
ಹಲವು ವರ್ಷಗಳಿಂದ ವಾರದಲ್ಲೊಂದು ದಿನ ರಥಬೀದಿಗೆ ಸುತ್ತು ಹಾಕುವುದು ನನಗೆ ರೂಢಿಯಾಗಿ ಬಿಟ್ಟಿದೆ. ‘ಏಕಾಂಗಿಯಾಗಿ ಹೊರಡು ಯಾರಾದರೂ ಸಿಕ್ಕಾರು’ ಅನ್ನೋ ಮಾತಿನಂತೆ ನಾನು ಒಬ್ಬನೇ ಹೋದಾಗೆಲ್ಲ ಯಾರಾದರೊಬ್ಬರು ಮಾತನಾಡಲು ಸಿಕ್ಕಿದ್ದು ವಿಶೇಷ. ಹಾಗೆ ನಿನ್ನೆಯ ನನ್ನ ನಡಿಗೆಗೆ ಜೊತೆಯಾಗಿದ್ದು ಲೆಕ್ಕ ಪರಿಶೋಧಕ ಗೆಳೆಯ ಗಣೇಶ. ಆಡಿಟ್, ಬ್ಯಾಂಕು ಅಂತೆಲ್ಲ ಮಾತನಾಡುವಾಗ ನಮ್ಮ ಮಾತಲ್ಲಿ ಆಗಾಗ ಬಂದಿದ್ದು ಕಾರ್ಪೋರೇಶನ್ ಬ್ಯಾಂಕ್ ಸಂಸ್ಥಾಪಕ, ದಾನಶೂರ ಕರ್ಣ, ಖಾನ್ ಬಹಾದ್ದೂರ್ ಹಾಜಿ ಅಬ್ದುಲ್ಲಾ ಸಾಹೇಬರು.
ಇವತ್ತು ಆಗಸ್ಟ್ 12 . ಹಾಜಿ ಅಬ್ದುಲ್ಲಾ ಸಾಹೇಬರು ಇಹಲೋಕ ತ್ಯಜಿಸಿದ ದಿನ. ಅವರ ನೆನಪು ಉಡುಪಿ ಜನತೆಗೆ ಪ್ರಾಯಶಃ ಆಗಲಿಕ್ಕಿಲ್ಲ. ಉಡುಪಿಯ ಕೆಲವು ಹಳೆ ಕಟ್ಟಡಗಳು, ತುಕ್ಕು ಹಿಡಿದ ಬೋರ್ಡುಗಳು ಅವರ ಹೆಸರು ಹೇಳುತ್ತವೆ. ಮಾರ್ಚ್ 12 ನೇ ತಾರೀಕಿಗೆ ಅವರು The Canara Banking Corporation Udupi Ltd ಹೆಸರಿನಲ್ಲಿ ಬ್ಯಾಂಕ್ ಸ್ಥಾಪಿಸಿ 117 ವರ್ಷಗಳು ಕಳೆದವು. ಅದೇ ಮುಂದೆ ಕಾರ್ಪೋರೇಶನ್ ಬ್ಯಾಂಕ್ ಎಂದು ಹೆಸರು ಬದಲಿಸಿಕೊಂಡು ಇಂದು union ಬ್ಯಾಂಕ್ ಆಗಿ ಮುಂಭಡ್ತಿ ಪಡೆದಿದೆ.
ಈವರೆಗೆ ‘ಲಕ್ಷಾಂತರ’ ಮಂದಿಗೆ ಉದ್ಯೋಗ , ಅನುಕೂಲ ಕಲ್ಪಿಸಿದ ಆ ಮಹಾನುಭಾವನನ್ನು ನಾವು ನೆನಪಿಸದಿದ್ದರೆ ಹೇಗೆ ?
ಆ ದಿನಗಳಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿತ್ತು. ಉಡುಪಿಯಲ್ಲಿ ಆಗಿನ ಜನಸಂಖ್ಯೆ 7000 ಕ್ಕಿಂತಲೂ ಕಡಿಮೆ. ರಾಜ್ಯದಲ್ಲಿ ಹುಟ್ಟಿದ 72 ಬ್ಯಾಂಕುಗಳಲ್ಲಿ 22 ಆಗಿನ ಸೌತ್ ಕೆನರಾ ಜಿಲ್ಲೆಯಲ್ಲಿ ಆರಂಭವಾದ ಕಾರಣ ಜಿಲ್ಲೆಯನ್ನು ‘ ಬ್ಯಾಂಕುಗಳ ತೊಟ್ಟಿಲು’ ಎಂದೇ ಕರೆಯುತ್ತಾರೆ. ಒಬ್ಬ ಮನೆಕೆಲಸದವನಿಂದ ಪ್ರತಿಯೊಬ್ಬರಲ್ಲೂ ಮಿತವ್ಯಯ, ಉಳಿತಾಯ , ರಾಷ್ಟ್ರದ ಆರ್ಥಿಕ ಪ್ರಗತಿಗೆ ಪ್ರೋತ್ಸಾಹಿಸುವುದು ಸಂಸ್ಥೆ ಮತ್ತು ಸಾಹೇಬರ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿತ್ತು. ನನ್ನ ಪರಿಚಯಸ್ಥರಿಬ್ಬರು ಇದೇ ಬ್ಯಾಂಕ್ ನಲ್ಲಿ ಸಾಲ ಪಡೆದು ಇಂದು ಬಹುದೊಡ್ಡ ಉದ್ಯಮಿಗಳಾಗಿದ್ದಾರೆ. ಇಂತಹ ಹಲವು ಉದಾಹರಣೆ ಅಲ್ಲಲ್ಲಿ ಕಾಣ ಸಿಗುತ್ತದೆ.
ಬ್ಯಾಂಕ್ ಜನನದ ಹಿಂದಿನ ಕತೆ ಸ್ವಲ್ಪ ದೊಡ್ಡದೇ ಇದೆ.ಅದನ್ನು ನಾವು ಸ್ನೇಹಿತರು ಸೇರಿ ನಿರ್ಮಿಸಿದ ಹಾಜಿ ಅಬ್ದುಲ್ಲಾ ಸಾಹೇಬರ ಕುರಿತ ‘ ಔದಾರ್ಯದ ಉರುಳಲ್ಲಿ’ ಎಂಬ ಸಾಕ್ಷ್ಯಚಿತ್ರದಲ್ಲಿ ತಿಳಿಯಬಹುದು.
ಇಲ್ಲಿ ಮಹತ್ವದ ಸಂಗತಿಯೊಂದನ್ನು ನಿಮಗೆ ತಿಳಿಸಬೇಕು.

ಕೃಷ್ಣಾಪುರ ಸ್ವಾಮೀಜಿ ಪರ್ಯಾಯ ಪೀಠಾಧಿಪತಿಗಳಾಗಿ ಸುಮಾರು 6 ತಿಂಗಳು ಕಳೆದವು. ಕೃಷ್ಣಾಪುರ ಮಠ ಮತ್ತು ಕೃಷ್ಣ ಮಠದಲ್ಲಿರುವ ಚಿನ್ನದ ಪಲ್ಲಕ್ಕಿಗೆ ಒಂದು ವಿಶೇಷ ನಂಟಿದೆ. ಇದನ್ನು ನಾನು ಹಿರಿಯ ಸಾಹಿತಿಗಳು, ಅಧ್ಯಾಪಕರು, ವಿಮರ್ಶಕರೂ ಆದ ಮುರಳೀಧರ ಉಪಾಧ್ಯ ಮತ್ತು ಚುಟುಕು ಬ್ರಹ್ಮ ಡುಂಡಿರಾಜ್ ಅವರ ‘ ಹಾಜಿ ಅಬ್ದುಲ್ಲಾ ಸಾಹೇಬ್’ ಕೃತಿಯಲ್ಲಿ ಓದಿದ ನೆನಪು. ಅದೇನಂದ್ರೆ .. ಆಗಿನ ಕೃಷ್ಣಾಪುರ ಸ್ವಾಮೀಜಿಗಳು ಚಿನ್ನದ ಪಲ್ಲಕ್ಕಿಯನ್ನು ನಿರ್ಮಿಸುವ ಸಂಕಲ್ಪ ತೊಟ್ಟರು. ಈ ವಿಚಾರವನ್ನು ಅವರು ಮಠದ ದಿವಾನರ ಮೂಲಕ ಸಾಹೇಬರಿಗೆ ತಿಳಿಸಿದರು. ಅವರು ತಡಮಾಡದೆ ಒಂದು ಸೇರು ಚಿನ್ನದ ಪವನುಗಳನ್ನು ಇದಕ್ಕಾಗಿ ನೀಡಿದರಂತೆ !! ಈ ವಿಷಯವನ್ನು ಲೇಖಕ ಮೇಷ್ಟ್ರಿಗೆ ಪಲ್ಲಕ್ಕಿ ನಿರ್ಮಿಸಿದ ಶಿಲ್ಪಿಯ ದೊಡ್ಡಮ್ಮ ತಿಳಿಸಿದ್ದರಂತೆ.
ಸದ್ಯ ನಾನು ಕರ್ತವ್ಯ ನಿರ್ವಹಿಸುವ ಸಂಸ್ಥೆಯ 3 ನೇ ಮಹಡಿಯಲ್ಲಿ ಹರೀಶ್ ಭಟ್ ಅಂತೊಬ್ಬರಿದ್ದಾರೆ. ಈ ಪಲ್ಲಕ್ಕಿಯನ್ನು ಹೊರುವುದು ಅವರ ಅಜ್ಜನ ಕಾಲದಿಂದ ನಡೆದುಕೊಂಡು ಬಂದು ಈಗ ಇವರೂ ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಭಟ್ಟರ ಪ್ರಕಾರ ಈ ಪಲ್ಲಕ್ಕಿ ನಿರ್ಮಾಣ ಆದದ್ದು 1918ರಲ್ಲಿ. ಅಂದ್ರೆ ಈಗದಕ್ಕೆ 103 ವರ್ಷಗಳು ! 28 ಕೆ.ಜಿ ಚಿನ್ನದಿಂದ ತಯಾರಾಗಿರುವ ಈ ಪಲ್ಲಕ್ಕಿಯಲ್ಲಿ ಶ್ರೀಕೃಷ್ಣ, ಮುಖ್ಯಪ್ರಾಣ ಮತ್ತು ಅಷ್ಟ ಮಠಗಳ ಪಟ್ಟದ ದೇವರನ್ನು ಹೊತ್ತು ತರಲಾಗುತ್ತದೆ. ಇದು ಭಟ್ಟರ ಕುಟುಂಬಕ್ಕೆ ದಕ್ಕಿದ ಪುಣ್ಯ ಎಂದೇ ಭಾವಿಸುತ್ತೇನೆ. ಆಕರ್ಷಕ ಕುಸುರಿ ಕೆತ್ತನೆಯಿಂದ ತಯಾರಾದ ದೇಶದಲ್ಲೇ ಅಪರೂಪ ಎನಿಸುವ ಈ ಪಲ್ಲಕ್ಕಿಯ ದಾನಿಗಳಲ್ಲಿ ಮುಂಚೂಣಿಯಲ್ಲಿ ಕಾಣ ಸಿಗುವವರು ಹಾಜಿ ಅಬ್ದುಲ್ಲಾ ಸಾಹೇಬರು. !
ಸಾಹೇಬರ ಕುರಿತ ಇತರ ಪ್ರಮುಖ ವಿಷಯಗಳು
* ಅವರು ಆಗರ್ಭ ಶ್ರೀಮಂತರಾಗಿದ್ದರು. ವಿನಯತೆ , ಔದಾರ್ಯತೆಯಿಂದಲೇ ಎಲ್ಲರ ಪ್ರೀತಿ ಸಂಪಾದಿಸಿದ್ದರು
* ಸಹಾಯಕ್ಕಾಗಿ ಬಂದವರಿಗೆ ಬರಿಗೈಲಿ ಕಳಿಸಿದ ಉದಾಹರಣೆಗಳೇ ಇಲ್ಲ !
* ಪ್ರತಿದಿನ ಅವರ ಮನೆ ಮುಂದೆ ಅಕ್ಕಿ, ಧಾನ್ಯಗಳಿಗೆ ಜನರು ಸಾಲುಗಟ್ಟಿ ನಿಲ್ಲುತ್ತಿದ್ದರು. ಸಾಹೇಬರು ಬಂದು ಮೊದಲು ನಿಂತವರಿಗೆ ತಮ್ಮ ಕೈಯಿಂದ ದಾನ ನೀಡಿ ತೆರಳುತ್ತಿದ್ದರು. ನಂತರ ಎಲ್ಲರಿಗೂ ಬೇಕಾದದ್ದನ್ನು ಹಂಚುವ ಜವಾಬ್ದಾರಿ ಆಳುಗಳಿಗೆ ವಹಿಸುತ್ತಿದ್ದರು.
* ಜನರು ಅವರ ಮನೆ ಮುಂದೆ ನಡೆದುಕೊಂಡು ಹೋಗುವಾಗ ಚಪ್ಪಲಿಯನ್ನು ತೆಗೆದು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದರಂತೆ!
* ಉಡುಪಿಗೆ ಬಂದಮೊದಲ ಕಾರು ಸಾಹೇಬರದ್ದಾಗಿತ್ತು!
* ಪ್ರತೀ ದಿನ ಕನಕನ ಕಿಂಡಿಯಿಂದ ಕೃಷ್ಣನನ್ನು ಕಾಣುತ್ತಿದ್ದರು.ಅವನೆಂದರೆ ಅವರಿಗೆ ಪ್ರಿಯ
* ಕೃಷ್ಣ ಮಠದಲ್ಲಿ ಅವರಿಗೆ ಜೀಟಿಗೆ ಸಹಿತ ಗೌರವವಿತ್ತು
* ಪರ್ಯಾಯ ಸಂದರ್ಭ ಅವರಿಗೆ ಆಮಂತ್ರಣ ಪತ್ರಿಕೆ ನೀಡಲು ಮಠದಿಂದ ಹೊರಡುವುದು ಒಂದು ಸಂಭ್ರಮವಾಗಿತ್ತಂತೆ
* ಅವರು ಸ್ಥಾಪಿಸಿದ ನಾರ್ತ್ ಶಾಲೆಗೆ 100 ವರ್ಷದ ಇತಿಹಾಸವಿದೆ.
* ಉಡುಪಿ ನಗರಸಭೆಯ ಮೊದಲ ಅಧ್ಯಕ್ಷರು ಹಾಜಿ ಸಾಹೇಬರು.ಅವರು ಕೂರುತ್ತಿದ್ದ ಕುರ್ಚಿ ಇಂದಿಗೂ ಅಲ್ಲಿದೆ. ತಿಂಗಳ ಸಭೆಯನ್ನು ಅಧ್ಯಕ್ಷರು ಅದರಲ್ಲೇ ಕುಳಿತು ನಿರ್ವಹಿಸುತ್ತಾರೆ ಎಂದು ಕೇಳಿದ್ದೇನೆ.
* ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಸಾಹೇಬರ ಹೆಸರಲ್ಲಿ ಈಗ ಕಾರ್ಯಾಚರಿಸುತ್ತಿರುವ ಆಸ್ಪತ್ರೆ ಜಾಗದ ದಾನಿ ಇವರೇ ಆಗಿದ್ದಾರೆ
* ಉಡುಪಿ ‘ಆಭರಣ’ ಮುಂಭಾಗ ಇರುವ Heritage ಕಾಯಿನ್ Museum ಸಾಹೇಬರ ಮನೆಯಾಗಿದೆ! ಆ ಮನೆಯಲ್ಲಿ ಬಳಸಲಾದ Tiles ಗಳನ್ನು 100 ವರ್ಷಗಳ ಹಿಂದೆಯೇ ವಿದೇಶದಿಂದ ಆಮದು ಮಾಡಲಾಗಿತ್ತು
* ಒಮ್ಮೆ ಲಕ್ಷದೀಪ ಸಂದರ್ಭ ದೀಪ ಉರಿಸಲು ಎಣ್ಣೆ ಅಭಾವವಾದ ಕಾರಣ ಸಾಹೇಬರು ಅದನ್ನು ಒದಗಿಸಿದ್ದರು ಎನ್ನುವುದು ಐತಿಹ್ಯ
* ದಾನ ಎನ್ನುವ ಪದ ಪ್ರಾಯಶಃ ಹುಟ್ಟಿದ್ದೇ ಅವರಿಂದಿರಬೇಕೆಂದು ಕಾರ್ಪೋರೇಶನ್ ಬ್ಯಾಂಕ್ ನ ನಿವೃತ್ತ ಅಧಿಕಾರಿಯೊಬ್ಬರು ನಮ್ಮ ಸಾಕ್ಷ್ಯಚಿತ್ರದಲ್ಲಿ ಹೇಳಿದ್ದಾರೆ.
![]() | ![]() | ![]() |
ಇಂತಹ ಅದೆಷ್ಟೋ ವಿಚಾರಗಳ್ಳನ್ನು ಪಟ್ಟಿ ಮಾಡಬಹುದು. ಅವರ ದೇಹಾಂತ್ಯವಾದ ದಿನದಂದು ಜಾತಿ ಮತ ಮೀರಿ ಸಾಗರೋಪಾದಿಯಲ್ಲಿ ಬಂದ ಪ್ರತಿಯೊಬ್ಬರಿಗೂ ಅವರ ಕಳೇಬರಕ್ಕೆ ಹೆಗಲು ಕೊಡಬೇಕು ಅನ್ನೋ ಇಂಗಿತವಿತ್ತಂತೆ. ನಂತರ ಅವರನ್ನು ಮಲಗಿಸಿದ ಪೆಟ್ಟಿಗೆಗೆ ಉದ್ದದ ಬಿದಿರು ಕಟ್ಟಿ ಎಲ್ಲರೂ ಅದನ್ನು ಮುಟ್ಟಿದರು ಎನ್ನುವುದು ಮತ್ತೊಂದು ಐತಿಹ್ಯವಾಗಿದೆ.
ಹೀಗೆ … ಸೌಹಾರ್ದತೆ, ಮಮತೆ, ದಾನ, ಧರ್ಮ, ಪ್ರೀತಿ, ರಾಜಕೀಯ ಈ ಎಲ್ಲಾ ಪದಗಳಿಗೆ ಅನ್ವರ್ಥದಂತೆ ಬದುಕಿದವರು ಹಾಜಿ ಅಬ್ದುಲ್ಲಾ ಸಾಹೇಬರು. ನನ್ನ ಮದುವೆ ಸಂದರ್ಭ ಅವರ ಕುರಿತ 50 ಕೃತಿಗಳನ್ನು ಬಂದ ಓದುಗ ಅತಿಥಿಗಳಿಗೆ ಹಂಚಿದ್ದೆ.
ಈ ಬರಹದ ಹಿಂದಿನ ನ್ನನ್ನ ಆಶಯವೆಂದರೆ ಮಠ ಮತ್ತು ಸಾಹೇಬರ ಸಂಬಂಧ, ಕೊಡುಗೆ ಮತ್ತೆ ಮತ್ತೆ ನೆನಪಿಸುವಂತಾಗಬೇಕು. ಸಮಾಜದ ಸೌಹಾರ್ದತೆಗೆ ಇದೊಂದು ಅಪರೂಪದ ಉದಾಹರಣೆಯಾಗಬೇಕು. ಇಂದು Corporation Bankನಲ್ಲಿ ( ಈಗಿನ Union Bank ) ದುಡಿಯುತ್ತಿರುವ ಪ್ರತಿಯೊಬ್ಬರೂ ಕಾಟಾಚಾರಕ್ಕಲ್ಲದೆ ಪ್ರಾಮಾಣಿಕವಾಗಿ ಅವರನ್ನು ಕನಿಷ್ಠ ಒಂದು ದಿನವಾದರೂ ನೆನಪಿಸಿಕೊಳ್ಳಬೇಕು. ಸಾಂಸ್ಕೃತಿಕ , ಸಾಮಾಜಿಕವಾಗಿ ಆಗಾಗ ನೆನಪು ಮಾಡಿಕೊಂಡು ಅವರನ್ನು ಅಜರಾಮರವಾಗಿಸುವುದು ಉಡುಪಿ ಜನರ ಮೇಲಿರುವ ಋಣ.
ಸಾಹೇಬರೇ, ನಿಮಗೆ ನನ್ನ ಕೋಟಿ ನಮಸ್ಕಾರ..
ಹೇಳಲು ಹೋದರೆ ಸಾವಿರ ಮಾತಿದೆ..
Amazing personality! Such people are rare. Thanks for bringing it to us 😊
Thanks Shubha Shetty. Please promote this post so that it reaches millions.
So beautifully and in detail the way you have written the lifetime journey of his excellency late HAJI ABDULLAH SAHEB.
to be honest with you I don’t have words to appreciate you.
Great job Avinash.
Keep up the great work.
Thank you Arief.
Thanks for the information… Really very enlightening article..
Thank Your MrManipal.