Home Interviews Daivaradhane Insights by Kumara Pambada Post the Movie Kantara

Daivaradhane Insights by Kumara Pambada Post the Movie Kantara

1

ಕಾಂತಾರ ಬಿಡುಗಡೆಯಾಗಿ ತಿಂಗಳು ಕಳೆಯಲು ಇನ್ನೇನು ಕೇವಲ 4 ದಿನಗಳು ಬಾಕಿ ಇದೆ. ನವರಾತ್ರಿಯ ಪರ್ವಕಾಲದಲ್ಲಿ ಬಿಡುಗಡೆಗೊಂಡ ಈ ಚಿತ್ರ ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ತೆರೆಕಂಡು ನಂತ್ರ ತಮಿಳು, ತೆಲುಗು, ಹಿಂದಿ, ತುಳು ಭಾಷೆಯ್ಲಲೂ Dub ಗೊಂಡು ಇತರ ರಾಜ್ಯಗಳಲ್ಲೂ ಯಶಸ್ಸಿನ ಪತಾಕೆಯನ್ನು ಜೋರಾಗೇ ಹಾರಿಸುತ್ತಿದೆ. ಅಷ್ಟಕ್ಕೂ ಈ ಸಿನೆಮಾವನ್ನು ಪ್ರೇಕ್ಶಕರೇ ಕೈಗೆತ್ತಿಕೊಂಡು ಗೆಲ್ಲಿಸಿಕೊಟ್ಟರು ಎನ್ನಬೇಕು. ಯಾಕಂದ್ರೆ ಸಾಮಾಜಿಕ ಜಾಲತಾಣದ ತುಂಬೆಲ್ಲಾ ‘ಕಾಂತಾರ‘ ವೇ ತುಂಬಿ ತುಳುಕುತ್ತಿರುವುದು ಅದಕ್ಕೆ ಪ್ರಬಲ ಸಾಕ್ಷಿಯಾಗಿದೆ. ದೈವಾರಾಧನೆಯೇ ಪ್ರಮುಖ ಕಥಾಹಂದರವಾಗಿದ್ದರಿಂದ ತುಳುನಾಡಿನ ಪ್ರೇಕ್ಷಕರು ಇದನ್ನು ಆಪ್ತವಾಗಿ ಸ್ವೀಕರಿಸಿದರು. ಆದರೆ ಈ ಆಚರಣೆ ಕುರಿತು ಕಿಂಚಿತ್ತೂ ತಿಳಿಯದ ದೇಶದ ನಾನಾ ಭಾಗದ ಸಿನಿಪ್ರಿಯರು ಮೆಚ್ಚಿದ್ದು ವಿಶೇಷವೇ ಆಗಿದೆ. ದೇಶದ ಸುಪ್ರಸಿದ್ಧ ನಟರು  ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದು ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಿತು. ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ‘ಕಾಂತಾರ‘ ಈವರೆಗಿನ ಹೆಚ್ಚಿನೆಲ್ಲಾ ದಾಖಲೆಗಳನ್ನು ಮುರಿದು ಯಶಸ್ಸಿನ ಓಟವನ್ನು ಇನ್ನೊಂದಿಷ್ಟು ದಿನಗಳ ಕಾಲ ಮುಂದುವರೆಸುವುದರಲ್ಲಿ ಅನುಮಾನವಿಲ್ಲ!

 

ಸ್ನೇಹಿತರಾದ ಪುರಂದರ ಸಾಲ್ಯಾನ್ ಜೊತೆ ಮೊನ್ನೆ ಬೇರೊಂದು ವಿಷಯ ಸಂಬಂಧಿ ಮಾತನಾಡುತ್ತಿದ್ದಾಗ ಕಾಂತಾರ ಸಹಜವಾಗಿ ಮಧ್ಯೆ ಬಂದೇ ಬಿಡ್ತು. ಅವಿನಾಶ್ ರೇ ‘ ಈ ಸಿನೆಮಾವನ್ನು ದೈವದ ಶಕ್ತಿಯೇ ಮಾಡಿಸಿದೆ. ಎಲ್ಲರೂ ದುಡ್ಡಿನ ಹಿಂದೆ ಬಿದ್ದು Foreign ಕಡೆಗೆ ಮುಖ ಮಾಡುತ್ತಿದ್ದಾರೆ. ವರ್ಷಕ್ಕೊಮ್ಮೆ ದೈವದ ಮನೆ ಕಡೆ ಬರುವುದು ಇತ್ತೀಚಿಗೆ ಕಡಿಮೆಯಾಗುತ್ತಿದೆ. ಈ ಚಿತ್ರ ವೀಕ್ಷಿಸಿ ದೈವದ ಮಹಿಮೆಯನ್ನು ದೈವವೇ ನೆನಪಿಸಿದಂತಾಗಿದೆ. ಎಷ್ಟೋ ಮಂದಿ ದೂರದೂರಿನಿಂದ ಕಾಣಿಕೆ ಎತ್ತಿಡುತ್ತಿದ್ದಾರಂತೆ’ ಎಂದಿದ್ದರು.

 

ವಾರದ ಹಿಂದೆ ರಿಷಬ್ ಶೆಟ್ಟರ ಮೇಲೆ ದೈವ ಅವಾಹನೆಯಾದ ಕುರಿತ ಲೇಖನವನ್ನು ವಿಶ್ವದಾದ್ಯಂತ ಓದುಗರು ಗಮನಿಸಿ ಪ್ರತಿಕ್ರಿಯಿಸಿದ್ದಾರೆ. ಗೆಲ್ಲಿಸಿದ ನಿಮಗೆ ಧನ್ಯವಾದಗಳನ್ನು ಸಮರ್ಪಿಸುತ್ತಾ ಕುಮಾರ ಪಂಬದ ಅವರು ದೈವಾರಾಧನೆ ಕುರಿತು ಹೇಳಿದ ಮತ್ತೊಂದಿಷ್ಟು ಸೂಕ್ಷ್ಮ ವಿಚಾರಗಳನ್ನು ನಿಮ್ಮ ಮುಂದೆ ತೆರೆದಿಡುತ್ತಿದ್ದೇನೆ. ಅವರ ಈ ಮಾತುಗಳಿಂದ ತುಳುನಾಡಿನ ದೈವಭಕ್ತರ ಭಕ್ತಿಗೆ ಮತ್ತಷ್ಟು ಪುಷ್ಟಿ ದೊರೆಯಬಹುದು ಜೊತೆಗೆ ಸಿನಿಮಾ ನೋಡಿ ದೈವದ ಮಹಿಮೆ, ಮಹತ್ವ ತಿಳಿದುಕೊಂಡ ಇತರರಿಗೂ ದೈವ ಭಕ್ತಿ ನಿಜವಾಗಿಯೂ ಹೇಗಿರಬೇಕೆಂಬ ಸ್ಪಷ್ಟ ಕಲ್ಪನೆ ದೊರೆಯಬಹುದು. ಬನ್ನಿ, ತಿಳಿಯೋಣ..

 

ಭೂತಾರಾಧನೆ – ದೈವಾರಾಧನೆ ನಡುವಿನ ವ್ಯತ್ಯಾಸ ಏನು ?

ನಾನು ತಿಳಿದ ಪ್ರಕಾರ ಅವೆರಡೂ ಒಂದೇ. ಭೂತಾರಾಧನೆ ಅಂದ್ರೆ ಮನೆಗೆ ಸಂಬಂಧಪಟ್ಟಿದ್ದು ದೈವಾರಾಧನೆ ಅಂದ್ರೆ ಊರಿಗೆ, ಮನೆತನಕ್ಕೆ ಸಂಬಂಧಿಸಿದ್ದು ಎಂದು ತಿಳಿದವರು ಹೇಳಿದ್ದಾರೆ. ಭೂತ ಅಂದ್ರೆ ಕಳೆದು ಹೋದವರು, ದೈವ ಅಂದ್ರೆ ಅಂಶಗಳಿಂದ ಹುಟ್ಟಿದವರು ಎಂದೂ ಹೇಳುತ್ತಾರೆ.

 

ದೈವಾರಾಧನೆ ಹೇಗಿರಬೇಕು? ಒಬ್ಬ ಭಕ್ತ ಏನನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು ?

ದೇವಸ್ಥಾನಕ್ಕೂ, ದೈವಸ್ಥಾನಕ್ಕೂ ನಿಯಮಗಳು ಅಂತಿರುತ್ತದೆ. ಇವೆಲ್ಲವನ್ನೂ ನಾವು ವ್ಯಕ್ತಿಗಳು ಮಾಡಿಕೊಂಡದ್ದು. ಅವುಗಳ ಹಿನ್ನೆಲೆ ಏನು ಎನ್ನುವುದು ಈವರೆಗೆ ಹೆಚ್ಚಾಗಿ ತಿಳಿದಿರಲಿಲ್ಲ. ಆದ್ರೆ ಈಗ ಅದು ಸ್ಪಷ್ಟವಾಗಿ ಅರ್ಥವಾಗುತ್ತಿದೆ. ಕೊರೊನ ಹಿನ್ನೆಲೆಯಲ್ಲಿ ಹೇಳುವುದಾದರೆ ಕೈ, ಕಾಲು ತೊಳೆದು ಮನೆಯೊಳಗೆ ಬರಬೇಕು, ಬಿಸಿ ನೀರು ಸೇವಿಸಬೇಕು ಎನ್ನುವ ಸಂಪ್ರದಾಯ ಹಿಂದಿನಿಂದಲೂ ಇತ್ತು. ಈ ಸಂಪ್ರದಾಯ ಮೊನ್ನೆ ಕೊರೊನ ಸಂದರ್ಭ ‘ಚಿಕಿತ್ಸೆ’ಯಾಗಿ ಬದಲಾಯಿತು. ದೈವಾರಾಧನೆ, ನಂಬುವವನಿಗೆ ತೃಪ್ತಿ ನೀಡುವ ಹಾಗೆ ಆರಾಧನೆ ಇರಬೇಕು. ದೈವ ಎನ್ನುವುದು ‘ಪಾರದರ್ಶಕವಾದ ಕನ್ನಡಿ’. ಅಲ್ಲಿ ಮೋಸ ಇಲ್ಲವೇ ಇಲ್ಲ. ನೀವು ಆ ಕನ್ನಡಿಯ ಮುಂದೆ ನಿಂತು ಅತ್ತರೆ ಅದು ಅಳುತ್ತದೆ, ನಕ್ಕರೆ ನಗುತ್ತದೆ. ಕಪಟ ಮಾಡಿದರೆ ಅದು ತೋರಿಸಿಕೊಡುತ್ತದೆ. ನನಗಿದು ಅನುಭವಕ್ಕೂ ಬಂದಿದೆ. ಮುಲ್ಕಿಯಲ್ಲಿ ನಡಿಬೆಟ್ಟು ಧೂಮಾವತಿ ದೈವಸಾನಿಧ್ಯವಿದೆ. ಅದರ ಬೆಳ್ಳಿಯ ಮೊಗ ಆರಾಧನೆ ಮಾಡುವವರ ಮುಖದ ಹಾಗೆ ಕಂಡು ಬರುತ್ತದೆ. ನನಗೆ ಈ ರೀತಿ ಕನಿಷ್ಠ 50 ಕಡೆಗಳಲ್ಲಾದರೂ ಅನುಭವಕ್ಕೆ ಬಂದಿದೆ.  ಇದು ನನ್ನ ಕಲ್ಪನೆಯ ಆರಾಧನೆ.

Daiva Nartaka Kumara Pambada. Pic Courtsey - Ashwin Hebbar
Daiva Nartaka Kumara Pambada. Pic Courtsey – Ashwin Hebbar

 

ನೀವು ತಾಯಿ ಮಂತ್ರದೇವತೆ, ಕಲ್ಲುರ್ಟಿ ಆರಾಧಕರು. ಭಕ್ತರು ತಮ್ಮ ಕೆಲಸ ನೆರವೇರುತ್ತದೆ ಎನ್ನುವ ಮನೋಭಾವನೆಯಿಂದ ನಿಮ್ಮಲ್ಲಿಗೆ ಬರುತ್ತಾರೆ. ಹಾಗಾದರೆ ನಿಮಗೂ – ಆರಾಧಿಸುವ ದೈವಗಳಿಗೂ ಇರುವ ಸಂಬಂಧ ಏನು ?

ನನ್ನ ಧರ್ಮಚಾವಡಿಯ ಒಳಗೆ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದೇನೆ, ಹೂವುಗಳಿಂದ ಸಿಂಗರಿಸಿ ದೀಪ ಬೆಳಗಿಸಿ ಪೂಜಿಸುತ್ತೇನೆ. ನಿರ್ಜೀವ ಮೂರ್ತಿ ಎಂದು ನಾನದನ್ನು ಕಂಡಿಲ್ಲ. ಅವರೂ ನಮ್ಮಂತೆಯೇ ಆದರೆ ದೈವೀ ಶಕ್ತಿಯುಳ್ಳವರು ಎಂದು ಭಾವಿಸುತ್ತೇನೆ. ಶಿಲೆ ಮತ್ತು ಪಂಚಲೋಹಗಳ ಮೂರ್ತಿಗಳೆದುರಿಗೆ ನೀವು Negative ನೀಡಿದರೆ ಅದನ್ನು ಹೀರಿಕೊಂಡು Positive ಸಂಗತಿಗಳನ್ನು ನೀಡುತ್ತದೆ ಎಂದು ವಿಜ್ಞಾನ ಹೇಳುತ್ತದೆ. ಬೆಳ್ಳಿ ಬಂಗಾರದ ಮೂರ್ತಿಗಳಿಗೆ ಮೊದಲಿನಿಂದ ಕೊನೆವರೆಗೂ ಅದೇ ಬಣ್ಣವಿರುತ್ತದೆ. ಪಂಚಲೋಹದ ಮೂರ್ತಿಗಳು ಮೊದಲು ಹಳದಿ ಬಣ್ಣದಲ್ಲಿರುತ್ತದೆ. ನೀರೆರೆದು ಅಭಿಷೇಕ ಮಾಡಿ ಸ್ವಲ್ಪ ದಿನಗಳ ನಂತ್ರ ಕಂದು ಬಣ್ಣದ ಮೂರ್ತಿಯಾಗಿ ಪರಿವರ್ತನೆ ಹೊಂದುತ್ತದೆ. ಹಾಗಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶಿಲೆ ಮತ್ತು ಪಂಚಲೋಹದ ಮೂರ್ತಿಗಳನ್ನು ಹೆಚ್ಚಾಗಿ ಆರಾಧಿಸುತ್ತಾರೆ.

Rishab Shetty Kantara Kumara Pambada
Mantra Devate, Kallurti Dharma Chavadi, Marne,Udupi

 

ದೈವದ ಮೇಲೆ ನಂಬಿಕೆ ಇಡುವುದು ಹೇಗೆ ?

‘ನನ್ನನ್ನು ಹೆತ್ತ ತಾಯಿ ಇವಳೇ’ ಎನ್ನುವ ನಂಬಿಕೆ ನಮಗೆ ಹೇಗಿದೆಯೋ ಅದೇ ನಂಬಿಕೆ ದೈವದ ಮೇಲಿಡಬೇಕು. ತಾಯಿ ಹೇಳಿದ ಮಾತನ್ನು ನಾವು ಯಾವುದೇ ಅನುಮಾನ, ಷರತ್ತಿಲ್ಲದೆ ಹೇಗೆ ನಂಬುತ್ತೇವೋ ಅದೇ ರೀತಿ ದೈವದ ಮೇಲೆ ಸಂಪೂರ್ಣ ನಂಬಿಕೆ ಇಡಬೇಕು.

Daiva Nartaka Kumara Pambada. Pic Courtsey - Ashwin Hebbar
Daiva Nartaka Kumara Pambada. Pic Courtsey – Ashwin Hebbar

 

ದೈವಕ್ಕೆ ಶರಣಾಗುವುದು ಹೇಗೆ ?

‘ನನಗೆ ಇಂತಿಂತಹ ಕೆಲಸ ಆಗಬೇಕು. ಅದು ನೆರವೇರಿದರೆ ನಿನಗೆ ಇಂತಿಂತಹ ಸೇವೆ ನೀಡುತ್ತೇನೆ’ ಎಂದು ಶರಣಾಗಬಾರದು. ನೀವು ನಂಬುವ ದೈವದೆದುರು ನಿಂತು ನಿಮ್ಮ ಮನಸಿನ ಮಾತನ್ನು ಆ ಶಕ್ತಿಗೆ ಹೇಳಬೇಕು, ಒಪ್ಪಿಸಬೇಕು. ನಂತ್ರ ಪ್ರತಿಯಾಗಿ ನೀವದರ ಬಗ್ಗೆ ಆಲೋಚಿಸಬೇಕಿಲ್ಲ.

ಉದಾ : ನನಗೆ ಇಂತಿಂತಹ ಅರೋಗ್ಯ ಸಮಸ್ಯೆ ಇದೆ. ಅದನ್ನು ನಿನ್ನ ಪಾದಕ್ಕೆ ಅರ್ಪಿಸುತ್ತೇನೆ ಎಂದು ಹೇಳಿ ನೀವು ಅಲ್ಲಿಂದ ಮರಳಿದ ನಂತ್ರ ಆ ಬಗ್ಗೆ ತಪ್ಪಿಯೂ ಆಲೋಚಿಸಬಾರದು. ಅದು ಅವರಿಗೆ ನೀವು ಒಪ್ಪಿಸಿ ಆಗಿದೆ. ನಾನೀಗ ಕ್ಷೇಮವಾಗಿದ್ದೇನೆ ಎಂದು ಸಕಾರಾತ್ಮಕವಾಗಿ ಆಲೋಚಿಸಬೇಕು. ನಂತ್ರ ಏನೇ ನಡೆದರೂ ಅದಕ್ಕೆ ನೀವು ನಂಬುವ ಶಕ್ತಿಗಳೇ ಕಾರಣ ಎನ್ನುವ ಭಾವನೆ ಬೇಕು. ಅಲ್ಲಿ ಯಾವುದೇ Doubt ಇರಬಾರದು. ಶರಣಾಗತಿಯಲ್ಲಿ ಮಧ್ಯವರ್ತಿ  ( mediator ) ಬರಬಾರದು. ಅಲ್ಲಿ ನೀವು ಮತ್ತು ಶಕ್ತಿ, ಇಬ್ಬರೇ.

Daiva Nartaka Kumara Pambada. Pic Courtsey - Ashwin Hebbar
Daiva Nartaka Kumara Pambada. Pic Courtsey – Ashwin Hebbar

ದೈವ – ವಿಜ್ಞಾನ, ಮನಸ್ಸು. ಹೇಗೆ ವಿಶ್ಲೇಷಿಸುತ್ತೀರಿ ?

ಇದು ಒಳ್ಳೆಯ ಪ್ರಶ್ನೆ ಆದರೆ ಕೆಲವು ನಮ್ಮ ಊಹೆಗೆ ನಿಲುಕದ್ದು. ಇನ್ನು ಕೆಲವು ವಿಜ್ಞಾನವನ್ನೂ ಮೀರಿದ್ದಾಗಿದೆ. ನಾನು ಕೋಲ ಕಟ್ಟುವಾಗ ದೈವ ಪ್ರತಿ ಬಾರಿ ಗಾಳಿ ರೂಪದಲ್ಲಿ ಬಂದ ಹಾಗೆ ಭಾಸವಾಗುತ್ತದೆ. ಆಗ ನಾನು ನಾನಾಗಿ ಇರುವುದಿಲ್ಲ. ಜೂಮಾದಿಯೋ, ಪಂಜುರ್ಲಿಯೊ ಆಗಿರುತ್ತೇನೆ. ಇದು ನನ್ನ ಮನಸ್ಸಿನಲ್ಲಾಗುವ ಬದಲಾವಣೆ.

10 ವರ್ಷಗಳ ಕಾಲ ಮಕ್ಕಳಾಗದವರಿಗೆ ದೈವದ ಮುಂದೆ ನಿಂತು ಪ್ರಾರ್ಥಿಸಿ, ಪರಿಶುದ್ಧ ಗಂಧ ಪ್ರಸಾದ ನೀಡಿ, ಅವರದನ್ನು ಸ್ವೀಕರಿಸಿದಾಗ ಗರ್ಭ ತುಂಬಿತು. ಅಲ್ಲಿ ವಿಜ್ಞಾನ, ಮನಸ್ಸು, ಪ್ರಾರ್ಥನೆ ಎಲ್ಲವೂ ಒಟ್ಟಾಗಿದೆ, ಫಲಿಸಿದೆ.

ನನ್ನ ತಾಯಿಯ ತಂದೆಯ ಹೆಸರು ಐತಪ್ಪ ಪಂಬದ. ಶಿಬರೂರು ಕೊಡಮಣಿತ್ತಾಯ ಕ್ಷೇತ್ರ ಬಹಳ ಕಾರಣಿಕ ಎನ್ನುವುದು ಎಲ್ಲರಿಗೂ ತಿಳಿದಿದೆ. ಒಮ್ಮೆ ಬೆಳಿಗ್ಗೆ ಉಳ್ಳಾಯನಿಗೆ ಅವರು ನೇಮ ಕಟ್ಟಿದರು. ಸಂಜೆಯ ನೇಮ ನೆರವೇರಿಸಲು ನನ್ನಿಂದ ಸಾಧ್ಯವೇ ಇಲ್ಲ ಎಂದು ಹೇಳಿ ಅವರ ಮನೆ ಬಜ್ಪೆಗೆ ಹೋಗಿ ಮಲಗಿದರು. ಈ ಕ್ಷೇತ್ರ ಇರುವುದು ಕಿನ್ನಿಗೋಳಿಯಲ್ಲಿ. ಸಂಜೆ ಸುಮಾರು 5: 30 ಕ್ಕೆ ನಾನು ಸೇರಿದಂತೆ ಅಲ್ಲಿನ ಕೆಲ ಹಿರಿಯರು ಕೊಡಮಣಿತ್ತಾಯನಿಗೆ ‘ ಈ ದಿನ ಸಂಜೆ 7 ಗಂಟೆಗೆ ನಡೆಯುವ ನೇಮಕ್ಕೆ ಅವರೇ ಬರಬೇಕು’ ಎಂದು ಪ್ರಾರ್ಥಿಸಿದೆವು. ಆದರೆ ಅವರಿಗೆ ನಾವ್ಯಾರೂ ದೂರವಾಣಿ ಕರೆ ಮಾಡಲಿಲ್ಲ. ಸರಿಯಾಗಿ 7 ಗಂಟೆಗೆ ಅವರು ಕ್ಷೇತ್ರದಲ್ಲಿ ಹಾಜರಿದ್ದರು. ಇದನ್ನು ನೀವು ಹೇಗೆ ವಿಶ್ಲೇಷಿಸುತ್ತೀರಿ?

 

ಕಾಂತಾರದಲ್ಲೊಂದು ದೃಶ್ಯ ಇದೆ. ದೈವದ ಸೇರಿಗೆಯಲ್ಲಿರುವಾಗ ಅಲ್ಲೊಂದು ಸಂಭಾಷಣೆ: ‘ ಇದು ದೈವ ಮಾತಾಡುದ? ದೈವ ನರ್ತಕ ಮಾತಾಡುದ’? ಆಗ ದೈವ ‘ ನರ್ತಕನಾದರೆ ನಿಮ್ಮ ಕೈಗೆ ಸಿಗುವಂತಾಗಲಿ, ದೈವವಾದರೆ…’ ಎಂದು ಹೇಳಿ ಜೀಟಿಗೆ ಹಿಡಿದುಕೊಂಡು ಓಡಿ ಹೋಗಿ ಮಾಯವಾಗುವುದು! ಹಾಗಾದ್ರೆ ಆ ಪಾತ್ರಧಾರಿ ಎಲ್ಲಿಗೆ ಹೋದರು ಎನ್ನುವ ಪ್ರಶ್ನೆ ಮೂಡುವುದು ಸಹಜ ಅಲ್ಲವೇ ?

ಮತ್ತೊಂದು ಉದಾಹರಣೆ: ನನ್ನ ಊರು ಮುಲ್ಕಿ. ಅಲ್ಲಿ ಮಟ್ಟು ಎನ್ನುವ ಊರಿನಲ್ಲಿ ಕೋರ್ದಬ್ಬು ದೈವಸ್ಥಾನ ಇದೆ. ಅಲ್ಲಿ ಮಧ್ಯಾಹ್ನ 2: 30 ಸುಮಾರಿಗೆ ಜುಮಾದಿ, ಬಂಟ ಕೋಲ ನೆರವೇರುತ್ತದೆ. ಶಾಂಭವಿ ನದಿಯವರೆಗೆ ಹೋಗಿ ಅಲ್ಲಿ ದೇವರನ್ನು ಗಡುವಿನಲ್ಲಿ ಭೇಟಿ ಮಾಡುವ ಕ್ರಮಒಂದಿದೆ. ಸುಮಾರು 60 ವರ್ಷಗಳ ಹಿಂದಿರಬಹುದು. ಅಲ್ಲೊಂದು ಘಟನೆ ನಡೆಯಿತು. ಬಂಟ ಕಟ್ಟಿದವರನ್ನು ಯಾರಿಗೂ ಹಿಡಿಯಲು ಸಾಧ್ಯವೇ ಆಗಲಿಲ್ಲ! ಅವರು ಓಡಿದ ರಭಸಕ್ಕೆ ಶಾಂಭವಿ ನದಿಗೆ ಹಾರಿ ಬಿಟ್ಟರು. ಎರಡು ದಿನ ಹುಡುಕಾಡಿದರೂ ಬಂಟ ಪಾತ್ರಿ, ದೈವದ ಆಭರಣ ಯಾವುದೂ ಸಿಗಲಿಲ್ಲ! ವಾರದ ನಂತ್ರ ಆ ಊರಿನವರಿಗೆ ಒಂದು ಪಾದೆ ಕಲ್ಲು ಕಂಡಿತು. ಅಂದ್ರೆ ಹಾರಿದವರು ಕಲ್ಲಿನ ರೂಪ ತಾಳಿದರು  ಎಂದು ಅಲ್ಲಿನ ಭಕ್ತರು ನಂಬಿದರು! ಹಾಗಾಗಿ ಕೆಲವು ವಿಚಾರಗಳು ನಮ್ಮ ಊಹೆ, ತರ್ಕಕ್ಕೆ, ವಿಜ್ಞಾನಕ್ಕೆ ಮೀರಿದ್ದಾಗಿದೆ!!

 

20 ಅರ್ಷಗಳ ಹಿಂದಿನ ದೈವಾರಾಧನೆ ಮತ್ತು ಈ ದಿನಗಳ ಆಚರಣೆ ಹೇಗಿದೆ ?

ಸಾಕಷ್ಟು ಬದಲಾಗಿದೆ. ದೈವದ ಆರಾಧನೆ ಎನ್ನುವುದು ಅತ್ಯಂತ ಸರಳ ಮತ್ತು ಸುಲಭ. ಯಾವುದೇ ಆಡಂಭರ ದೈವಕ್ಕೆ ಬೇಡ. ಗ್ಯಾಸ್ ಲೈಟ್, ದೊಂದಿ ಬೆಳಕಲ್ಲಿ ಕೋಲ ನಡೆಯುತಿತ್ತು. ದೇವ, ದೈವಸ್ಥಾನದ ಒಳಗಡೆ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ನಾವಾಗೇ ಪಾಲಿಸಬೇಕು. ಗುಡಿಯೊಳಗೆ ಸೆಲ್ಫಿ ತೆಗೆಯುವುದು, ಮೌನ ಪ್ರಾರ್ಥನೆ ಆಗುವ ಸಂದರ್ಭ ಮೊಬೈಲ್ ರಿಂಗ್ ಕೇಳಿಸುವುದು ಇತ್ಯಾದಿ ಆಗಬಾರದು. ನಾವಲ್ಲಿಗೆ ಹೋಗುವುದು ನೆಮ್ಮದಿಗಾಗಿ. ಎಷ್ಟೇ ಸಿರಿವಂತರಾಗಿದ್ದರೂ ದೇವರ ಸನ್ನಿಧಾನದಲ್ಲಿ ತಗ್ಗಿ, ಬಗ್ಗಿ ಭಕ್ತಿಯಿಂದ ವರ್ತಿಸಿದರೆ ಸಾಕು. ನಮ್ಮ ಪ್ರಾರ್ಥನೆಯನ್ನು ಆ ಶಕ್ತಿ ಕೇಳಿಸಿಕೊಳ್ಳುತ್ತದೆ. ನೀವು ಕೊಡುವ ನೇಮ ದೈವಕ್ಕೋ ಅಥವಾ ಬಂದವರನ್ನು ಮೆಚ್ಚಿಸಲಿಕ್ಕೋ? ಇದು ನನ್ನ ಪ್ರಶ್ನೆ.

ಭಕ್ತನಿಂದ ದೈವ  ಏನನ್ನು ಬಯಸುತ್ತದೆ ?

ಮಗುವಿನಂತಹ ಮನಸು ಬಯಸುತ್ತದೆ. ಅಷ್ಟೇ!!!!

Daiva Nartaka Kumara Pambada. Pic Courtsey - Ashwin Hebbar
Daiva Nartaka Kumara Pambada. Pic Courtsey – Ashwin Hebbar

ನಿಮ್ಮದು ಬಿಡುವಿಲ್ಲದ ಸಮಯ. ರಾತ್ರಿಯೆಲ್ಲಾ ದುಡಿಮೆ ಹಗಲಿಗೆ ನಿದ್ದೆ. ಇದು ಒಂದು ರೀತಿಯ Challenge. ಹಾಗೆ ನೋಡಿದರೆ ಎಲ್ಲಾ ಕ್ಷೇತ್ರಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸವಾಲುಗಳು ಇದ್ದೇ ಇರುತ್ತದೆ. ನೀವು ಎದುರಿಸುವ ಬಹು ದೊಡ್ಡ ಸವಾಲು ಯಾವುದು?

ಜೊತೆಗಿರುವವರು ನನಗೆ ಸಹಕಾರ ನೀಡದಾಗ ಬಹಳ ನೋವು ಮತ್ತು ಬೇಸರ ಎನಿಸುತ್ತದೆ. ನಾನೊಬ್ಬನೇ ಹೋಗಿ ಕೋಲ ಮುಗಿಸಿ ಬರಲು ಸಾಧ್ಯವಿಲ್ಲ. ನನ್ನೊಂದಿಗಿರುವವರು ಅಷ್ಟೇ ನಿಷ್ಠೆಯಿಂದ ಬದ್ಧರಾಗಿದ್ದಾಗ ಎಲ್ಲವೂ ಸಾಂಗವಾಗಿ ನೆರವೇರುತ್ತದೆ. ನನ್ನ ಜೊತೆಗಿರುವವರನ್ನು ಪ್ರೀತಿಸುತ್ತೇನೆ. ಸಂಬಳ ಸಿಕ್ಕ ತಕ್ಷಣ ಮೊದಲು ಅವರಿಗೆ ನೀಡಿ ಉಳಿದಿರುವುದನ್ನು ನಾನಿಟ್ಟುಕೊಳ್ಳುತ್ತೇನೆ. ಆದರೆ ಇದೇ ಪ್ರೀತಿ, ಸಹಕಾರ ಅವರಿಂದ ನನಗೆ ದೊರೆಯಬೇಕಾಗಿದೆ.

 

ಮಾತು ಮುಗಿಯುವಾಗ ರಾತ್ರಿ  9 30 ಆಗಿದ್ದು ತಿಳಿಯಲೇ ಇಲ್ಲ. ಹೀಗೆ ದೈವಾರಾಧನೆ ಕುರಿತು ತಿಳಿದು ಹೇಳಲು ಹೋದರೆ ಸಾವಿರ ಸಾವಿರ ಮಾತಿದೆ…


 

Disclaimer: The views and opinions expressed in this article are those of the interviewee and do not necessarily reflect the views or positions of this website (avinashkamath.in)

1 COMMENT

  1. ಅವಿನಾಶನ ಬರಹ ಕುತೂಹಲಭರಿತವಾಗಿರುತ್ತೆ.ಹಿಂದಿನ ಆಚರಣೆಗಳ ಸೂಕ್ಷ್ಮ ವಿಶೇಷತೆಯನ್ನು ವಿವರಿಸಿದ ರೀತಿ ಮನಮುಟ್ಟುವಂತಿತ್ತು.ದೈವ- ದೇವರು ನಂಬಿಕೆಯ ಆಧಾರದಲ್ಲಿ ಬೆಳೆದ ಆಚರಣೆಗಳು, ಆ ಶಕ್ತಿಯೇ ಊರುಗೋಲಾಗಿ ಅದೆಷ್ಟೋ ಜನರ ಜೀವನದಲ್ಲಿ ಬೆಳಕನ್ನು ಮೂಡಿಸಿವೆ.
    ಒಟ್ಟಿನಲ್ಲಿ ಅವರವರ ಭಾವಕ್ಕೆ ಅವರವರ ಭಕುತಿಗೆ ಬಿಟ್ಟ ವಿಚಾರ ಈ ಆಚರಣೆಗಳು.ವಿವರಣಾಯುಕ್ತ ಬರವಣಿಗೆಗೆ ಧನ್ಯವಾದಗಳು ಅವಿನಾಶ್.👍👌

LEAVE A REPLY

Please enter your comment!
Please enter your name here