ಸದ್ಯ ಪ್ರಚಲಿತದಲ್ಲಿರುವ Controversial Personality. ಸಮಾಜದಲ್ಲಿನ ಒಂದು ವರ್ಗ ಇವರನ್ನು ಬಲವಾಗಿ ವಿರೋಧಿಸಿ ದ್ವೇಷಿಸಿದರೆ ಇನ್ನೊಂದು ವರ್ಗ ಸ್ಫೂರ್ತಿ ಎನ್ನುವ ನೆಲೆಯಲ್ಲಿ ಸ್ವೀಕರಿಸಿದೆ. ಒಂದು ಪೋಸ್ಟ್ ಬರೆದರೆ ಸಾಕು ಕೆಲವು ಗಂಟೆಗಳಲ್ಲಿ ಸಾವಿರಗಟ್ಟಲೆ Shares ಮತ್ತು Likes ಹಾಗೆ ಸುಮ್ಮನೆ ಬಂದು ಬೀಳುತ್ತವೆ. ಅಷ್ಟರಮಟ್ಟಿಗೆ ಇವರ ಬರವಣಿಗೆ ಬಿಗಿಯಾಗಿದೆ. ಇವರನ್ನು ಹಿಂದೂ ಮುಖಂಡ, ಪ್ರಖರ ವಾಗ್ಮಿ, ದಿಕ್ಸೂಚಿ ಭಾಷಣಕಾರ, ಜಾಗರಣ ವೇದಿಕೆಯ ಪ್ರಮುಖ ಹೀಗೆ ಹಲವು ಅನ್ವರ್ಥ ನಾಮಗಳಿಂದ ಕರೆಯುತ್ತಾರೆ.
ಇವರಿಗಿರುವ ಈ ಯಾವುದೇ Tagಗಳನ್ನು ಮನಸಿನಲ್ಲಿಟ್ಟುಕೊಳ್ಳದೆ ಕೇವಲ ನನ್ನ ಮತ್ತು ಅವರ ಸ್ನೇಹದ ಕುರಿತು ಇಂದು ಹೇಳಬೇಕೆನಿಸಿದೆ. 2012ರಲ್ಲಿ ಸ್ಪಂದನ ಟಿವಿ ವಾಹಿನಿ ಆರಂಭವಾಗಿ ಸುಮಾರು 8 ತಿಂಗಳ ನಂತರ ಇವರು ಸದ್ದಿಲ್ಲದೇ ಅಲ್ಲಿ ಬಂದು ಸೇರಿಕೊಂಡರು. ನಾನಾಗಲೇ ಅಲ್ಲಿ ಕೆಲಸ ಮಾಡುತ್ತಿದ್ದೆ. ‘ತುಳುನಾಡ ಸತ್ಯೋಲು’ ಎನ್ನುವ ಶೀರ್ಷಿಕೆಯಲ್ಲಿ ಸರಣಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಯಾರೊಂದಿಗೂ ಹೆಚ್ಚು ಮಾತಿಲ್ಲ. Voice Over ಸ್ಟುಡಿಯೋ ಒಳಗಡೆ ಹೋಗಿ ಬಿಟ್ಟರೆ ಅಲ್ಲಿಂದಲೇ ಇವರ ಚಟುವಟಿಕೆಗಳು ನಡೆಯುತ್ತಿದ್ದವು. ಕೋಲಾರಾಧನೆ ಕುರಿತು ಆಸಕ್ತಿ ಇದ್ದ ಕಾರಣ ನನಗೆ ಇವರ ಪರಿಚಯ ಮತ್ತಷ್ಟು ಆಪ್ತವಾಯಿತು. ಇಲ್ಲಿಗೆ ಸೇರಿಕೊಳ್ಳುವ ಮೊದಲೇ ಶ್ರೀಕಾಂತ್‌ಗೆ ಓದು, ಮದಿಪು, ಭಾಷಣ ಇತ್ಯಾದಿಗಳು ಕರಗತವಾಗಿದ್ದವು. ಸಾಮಾಜಿಕ ಮಾಧ್ಯಮ ಅಷ್ಟೊಂದು ಚುರುಕೇ ಆಗಿರದ ಆ ದಿನಗಳಲ್ಲಿ ಅವರ ಪ್ರತಿಭೆ ಮುನ್ನೆಲೆಗೆ ಬರಲಿಲ್ಲ ಎನ್ನಬೇಕು. ಸಹೋದ್ಯೋಗಿಯ ನೆಲೆಯಲ್ಲಿ ಪ್ರತಿ ನಿತ್ಯ ನಮ್ಮ ಭೇಟಿ ನಡೆಯುತ್ತಲೇ ಇತ್ತು.
ಆಗ ಮೆಲ್ಲಗೆ ಅವರಲ್ಲಿ ಟಿವಿ ಮಾಧ್ಯಮದ ಆಸಕ್ತಿ ಹುಟ್ಟಿ ಇಲ್ಲೇ ಬದುಕು ಕಟ್ಟಿಕೊಳ್ಳೋಣ ಎನ್ನುವ ನಿರ್ಧಾರಕ್ಕೆ ಬಂದಿರಬೇಕು. ಸ್ಪಂದನ ಕಚೇರಿಯಿಂದ 100 ಮೀ ದೂರದಲ್ಲಿರುವ ನಮ್ಮೆಲ್ಲರ ನೆಚ್ಚಿನ ಗಜಾನನ ಹೋಟೆಲ್‌ವರೆಗೆ ‘ಮಾಧ್ಯಮ ಅವರ ಕೈ ಹಿಡಿಯಬಹುದೇ ?’ ಎನ್ನುವ ವಿಷಯದ ಕುರಿತು ಬಹಳ ಸುದೀರ್ಘ ಮತ್ತು ಆಳವಾಗಿ ಮಾತನಾಡುತ್ತಾ ಹೋಗಿದ್ದು ನನಗಿನ್ನೂ ನೆನಪಿದೆ.
ಅಲ್ಲಿಂದ ಇವರು ಸುದ್ದಿ ವಾಚಕ, ಸಂದರ್ಶಕ, ಚರ್ಚಾ ಕಾರ್ಯಕ್ರಮಗಳ ನಿರೂಪಕರಾಗಿ ಮುನ್ನೆಲೆಗೆ ಬಂದರು. ಪ್ರತಿ ದಿನದ ನ್ಯೂಸ್ ರೀಡಿಂಗ್, ಕೆಲವೊಮ್ಮೆ ಡಿಸ್ಕಶನ್ಸ್ ಕಾರ್ಯಕ್ರಮಗಳನ್ನು ನಾವು ಅದಲು ಬದಲು ಮಾಡಿಕೊಂಡು ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುತ್ತಿದ್ದೆವು.. ಇದೆಲ್ಲವನ್ನು ಸಲೀಸಾಗಿ ನಿಭಾಯಿಸಲು ಅವರಿಗೆ ಸಾಧ್ಯವಾಗುತ್ತಿದ್ದುದು ಅವರ ಓದಿನಿಂದ. ಸ್ಪಂದನ ಸೇರಿಕೊಳ್ಳುವ ಬಹಳ ಮೊದಲೇ ತಮ್ಮ ಆಸಕ್ತಿಯ ವಿಷಯಗಳಾದ ದೇಶಪ್ರೇಮ, ಹಿಂದುತ್ವ ಇತ್ಯಾದಿಯ ಕುರಿತು ಸಾಕಷ್ಟು ಓದಿಕೊಂಡಿದ್ದರು. ಹಾಗೆ ನೋಡಿದರೆ ಓದು ಅವರ ಬದುಕಿನ ಒಂದು ಭಾಗ. ಅವರ ಪ್ರಖರ ನಿರರ್ಗಳ ಮಾತು, ಪದಬಳಕೆಯ ರೀತಿ ನೋಡಿದರೆ, ನಿರಂತರ ಓದಿನಿಂದ ಮಾತ್ರ ಅದು ಸಾಧ್ಯ ಅನಿಸುತ್ತದೆ.
ಹೀಗೆ ನಮ್ಮ ಗೆಳೆತನ ಬೆಳೆಯಿತು. ನೀವಿವತ್ತು ನೋಡುವ ಖಡಕ್ ಮಾತಿನ ಹರಿತ ಬರವಣಿಗೆಯ ಶ್ರೀಕಾಂತ್ ಒಮ್ಮೆಗೆ ಒರಟ ಎನಿಸಿಬಿಡಬಹುದು. ಆದರೆ actually ಹಾಗಿಲ್ಲ. ಭಯಂಕರ ಹಾಸ್ಯ ಪ್ರಜ್ಞೆ, ಬದುಕಿನ ಕುರಿತ ಸೂಕ್ಷ್ಮ ಗ್ರಹಿಕೆ, ಸ್ನೇಹದ ಪರಿಧಿಯೊಳಗೆ ಎಲ್ಲಾ ರೀತಿಯ ಸಹಾಯಹಸ್ತ ಚಾಚಬಲ್ಲ ಇವರೊಬ್ಬ ಮನುಷ್ಯ ಪ್ರೇಮಿ. ಕಪ್ಪು ಬಣ್ಣದ Bajaj Pulsar ವಾಹನ ಅವರ ಸಾಥಿಯಾಗಿತ್ತು. ಮಜಾ ಅಂದ್ರೆ ಎಷ್ಟೋ ವರ್ಷಗಳ ಕಾಲ ಅದನ್ನು ಸರ್ವಿಸ್ ಮಾಡಿಸಿರಲಿಲ್ಲ. ಆ ಬಗ್ಗೆ ನಾನವರಿಗೆ ಎಷ್ಟೋ ಬಾರಿ ತಮಾಷೆ ಮಾಡಿದ್ದೇನೆ. ಬಹಳ serious ಆಗಿ ಜೋಕ್ಸ್ ಹೇಳುತ್ತಾರೆ. ಕಾಮತ್ರೇ ಅಂತ ಹೆಚ್ಚಿನವರು ಕರೆದ್ರೆ ಇವರು ಮಾತ್ರ ‘ ಕಾಮತ್ ಕಾಮತ್’ ಅಂತ ತಮಾಷೆಯಿಂದಲೇ ಮಾತು ಆರಂಭಿಸುತ್ತಾರೆ. ನಮ್ಮ ಸ್ನೇಹಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತಿದ್ದವರು ಈಗ ರಾಜ್ಯದ ಹೆಸರಾಂತ ಟಿವಿ ( News 1st) ವಾಹಿನಿಯ ಖ್ಯಾತ ನಿರೂಪಕ ರಕ್ಷತ್ ಶೆಟ್ಟಿ. ಇವರಿಬ್ಬರು ಒಟ್ಟಾದರೆ ಏನೋ ಹೊಸತು ಹುಟ್ಟುತ್ತಿತ್ತು, ಬೆಂಕಿಯೂ ಬೀಳುತ್ತಿತ್ತು..


ನೆರಳು ನೆರವು – ಅಭಿಯಾನ
ಆ ದಿನಗಳಲ್ಲಿ ಸಾಲುಮರದ ತಿಮ್ಮಕ್ಕ ಅವರನ್ನು ಭೇಟಿಯಾಗಿ ಒಂದು ದಿನ ಅವರ ಜೊತೆಗಿರುವ ಅಪೂರ್ವ ಅವಕಾಶ ನನಗೆ ಸಿಕ್ಕಿತು. ಆ ಸಂದರ್ಭದಲ್ಲಿ ಅಜ್ಜಿ ಆರ್ಥಿಕವಾಗಿ ಹಿಂದುಳಿದಿರುವ ಸಂಗತಿಯನ್ನು ಕಣ್ಣಾರೆ ಕಂಡೆ. “ನಮ್ಮಿಂದ ಏನಾದರೂ ಮಾಡಲು ಸಾಧ್ಯವೇ” ಎಂದು ಆಲೋಚಿಸುತ್ತಲೇ ಡಾ. ವಿರೂಪಾಕ್ಷ ದೇವರಮನೆಯವರಿಗೆ ಕರೆ ಮಾಡಿದೆ. ಆಗವರು “ಊರಿಗೆ ಬನ್ನಿ , ಸಿಕ್ಕಿ ಮಾತಾಡೋಣ” ಎಂದರು. ಊರು ತಲುಪಿದ ದಿನವೇ ನಾನು so called ಪ್ರತಿಷ್ಠಿತ ರಾಜಕಾರಣಿಯೊಬ್ಬರನ್ನು ( ಹಾಲಿ ಕೇಂದ್ರ ಮಂತ್ರಿ ) ಭೇಟಿಯಾದೆ. ಅವರಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ನನ್ನನ್ನು ಒಂದು ರೀತಿ ಹೀಯಾಳಿಸಿ ಮಾತನಾಡಿದರು.

ಆ ದಿನ ಕೆಲಸದ ಒತ್ತಡ ತುಸು ಹೆಚ್ಚೇ ಇದ್ದ ಕಾರಣ ರಾತ್ರಿ 9 ಗಂಟೆಗೆ ಆಫೀಸಿನಿಂದ ಹೊರಡಬೇಕು ಎನ್ನುವಷ್ಟರಲ್ಲಿ ಶ್ರೀಕಾಂತ್ ಎದುರಾದರು. ಬೆಳಿಗ್ಗೆ ನಡೆದ ಘಟನೆಯನ್ನು ವಿವರಿಸಿದಾಗ “ಕಾಮತ್ರೇ, ಹಾಗಾದ್ರೆ ನಾವು ಏನಾದ್ರೂ ಮಾಡೋಣ. ನೀವು ನಾಳೇನೇ ಮುಂದುವರೆಯಿರಿ” ಎಂದು ಹುರಿದುಂಬಿಸಿದರು. ನಾನು ಅಲ್ಲಿಂದ ಹೊರಟ ಬೆನ್ನಿಗೆ ಶ್ರೀಕಾಂತ್ ಅಜ್ಜಿಯ ಕುರಿತಾಗಿ ಒಂದು ಸ್ಕ್ರಿಪ್ಟ್ ತಯಾರಿಸಿದರು. ಮಾರನೇ ದಿನ ಬೆಳಿಗ್ಗೆ ಬಂದಾಗ ಅದನ್ನು ನನ್ನ ಕೈಗಿಟ್ಟು “ಇದಕ್ಕೊಂದು ವಾಯ್ಸ್ ಓವರ್ ಮಾಡಿ ಎಡಿಟ್ ಮಾಡಿಸಿ” ಅಂದ್ರು.ಮಧ್ಯಾಹ್ನದ ಒಳಗಾಗಿ ಸಾಲುಮರದ ತಿಮ್ಮಕ್ಕ ಅವರ ಬಗ್ಗೆ ಒಂದು ವಿಡಿಯೋ ತಯಾರಾಯಿತು.
ಸಾಮಾಜಿಕ ಮಾಧ್ಯಮದ ಪ್ರಭಾವ ಆಗಿನ್ನೂ ಜನರಿಗೆ ಮನದಟ್ಟಾಗಿರದ ದಿನಗಳಲ್ಲಿ ನಾವು ಇಂತಹದೊಂದು ಸಾಹಸದ ಯೋಜನೆಯನ್ನು ಕೈಗೆತ್ತಿಕೊಂಡಿದ್ದೆವು. ಈ ಅಭಿಯಾನ ರಾಜ್ಯ ಮಟ್ಟದಲ್ಲಿ ಸಂಚಲನ ಮೂಡಿಸಿತು. ಓಹ್ .. ಹೇಳೋದು ಮರೆತೆ. ಆ ಅಭಿಯಾನಕ್ಕೆ ‘ ನೆರಳು – ನೆರವು’ ಎನ್ನುವ ಹೆಸರು ಸೂಚಿಸಿದ್ದು ಕೂಡ ಇವರೇ !
ಈ ಅಭಿಯಾನದ ನೇತೃತ್ವವನ್ನು ನಾನು ವಹಿಸಿಕೊಂಡು ಮುನ್ನಡೆಸುತ್ತಿದ್ದಾಗ ಶ್ರೀಕಾಂತ್ ಮಾತ್ರ ಅಲ್ಲ ಸಂಸ್ಥೆಯ ಎಲ್ಲರೂ ಬೇಷರತ್ ಬೆಂಬಲ ನೀಡಿದರು. 2,50,000 ರೂಪಾಯಿಯನ್ನು ಉಡುಪಿಯ ಬೀದಿ ಬೀದಿಗಳಲ್ಲಿ ಓಡಾಡಿ ಸಂಗ್ರಹಿಸಿದೆವು. ಕೊನೆಗೆ ಶತಾಯುಷಿ, ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರನ್ನು ಉಡುಪಿಗೆ ಕರೆಸಿ Press Club ನಲ್ಲಿ ಚೆಕ್ ಹಸ್ತಾಂತರಿಸಿದ್ದು ಈಗ ಇತಿಹಾಸ!


ಹಾಜಿ ಅಬ್ದುಲ್ಲಾ ಸಾಹೇಬರ ಕುರಿತ ಸಾಕ್ಷ್ಯಚಿತ್ರ
ಇದಾಗಿ ಒಂದೆರಡು ವರ್ಷಗಳ ನಂತರ ಕಾರ್ಪೋರೇಶನ್ ಬ್ಯಾಂಕ್ ಸಂಸ್ಥಾಪಕರಾದ ಹಾಜಿ ಅಬ್ದುಲ್ಲಾ ಸಾಹೇಬರ ಕುರಿತು ಸಾಕ್ಷ್ಯಚಿತ್ರ ತಯಾರಿಸಲು ಹೊರಟಾಗ ನಾನು ಮೊದಲು ಶ್ರೀಕಾಂತ್ ಶೆಟ್ಟರಲ್ಲಿ ಈ ಕುರಿತು ಪ್ರಸ್ತಾಪಿಸಿದೆ. ಹೆಚ್ಚೇನೂ ಮಾತನಾಡದೆ ಯಾವ ಪ್ರಶ್ನೆಗಳನ್ನೂ ಕೇಳದೆ ಇಡೀ ಸಾಕ್ಷ್ಯಚಿತ್ರಕ್ಕೆ ಸ್ಕ್ರಿಪ್ಟ್ ರಚಿಸಿಕೊಟ್ಟರು. ಪ್ರತಿಭಾನ್ವಿತರಲ್ಲಿ ಹೆಚ್ಚಿನವರು ಆಲಸಿಗಳೆಂಬ ಮಾತಿದೆ. ಇವರೂ ಅದಕ್ಕೆ ಹೊರತಲ್ಲ. ನಾವು ಅವರ ಬೆನ್ನು ಬೀಳಬೇಕು. ಇಲ್ಲದೆ ಇದ್ದಲ್ಲಿ ಆ ಕೆಲಸ ಮುಗಿಯುವುದಿಲ್ಲ. ಆದರೆ ಬರವಣಿಗೆ ಮುಗಿಸಿದರೆ ಅದಕ್ಕಿಂತ ಒಳ್ಳೆಯ ಸ್ಕ್ರಿಪ್ಟ್ ನಿಮಗೆ ಸಿಗಲಿಕ್ಕಿಲ್ಲ.

ಅವರ ಈ ಸ್ಕ್ರಿಪ್ಟ್ ನೋಡಿ ನಾನು ನಿಬ್ಬೆರಗಾಗಿದ್ದೆ. ಅಷ್ಟರ ಮಟ್ಟಿಗೆ ಪ್ರಭಾವ ಬೀರಿದ ಪ್ರಬುದ್ಧ ಬರವಣಿಗೆಯ ಶ್ರೀಕಾಂತ್ ಶೆಟ್ಟಿ ಮತ್ತಷ್ಟು ಮೌಲ್ಯಾಧಾರಿತ ಸಾಕ್ಷ್ಯಚಿತ್ರಗಳಿಗೆ ಸ್ಕ್ರಿಪ್ಟ್ ಒದಗಿಸಬೇಕು ಎನ್ನುವುದು ನನ್ನ ಅಭಿಮಾನದ ಆಶಯವಾಗಿದೆ.
ಹಾಜಿ ಅಬ್ದುಲ್ಲಾ ಸಾಹೇಬರ ಕುರಿತ ಸಾಕ್ಷ್ಯಚಿತ್ರ ಹೀಗೆ ಆರಂಭವಾಗುತ್ತದೆ… ಶ್ರೀಕಾಂತ್ ಅವರ ಬರವಣಿಗೆಯ ಪ್ರತಿಭೆಗೆ ಕನ್ನಡಿ ಹಿಡಿಯಬಲ್ಲ ಸಾಲುಗಳಿವು :
ನೀಲ್ಗಡಲ ಮೈಸವರಿ ಕಡಲ ಮಾರುತಗಳನ್ನು ಬೊಗಸೆಯಲ್ಲಿ ಬಾಚಿ ಪನ್ನೀರ ಸಿಂಚನಗೈವ ಹಸಿರುವನದ ಗಿರಿಶಿಖರಗಳು. ಆ ಪನ್ನೀರಿನಿಂದ ಪುಳಕಿತಗೊಳ್ಳುತ್ತಾ ಪಚ್ಚೆ ಪೈರಿನ ಗದ್ದೆ ಸಾಲುಗಳಿಂದ, ತೆಂಗು ಕಂಗುಗಳ ಚಾಮರಗಳಿಂದ ಅಲಂಕೃತಗೊಂಡ ನಿತ್ಯ ಮದುವಣಗಿತ್ತಿ ನಮ್ಮ ಉಡುಪಿ!!!!!
ಮದಿಪು
ಶ್ರೀಕಾಂತ್ ಮತ್ತು ಮದಿಪು ಜೊತೆ ಜೊತೆಯಾಗಿ ಸಾಗುತ್ತ ಬಂದಿವೆ. 2012 ರಲ್ಲಿ ಸ್ಪಂದನ ವಾಹಿನಿ ಸೇರಿಕೊಳ್ಳುವ ಮೊದಲೇ ಅವ್ರು ಈ ಕ್ಷೇತ್ರದಲ್ಲಿದ್ದರಂತೆ. ಈಗವರು ಮದಿಪು ಹೇಳುವುದರಲ್ಲಿ ಇನ್ನಷ್ಟು ಮಾಗಿದ್ದಾರೆ. ಅವರ ಒಂದಿಷ್ಟು ವಿಡಿಯೋಗಳು ವೈರಲ್ ಆಗಿದ್ದು ನಿಮ್ಮ ಮೊಬೈಲ್‌ಗೂ ಬಂದಿರಬಹುದು. ಅವರಿಗೆ ತುಳುನಾಡಿನ ದೈವಗಳ ಆರಾಧನೆ ಕುರಿತು ಆಳವಾದ ಜ್ಞಾನವಿದೆ. ಇದನ್ನು ಮುಂದಿನ ದಿನಗಳಲ್ಲಿ ಅವರು ಡಾಕ್ಯುಮೆಂಟ್ ಮಾಡಬೇಕು ಎನ್ನುವುದು ನನ್ನ ಮತ್ತೊಂದು ಅಭಿಮಾನದ ಆಶಯವಾಗಿದೆ.
ಈ ನಡುವೆ ಇನ್ನೊಂದು ಗಮನಾರ್ಹ ಸಂಗತಿಯನ್ನು ನಿಮಗೆ ಹೇಳಬೇಕು : ನೀವು ರವಿ ಕಟಪಾಡಿ ಹೆಸರು ಕೇಳಿರಬಹುದು. ವೇಷ ಧರಿಸಿ ದೇಣಿಗೆ ಸಂಗ್ರಹಿಸಿ ಅಗತ್ಯವಿರುವ ಮಕ್ಕಳ ಚಿಕಿತ್ಸೆಗೆ ನೀಡಿ ಇಂದು ದೇಶದಾದ್ಯಂತ ಹೆಸರುವಾಸಿಯಾದವರು. ರವಿ, ಮೊದಲ ವೇಷ ಧರಿಸಲು ಸ್ಫೂರ್ತಿ ಯಾವುದು ಗೊತ್ತೇ ?
ಶ್ರೀಕಾಂತ್ ಆಗ Spandana News Desk ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಬಹುತೇಕ ಸ್ಪೆಷಲ್ ಸ್ಟೋರಿಗಳಿಗೆ ಸ್ಕ್ರಿಪ್ಟ್ ಅವರದ್ದು ಧ್ವನಿ ನನ್ನದಾಗಿರುತ್ತಿತ್ತು. ಅಲಂಕಾರ್ ಚಿತ್ರ ಮಂದಿರದ ಮುಂಭಾಗದಲ್ಲಿದ್ದ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರ ಎಡವಟ್ಟಿನಿಂದ ಒಂದು ಮಗುವಿನ ಕೈಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎನ್ನುವ ಸುದ್ದಿಯನ್ನು ಇವರು ಪ್ರಸಾರ ಮಾಡಿದ್ದರು. ಇದನ್ನು ಅಲ್ಲೆಲ್ಲೋ ಕಂಡ ಯಾರಿಗೂ ಪರಿಚಯವೇ ಇರದ ರವಿ ಕಟಪಾಡಿ ಆ ಮಗುವಿನ ಸಹಾಯಕ್ಕೆ ಧಾವಿಸಿದರು.. ನಂತರ ನಡೆದದ್ದು ಇತಿಹಾಸ !!
ಕಟಪಾಡಿ ಪೇಟೆಬೆಟ್ಟು ಕೊರಗಜ್ಜ ದೈವಸ್ಥಾನದಲ್ಲಿ ನಡೆದ ಆ ಒಂದು ಘಟನೆ !
ಕೊರಗಜ್ಜ ಸ್ವಾಮಿ ನಮಗೆಲ್ಲರಿಗೂ ಆಪ್ತವಾಗಿದ್ದು ಇತ್ತೀಚೆಗಿನ ವರ್ಷಗಳಲ್ಲಿ. ಇವತ್ತು ಪೇಟೆಬೆಟ್ಟು ಕೊರಗಜ್ಜ ದೈವಸ್ಥಾನ ಬಹಳ ಪ್ರಸಿದ್ಧಿ ಪಡೆದಿದೆ.
ಕಿಡಿಗೇಡಿಗಳು ಅಂದೊಮ್ಮೆ ಕಾಣಿಕೆ ಹುಂಡಿಗೆ ಕಾಂಡೊಮ್ ಹಾಕಿದ್ದು ನಂತರ ದೈವಕ್ಕೆ ಅಲ್ಲಿನ ಭಕ್ತರು ದೂರು ನೀಡಿದ್ದು, ಈ ಕೃತ್ಯ ಎಸಗಿದವರಿಗೆ ಕೊರಗಜ್ಜ ಕೆಲವೇ ದಿನಗಳಲ್ಲಿ ಪಾಠ ಕಲಿಸಿದ ಸುದ್ದಿಯೊಂದು ಕೇಳಿದ, ನೋಡಿದ ನೆನಪು ನಿಮಗಿರಬೇಕಲ್ವಾ ? ಆ ಬಗ್ಗೆ ವಿರೋಧವಿದ್ದರೂ ಮೊದಲು ಅದನ್ನು ಪ್ರಸಾರ ಮಾಡಿ ಸಂಚಲನ ಮೂಡಿಸಿದ್ದು ಇದೇ ಶ್ರೀಕಾಂತ್ ಶೆಟ್ಟರು !
ಈ ನಡುವೆ ಉದ್ಯಾವರ ಪರಿಸರದಲ್ಲಿ ನಟೋರಿಯಸ್ Pitti Nagesh ಅವರ ಹತ್ಯೆಯಾಯಿತು. ಈ ಸುದ್ದಿಯನ್ನು ರಾಜ್ಯ ಮಟ್ಟದ ಎಲ್ಲಾ ವಾಹಿನಿಗಳು ಪ್ರಸಾರ ಮಾಡಿದರೂ ತನ್ನ ವಿಶೇಷ ಪ್ರಸ್ತುತಿ, ವಿವರವಾದ ಹರಿತವಾದ ಸ್ಕ್ರಿಪ್ಟ್‌ನೊಂದಿಗೆ ಶ್ರೀಕಾಂತ್ ಬೇರೆಲ್ಲರಿಗಿಂತ ಭಿನ್ನವಾಗಿ ಕಾಣಿಸಿಕೊಂಡರು. ಆ ವಿಡಿಯೋಗಾಗಿ ಬಹಳ ಹುಡುಕಾಡಿದ್ದೇನೆ. ನನಗದು ಕೊನೆಗೂ ಸಿಗಲೇಇಲ್ಲ.
‘ ಶ್ರೀಕಾಂತ್ ಹೆ ಕ್ಯಾ ?!’
ಪ್ರಶಾಂತ್ ಪೂಜಾರಿ ಹತ್ಯೆ ಸಂಬಂಧಿಸಿದಂತೆ Morocco ರಾಷ್ಟ್ರದಿಂದ ಸ್ಪಂದನ ವಾಹಿನಿಯ ದೂರವಾಣಿಗೊಂದು ಶ್ರೀಕಾಂತ್ ಶೆಟ್ಟರನ್ನು ಸಂಬೋಧಿಸಿ ಕರೆ ಬಂದಿತ್ತು. ಆ ಹತ್ಯೆಗೆ ಅಭಯಚಂದ್ರ ಜೈನ್ ಕಾರಣ ಎಂದು ಹೇಳಿ ಕರೆ ಮಾಡಿದ್ದು ಯಾರು ಗೊತ್ತೇ ? Underworld Don Ravi Poojary ! ಕರೆ ಬಂದ ಕೆಲವೇ ಹೊತ್ತಿಗೆ ಪೊಲೀಸರು ನಮ್ಮ ಕಚೇರಿಗೆ ಬಂದು ಮಹಜರು ನಡೆಸಿ ಶ್ರೀಕಾಂತ್ ಹೇಳಿಕೆಯನ್ನು ದಾಖಲಿಸಿಕೊಂಡರು. ರಾಜ್ಯ ಮಟ್ಟದಲ್ಲಿ ಈ ಕರೆ ಸಂಚಲನ ಮೂಡಿಸಿತ್ತು.
ಒಂದು ಮಧ್ಯಾಹ್ನ ಗೋಳಿಕಟ್ಟೆ ಎನ್ನುವಲ್ಲಿ ಬಿಲ್ಲವ ಸಮುದಾಯಕ್ಕೆ ಸೇರಿದ ಕುಟುಂಬದ ಮನೆಗೆ ಹಕ್ಕು ಪತ್ರ ಇಲ್ಲ ಅದು ಅಕ್ರಮವಾಗಿದೆ ಎನ್ನುವ ಕಾರಣಕ್ಕೆ ಸರ್ಕಾರ ಆ ಮನೆಯನ್ನು ನೆಲಸಮ ಮಾಡಿಬಿಟ್ಟಿತು. ಅದನ್ನು ಪ್ರತ್ಯಕ್ಷ ಕಂಡು ವರದಿ ಮಾಡಲು ನಾವಲ್ಲಿಗೆ ತೆರಳಿದ್ದೆವು. ಆ ವರದಿ ದೊಡ್ಡ ಸುದ್ದಿಯಾಗಿ ನಂತರ ಊರಿನ ಮಂದಿಯೆಲ್ಲಾ ಸೇರಿ ಆ ಕುಟುಂಬಕ್ಕೆ ಹೊಸದೊಂದು ಮನೆ ನಿರ್ಮಿಸಿಕೊಟ್ಟರು. ನಮ್ಮ ಕೆಲಸಕ್ಕೆ ಸಿಕ್ಕ ಹಲವು ಸಾರ್ಥಕತೆಗಳಲ್ಲಿ ಇದೂ ಒಂದಾಗಿದೆ.
ಭಜನೆ
ಶ್ರೀಕಾಂತ್ ಅವರು ನಿತ್ಯಾನಂದ ಸ್ವಾಮಿಗಳ ಪರಮ ಭಕ್ತ. ಅವರು ಭಜನೆಗಳನ್ನು ಹಾಡಲು ಆರಂಭಿಸಿದರೆ ನೀವು ಮೂಕವಿಸ್ಮಿತರಾಗುತ್ತೀರಿ. ಅಲಂಕಾರ್ ಚಿತ್ರಮಂದಿರದ ಪಕ್ಕದಲ್ಲಿರುವ ನಿತ್ಯಾನಂದ ಸ್ವಾಮಿ ಮಂದಿರದಲ್ಲಿ ನಾನು ಮೊದಲ ಬಾರಿಗೆ ಅವರ ಭಜನೆ ಕೇಳಿದಾಗ ಮೂಕನಾಗಿದ್ದೆ ! ಏಕೆಂದರೆ ಅಲ್ಲಿಯವರೆಗೆ ಭಜನೆಗಳ ಕುರಿತು ಅವರಿಗಿದ್ದ ಆಸಕ್ತಿಯ ಬಗ್ಗೆ ನನಗೆ ತಿಳಿದೇ ಇರಲಿಲ್ಲ. ಕನ್ನಡ, ಮರಾಠಿ ಭಜನ್‌ಗಳನ್ನು ಸುಶ್ರಾವ್ಯವಾಗಿ, ಭಾವಪರವಶವಾಗಿ ಶ್ರೀಕಾಂತ್ ಪ್ರಸ್ತುತಪಡಿಸುತ್ತಾರೆ.
2 ವರ್ಷ ನಮ್ಮ ದೊಡ್ನಗುಡ್ಡೆಯ ಮನೆಯಲ್ಲಿ ಶ್ರೀಕಾಂತ್ ತನ್ನ ಕುಟುಂಬದೊಂದಿಗೆ ವಾಸವಿದ್ದರು. ಮಣಿಪಾಲದಲ್ಲಿ ಅವರ ಪತ್ನಿಯ ಬಯಕೆ ಶಾಸ್ತ್ರಕ್ಕೆ ಹೋಗಿದ್ದು, ಹೆರಿಗೆ ನೋವು ಬಂದಾಗ ನನ್ನ ಕಾರಿನಲ್ಲಿ ಆಸ್ಪತ್ರೆಗೆ ಪ್ರಯಾಣಿಸಿದ್ದು, ಅವರ ಮಗುವನ್ನು ನಮ್ಮ ಮನೆಯಲ್ಲಿ ನಾನು, ಅಕ್ಷತಾ ಎತ್ತಿಕೊಂಡ ನೆನಪುಗಳೆಲ್ಲ ನನ್ನ ಸ್ಮೃತಿ ಪಟಲದಲ್ಲಿ ಬೆಚ್ಚನೆ ಉಳಿದುಬಿಟ್ಟಿವೆ.
ಈಗವರು ಹಿಂದುತ್ವದ ಕುರಿತ ಭಾಷಣ ಸೇರಿದಂತೆ ಹಲವು ಬಲಪಂಥೀಯ ಚಟುವಟಿಕೆಗಳಿಗೆ ಹೆಸರು ಗಳಿಸಿದ್ದಾರೆ. ಅವರ ಜೊತೆ ಈ ಮಟ್ಟದ ಸ್ನೇಹವಿದ್ದೂ, ಹಿಂದುತ್ವ ಹಾಗೂ ಅವರ Controversial ಭಾಷಣಗಳ ಕುರಿತು ಇಂದಿಗೂ ಅವರೊಂದಿಗೆ ನಾನು ಮಾತನಾಡಿಲ್ಲ. ಆ ಬಗ್ಗೆ ಚರ್ಚೆ ಮಾಡುವುದೂ ಇಲ್ಲ.
ಬದಲಾದ ಕಾಲಘಟ್ಟದಲ್ಲಿ ಈಗ ನಮ್ಮ ಭೇಟಿ ಆಗಾಗ ನಡೆಯುತ್ತಿಲ್ಲ. ಆದರೆ ಓದು, ಬರವಣಿಗೆ, ಭಜನೆ, ತುಳುನಾಡ ದೈವಾರಾಧನೆ ಬಗ್ಗೆ ಅವರಿಗಿರುವ ಜ್ಞಾನದ ಕುರಿತು ನನಗೆ ವಿಶೇಷ ಅಭಿಮಾನ, ಹೆಮ್ಮೆ ಇದೆ. ವಾರದ ಹಿಂದೆ Press Club ನಲ್ಲಿ ಅಚಾನಕ್ಕಾಗಿ ಸಿಕ್ಕಾಗ ಮೇಲೆ ಹೇಳಿರುವ ಮತ್ತು ಇನ್ನೂ ಹತ್ತು ಹಲವು ಹೇಳಲಾಗದ ವಿಷಯಗಳು ಮನಸಿನಲ್ಲಿ ಹಾಗೇ ಹಾದು ಹೋದವು. ಒಂದೆರಡು ತಿಂಗಳ ಹಿಂದೆ ಇಂದ್ರಾಳಿಯಲ್ಲಿ ಸಿಕ್ಕಾಗ “ಈಗ ಜಾಗ, construction ಇತ್ಯಾದಿ ಮಾಡುತ್ತಿದ್ದೇನೆ ಕಾಮತ್” ಎಂದಿದ್ರು. ಇದನ್ನು ಕೇಳಿದಾಗ ನನಗೆ ಹಿತವೆನಿಸಲಿಲ್ಲ.
ಶ್ರೀಕಾಂತ್.. ನಾನೊಬ್ಬ ಹಿತೈಷಿ ಮತ್ತು ಸ್ನೇಹಿತನ ನೆಲೆಯಲ್ಲಿ ನಿಮಗೆ ಏನೋ ಒಂದಿಷ್ಟು ಹೇಳಬಯಸುತ್ತೇನೆ :
ನೀವು ಓದು, ಬರವಣಿಗೆ, ಪ್ರಯಾಣ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕು. ನಿಮ್ಮ ಪ್ರತಿಭೆಗೆ ಬೆರಗಾದವರು ನಾನೂ ಸೇರಿ ಹಲವು ಮಂದಿ ಇರಬಹುದು. ನೀವೊಬ್ಬ ಅದ್ಬುತ ಗಾಯಕ ಎನ್ನುವ ಅರಿವು ನಿಮಗಿದ್ದಂತಿಲ್ಲ .’ಭಜನ್ ಸಂಧ್ಯಾ’ ಅಂತ ಒಂದು ತಂಡ ಕಟ್ಟಿಕೊಂಡು ಅವಳಿ ಜಿಲ್ಲೆಗಳ ಧಾರ್ಮಿಕ ಕೇಂದ್ರಗಳಲ್ಲಿ ಸುಂದರ ಭಜನಾ ಕಾರ್ಯಕ್ರಮಗಳನ್ನು ಯಾಕೆ ನೀವು ನೀಡಬಾರದು? ಪುರುಸೊತ್ತೇ ಇಲ್ಲದಷ್ಟು ಕಾರ್ಯಕ್ರಮಗಳು ಬರುವುದು guarantee! ಕೇವಲ ಬಲಪಂಥೀಯ ವೇದಿಕೆಗಳಲ್ಲಿನ ನಿಮ್ಮ ಭಾಷಣಗಳ ಕುರಿತು ಏನನ್ನೂ ಹೇಳಲು ಬಯಸುವುದಿಲ್ಲ. ಅಲ್ಲಿ ನಿಮ್ಮ ಮಾತುಗಳನ್ನು ಕೇಳಿ ಚಪ್ಪಾಳೆ ತಟ್ಟಲು ಪ್ರಾಯಶಃ ನಾನು ಬರಲಾರೆ. ಆದ್ರೆ ನಿಮ್ಮಿಂದ ಹೆಚ್ಚೆಚ್ಚು ಭಜನಾ ಕಾರ್ಯಕ್ರಮಗಳನ್ನು ಅಪೇಕ್ಷಿಸುತ್ತೇನೆ ಮತ್ತು ಅವುಗಳನ್ನು ಕಣ್ತುಂಬಿಕೊಳ್ಳಲು ಬಯಸುತ್ತೇನೆ. ಒಂದು ಸೊಗಸಾದ ಕಾರ್ಯಕ್ರಮವನ್ನು ಆರ್ಥಿಕವಾಗಿ ಸದೃಢನಾದ ನಂತರ ನಾನೇ ಆಯೋಜಿಸಬೇಕು ಎನ್ನುವ ಅಭಿಲಾಷೆ ಇದೆ.
ಈಗಲೇ ಹೇಳುತ್ತೇನೆ. ಅಂದು ನೀವು
* ನಾನೇನ ಮಾಡಿದೆನೋ ರಂಗಯ್ಯಾ ರಂಗ
* ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ
* ಎಲ್ಲರ ನೋವನು ಬಲ್ಲವನಾದರೆ
* ಎಷ್ಟು ಸಾಹಸವಂತ ನೀನೆ ಬಲವಂತ
* ರಥವನೇರಿದ ರಾಘವೇಂದ್ರ
* ಏಸು ಕಾಯಂಗಳ ಕಳೆದು
ಹಾಡುಗಳನ್ನು ಹಾಡಬೇಕು. ಮಧ್ಯೆ ಮಧ್ಯೆ ನಿಮ್ಮ ಮಾತುಗಳಿರಬೇಕು. ನೀವು ಎಲ್ಲರಿಗೂ ಆಪ್ತರೆನಿಸಬೇಕು. ಇಂದ್ರಾಳಿಯಲ್ಲಿ ಸಿಕ್ಕಾಗ ‘ಕುಪ್ಪಳಿಗೆ ಹೋಗೋಣ’ ಅಂದಿದ್ರಲ್ವಾ ? ಅದು ಯಾವಾಗ ಅಂತ whatsapp ಮಾಡಿ…
ಅಕ್ಕರೆ – ಅವಿನಾಶ್