Home Interviews Everything You Wanted to Know About Social Media Sensation Vandana Rai

Everything You Wanted to Know About Social Media Sensation Vandana Rai

0

‘Do it first or do it different’  ಅನ್ನೋ ಮಾತಿದೆ.. ಇದಕ್ಕೆ ಪೂರಕವೆಂಬಂತಿದೆ ಇವರ ಸಾಧನೆ. ಮಕ್ಕಳ, ಪೋಷಕ ವಲಯದಲ್ಲಿವರು ನೆಚ್ಚಿನ ಟೀಚರ್. ತನ್ನ ವೈರಲ್ ವಿಡಿಯೋಗಳ ಮೂಲಕ ಇವರು ಸ್ಪೆಷಲ್ ಡಾಕ್ಟರ್. ಯಾಕಂದ್ರೆ ‘ನಿಮ್ಮ ವಿಡಿಯೋ ನೋಡಿದ್ರೆ ನನ್ನ ಮಗ ಊಟ ಮಾಡ್ತಾನೆ, ಮಲಗುತ್ತಾನೆ, ನೀವಂದ್ರೆ ಅವಳಿಗಿಷ್ಟ’ ಇಂತಹ ಮಾತುಗಳನ್ನು ಕಾಮೆಂಟ್ಸ್ ನಲ್ಲಿ ವೈಯಕ್ತಿಕವಾಗಿ ಗಮನಿಸಿದ್ದೇನೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಲ್ಲೂರು ಎಂಬ ಪುಟ್ಟ ಹಳ್ಳಿಯ ವಂದನಾ ರೈ ಅವರು ಸಮಾಜಕ್ಕಷ್ಟೇ ಅಲ್ಲ ತಾವೇ ನಿಬ್ಬೆರಗಾಗುವಷ್ಟರ ಮಟ್ಟಿಗೆ ಖ್ಯಾತಿ ಪಡೆದಿದ್ದಾರೆ. ಇದಕ್ಕೆಲ್ಲಾ ಕಾರಣ ಅವರ ಹಾಡು, ನೃತ್ಯ ಮತ್ತು ಅವುಗಳನ್ನು ಪ್ರಸ್ತುತಪಡಿಸುವ ರೀತಿ. ಅವರೇ ಹೇಳುವಂತೆ ಇದೇ ಅವರ ಬಹುದೊಡ್ಡ ಆಸ್ತಿ.

ನನಗೆ ಟೀಚರ್ ಪರಿಚಯವಾಗಿದ್ದು ಕೊರೊನಗೂ ಮುನ್ನ ಕಾರ್ಕಳದಲ್ಲಿ ‘ನಮ್ಮ ಕಾರ್ಲ’ ತಂಡ ಆಯೋಜಿಸಿದ ‘ಅಪ್ಸರಾ, ಕರಾವಳಿ ಪ್ರತಿಭೆಗಳ ಆಗರ’ ಎನ್ನುವ ವಿಶಿಷ್ಟ ಕಾರ್ಯಕ್ರಮಒಂದರಲ್ಲಿ. ಹಾಗೆ ನೋಡಿದರೆ ನನ್ನ ಮೂಲ ಊರು ಕೂಡ ಅವರೂರು, ನಲ್ಲೂರು !!ಅವತ್ತು ಆಯೋಜಕರ ಜೊತೆ ಇವರೂ ಅಲ್ಲಿದ್ದು ಅವರಿಗೆ ಸಹಕಾರ ನೀಡುತ್ತಿದ್ದರು. ಆಗಿವರ ಪರಿಚಯ ತಮ್ಮ ಸ್ನೇಹಿತವರ್ಗಕ್ಕೆ ಹೊರತುಪಡಿಸಿ ಬೇರೆಯಾರಿಗೂ  ಇರಲಿಲ್ಲ! ಕೊರೊನ ಕಾರಣ ಇವರ ಅದೃಷ್ಟವೇ ಬದಲಾಯಿತು ಎನ್ನಬೇಕು. ಹೌದು, ಕೊರೊನ ನಮ್ಮ ಬದುಕಿಗೆ ಬೇಕಾದ ಎಲ್ಲಾ ಪಾಠವನ್ನು ಕಲಿಸಿತು ಆದರೆ ಮಕ್ಕಳಿಗೆ ಇವರು ವಿಶೇಷವಾಗಿ ವಿಡಿಯೋ ಮೂಲಕ ಕಲಿಸಿದ ಪಾಠ ಸುಲಭ ಮತ್ತು ಸಲೀಸಾಗಿ ಅರ್ಥವಾಗಿ ಮಕ್ಕಳು, ಪೋಷಕರು, ಶಾಲಾ ವಲಯದಲ್ಲಿ ಮಾತ್ರವಲ್ಲ ಸಮಾಜದಲ್ಲಿ ಒಂದು ಸಂಚಲನವೇ ಮೂಡಿಸಿತು. ಇಂದು ಮಕ್ಕಳ ದಿನ. ಆ ಕಾರಣಕ್ಕೆ ಅವರ ಶಾಲೆ ಮಾತ್ರವಲ್ಲ ವಿಡಿಯೋ ನೋಡಿದ ಪ್ರತಿಯೊಬ್ಬರ  ನೆಚ್ಚಿನ ವಂದನಾ ಟೀಚರ್ ಜೊತೆ ಒಂದಿಷ್ಟು ಹೊತ್ತು ಮಾತನಾಡುವ ಅಪರೂಪದ ಅವಕಾಶ ಸಿಕ್ಕಿತು. ನಮ್ಮ ಮಾತಿನ ಸಾರಾಂಶ ಹೀಗಿದೆ, ಪೂರ್ತಿ ಓದಿ ಇಷ್ಟವಾದರೆ ಹಂಚಿ…

1) ನೀವು ಬಹಳ ಅನುಕೂಲಕರ ಕುಟುಂಬದ ಹಿನ್ನೆಲೆಯುಳ್ಳವರಲ್ಲ. ನಾನು ತಿಳಿದಂತೆ ನಿಮ್ಮ ಸಾಧನೆಗೆ ( ಆರಂಭದ ದಿನಗಳಲ್ಲಿ) ಪ್ರೋತ್ಸಾಹ ನೀಡಿದವರಿಲ್ಲ. ನಿಮ್ಮ ಪ್ರತಿಭೆ ಗುರುತಿಸಿ ಅನಾವರಣಗೊಂಡಿದ್ದು ಹೇಗೆ ?

ನಾನು Jaycees English Medium Schoolನಲ್ಲಿ ಚಿಕ್ಕ ಮಕ್ಕಳಿಗೆ ಶಿಕ್ಷಕಿ. ಮಕ್ಕಳು ಅಂದ್ರೆ ನನಗೆ ಪ್ರೀತಿ. ಕೊರೊನ ಸಂದರ್ಭ ಮಕ್ಕಳಿಗೆ ಪಾಠ ಹೇಳುವ ಉದ್ದೇಶದಿಂದ ನಾನು A to Z ಅಕ್ಷರಮಾಲೆ ಕುರಿತು ಸಹೋದ್ಯೋಗಿ ಶಿಕ್ಷಕರೊಂದಿಗೆ ಸೇರಿಕೊಂಡು ವಿಡಿಯೋ ಮಾಡಿ ನಮ್ಮ ಶಾಲೆಯ ಮಕ್ಕಳ ಪೋಷಕರಿಗೆ ಕಳಿಸಿದೆ. ಅದಕ್ಕೆ ಉತ್ತಮ ಪ್ರತಿಸ್ಪಂದನೆ ಸಿಕ್ಕಿತು. ಆ ಕಾರಣಕ್ಕೆ ನಾನದನ್ನು ನನ್ನ Facebookನಲ್ಲಿ ಪ್ರಸಾರ ಮಾಡಿದೆ. ಆಗ ಇನ್ನಷ್ಟು ಒಳ್ಳೆಯ Comments ಗಳು ಬಂದವು. ನೀವು ಇಂಗ್ಲಿಷ್ ಮಾತ್ರ ಅಲ್ಲ ಕನ್ನಡದಲ್ಲೂ ಈ ರೀತಿ ವಿಡಿಯೋ ಮಾಡಿ ಪ್ರಸಾರ ಮಾಡಿ. ಕನ್ನಡ ಮಾಧ್ಯಮದ ಮಕ್ಕಳಿಗೆ ಅನುಕೂಲವಾಗುತ್ತದೆ ಎನ್ನುವ ಕಾಮೆಂಟ್ ಕಂಡೆ. ನಂತ್ರ ‘ಅ’ ದಿಂದ ‘ಆಹಾ’ ವರೆಗೆ ವಸ್ತುಗಳನ್ನು ತೋರಿಸಿ ವಿಡಿಯೋ ಮಾಡಿದೆ. ಇದಕ್ಕೆ ಮತ್ತಷ್ಟು ಪ್ರಶಂಸೆ ವ್ಯಕ್ತವಾಯಿತು. ಹಾಗಾದ್ರೆ ಈ ರೀತಿ ವಿಡಿಯೋಗಳು ಎಲ್ಲರನ್ನು ಸೆಳೆಯುತ್ತದೆ ಎಂದು ಸ್ಪಷ್ಟವಾದ ಕಾರಣ ಕ್ರಿಯೇಟಿವ್ ವಿಡಿಯೋಗಳನ್ನು ತಯಾರಿಸುತ್ತಲೇ ಬಂದೆ. ಈಗ 350 ಕ್ಕೂ ಹೆಚ್ಚು ವಿಡಿಯೋಗಳಾಗಿವೆ. ಇದರಿಂದ ಇತರ ಶಾಲೆಯ ಶಿಕ್ಷಕರೂ ಪ್ರೇರಣೆ ಪಡೆದಿದ್ದಾರೆ. ವಿಡಿಯೋ ಬೇಗ reach ಆಗುತ್ತೆ. 10 ಸಲ ನೋಡಿ ಮಕ್ಕಳು ಕಲಿಯುತ್ತಾರೆ. ವಿಡಿಯೋದ ಬಹು ದೊಡ್ಡ ಪ್ಲಸ್ ಪಾಯಿಂಟ್ ಇದೇ ಆಗಿದೆ.

2) ಸಾಮಾಜಿಕ ಮಾಧ್ಯಮವೇ ನಿಮ್ಮ ವೇದಿಕೆ. Social Media ಕಲಿಸಿದ Poitive, Negative ಪಾಠಗಳು ಯಾವುದು?

Positive : ನಾನು BA ಪದವೀಧರೆ. ರಾಜ್ಯ ಮಾತ್ರ ಅಲ್ಲ. ಹೊರದೇಶದಲ್ಲೂ ನನ್ನನ್ನು ಫಾಲೋ ಮಾಡುತ್ತಾರೆ ಅಂತ ತಿಳಿದಿದ್ದೇನೆ. ನಿನ್ನೆ ಕಾರ್ಕಳದಲ್ಲಿ ಒಂದು ಫ್ಯಾಮಿಲಿ ಸಿಕ್ಕಿದ್ದರು. ಅವರು ಹೊರ ದೇಶದಲ್ಲಿರುವವರು. ಅತ್ಯಂತ ಆತ್ಮೀಯತೆಯಿಂದ ಮಾತನಾಡಿಸಿದರು. ವಿಡಿಯೋಗಳ ಪ್ರಭಾವದಿಂದಾಗಿ ಬೇರೆ ಬೇರೆ ಶಾಲೆಗಳಲ್ಲಿ ಟೀಚರ್ಸ್ ಗೆ ತರಬೇತಿ ನೀಡಲು ಆಹ್ವಾನ ಬರುತ್ತಲೇ ಇದೆ!

Negative : ಮೊದ ಮೊದಲು ಕೆಲವ್ರು ನಿಮಗೆ ಡಾನ್ಸ್ ಮಾಡುವುದು ಮಾತ್ರ ಕೆಲಸವ ? ಪಾಠ ಮಾಡುದಿಲ್ವಾ ? ಅಂತೆಲ್ಲ ಕಾಮೆಂಟ್ಸ್ ನಲ್ಲಿ ಬರೆಯುತ್ತಿದ್ದರು. ಒಂದೆರಡು ದಿನ ಅತೀವ ಬೇಸರವಾಗಿ ವಿಡಿಯೋ ಮಾಡುವುದನ್ನು ನಿಲ್ಲಿಸಿಬಿಟ್ಟೆ. ಆಗ ಒಂದಿಷ್ಟು ಮಂದಿ ‘ವಿಡಿಯೋ ಇಲ್ವಾ’ ಅಂತ ಸಂದೇಶಗಳನ್ನು ಕಳುಹಿಸಿದರು. ನನಗೆ Social Media ಅಂದ್ರೇನು ? ಅದರ ಗಂಧಗಾಳಿ ಗೊತ್ತಿರಲಿಲ್ಲ. ಇಷ್ಟ ಪಡುವವರಿದ್ದಾರೆ. ಹಾಗಾಗಿ ಅವರಿಗೋಸ್ಕರ ವಿಡಿಯೋ ಮಾಡುತ್ತೇನೆ ಅಂತ ಮತ್ತೆ ಆರಂಭಿಸಿದೆ. ನನ್ನ ಡಾನ್ಸ್, ಹಾಡು ಪಾಠಕ್ಕೆ ಸಂಬಂಧಿಸಿದ್ದೇ ಆಗಿರುತ್ತದೆ ವಿನಃ ಇನ್ಯಾವುದೂ ಅಲ್ಲ. ಮತ್ತೊಂದು ಸಂಗತಿ ಅಂದ್ರೆ ಟೀಚರ್ ಒಬ್ಬರು ‘ನೀವು ಪ್ರಚಾರಕ್ಕಾಗಿ ಈ ರೀತಿ ಮಾಡ್ತಿದೀರಾ? ನಾವೂ ಪಾಠ ಮಾಡುತ್ತೇವೆ ನಮಗೆ ಪ್ರಶಂಸೆ ಬರುತ್ತಿಲ್ಲ’ ಎಂದಿದ್ದರು. ನಾನವರಲ್ಲಿ’ ನೀವು ಈ ರೀತಿಯ ವಿಡಿಯೋ ಮಾಡಿದ್ದೀರಾ ? ಇದ್ದಲ್ಲಿ ನನಗೆ ತೋರಿಸಿ ‘ ಎಂದಿದ್ದೆ. ಅದಕ್ಕವರ ಬಳಿ ಉತ್ತರವಿರಲಿಲ್ಲ. ನಾವು ತಲೆ ಕೆಡಿಸಿಕೊಳ್ಳಬಾರದು ಅಂತ ನಂಗೀಗ ಅರ್ಥವಾಗಿದೆ. ನನ್ನ ಉತ್ತರ ಕೇವಲ ನನ್ನ ಕೆಲಸದ ಮೂಲಕ, ಅಷ್ಟೇ .

3) ಮಕ್ಕಳಿಗೆ ಪಾಠ ಹೇಳುವುದು ಒಂದು ಸವಾಲು. ನೀವು ಸೃಜನಶೀಲವಾಗಿ ಕತೆ, ವಿಡಿಯೋ ತಯಾರಿಸಿ ಮಕ್ಕಳನ್ನು ತಲುಪುವ ದಾರಿ ಕಂಡುಕೊಂಡಿದ್ದು ಹೇಗೆ?

ಇಲ್ಲಿ ಎರಡು ವಿಷಯ ಅವಿನಾಶ್. ನನ್ನ ಪಾಠದ ರೀತಿಯೇ ಹೀಗೆ! ಅವರನ್ನು ನಾನು ಮೈದಾನಕ್ಕೆ ಕರೆದುಕೊಂಡು ಹೋಗಿಯೇ ಪಾಠ ಮಾಡುವುದು.  ಕೊರೊನ ಕಾರಣ ವಿಡಿಯೋ ಮಾಡಿದೆ. ಕೊರೊನ ಬಾರದೆ ಇದ್ದಲ್ಲಿ ವಿಡಿಯೋ ಗೋಜಿಗೆ ನಾನು ಹೋಗುತ್ತಿರಲಿಲ್ಲ ! ಯಾಕಂದ್ರೆ ನನಗದೆಲ್ಲಾ ಗೊತ್ತೇ ಇಲ್ಲ !  copycat ನಾನಲ್ಲ. ನಾನು ಏನೇ ಮಾಡಿದರೂ ಸ್ವಂತದ್ದೇ ಆಗಿರಬೇಕು ಎನ್ನುವ ಮನೋಭಾವನೆ.

4) ನೀವು ವೃತ್ತಿಪರ ಶಿಕ್ಷಕಿಯೂ ಆಗಿರುವುದರಿಂದ ಪೋಷಕರಲ್ಲಿ ಕಂಡ ನಕಾರಾತ್ಮಕ ಸಂಗತಿ ಯಾವುದು ? ಅದನ್ನವರು ಹೇಗೆ ಮತ್ತು ಯಾಕಾಗಿ ಸರಿಪಡಿಸಿಕೊಳ್ಳಬೇಕು?

ವಿದ್ಯಾಭ್ಯಾಸಕ್ಕೆ ಅತೀ ಹೆಚ್ಚು ಪ್ರಾಮುಖ್ಯತೆ ಕೊಡಿ ಅಂತ ಪೋಷಕರಿಗೆ ನಾನು ಹೇಳುವುದಿಲ್ಲ. ನೂರಕ್ಕೆ ನೂರು ಅಂಕ ಪಡೆದವರಿಗಿಂತ 50 , 60 ಪಡೆದವರೇ ಇವತ್ತು ಅತ್ಯಂತ ಯಶಸ್ವೀ ವ್ಯಕ್ತಿಗಳು! ನನಗೆ ಇಬ್ಬರು ಮಕ್ಕಳು. 80 , 90 ಬರಬೇಕು ಎನ್ನುವ ಷರತ್ತು ನಾನು ಹಾಕಿಲ್ಲ, ಹಾಕುವುದೂ ಇಲ್ಲ. ಆದರೆ c ಗ್ರೇಡ್ ಬರುವವರೆಗೆ ಕಾಯೋದಿಲ್ಲ. ಅಂಕ ಕಡಿಮೆ ಬಂದರೂ ಅಡ್ಡಿ ಇಲ್ಲ. ಬದುಕಿನ ಪರೀಕ್ಷೆ ಗೆಲ್ಲಬೇಕು. ಅದಕ್ಕಾಗಿ ನಾನವರನ್ನು ತಯಾರಿಸಬೇಕು. ಕಣ್ಣಾರೆ ಕಾಣುತಿದ್ದೇನೆ, ಪೋಷಕರು ಹೋಲಿಕೆ ಮಾಡುವುದನ್ನು ಮೊದಲು ನಿಲ್ಲಿಸಿಬಿಡಬೇಕು!

5) Social Media ದಲ್ಲಿ ನಿಮ್ಮ ಗೆಲುವಿಗೆ  ಬಹುದೊಡ್ಡ ಪಾತ್ರ ವಹಿಸಿದ ವಿಚಾರ ಯಾವುದು?

ಒಳ್ಳೆ ಥೀಮ್ ಇರುವ ವಿಷಯಗಳಿರಬೇಕು,  ವಿಡಿಯೋಗಳಿರಬೇಕು. ಟೀಚರ್ಸ್ ಎಚ್ಚರಿಕೆಯಿಂದಿರಬೇಕು. ಅಮ್ಮ ಹೇಳಿದ್ದು ಮಕ್ಕಳು ಕೇಳದೆ ಇರಬಹುದು ಆದ್ರೆ ನಾವು ಹೇಳಿದ್ದನ್ನು ಮಕ್ಕಳು ಸುಲಭವಾಗಿ ಒಪ್ಪುತ್ತಾರೆ. ನನ್ನ ವಿಡಿಯೋಗಳ ಹಿಂದೆ ಬಹಳ ಶ್ರಮ ಇದೆ. ಪ್ರಸಾರ ಮಾಡುವ ಮೊದಲು ನಾಲ್ಕೈದು ಬಾರಿ ನೋಡಿ ನನಗೆ ನಾನೇ ಒಂದಿಷ್ಟು ಪ್ರಶ್ನೆಗಳನ್ನು ಕೇಳಿ ನಂತ್ರ ಮುಂದುವರೆಯುತ್ತೇನೆ.

6 ) ಏಕಾಂಗಿ – ಶ್ರಮ – ಮಹಿಳೆ – ಹಳ್ಳಿಗಾಡಿನ ಪ್ರದೇಶ. ಈ ಎಲ್ಲಾ ಪದಗಳು ನಿಮಗೆ ಹೋಲುತ್ತವೆ. ನಿಮ್ಮ ವಿಷಯದಲ್ಲಿ ಒಂದಕ್ಕೊಂದು ಪೂರಕವಾಗಿವೆ. ಈ ಪದಗಳನ್ನು ಯಾವ ರೀತಿ ವಿಶ್ಲೇಷಿಸುತ್ತೀರಿ ?

ಶ್ರಮವೇ ಯಶಸ್ಸಿನ ಮೂಲ. ದೇವರು ಕರುಣಿಸಿರುವ ಪ್ರತಿಭೆ, ಶ್ರಮದ ಮೇಲೆ ನಂಬಿಕೆ. ಕ್ಷೇತ್ರ ಯಾವುದೇ ಇರಲಿ ನಾವು ಸಂಪೂರ್ಣ ತೊಡಗಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ. ಅರ್ಧoಬರ್ಧ  ಕೆಲಸ ಮಾಡಬಾರದು. ಪೂರ್ತಿಯಾಗಿ ಮಾಡಿ ಮುಗಿಸಬೇಕು. ಪ್ರತಿಭಾ ಕಾರಂಜಿ ಬಂದರೆ ನನಗೆ ಒಂದು ನಿಮಿಷವೂ ಪುರುಸೊತ್ತಿಲ್ಲ. ಕೆಲವೊಮ್ಮೆ ಊಟ ಮಾಡಲೂ ಸಮಯ ಸಿಗದ ಸಂದರ್ಭಗಳಿವೆ. ಶಿಕ್ಷಕರು ಬಹಳ ಶ್ರಮವಹಿಸಿ ಮಕ್ಕಳಿಗೆ ತರಬೇತಿ ನೀಡುತ್ತೇವೆ. ನಿಮಗೆ ಗೊತ್ತಿದೆ ನಮ್ಮದು ಹಳ್ಳಿ ಪ್ರದೇಶ. ಆ ಕತ್ತಲೆಗೆ ಮನೆ ಸೇರಬೇಕು. ರಾತ್ರಿ 10 : 30ರವರೆಗೆ ಪಾಠ, ವಿಡಿಯೋಗಳ ಕುರಿತಾಗಿ ನಿರಂತರ ಶ್ರಮ ಜಾರಿಯಿರುತ್ತದೆ. ಈಗ ಸ್ವಂತ ಮನೆ ನಿರ್ಮಾಣದ ಕಾರ್ಯದಲ್ಲಿ ತೊಡಗಿದ್ದೇನೆ. ಅದಕ್ಕಾಗಿ ಹಣ ಹೊಂದಿಸುವುದು ನನಗೆ ದೊಡ್ಡ ಸವಾಲೇ ಆಗಿದೆ !

7) ಹಿಂಜರಿಕೆ / ಕೀಳರಿಮೆ. ಇದನ್ನು ಗೆಲ್ಲುವುದು ಹೇಗೆ ?

ಎಷ್ಟೋ ಹೆಣ್ಣುಮಕ್ಕಳು, ಪ್ರತಿಭಾವಂತರು ‘ಬೇರೆಯವರು ಏನು ಹೇಳಬಹುದು’ ಎನ್ನುವ ಒಂದು ಆಲೋಚನೆಯಿಂದಾಗಿ ಮನೆಯಲ್ಲೇ ಉಳಿದುಬಿಟ್ಟಿದ್ದಾರೆ. ನಮ್ಮ ಕೆಲಸ ನಮಗೆ ಸೇರಿದಂತೆ ಬೇರೆಯವರಿಗೂ ಉಪಕಾರ, ಉಪಯೋಗವಾಗಿದೆ ಅಂತಾದರೆ ನಾವು ಮುಂದುವರಿಸಿಕೊಂಡು ಹೋದರೆ ಆಯ್ತು. ಈ ನಿಟ್ಟಿನಲ್ಲಿ ನನ್ನ ಅಮ್ಮ ನನಗೆ ಬೆನ್ನೆಲುಬಾಗಿ ನಿಂತರು.

Quick One-Liner Questions

ಸೀರೆಯಲ್ಲೇ ಕಾಣಿಸುತ್ತೀರಿ

ಸೀರೆ ನಮ್ಮ ಸಂಸ್ಕೃತಿ. ನನಗೆ ಸೀರೆ ಅಂದ್ರೆ ಇಷ್ಟ. ಸೀರೆಯಲ್ಲಿ ಮಕ್ಕಳ ಮುಂದೆ ಕಾಣಿಸಿಕೊಂಡರೆ Teacherಗೆ ಬೆಲೆ. ಹಾಗಾಗಿ ಹೆಚ್ಚಾಗಿ ಸೀರೆಯಲ್ಲೇ ಕಾಣಿಸುತ್ತೇನೆ. ಒಮ್ಮೊಮ್ಮೆ ಸಲ್ವಾರ್ ತೊಡುತ್ತೇನೆ.

ನಿಮಗೆ ಆಪ್ತವಾದ ನಿಮ್ಮದೇ ವಿಡಿಯೋ ಯಾವುದು ?

ಧರಣಿ ಮಂಡಲ. ಮಕ್ಕಳ ಜೊತೆ ಇದ್ದ ವಿಡಿಯೋಗಳೆಲ್ಲವೂ ನನಗೆ favourite.

ಮೊನ್ನೆಯ ನಿಮ್ಮ ಪಾಡ್ದನ ವಿಡಿಯೋ ಕುರಿತು

ನಮ್ಮ ತುಳು ಸಂಸ್ಕೃತಿಯಲ್ಲಿ ಪಾಡ್ದನಕ್ಕೆ ವಿಶೇಷ ಮಹತ್ವ ಇದೆ. ನನ್ನ ಅಮ್ಮನಿಗೆ (ವನಜ ಶೆಟ್ಟಿ ) ದೈವ ಮತ್ತು ಗದ್ದೆಯಲ್ಲಿ ಹೇಳುವ ಪಾಡ್ದನಗಳು ತಿಳಿದಿದೆ. ಅದು ಅವರಿರುವವರೆಗೆ ಮಾತ್ರ ಜೀವಂತ. ಆ ಕಾರಣಕ್ಕಾಗಿ ನಾನದನ್ನು ಈಗ ವಿಡಿಯೋ ರೂಪದಲ್ಲಿ ತಯಾರಿಸಿಡುತ್ತಿದ್ದೇನೆ.  ‘ಬಲಿಪ’ ಎನ್ನುವ ಸಿನಿಮಾದಲ್ಲಿ, ಕಾಂತಾರದಲ್ಲೂ ಪಾಡ್ದನ ಹಾಡುವ ಅವಕಾಶ ಅಮ್ಮನಿಗೆ ಸಿಕ್ಕಿತು. ಒಂದು ಪ್ರಸಿದ್ಧ ಖಾಸಗಿ ವಾಹಿನಿಯಿಂದ ಅವಕಾಶ ಬಂತು. ದೀಪಾವಳಿ ಸಂದರ್ಭ ಅಮ್ಮ ಹೇಳಿದ ಪಾಡ್ದನವನ್ನು ನಾನು ಹಾಡಿ ಮಕ್ಕಳಿಗೂ ಕಲಿಸಿದೆ. ಅದನ್ನವರು ಅವರವರ ಮನೆಯಲ್ಲಿ ಹಾಡಿ ಖುಷಿ ಪಟ್ಟರು. ನನ್ನ ಅಮ್ಮನಿಂದ ನಾನು, ನನ್ನಿಂದ ಮಕ್ಕಳು, ಮಕ್ಕಳಿಂದ ಇನ್ನಷ್ಟು ಜನ ಕಲಿತರೆ ನಮ್ಮ ತುಳು ಸಂಸ್ಕೃತಿ ಉಳಿಸುವ ಸಣ್ಣ ಪ್ರಯತ್ನ ನಮ್ಮಿಂದಾದಂತೆ.

ಬಂದಂತಹ ಅವಕಾಶಗಳು

8 ವರ್ಷಗಳ ಹಿಂದೆ ಒಂದು ಕಾರ್ಯಕ್ರಮದ ವೇದಿಕೆಯಲ್ಲಿ ನನಗೆ ಬಹಳ ಬೇಸರವಾಗಿತ್ತು. ನನ್ನ ಈ ಎಲ್ಲಾ ಚಟುವಟಿಕೆಗಳಿಂದಾಗಿ ಅದೇ ವೇದಿಕೆಯಲ್ಲಿ ನನಗೆ ನಿರ್ಣಾಯಕಳಾಗಿ, ಅತಿಥಿಯಾಗಿ ಭಾಗವಹಿಸುವ ಅವಕಾಶ ಸಿಕ್ಕಿತು. ರಾಜ್ಯದ ಮೂಲೆ ಮೂಲೆಗಳಿಂದ, ಮುಂಬೈ, ವಿದೇಶಗಳಿಂದ  ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಹ್ವಾನವಿದೆ.

ಏನು ಸವಾಲು ಎದುರಿಸುತ್ತಿದ್ದೀರಿ ?

ಆಗ್ಲೇ ಹೇಳಿದ ಹಾಗೆ ನನಗೆ ಸಾಮಾಜಿಕ ಮಾಧ್ಯಮ ಅಂದ್ರೆ ಏನು ಅಂತಾನೆ ಗೊತ್ತಿರಲಿಲ್ಲ. ಕಲಿತೆ. ಹಲವು ಸೃಜನಶೀಲ Concept ಗಳು ನನ್ನಲ್ಲಿವೆ. ಅದೆಲ್ಲವನ್ನು ಸಾಕಾರಗೊಳಿಸಲು ನಾನು ಶಕ್ತಳಲ್ಲ. ನನ್ನಲ್ಲಿ ಬೇಕಾದ ಆರ್ಥಿಕ ವ್ಯವಸ್ಥೆ ಇಲ್ಲ. ಯಾರಾದರೂ ಮುಂದೆ ಬಂದು ಪ್ರಾಯೋಜಕತ್ವ ನೀಡಿದರೆ ನನಗೆ ಉಪಕಾರವಾಗುತ್ತದೆ. ಅವರ ಹೆಸರಲ್ಲಿ ಆ ವಿಡಿಯೋ ತಯಾರಿಸಬಹುದು. ನನ್ನ ಆಸೆ ಈಡೇರುವುದರ ಜೊತೆಗೆ ನೋಡುವ ಪ್ರತಿ ಮಗುವಿಗೂ ಸಹಾಯವಾಗುತ್ತದೆ. ಆರಂಭದ ದಿನಗಳಲ್ಲಿ ಹಾಡುಗಳನ್ನು ಕೆಲವರಲ್ಲಿ ಕೇಳಿದರೂ  ಸಮಯಕ್ಕೆ ಸರಿಯಾಗಿ ನೀಡಲಿಲ್ಲ. ಹಾಗಾಗಿ ನಾನೇ  ಹಾಡುಗಳನ್ನು ಸೃಷ್ಟಿಸಿದೆ. ತುಳು ಸಾಹಿತ್ಯ ಕೂಡ ರಚಿಸಿದೆ. ಹೀಗೆ ಯಾರ ಮೇಲೂ ಅವಲಂಬಿತರಾಗದೆ ನಮ್ಮಿಂದಾಗುವುದನ್ನು ನಾವು ಮಾಡಿದಾಗ ನಮ್ಮಿಂದಾಗದ್ದನ್ನು ದೇವರು ಮಾಡುತ್ತಾನೆ.

ನನಗಿವರು ಆತ್ಮೀಯರಲ್ಲೊಬ್ಬರು. ದೂರದ ಬೆಟ್ಟ ನುಣ್ಣಗೆ ಅಂದ ಹಾಗೆ ವಂದನಾ ಅವರನ್ನು ಕಂಡ ತಕ್ಷಣ ಬಂಟ ಸಮುದಾಯದ ಈ ಮಹಿಳೆಗೆ ಎಲ್ಲಾ ಅನುಕೂಲಗಳಿರಬಹುದು ಎಂದು ಸಹಜವಾಗಿ ಬಹಳ ಜನರಿಗೆ ಅನಿಸಿರಬಹುದು. ಇದನ್ನು ಹಲವರು ನನ್ನಲ್ಲಿ ಹೇಳಿಕೊಂಡಿದ್ದಾರೆ. ಆದರೆ ವಾಸ್ತವ ಹಾಗಿಲ್ಲ. ಆಕೆ ಇವತ್ತು ಏನೇ ಸಾಧಿಸಿದ್ದರೂ ಅದಕ್ಕೆ ಅವರ ಶ್ರಮವೇ ಪ್ರಧಾನ. ‘ತಾಳಿದವನು ಬಾಳಿಯಾನು’ ಎನ್ನುವ ನಾಣ್ಣುಡಿಯ ಮೇಲೆ ಅವರಿಗೆ  ಅಪಾರ ನಂಬಿಕೆ.

Life ನಲ್ಲಿ Busy ಇದ್ದು, ಮುಖದಲ್ಲೊಂದು ನಗುವಿದ್ದರೆ ಏನನ್ನೂ ಗೆಲ್ಲಬಹುದು. ನೀವು ಸೂಕ್ಷ್ಮವಾಗಿ ಗಮನಿಸಿದರೆ ಇವರ ವಿಡಿಯೋಗಳಲ್ಲಿ ಅಮೋಘ ಸಂಕಲನ, ಅತ್ಯದ್ಭುತವೆನಿಸುವ Graphicsಗಳಿಲ್ಲ. ಅಲ್ಲಿರುವುದು Content, ಸರಳತೆ ಮತ್ತು ಆಡಂಭರವಿಲ್ಲದ ಆಪ್ತವೆನಿಸುವ ಅಭಿವ್ಯಕ್ತತೆ ಮತ್ತು ಅಭಿನಯ. ಹೀಗೆ ಪಾಠ ಹೇಳುವ ಪರಿಪಾಠಕ್ಕೆ ಹೊಸತನದ ಭಾಷ್ಯ ಬರೆದು ಸಂಚಲನ ಮೂಡಿಸಿದ ವಂದನಾ ರೈ ಅವರ ಸಾಧೆನೆಗೊಂಡು ಸಲಾಂ ಹೇಳಿ ಅವರ ಮತ್ತಷ್ಟು ಯೋಜನೆಗಳು ನಿಮ್ಮ ಸಹಕಾರದಿಂದ ಸಾಕಾರಗೊಳ್ಳಬಲ್ಲದು. ಅದಕ್ಕೆ ಲಕ್ಷಗಟ್ಟಲೆ ಹಣದ ಹೂಡಿಕೆ ಇಲ್ಲ. ಹಾಗಾದ್ರೆ ಹೇಗೆ ? ಆ ಕುರಿತು ನೀವು ಅವರಲ್ಲೇ ಮಾತನಾಡಬೇಕು..

Celebrity status ಎಲ್ಲಾ ನನಗೆ ಬೇಡ. ಎಲ್ಲರೊಂದಿಗೆ ಬೆರೆತು ಸರಳವಾಗಿ ಬಾಳಿ ಬದುಕಿದರೆ ಸಾಕು ಎನ್ನುವ ವಿನಮ್ರತೆಯ ಮಾತನಾಡುವ ವಂದನಾ ಟೀಚರ್ ಕುರಿತು ಹೇಳಲು ಹೋದರೆ ಸಾವಿರ ಮಾತಿದೆ…

 


 

Disclaimer: The views and opinions expressed in this article are those of the interviewee and do not necessarily reflect the views or positions of this website (avinashkamath.in)

LEAVE A REPLY

Please enter your comment!
Please enter your name here