Home Thoughts ನಾಗಾರಾಧನೆ ಅಂದ್ರೆ ನಿಸರ್ಗಾರಾಧನೆ – ಉರಗತಜ್ಞ ಗುರುರಾಜ ಸನಿಲ್

ನಾಗಾರಾಧನೆ ಅಂದ್ರೆ ನಿಸರ್ಗಾರಾಧನೆ – ಉರಗತಜ್ಞ ಗುರುರಾಜ ಸನಿಲ್

0

ಗುರುರಾಜ ಸನಿಲ್. ಈ ನಾಡಿನ ಶ್ರೇಷ್ಠ ಉರಗ ತಜ್ಞರಲ್ಲೊಬ್ಬರು. ಆತ್ಮೀಯತೆಯಿಂದ ನಾನಿವರನ್ನು ‘ ಅಣ್ಣ’ ಎಂದೇ ಕರೆಯುತ್ತೇನೆ. 2012ರವರೆಗೆ ನಾಗಾರಾಧನೆ ಕುರಿತು ನನಗಿದ್ದ ಕಲ್ಪನೆಯನ್ನು ಬದಲಿಸಿದ್ದು ಅವರ ಈ 2 ಕೃತಿಗಳು.

ನಾಗಾರಾಧನೆ ಅಂದ್ರೆ ಅಕ್ಷರಶಃ ನಿಸರ್ಗಾರಾಧನೆ. ಅವರೊಂದಿಗೆ ಅದೆಷ್ಟೋ ಪುರಾತನ ನಾಗಬನಗಳಿಗೆ ಹೋಗಿದ್ದು, ಅಲ್ಲಿನ ಆಚರಣೆಗಳ ಕುರಿತು ತಿಳಿದಿದ್ದು ಸೇರಿದಂತೆ ಹಲವು ಸಂಗತಿಗಳನ್ನು ಮುಂದೊಮ್ಮೆ ದಾಖಲಿಸುತ್ತೇನೆ. ‘ ನಾಗಬೀದಿಯೊಳಗಿಂದ’ ಎನ್ನುವ ಕೃತಿ ಒಂದು ಕುತೂಹಲಕಾರಿ ಸಿನಿಮಾ ಕಂಡಂತೆ ಭಾಸವಾಗುತ್ತದೆ. ಅವಕಾಶ ಸಿಕ್ಕರೆ ಈ ಎರಡೂ ಕೃತಿಗಳನ್ನು ಓದಿ. ಈ ವಿಶೇಷ ದಿನದಂದು ಅವರ ಲೇಖನಒಂದನ್ನು ಪ್ರಕಟಿಸುತ್ತಿದ್ದೇನೆ. ನಾಗರಪಂಚಮಿ ನಾಡಿಗೆ ದೊಡ್ಡದು.ಹಬ್ಬದ ಶುಭಾಶಯಗಳು.


ನಾಗಾರಾಧನೆ ಒಂದು ಒಳನೋಟ.

ನಾಗಾರಾಧನೆ ಭಾರತದಾದ್ಯಂತ ಹಾಗೂ ವಿಶ್ವದ ಅನೇಕ ಕಡೆಗಳಲ್ಲಿ ನಡೆಯುವ ಒಂದು ವಿಶೇಷ ಧಾರ್ಮಿಕಾಚರಣೆ. ಆಯಾಯ ದೇಶ, ರಾಜ್ಯ, ಜಿಲ್ಲೆಗಳಲ್ಲಿ ಅವರವರು ಕಂಡುಕೊಂಡ ಆರಾಧನಾ ವಿಧಾನಗಳಿಂದ ಇದು ನಿರಂತರ ನಡೆದು ಬಂದಿದೆ. ಭಾರತವನ್ನು ಹೊರತುಪಡಿಸಿ ಇತರ ಹೆಚ್ಚಿನ ದೇಶ, ರಾಜ್ಯಗಳಲ್ಲಿ ಈ ಆಚರಣೆಗೆ ಮಾತ್ರವೇ ಮಹತ್ವವಿದ್ದು, ವಿಜೃಂಭಣೆಯಿಂದ ಆಚರಿಸಲಾಗುತ್ತಿದೆಯಾದರೂ ಈ ಉಪಾಸನೆಗೆ ಜೀವಂತ ಪ್ರತೀಕವಾದ ನಾಗರಹಾವುಗಳನ್ನು ಮಾತ್ರ ನಾನಾ ಕಾರಣಗಳಿಂದ ನಾಶ ಮಾಡುತ್ತಿರುವುದೂ ಕಂಡುಬರುತ್ತದೆ. ಆದರೆ ನಮ್ಮ ಕರಾವಳಿಜಿಲ್ಲೆಗಳಲ್ಲಿ, ನಾಗನೆಂಬ ಶಕ್ತಿಯ ಮೇಲಿನ ಭಯಭಕ್ತಿಯ ಜೊತೆಗೆ ಅದರ ಪ್ರತಿರೂಪವೆನಿಸಿದ ನಾಗರಹಾವನ್ನೂ ಅಷ್ಟೇ ಪ್ರೀತಿ, ಭಕ್ತಿಯಿಂದ ಉಪಾಸಿಸುತ್ತ ಬಂದಿರುವುದು ನಮ್ಮ ಜನರ ವಿಶೇಷತೆಯೆಂದರೆ ಅತಿಶಯೋಕ್ತಿಯಲ್ಲ.

ನಮ್ಮ ಪುರಾತನರ ನಾಗಾರಾಧನೆಯ ಮೂಲ ಆಶಯವೇ ಪೂರ್ಣ ಪ್ರಮಾಣದ ಪ್ರಕೃತಿಯಾರಾಧನೆ. ಆ ಮೂಲಕ ಸ್ವಸ್ಥ ಸಮಾಜದ ಕನಸು ಎಂಬುದು ಈ ಆಚರಣೆಯನ್ನೂ, ಆರಾಧನೆಗೊಳ್ಳುವ ಹಾವಿನ ಜೀವನವನ್ನೂ ಮತ್ತದಕ್ಕೆ ಮೀಸಲಿಟ್ಟ ಹಸಿರು ಪ್ರದೇಶಗಳನ್ನೂ ಸೂಕ್ಷ್ಮವಾಗಿ ಅವಲೋಕಿಸಿದರೆ ತಿಳಿಯಬಹುದು. ನಮ್ಮ ಪೂರ್ವಿಕರು ತಮ್ಮ ಜೀವನಶೈಲಿಯೊಳಗೆ ನಿಖರವಾಗಿ ಕಂಡುಕೊಂಡ ಸತ್ಯದ ಮೇಲಿನ ಕೆಲವು ನಿರ್ದಿಷ್ಟ ನಂಬಿಕೆಗಳಿಂದಲೇ ಇಂಥ ಉಪಾಸನೆಗಳನ್ನು ಚಾಲ್ತಿಗೆ ತಂದರು ಎಂಬುದನ್ನು ನಮ್ಮ ಅನೇಕ ಆರಾಧನಾ ಪದ್ಧತಿಗಳು ವಿಶದಪಡಿಸುತ್ತವೆ. ಹೀಗಾಗಿಯೇ ನಮ್ಮಲ್ಲಿ ವಿವಿಧ ಪ್ರಾಕೃತಿಕ ಶಕ್ತಿಗಳ ಉಪಾಸನೆಗಳು ಆರಂಭಗೊಂಡವು ಹಾಗೂ ಮೊಟ್ಟಮೊದಲಿಗೆ ದೈವತ್ವವನ್ನು ಪಡೆದ ಜೀವಿ, ನಾಗ! ಅಂದರೆ ನಾಗರಹಾವಿನ, ‘ಸುಪ್ತಚೈತನ್ಯ’ ಎಂಬುದು ಅನೇಕ ಸಂಶೋಧಕರ ಅಭಿಪ್ರಾಯ.

ಶ್ರೀಮದ್ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು, ‘ಯಾವ ಯಾವ ಭಕ್ತರು ಯಾವ ಯಾವ ದೇವತೆಯ ಸ್ವರೂಪವನ್ನು ಶ್ರದ್ಧೆಯಿಂದ ಪೂಜಿಸಲು ಬಯಸುತ್ತಾರೋ ಆಯಾ ಭಕ್ತನ ಶ್ರದ್ಧೆಯನ್ನು ನಾನು ಅದೇ ದೇವತೆಯ ಕುರಿತು ಸ್ಥಿರಗೊಳಿಸುತ್ತೇನೆ! (ಅ: 7, ಶ್ಲೋಕ: 21)’ ಎಂದಿರುವುದೂ ನಮ್ಮ ವಿವಿಧ ದೇವತಾರಾಧನೆಯ ಅರ್ಥವನ್ನು ಸಮರ್ಥಿಸುತ್ತದೆ. ಅಧ್ಯಾತ್ಮ ವಲಯದಲ್ಲೂ ನಾಗರಹಾವನ್ನು ಕುಂಡಲಿನೀಶಕ್ತಿಯ ಪ್ರತೀಕವೆಂದು ನಂಬಲಾಗಿದೆ. ನಮ್ಮ ಇತರ ಸನಾತನ ಶಾಸ್ತ್ರಗ್ರಂಥಗಳು ಕೂಡಾ ಅನಾದಿಯಿಂದ ವಿವಿಧ ಆಚರಣೆ, ಪೂಜೆಗಳ ಮೂಲಕ ನಮಗೆ ಬೋಧಿಸುತ್ತ ಬಂದಿರುವುದು, ‘ಪರಮಾತ್ಮನ ಅಂಶಗಳಾದ ನಾವು ಅವನ ಯಾವುದೋ ಸದುದ್ದೇಶಕ್ಕೆ ಈ ಜಗತ್ತಿಗೆ ಬಂದಿದ್ದೇವೆ. ಆದ್ದರಿಂದ ತಮತಮಗೆ ಇಷ್ಟವಾದ ಧರ್ಮಾಚರಣೆಗಳನ್ನು ಭಕ್ತಿ, ಶ್ರದ್ಧೆಯಿಂದ ಆಚರಿಸುತ್ತ ಮನಸ್ಸು, ಹೃದಯಗಳನ್ನು ಪರಿಶುದ್ಧಗೊಳಿಸುತ್ತ ಜನನ ಮರಣ ಚಕ್ರದಿಂದ ಪಾರಾಗಿ ಮರಳಿ ಆ ಪರಮತತ್ತ್ವದೊಡನೆ ಐಕ್ಯವಾಗಲೆಂದೇ!’ ಎಂಬುದು. ಈ ಸತ್ಯವು ನಮ್ಮ ಯಾವ ಪುರಾಣಗ್ರಂಥಗಳನ್ನು ಓದಿದರೂ ವೇದ್ಯವಾಗುತ್ತದೆ.

ಆದರೆ ಇತ್ತ ನಿತ್ಯ ವಾಸ್ತವದತ್ತ ಒಳನೋಟ ಹರಿಸಿದರೆ, ಅನಾದಿಯಿಂದ ನಮ್ಮಿಂದ ಆರಾಧನೆಗೊಳ್ಳುತ್ತ ಬಂದಿರುವ ನಾಗರಹಾವು ಮತ್ತಿತರ ಮುಗ್ಧಜೀವರಾಶಿಗಳ ಬದುಕು, ಅವುಗಳ ಸಮೃದ್ಧ ನೆಲೆಗಳಾದ ನಾಗಬನ, ದೇವರಕಾಡುಗಳಂಥ ತಾಣಗಳಿಂದು ನಮ್ಮದೇ ಕೆಲವು ಅಂಧಾಚರಣೆಗಳಿಂದ ಕಾಂಕ್ರೀಟೀಕರಣಗೊಂಡು ನಾಶವಾಗುತ್ತಿರುವುದು ಆಧುನಿಕರು ಎಂದೆನ್ನಿಸಿಕೊಂಡ ನಮ್ಮದೇ ಅರಿವಿನ ಕೊರತೆ ಎನ್ನದೆ ವಿಧಿಯಿಲ್ಲ. ಹಾಗಾಗಿ ಇಂದಿನ ಈ ಶುಭದಿನದಿಂದಲೇ ಎಲ್ಲರೂ ಸಾಧ್ಯವಾದಷ್ಟು ನಾಗಬನ, ದೇವರಕಾಡುಗಳಂಥ ಹಸಿರು ಪ್ರದೇಶಗಳನ್ನು ಸಂರಕ್ಷಿಸೋಣ. ಆ ಮೂಲಕ ದೇವರು ಎಂದು ನಾವು ಆರಾಧಿಸುವ ಮಹಾನ್ ಶಕ್ತಿಯೊಂದರ ಅಂಶವಾದ ನಾಗನ ಅನುಗ್ರಹಕ್ಕೆ ಪಾತ್ರರಾಗೋಣ ಎನ್ನುತ್ತ, ಸರ್ವರಿಗೂ ನಾಗರಪಂಚಮಿಯ ಶುಭಾಶಯಗಳು.

ಗುರುರಾಜ್ ಸನಿಲ್, ಉಡುಪಿ
9845083869


 

LEAVE A REPLY

Please enter your comment!
Please enter your name here