Home Interviews ‘ನಮ್ಮ ಪಂಜುರ್ಲಿಯನ್ನು ಮಾತ್ರ ಕೇಳಬೇಡಿ’ ಎಂದವರು ಇವರೇ !

‘ನಮ್ಮ ಪಂಜುರ್ಲಿಯನ್ನು ಮಾತ್ರ ಕೇಳಬೇಡಿ’ ಎಂದವರು ಇವರೇ !

3

ಆ ಸಿನಿಮಾದಲ್ಲಿ ಹಲವು ಪಾತ್ರಗಳು. ವಿಶೇಷ ಅಂದ್ರೆ ಕಾಣಿಸುವ ಅಷ್ಟೂ ಪಾತ್ರಗಳಿಗೂ ಮಹತ್ವ ಮತ್ತು ಗುರುತಿಸುವಿಕೆ ಭರ್ಜರಿಯಾಗೇ ಸಿಕ್ಕಿದೆ. ಹಾಗಾಗಿ ಎಲ್ಲಾ ಪಾತ್ರಧಾರಿಗಳ ಸಂದರ್ಶನವನ್ನು ನೀವು ಸಾಮಾಜಿಕ ಜಾಲತಾಣದಲ್ಲಿ ಕಾಣುತ್ತಿದ್ದೀರಿ. ನಾನೀಗ ಹೇಳ ಹೊರಟಿರುವುದು ಅಲ್ಲಿ ಕಾಣಿಸುವ ಪ್ರತಿಭೆಯೊಬ್ಬರ ಕುರಿತು. ಚಿತ್ರದ ಆರಂಭದಲ್ಲಿ ರಾಜ ನೆಮ್ಮದಿ ಹುಡುಕಿಕೊಂಡು ಬಂದು ಊರಿನ ಜನರಲ್ಲಿ ಮಾತಿಗಿಳಿಯುತ್ತಾನೆ. ಆ ಸಂದರ್ಭ ‘ಎನ್ನ ಉಳ್ಳಾಯ, ನೀವು ನಮ್ಮ ಹತ್ತಿರ ಎಂತ ಬೇಕಿದ್ದರೂ ಕೇಳಿ ಆದರೆ ನಮ್ಮ ದೈವ ಪಂಜುರ್ಲಿಯನ್ನು ಮಾತ್ರ ಕೇಳಬೇಡಿ ಎನ್ನುವ ಪಾತ್ರಧಾರಿ ಮಣಿಪಾಲದ ಭಾಸ್ಕರ ಅವರು. ಸುಮಾರು 4 ದಶಕಗಳಿಂದ ರಂಗಭೂಮಿ, ಸಿನಿಮಾ ಕ್ಷೇತ್ರದಲ್ಲಿ ಅಪರೂಪದ ಸಾಧನೆ ಗೈದಿರುವ ಇವರು ಹೆಚ್ಚಾಗಿ ಯಾವುದೇ ಮಾಧ್ಯಮದಲ್ಲಿ ಕಾಣಿಸಿಕೊಳ್ಳದ ಸುಪ್ತ ಪ್ರತಿಭೆ. ನೈಜ ಅಭಿನಯದ ಭಾಸ್ಕರ ಮಣಿಪಾಲ ಅವರು ‘One Take Artist ‘!

2018 ರಲ್ಲಿ ನಾನು ಆರ್ಟ್ ಸಿನಿಮಾ ಒಂದರಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಆ ಚಿತ್ರದಲ್ಲಿ ಇವರಿಗೂ ಪಾತ್ರದ ಜೊತೆಗೆ ಸಂಭಾಷಣೆಯ ಮುಖ್ಯ ಜವಾಬ್ದಾರಿಯನ್ನು ನಿರ್ದೇಶಕರು ವಹಿಸಿದ್ದರು. ಆ ಪರಿಚಯ ಸ್ನೇಹಕ್ಕೆ ತಿರುಗಿ 5 ವರ್ಷಗಳು ಕಳೆದು ಇವರ ಏಳಿಗೆಯನ್ನು ಗಮನಿಸುತ್ತಲೇ ಬಂದಿದ್ದೇನೆ. ಸದ್ಯ ಎಲ್ಲೆಲ್ಲೂ ಕಾಂತರವೇ ಸುದ್ದಿಯಲ್ಲಿರೋದ್ರಿಂದ ಇವರ ಸಾಧನೆ ಕುರಿತು ನಿಮಗೆ ತಿಳಿಸುವುದು ಸೂಕ್ತ ಎಂದೆನಿಸಿದೆ. ಮೊನ್ನೆ ಮಣಿಪಾಲದ ಸಣ್ಣ ಹೋಟೆಲ್ ಒಂದರಲ್ಲಿ ಭಾಸ್ಕರಣ್ಣನ ಜೊತೆ ಹರಟುತ್ತಿದ್ದಾಗ  ಹೀಗೆ ಸುಮ್ನೆ ಮಾತಿಗೆಳೆದು ಕಲೆ ಹಾಕಿದ ಒಂದಿಷ್ಟು ವಿಷಯಗಳು ಇಲ್ಲಿವೆ. ಅಷ್ಟಕ್ಕೂ ಅವರ ಈ ಮಾತುಗಳನ್ನು ದಾಖಲಿಸುತ್ತೇನೆ ಎನ್ನುವ ವಾಗ್ದಾನವನ್ನು ನಾನವರಿಗೆ ನೀಡಿರಲಿಲ್ಲ. ನನ್ನ ಉದ್ದೇಶ ಮಾತ್ರ ಸಂದರ್ಶನ ರೂಪದಲ್ಲಿ ಪ್ರಕಟಿಸುವುದೇ ಆಗಿತ್ತು!

ಭಾಸ್ಕರಣ್ಣ ನಿಮ್ಮ ರಂಗ ಚಟುವಟಿಕೆಗಳು ಆರಂಭ ಆಗಿದ್ದು ಹೇಗೆ ?

ಸುಮಾರು 4 ದಶಕಗಳೇ ಕಳೆಯಿತು. ಉಡುಪಿ ಮೂಲದ ಪ್ರಸಿದ್ಧ ಕಿರುತೆರೆ ನಟ, ನಿರ್ದೇಶಕ ಸುದೇಶ್ ರಾವ್ ಅವರ ‘ ಸಂಗಮ ಕಲಾವಿದರು’ ತಂಡಕ್ಕೆ ಮೊದಲು ಸೇರಿಕೊಂಡೆ. ಅಲ್ಲಿ ‘ಚಂದ್ರಪ್ಪನ ಚಟ್ಟದ ಯಾತ್ರೆ’ ಎನ್ನುವ ನಾಟಕದಲ್ಲಿ ಶವದ ಪಾತ್ರಧಾರಿ ನಾನು. ಅದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ನಂತ್ರ ಉಡುಪಿಯ ಪ್ರತಿಷ್ಠಿತ ರಂಗಭೂಮಿ ( ರಿ) ತಂಡದ 2 – 3 ನಾಟಕಗಳಲ್ಲಿ ಪಾತ್ರವಹಿಸಿದ್ದೆ. ‘ಸಾಧನ ಸಾಸ್ತಾನ’ ತಂಡಕ್ಕೆ ಬದಲಿ ಕಲಾವಿದನಾಗಿ ಹೋಗುತ್ತಿದ್ದೆ. ಇಷ್ಟೇ ಅಲ್ಲ ಕೆಲವು ಸಂಘ ಸಂಸ್ಥೆಗಳಿಗೆ ನಾಟಕ ರಚಿಸಿ, ನಿರ್ದೇಶಿಸುತ್ತಿದ್ದೆ. ನಾನು ಕಾರ್ಟೂನ್ ಕಲಾವಿದನೂ ಹೌದು.

bhaskar manipal

* ಆ ದಿನಗಳಲ್ಲಿ ಛದ್ಮವೇಷ ಸ್ಪರ್ಧೆಗಳು ಭರಪೂರವಾಗಿ ಆಯೋಜನೆಗೊಳ್ಳುತ್ತಿದ್ದವು. ನಾನದರಲ್ಲಿ ತರಹೇವಾರಿ ವೇಷಗಳನ್ನು ಧರಿಸುತ್ತಿದ್ದೆ. ಜೊತೆಗೆ ಹೆಸರುವಾಸಿ ವ್ಯಕ್ತಿಗಳಂತೆ ಕಾಣುವವರನ್ನು ಗುರುತಿಸಿ ಆಯಾ ವ್ಯಕ್ತಿಗಳಂತೆ ಅವರನ್ನು ಸಿದ್ಧಪಡಿಸುತ್ತಿದ್ದೆ. ಹೀಗೆ ಅಂತಹ ವೇಷಗಳಿಗೆ ಹಲವು ಪ್ರಶಸ್ತಿಗಳು ಲಭಿಸಿವೆ.

*2018 – 19ರಲ್ಲಿ ರಂಗಭೂಮಿಯಲ್ಲಿನ ನನ್ನ ಸೇವೆಗಾಗಿ ಕರ್ನಾಟಕ ನಾಟಕ ಅಕಾಡಮಿ ‘ವಾರ್ಷಿಕ ಗೌರವ ಪ್ರಶಸ್ತಿ’ ನೀಡಿತು. ರಂಗಭೂಮಿ ಚಟುವಟಿಕೆಗಳಿಂದಲೇ ನನಗೆ ಸಿನಿಮಾ ಕಡೆ ಆಸಕ್ತಿ ಬೆಳೆಯಿತು. ಪರಿಚಯದ ಮೇರೆಗೆ ಅವಕಾಶಗಳು ಸಿಕ್ಕವು.

ಕಿರುಚಿತ್ರಗಳು

* ಸುಮಾರು 15 ಕಿರುಚಿತ್ರಗಳಲ್ಲಿ ಒಳ್ಳೊಳ್ಳೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. 2014ರಲ್ಲಿ ‘ಕರಾವಳಿ ಕಿರು ಚಿತ್ರೋತ್ಸವ’ ದಲ್ಲಿ ನನ್ನ ಪ್ರಥಮ ಕಿರುಚಿತ್ರ ‘ಗುಜಿರಿ’ ಗೆ ಪ್ರಥಮ ಬಹುಮಾನ ದೊರಕಿತು! ಮತೀಯ ಸೌಹಾರ್ದತೆ ಸಾರುವ ‘ಬಣ್ಣ’ ಎನ್ನುವ ಕಿರುಚಿತ್ರದಲ್ಲಿ ಕುರುಡನ ಪಾತ್ರ ಮಾಡಿದ್ದೆ. ಸಾಮಾಜಿಕ ಜಾಲತಾಣದಲ್ಲಿ ಇದನ್ನು 35 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ ! ಅದರಲ್ಲಿನ ನನ್ನ ಅಭಿನಯಕ್ಕೆ ‘ಆರದಿರಲಿ ಬದುಕು’ ಆರಾಧನಾ ಸಂಸ್ಥೆ ‘ಶ್ರೇಷ್ಠ ನಟ’ ಪ್ರಶಸ್ತಿ ನೀಡಿ ಗೌರವಿಸಿತು.

ಕಳೆದ ಕೆಲವು ವರ್ಷಗಳಿಂದ ನೀವು ಸಿನಿಮಾದಲ್ಲಿ ಹೆಚ್ಚು ತೊಡಗಿಸಿ ಕೊಂಡಿದ್ದೀರಿ. ಅಲ್ಲಿನ ಪ್ರಯಾಣ ಹೇಗಿದೆ ?

ನಾನು ಈವರೆಗೆ 5 ತುಳು, 2 ಬ್ಯಾರಿ ಸೇರಿದಂತೆ 60ಕ್ಕೂ ಹೆಚ್ಚು ಸಿನೆಮಾಗಳಲ್ಲಿ ಅಭಿನಯಿಸಿದ್ದೇನೆ! ಪಾತ್ರ ಸಣ್ಣದು, ದೊಡ್ಡದು ಎನ್ನುವ ಬೇಧ ನನಗಿಲ್ಲ. ನನ್ನ ದೇಹ, ಮುಖಚರ್ಯಕ್ಕೆ ಹೋಲುವ ಪಾತ್ರ ಯಾವುದೇ ಆಗಲಿ ನಾನು ಅಭಿನಯಿಸಲು ಸಿದ್ಧ. ರಕ್ಷಿತ್ ಶೆಟ್ಟರ ‘ಉಳಿದವರು ಕಂಡಂತೆ’ ಚಿತ್ರದಲ್ಲಿ ಹುಲಿವೇಷ ಬಣ್ಣ ಬಳಿಯುವ ಪಾತ್ರ ಮಾಡಿದ್ದು ನಾನೇ ! ಅಚ್ಚುತ್ ಕುಮಾರ್ ಅವರಂತಹ ಪ್ರತಿಭಾನ್ವಿತರ ಜೊತೆ ಅಭಿನಯ ಮಾಡಿದ್ದು ಭಾಗ್ಯ. ಗುಲಾಬಿ ಟಾಕೀಸ್, ಗಗ್ಗರ, ಕಂಚಿಲ್ದ ಬಾಲೆ, ದೇಯಿ ಬೈದೆತಿ, ದೇವೆರ್, ಹರಿಕಥಾ ಪ್ರಸಂಗ, ಶಂಕರ ಪುಣ್ಯಕೋಟಿ, ಪಿಂಗಾರ ಇತ್ಯಾದಿ ಪ್ರಶಸ್ತಿ ಪಡೆದ ಸಿನೆಮಾಗಳಲ್ಲಿ ನನ್ನದೂ ಪಾತ್ರ ಇದೆ ಎನ್ನುವ ಖುಷಿ ನನಗೆ!

ಕಾಂತಾರ ಅವಕಾಶ ಸಿಕ್ಕಿದ್ದು ಹೇಗೆ ?

ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭ ನಾನು ‘ಗುರು ಶಿಷ್ಯರು’ shooting ನಲ್ಲಿದ್ದೆ. ರಿಷಬ್ ಸರ್ ಚಿತ್ರದಲ್ಲಿ ಒಂದೊಳ್ಳೆ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಆಸೆ ಇತ್ತು. ಆದ್ರೆ ಇಲ್ಲಿ ಒಪ್ಪಿಕೊಂಡಿದ್ದ ಕಾರಣ ಅವಕಾಶ ಸಿಕ್ಕರೆ ಹೇಗೆ ಹೊಂದಿಸಿಕೊಳ್ಳುವುದು ಎನ್ನುವ ಗೊಂದಲದಲ್ಲಿದ್ದೆ. ಹೀಗಿರುವಾಗ ಚಿತ್ರೀಕರಣ ಮುಗಿದೇ ಹೋಯ್ತು ಎನ್ನುವ ಮಾಹಿತಿ ಸಿಕ್ಕಿತು. ಈ ಬೇಸರ ಇರುವಾಗಲೇ ಒಂದು ದಿನ Associate ಒಬ್ಬರಿಂದ ದೂರವಾಣಿ ಕರೆ ಬಂತು. ಎದ್ದು ಬಿದ್ದು ಓಡಿದೆ. ಆರಂಭದ ದೃಶ್ಯ ಮತ್ತು ಚಿಕ್ಕ ಪಾತ್ರವಾದರೂ ಅಷ್ಟೇ ತೂಕವಿತ್ತು. ದೇಶದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ‘ಕಾಂತಾರ’ ಸಿನಿಮಾದಲ್ಲಿ ನನ್ನದೊಂದು ಪಾತ್ರವಿದೆ ಎನ್ನುವ ಸಮಾಧಾನ ನನಗೆ. ಪಾತ್ರ ನೀಡಿದಕ್ಕಾಗಿ ರಿಷಬ್ ಸರ್ ಅವರಿಗೆ ನಾನು ಆಭಾರಿ.

ಇಷ್ಟೆಲ್ಲಾ ಮಾತಾಗುವಾಗ ನಾನು Mobile ನಲ್ಲಿ ರೆಕಾರ್ಡ್ ಬಟನ್ ಒತ್ತಿದ್ದು ಅವರಿಗೆ ತಿಳಿದೇ ಇರಲಿಲ್ಲ. ಸುಖಾ ಸುಮ್ಮನೆ ಯಾರನ್ನೂ ಹೊಗಳುವ ಜಾಯಮಾನದವನು ನಾನಲ್ಲ. ಆದರೆ ಭಾಸ್ಕರಣ್ಣ ಸರಳ, ಸೌಮ್ಯ ಸ್ವಭಾವದ ಹಿತನುಡಿಯ ವ್ಯಕ್ತಿ. ಒಬ್ಬ ನಟನಿಗೆ ಬೇಕಾದ ಎಲ್ಲಾಅರ್ಹತೆಗಳೂ ಅವರಲ್ಲಿದೆ. ತುಳು, ಕನ್ನಡ ಧಾರಾವಾಹಿಗಳು ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳ ಜಾಹೀರಾತುಗಳಲ್ಲೂ ಅಭಿನಯಿಸಿದ್ದಾರೆ. ಇಂತಹ ಭಾಸ್ಕರಣ್ಣ ಪ್ರಮುಖ ಪೋಷಕ ನಟರಾಗಿ ಅಭಿನಯಿಸಿರುವ 15 ಕ್ಕೂ ಅಧಿಕ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಯಾವುದೇ ಪಾತ್ರಕ್ಕೂ ಜೀವ ತುಂಬಬಲ್ಲ ಭಾಸ್ಕರ ಮಣಿಪಾಲ ಒಂದು ರೀತಿ ಸಕಲ ಕಲಾವಲ್ಲಭ. ಹಾಗಾಗಿ ನನ್ನ ಅಂದಾಜಿನ ಪ್ರಕಾರ ಇನ್ನು ಒಂದೆರಡು ವರ್ಷಗಳಲ್ಲಿ ಇವರು ಬಹು ಬೇಡಿಕೆಯ ನಟರಾಗಿ ನಾನೂ ಕೂಡ ‘ಭಾಸ್ಕರಣ್ಣ, ಒಂತೆ ಪಾತೆರ್ರೆ ಉಂಡು, ಟೈಮ್ ತಿಕ್ಕುವ’? ಎನ್ನುವಷ್ಟರ ಎತ್ತರಕ್ಕೇರಲಿ ಎನ್ನುವ ಶುಭ ಹಾರೈಕೆಗಳೊಂದಿಗೆ …

ಹೇಳಲು ಹೋದರೆ ಸಾವಿರ ಮಾತಿದೆ


 

3 COMMENTS

  1. ಉತ್ತಮ ವ್ಯಕ್ತಿಗಳಿಗೆ ಒಳ್ಳೆಯದೇ ಆಗುತ್ತದೆ ಎನ್ನುವ ಮಾತು ಬಹುಷ ಭಾಸ್ಕರಣ್ಣನ ವಿಚಾರದಲ್ಲಿ ತಪ್ಪಾಗಬಹುದು… ಅವರ ಕಲಾ ಸಾಧನೆ ಮತ್ತು ಅವರಲ್ಲಿನ ಕಲಾವಿದ ಬಹುಷ ದೊಡ್ಡ ಸ್ಥಾನದಲ್ಲಿ ಮುಟ್ಟಬೇಕಿತ್ತು…. ಅವರ ಜೀವಮಾನವಿಡೀ ಸಾಲ ಮತ್ತು ಆರ್ಥಿಕ ಸಮಸ್ಯೆ ಯಿಂದಲೇ ಇದ್ದರೂ ಇಂದಿಗೂ ನಗುಮೋಗದಿಂದಲೇ ನಕ್ಕು ನಗಿಸಿ ಸುಮ್ಮನಾಗುವ ವ್ಯಕ್ತಿ ಭಾಸ್ಕರಣ್ಣ…. ಅವರನ್ನು ಇತ್ತೀಚೆಗೆ ಕರೆ ಮಾಡಿ ನನ್ನ ಸಣ್ಣ ಚಾನಲ್ ಗೆ ಸಂದರ್ಶನ ನೀಡುವೀರಾ ಎಂದು ಕೇಳಿದ್ದೇ…ಸಂತೋಷದಿಂದ ಮಾಡೋಣ ಎಂದಿದ್ದಾರೆ.. ಅವರ ಅಪಾಯಿಂಟ್ಮೆಂಟ್ ಗಾಗಿ ಕಾಯುತ್ತಿದ್ದೇನೆ..

  2. ಉತ್ತಮ ವ್ಯಕ್ತಿಗಳಿಗೆ ಒಳ್ಳೆಯದೇ ಆಗುತ್ತದೆ ಎನ್ನುವ ಮಾತು ಬಹುಷ ಭಾಸ್ಕರಣ್ಣನ ವಿಚಾರದಲ್ಲಿ ತಪ್ಪಾಗಬಹುದು… ಅವರ ಕಲಾ ಸಾಧನೆ ಮತ್ತು ಅವರಲ್ಲಿನ ಕಲಾವಿದ ಬಹುಷ ದೊಡ್ಡ ಸ್ಥಾನದಲ್ಲಿ ಮುಟ್ಟಬೇಕಿತ್ತು…. ಅವರ ಜೀವಮಾನವಿಡೀ ಸಾಲ ಮತ್ತು ಆರ್ಥಿಕ ಸಮಸ್ಯೆ ಯಿಂದಲೇ ಇದ್ದರೂ ಇಂದಿಗೂ ನಗುಮೋಗದಿಂದಲೇ ನಕ್ಕು ನಗಿಸಿ ಸುಮ್ಮನಾಗುವ ವ್ಯಕ್ತಿ ಭಾಸ್ಕರಣ್ಣ…. ಅವರನ್ನು ಇತ್ತೀಚೆಗೆ ಕರೆ ಮಾಡಿ ನನ್ನ ಸಣ್ಣ ಚಾನಲ್ ಗೆ ಸಂದರ್ಶನ ನೀಡುವೀರಾ ಎಂದು ಕೇಳಿದ್ದೇ…ಸಂತೋಷದಿಂದ ಮಾಡೋಣ ಎಂದಿದ್ದಾರೆ.. ಅವರ ಅಪಾಯಿಂಟ್ಮೆಂಟ್ ಗಾಗಿ ಕಾಯುತ್ತಿದ್ದೇನೆ..

    ಮುಂದಿನ ದಿನ ಗಳಲ್ಲಾದರೂ ಅವರಿಗೆ ಒಳ್ಳೆಯದಾಗಲಿ ಉತ್ತಮ ಚಿತ್ರಗಳು,ಸಂಭಾವನೆಗಳನ್ನು, ಗೌರವಗಳು ಹುಡುಕಿಕೊಂಡು ಬರಲಿ…. ಭಾಸ್ಕರಣ್ಣ ಮತ್ತು ಅವರಂತಹ ಸಾವಿರಾರು ಕಲಾವಿದರಿಗೆ ಶುಭವಾಗಲಿ..

  3. ಯಾವುದೇ ರೀತಿಯ ಪಾತ್ರವಿರಲಿ ಅದನ್ನು ಮನಸಾ ಒಪ್ಪಿಕೊಂಡು ಪ್ರೀತಿಯಿಂದ ಮಾಡುತ್ತೇನೆ ಎನ್ನುವವರು ಮಾತ್ರ ಅಪ್ಪಟ ಕಲಾವಿದ ಮತ್ತು ನಿಜವಾಗಿ ಕಲೆಗೆ ಗೌರವ ಕೊಡುವವ.ಅಂತಹ ಒಬ್ಬ ಪ್ರತಿಭಾವಂತ ಅನುಭವಿ ಕಲಾವಿದರ ಪರಿಚಯ ಮಾಡಿದ ಅವಿನಾಶ್ ಗೆ ಅಭಿನಂದನೆಗಳು. ಯಶಸ್ವೀ ಚಿತ್ರದ ಒಳಗಿನ ಚಿಕ್ಕ ಪಾತ್ರವೂ ಕೂಡ ಎಷ್ಟು ಮುಖ್ಯವಾಗಿದೆ.

LEAVE A REPLY

Please enter your comment!
Please enter your name here