಿನ್
what a lyfu – ಅಜನೀಶ್ ಲೋಕನಾಥ್
ದೂರ ಹೋಗೋ ಮುನ್ನ – ಸಂಗೀತ : ಶ್ರೀಧರ್ ಸಂಭ್ರಮ್
ನೀನೇನಾ ಸತ್ಯಾನಾ – ಸಂಗೀತ : ಜುಡಾ ಸ್ಯಾಂಡಿ
ಮುದ್ದಾದ ಮೂತಿ – ಸಂಗೀತ : ಅನೂಪ್ ಸೀಳಿನ್
ಸಿಂಗಾರ ಸಿರಿಯೆ – ಸಂಗೀತ : ಅಜನೀಶ್ ಲೋಕನಾಥ್
ಇಲ್ಲಿ ಉಲ್ಲೇಖಿಸಿರುವ ಪ್ರತೀ ಹಾಡಿನಲ್ಲೂ ತಾಜಾತನ ಇದೆ. ಒಂದೊಂದು ಹಾಡು ರಚನೆಯ ಹಿಂದೆ ಹತ್ತಿಪ್ಪತ್ತು ಬಾರಿ ಬರೆದು ಇಷ್ಟವಾಗದೇ ಎಸೆದ ಹಾಳೆಗಳಿವೆ. ಸಮಯ ಸಿಕ್ಕಾಗ ಕೇಳಿ.. ಅವರ ಕೆಲವು ಚಂದದ ಸಾಲುಗಳು ಹೀಗಿವೆ ನೋಡಿ
* ಬೀಸೋ ಗಾಳಿ ತಾಗಿ ಮುಂಗುರುಳು ಕೆಳಗೆ ಇಳಿದು
ಎಷ್ಟು ಚಂದ ಕಾಣುತಾಳೆ ಹ್ಯಾಂಗೆ ಹೇಳಲಿ ?
* ಜೊತೆ ಇರೋ ಜನ ಸಾವಿರ
ಜೊತೆ ಬರೋ ಜನಕೆ ಬರ
* ಭಾವಗಳ ಬೀಸಣಿಗೆ ಬೀಸೋ ಮಾಯಾವಿ ನೀನು
ನಿನ್ನುಸಿರ ಧ್ಯಾನಿಸುವ ತೀರಾ ಸಾಮಾನ್ಯ ನಾನು
* ಬಾವಿಯ ಮುಂದೆ ಬಾಯಾರಿ ನಿಂತು ಕಾಯೋದ್ಯಾಕೆ ?
ಗರ್ನಲ್ ಜೊತೆ ಬೆಂಕಿ ಕಿಡಿ ಸೇರ್ಲೆ ಬೇಕೇ ?
* ಯಾರ ನೋವಿನಲ್ಲೊ ಪಾಲುದಾರನಾಗಿ ದೇವರಾಗಿ ಒಮ್ಮೆ ನೋಡು
ಕಷ್ಟ ನಷ್ಟ ಎಲ್ಲ ಬಾಡಿಗೆಯ ನೋವು ಖುಷಿಯಲೆ ಪರದಾಡು
* ಕನಸಿನ ಮರಣಕೆ ಮುಗಿಯದ ಸೂತಕ ಉಸಿರಿನ ಸಂಕಟ ಹೀನಾಯ
ನಲುಮೆಯ ಇರುಳಿಗೆ ಚಂದ್ರನೆ ಘಾತುಕ ಸಹಿಸಲಿ ಹೇಗೆ ನಾ ಅನ್ಯಾಯ ?
* ವಿಷಾದವೇನು ಇನ್ನಿಲ್ಲ ಈ ನನ್ನ ಪಾಲಿಗೆ
ಸಂಪೂರ್ಣವಾಗಿ ಸೋತಂತೆ ನಾನೀಗ ಸೋಲಿಗೆ
* ಸಿಂಗಾರ ಸಿರಿಯೆ
ಅಂಗಾಲಿನಲೆ ಬಂಗಾರ ಅಗೆವ ಮಾಯೆ
ಗಾಂಧಾರಿಯಂತೆ ಕಣ್ಮುಚ್ಚಿ
ಹೊಂಗನಸ ಅರಸೊ ಛಾಯೆ
ದೇಶದ ಅತಿ ದೊಡ್ಡ ಸಂಗೀತ ರಿಯಾಲಿಟಿ ಶೋ Indian Idol ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಕನ್ನಡಿಗ ಗಾಯಕ Nihal Tauro ಹಾಡಿರುವ, ಯುವ ಸಂಗೀತ ನಿರ್ದೇಶಕ ಕಾರ್ಕಳದ ಸುನಾದ ಗೌತಮ್ ಸಂಗೀತ ಸಂಯೋಜಿಸಿದ ಪ್ರಮೋದ್ ಸಾಹಿತ್ಯ ಇರುವ ‘ನನ್ನರಸಿ ರಾಧೆ’ ಧಾರಾವಾಹಿಯ ಶೀರ್ಷಿಕೆ ಗೀತೆ ನನಗೆ ಬಲು ಪ್ರಿಯವಾದದ್ದು.. ಆ ಹಾಡು ಹೀಗಿದೆ..
ನನಗೂನು ನಿನಗೂನು ಅರಿವೇನೆ ಆಗದೆ
ಹಗುರಾದ ಒಲವೊಂದು ಶುರುವಾಗಿದೆ
ಜತೆಯಾಗಿ ನಡೆವಾಗ ಹೊಸ ದಾರಿ ಮೂಡಿದೆ
ಜಗವೆಲ್ಲ ನಮಗಾಗೆ ಬದಲಾಗಿದೆ
ಉಸಿರಿನ ಹಾಡಿಗೆ ನೀ ಜೀವಾಳ ಜೀವಾಳವೆ
ಕನಸಿನ ನಾಳೆಗೆ ಹೊಸ ರೂಪನೆ ನೀನಲ್ಲವೇ
ರಾಧೆ .. ರಾಧೆ.. ನನ್ನರಸಿ ರಾಧೆ
(ಈ ಹಾಡನ್ನು Ola Cabನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಕೇವಲ 20 ನಿಮಿಷದಲ್ಲಿ ಬರೆದಿದ್ದು ಎಂದು ಒಮ್ಮೆ ನನ್ನಲ್ಲಿ ಹೇಳಿದ ನೆನಪು)
ಸಿನಿಮಾ ಗೀತೆಗಳ ಜೊತೆಗಿನ ಅವರ ಪಯಣ ಕೇವಲ 5 ವರ್ಷದ್ದು. ಆದರೆ ಮೂಡಿಸಿದ ಭರವಸೆ ಮಾತ್ರ ದೊಡ್ಡದು. ಅವರ ಲೇಖನಿಯಿಂದ ಹೊಮ್ಮಬೇಕಾದ ಸ್ಫೂರ್ತಿ ಸಾಲುಗಳು ಇನ್ನೂ ಸಾಕಷ್ಟಿವೆ. ಸದ್ಯ 120 ಸಿನಿಮಾ ಗೀತೆಗಳ ಜೊತೆ 50 ಕ್ಕೂ ಹೆಚ್ಚು ಧಾರವಾಹಿ ಶೀರ್ಷಿಕೆ ಗೀತೆಗಳು ಅವರ ಜೋಳಿಗೆಯಲ್ಲಿವೆ. ಸಿಂಗಾರ ಸಿರಿಯೆ ಹಾಡಿನ ಯಶಸ್ಸು ನಿಮಗೆ ಮತ್ತಷ್ಟು ಅವಕಾಶ ಒದಗಿಸಲಿ ಎನ್ನುವ ಹಾರೈಕೆಯೊಂದಿಗೆ…
Way to go…
ಹೇಳಲು ಹೋದರೆ ಸಾವಿರ ಮಾತಿದೆ..
[…] […]