ಕೋಟತಟ್ಟು ಗ್ರಾಮ ಪಂಚಾಯತ್ ಪ್ರದಾನ ಮಾಡುವ ಪ್ರತಿಷ್ಠಿತ ‘ ಶಿವರಾಮ ಕಾರಂತ (Dr Kota Shivaram Karanth) ಹುಟ್ಟೂರ ಪ್ರಶಸ್ತಿ’ ಗೆ ಈ ಬಾರಿ ಸುಪ್ರಸಿದ್ಧ ನಟ ರಮೇಶ್ ಅರವಿಂದ್ ಆಯ್ಕೆಯಾಗಿದ್ದಾರೆ. ಇತ್ತೀಚೆಗಷ್ಟೇ ಡಾಕ್ಟರೇಟ್ ಪದವಿ ಪಡೆದ ಬೆನ್ನಿಗೆ ಈ ಪ್ರಶಸ್ತಿಗೆ ಭಾಜನರಾಗಿರುವುದು ಅವರ ಸಾಧನೆಗೆ ಸಂದ ಬಹು ದೊಡ್ಡ ಗೌರವವಾಗಿದೆ ಎಂದೇ ಭಾವಿಸುತ್ತೇನೆ.
ರಮೇಶ್ ಅರವಿಂದ್ (Dr Ramesh Aravind) ಕುರಿತು ಕನ್ನಡಿಗರಿಗೆ ವಿಶೇಷವಾಗಿ ವಿವರಿಸಬೇಕಾಗಿಲ್ಲ. (Man who probably needs no introduction) ಕನ್ನಡದ ಪ್ರತಿ ಮನೆ, ಮನದಲ್ಲಿ ಬೇರೂರಿರುವ ಅಜಾತಶತ್ರು ನಟ. ತನ್ನ ವೃತ್ತಿರಂಗದಲ್ಲಿ ಯಾವುದೇ Controversyಗಳಿಲ್ಲದೆ ಇರುವ ಕೆಲವೇ ನಟರುಗಳಲ್ಲಿ ರಮೇಶ್ ಮುಂಚೂಣಿಯಲ್ಲಿ ಕಾಣಸಿಗುತ್ತಾರೆ. ಮೂಲತಃ ಇಂಜಿನಿಯರ್ ಪದವೀಧರರಾದರೂ ಸಿನೆಮಾರಂಗದಲ್ಲಿ ಬಹು ದೊಡ್ಡ ಸಾಧನೆ ಮಾಡಿರುವ ರಮೇಶ್ ಕುರಿತು ಹೇಳಲು ಸಾವಿರ ಮಾತಿದೆ.
‘ Dr. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ’ ಯ ವಿಶೇಷತೆ ನಿಮಗೆ ಗೊತ್ತೇ ?
ಹೆಸರೇ ಹೇಳುವಂತೆ ಕನ್ನಡದ ಆಸ್ತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತರ ಹೆಸರಿನಲ್ಲಿ ಕೊಡಮಾಡುವ ಪ್ರಶಸ್ತಿ ಇದು. ಕಾರಂತರ ಆಸಕ್ತಿಯ ಹಲವು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದಡವರನ್ನು ಆಯ್ಕೆ ಮಾಡುವುದು ವಾಡಿಕೆಯಾಗಿದೆ. ಇದಕ್ಕೆಂದೇ ಪ್ರತ್ಯೇಕ ಸಮಿತಿಯೊಂದಿದೆ. ವರ್ಷವೂ ಅವರು ಸೇರಿ ಒಂದಿಷ್ಟು ಹೆಸರುಗಳನ್ನು ಕಲೆ ಹಾಕಿ, ಅಳೆದು ತೂಗಿ ಕೊನೆಗೊಬ್ಬರ ಹೆಸರನ್ನು ಅಂತಿಮಗೊಳಿಸುತ್ತಾರೆ. ಇಲ್ಲಿ ರಾಜಕೀಯ ಇಚ್ಛಾಶಕ್ತಿಯಾಗಲಿ, ಗಣ್ಯ ವ್ಯಕ್ತಿಗಳು ಪ್ರಭಾವ ಬೀರಲು ಸಾಧ್ಯವೇ ಇಲ್ಲ. ಅದಕ್ಕಾಗೇ ಈ ಪ್ರಶಸ್ತಿಗೆ ವಿಶೇಷ ಗೌರವ ಇದೆ. ಕಾರಂತರ ಮನೆಯಿರುವುದು ಕೂಡ ಇದೇ ಕೋಟತಟ್ಟುವಿನಲ್ಲಿ. 2005ರಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಈ ವಿಶೇಷ ಪರಿಕಲ್ಪನೆಯನ್ನು ಜಾರಿಗೆ ತಂದಾಗ ಇಂದಿನ ಕರ್ನಾಟಕ ಸರ್ಕಾರದ ಮಂತ್ರಿಗಳಾದ ಕೋಟ ಶ್ರೀನಿವಾಸ ಪೂಜಾರಿಯವರು (Kota Srinivas Poojary) ಇದರ ಸಾರಥ್ಯ ವಹಿಸಿಕೊಂಡರು.ಉದ್ಯಮಿ ಆನಂದ್ ಸಿ ಕುಂದರ್(Anand C Kunder) ಕನಸುಗಳಿಗೆ ಬಣ್ಣ ತುಂಬಿದರು. ಖ್ಯಾತ ಚಿತ್ರಕಲಾವಿದರಾದ ಕೆ. ಕೆ. ಹೆಬ್ಬಾರ್ ಅವರು ಬಿಡಿಸಿದ ಕಾರಂತರ ‘ಹುಚ್ಚು ಮನಸಿನ ಹತ್ತು ಮುಖಗಳು’ ಕಾದಂಬರಿಯಾಧಾರಿತ ಸುಮಾರು 50 ಸಾವಿರ ರೂಪಾಯಿ ಬೆಲೆಬಾಳುವ ಚಿತ್ರದ ಫಲಕವನ್ನು ಪ್ರದಾನ ಮಾಡಲಾಗುತ್ತದೆ. ಕಾರಂತರ ಜನ್ಮದಿನದಂದೇ (Oct 10) ಈ ಕಾರ್ಯಕ್ರಮ ಜರಗುತ್ತದೆ. ಅಂದು ಪ್ರಶಸ್ತಿ ಪುರಸ್ಕೃತರನ್ನು ವಾದ್ಯ ಘೋಷದೊಂದಿಗೆ ಮೆರವಣಿಗೆಯಲ್ಲಿ ಕರೆದುಕೊಂಡು ಬಂದು ಸಾವಿರಾರು ಜನರ ಸಮ್ಮುಖದಲ್ಲಿ ಅವರ ಸಾಧನೆಯನ್ನು ಸಂಭ್ರಮಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸಾಹಿತ್ಯಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೋಟ ಪರಿಸರಕ್ಕೆ ವಿಶೇಷ ಹೆಗ್ಗಳಿಕೆ ಇದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ ಇಡೀ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಒಂದು ಶ್ರೇಷ್ಠ ಸಾಹಿತಿಯೊಬ್ಬರ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ಕೊಡ ಮಾಡುವ ಕೀರ್ತಿ ಕೋಟತಟ್ಟು ಗ್ರಾಮ ಪಂಚಾಯ್ತಿಗೆ ಸಲ್ಲುತ್ತದೆ !!
ಡಾ || ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪುರಸ್ಕೃತರು
ಮಂಗಳೂರಿನ 92.7 Big Fm Radio Stationನಲ್ಲಿ ಕಾರ್ಯನಿರ್ವಹಿಸುತ್ತಿದ್ದ ದಿನಗಳಲ್ಲಿ ರಮೇಶ್ ಅವರ ಜೊತೆ ನನಗೆ ನಿರಂತರ ಸಂಪರ್ಕ ಇತ್ತು.ವಿಶೇಷ ಕಾರ್ಯಕ್ರಮ, ದಿನಗಳು ಇದ್ದಾಗ ಅವರ ಮಾತಿಗಾಗಿ ಆಗಾಗ ಕರೆ ಮಾಡುತ್ತಿದ್ದೆ. ಆ ದಿನಗಳಲ್ಲಿ ರೇಡಿಯೋದಲ್ಲಿ ಕನ್ನಡ ಚಿತ್ರಗೀತೆಗಳು ರಾರಾಜಿಸುತ್ತಿದ್ದವು. ಹಿಂದಿ ಹಾಡುಗಳ ಹಾವಳಿಯ ನಡುವೆ ಕನ್ನಡ ಚಿತ್ರಗೀತೆಗಳನ್ನು ಜನರು ಭಾಷೆ, ಗಡಿ ಮೀರಿ ಸ್ವೀಕರಿಸಿದ್ದರು.ಈ Trend ‘ಮುಂಗಾರು ಮಳೆ’ ಮೂಲಕ ಆರಂಭ ಆಯಿತು ಎನ್ನಬಹುದು.ಇದನ್ನೇ ಆಧಾರವಾಗಿಟ್ಟುಕೊಂಡು 2010ರಲ್ಲಿ ಜಯಂತ ಕಾಯ್ಕಿಣಿ ಅವರ ಸಿನಿಮಾ ಗೀತೆಗಳ ಕುರಿತು ಅಭಿಪ್ರಾಯ ಸಂಗ್ರಹ ಮಾಡಿ ಒಂದು ಪುಸ್ತಕ ಪ್ರಕಟಿಸುವ ವಿನೂತನ ಯೋಜನೆಯೊಂದರ ಕಲ್ಪನೆಯ ಹುಳವನ್ನು ನನ್ನ ಮನಸಿನಲ್ಲಿ ಹರಿಬಿಟ್ಟವರು ಕೋಟದ ನರೇಂದ್ರ ಕುಮಾರ್ ಅವರು. ನರೇಂದ್ರ ಮಾಷ್ಟ್ರು ಅಂತಾನೆ ಇವರು ಜನಜನಿತ. ನಂತರ ಈ ಕೃತಿ ತಯಾರಾಗಿ ಜಯಂತ್ ಸರ್ ಬಿಡುಗಡೆಮಾಡುವವರೆಗೂ ನನ್ನೊಂದಿಗೆ ಮೇಷ್ಟ್ರು ನಿಂತರು. ಇವರ ಹೆಸರನ್ನು ಇಲ್ಲಿ ಯಾಕೆ ಉಲ್ಲೇಖಿಸಿದ್ದೇನೆ ಅಂದ್ರೆ ಕೋಟದ ಕಾರಂತ ಭವನದಲ್ಲಿ ಜರಗುವ ಎಲ್ಲಾ ಕಾರ್ಯಕ್ರಮಗಳ ಬೆನ್ನೆಲುಬು ನರೇಂದ್ರ ಮಾಷ್ಟ್ರು.
ನಾಡಿದ್ದು ರಮೇಶ್ ಅವರ ಕಾರ್ಯಕ್ರಮದ ರೂಪುರೇಷೆಯಿಂದ ಹಿಡಿದು ಹಿಡಿದು, ಖರ್ಚು ವೆಚ್ಚ ಸೇರಿದಂತೆ ಎಲ್ಲಾ ವಿಭಾಗದಲ್ಲಿ ಇತರರ ಸಹಕಾರದೊಂದಿಗೆ ಅನುಷ್ಠಾನಗೊಳಿಸುವುದು ಇವರೇ. ಇವರಿಗೂ ಕಾರಂತರ ಹಾಗೆ ಹತ್ತು ಹಲವು ಕ್ಷೇತ್ರಗಳಲ್ಲಿ ವಿಶೇಷ ಆಸಕ್ತಿ. ಸಂಗೀತ, ಸಾಹಿತ್ಯ, ಸಾಂಸ್ಕೃತಿಕ, ವ್ಯಕ್ತಿತ್ವ ವಿಕಸನ, ಬರವಣಿಗೆ, ಪ್ರಯಾಣ ಸೇರಿದಂತೆ ನಮ್ಮಂತವರಿಗೆ ಯಾವುದೇ ಅಪೇಕ್ಷೆ ಇಲ್ಲದೆ ಪ್ರೋತ್ಸಾಹ ನೀಡುವುದು ಅವರ ವ್ಯಕ್ತಿತ್ವದಲ್ಲಿ ಹಾಸು ಹೊಕ್ಕಾಗಿದೆ.
ಅಂದ ಹಾಗೆ ನಾನು ಸಂಪಾದಿಸಿದ ಕೃತಿಯಲ್ಲಿ ಜಯಂತರ ಆಯ್ದ ಸಿನಿಮಾ ಗೀತೆಗಳಿಗೆ ಅಭಿಪ್ರಾಯ ಬರೆದವರಲ್ಲಿ ರಮೇಶ್ ಅರವಿಂದ್ ಕೂಡ ಒಬ್ಬರು. ಅವರೇ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ Crazy kutumba ಚಿತ್ರದ Ricky Kej ಸಂಗೀತ ನಿರ್ದೇಶನದ ‘ನಾನಾದರೆ ಸಿರಿವಂತ ನನ್ನ ಕತೆ ಬೇರೆ ಇತ್ತು’ ಹಾಡಿಗೆ ಅನಿಸಿಕೆ ಬರೆದು ನೀಡಿದ್ದರು. ಅದು ಹೀಗಿದೆ ನೋಡಿ…
ನನ್ನ 2 ವರುಷಗಳ Radio ಯಾನ ಮುಗಿಸಿ ದಕ್ಷಿಣ ಕನ್ನಡ ಮತ್ತು ಮಲೆನಾಡು ಸಂಪರ್ಕಿಸುವ ಹೊಸ ಪರಿಕಲ್ಪನೆಯ ಸ್ಪಂದನ ವಾಹಿನಿ ಸೇರಿಕೊಂಡಾಗ ಚಿತ್ರದ ಪ್ರಚಾರವೊಂದಕ್ಕೆ ಅವರು ಮಂಗಳೂರಿಗೆ ಬಂದಿದ್ದರು.ಸಂದರ್ಶನಕ್ಕೆ ನಾನು ಅವರಲ್ಲಿ ವಿನಂತಿಸಿದಾಗ Gold Finch Hotelನ Open Gardenನಲ್ಲಿ ಇಳಿ ಸಂಜೆ ಸುಮಾರಿಗೆ ಸಂದರ್ಶನ ನೀಡಿದ್ದರು. ಮುಗಿಸಿದಾಗ ‘ ನನ್ನ Careerನಲ್ಲಿ ಹಲವು ಸಂದರ್ಶನ ನೀಡಿದ್ದೇನೆ ಆದ್ರೆ There were hardly any retakes,i like that’ ಎಂದು ಪ್ರಶಂಶಿಸಿದ್ದರು.
ಮುಗಿಸುವ ಮುನ್ನ
ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳಿಗೆ ಬೆಲೆಯೇ ಇರದ ಈ ಕಾಲದಲ್ಲಿ ವರ್ಷವೂ ಈ ಪ್ರಶಸ್ತಿ ಯಾರ ಪಾಲಾಗುತ್ತದೆ ಅನ್ನೋ ಕುತೂಹಲ ನನಗೆ ಸೇರಿದಂತೆ ಸಮಾನ ಮನಸ್ಕ ಗೆಳೆಯರ ಬಳಗದಲ್ಲಿ ವರ್ಷವೂ ಗರಿಗೆದರಿರುತ್ತದೆ. ಅಷ್ಟರ ಮಟ್ಟಿಗೆ ಈ ಪ್ರಶಸ್ತಿ ಘನತೆ, ಗೌರವ ಕಾಯ್ದುಕೊಂಡಿದೆ.ಒಬ್ಬ ನಟ, ನಿರ್ದೇಶಕ, ನಿರ್ಮಾಪಕ, ನಿರೂಪಕ, ವ್ಯಕ್ತಿತ್ವ ವಿಕಸನ ತರಬೇತುದಾರ ಈಗ ಲೇಖಕರಾಗಿ ಹೊರಹೊಮ್ಮಿರುವ ರಮೇಶ್ ನಮಗೆ ಸ್ಫೂರ್ತಿ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ ಅವರ ‘ಪ್ರೀತಿಯಿಂದ ರಮೇಶ್’ ಕೃತಿ ತಿಂಗಳೊಳಗೆ 3 ನೇ ಮರುಮುದ್ರಣ ಕಂಡಿದೆ!
ಮೊನ್ನೆ ಬೆಂಗಳೂರಿನ ಪತ್ರಕರ್ತ ಮಿತ್ರರೊಡನೆ ಮಾತನಾಡುತ್ತಿರುವಾಗ ರಮೇಶ್ ವ್ಯಕ್ತಿತ್ವದ ಕುರಿತು ಹೀಗೆಂದಿದ್ದರು. ಯಾರಾದರೂ ಅವರಲ್ಲಿ Controversy ವಿಚಾರಗಳ ಕುರಿತು ಅಭಿಪ್ರಾಯ ಕೇಳಿದರೆ ‘ನೋಡಿ ಆ ಹಕ್ಕಿ ಎಷ್ಟು ಸ್ವಚ್ಛಂದವಾಗಿ ಹಾರುತ್ತಿದೆ ಅಲ್ವಾ. ನಂಗೂ ಹಾಗೆ Free ಆಗಿರಬೇಕೆಂಬ ಅಸೆ’ ಎಂದಿದ್ದರಂತೆ !ಅವರ Youtube ವಿಡಿಯೋಗಳನ್ನು ನೋಡಿದಾಗ ಸಕಾರಾತ್ಮಕ ಮನೋಭಾವನೆಯೊಂದೇ ಯಶಸ್ಸಿಗೆ ಮೂಲ ಎಂದು ಮೇಲ್ನೋಟಕ್ಕೆ ಅನಿಸಿಬಿಡುತ್ತದೆ. ಈ ದಿನಗಳಲ್ಲಿ GB ಗಟ್ಟಲೆ Internet ಇರುವಾಗ ಏನೇನೋ ಕಂಡು ಕಾಲಹರಣ ಮಾಡುವುದಕ್ಕಿಂತ ಇಂತವರ ಮಾತುಗಳನ್ನು ಕೇಳುತ್ತಲೇ ಬದುಕು ಕಟ್ಟಿಕೊಳ್ಳಬಹುದು. ಭಗವಂತ ನಮಗೆ ಕರುಣಿಸಿರುವ ಪ್ರತಿಭಾ ಕ್ಷೇತ್ರಗಳನ್ನು ಗುರುತಿಸಿ ಆ ದಾರಿಯಲ್ಲಿ ಸಾಗೋಣ ಎನ್ನುವ ಹಾರೈಕೆಯೊಂದಿಗೆ ರಮೇಶ್ ಅವರಿಗೆ ಅಭಿನಂದನೆ, ಓದಿದ ನಿಮಗೆ All the best !