* corona ಸಂದರ್ಭ ನಮಗಾದ ಕಷ್ಟ ಹೇಳಿಕೊಳ್ಳದೆ ಇರಲು ಸಾಧ್ಯವಾಗಲಿಲ್ಲ. ಅಲ್ಲಿಯವರೆಗೆ ನಾನು 3 ವರ್ಷಗಳಿಂದ ಆಶ್ರಮ ನಡೆಸುತ್ತಿದ್ದೇನೆ ಅಂತ ಯಾರಿಗೂ ಗೊತ್ತಿರಲಿಲ್ಲ!
* ನಮ್ಮಲ್ಲಿದ್ದವರನ್ನು ಶಿವಮೊಗ್ಗ,ತೀರ್ಥಹಳ್ಳಿ,ಕೊಪ್ಪ, ಸಾಗರ,ಮಂಗಳೂರು ಅಂತ ಹಲವು ಕಡೆಗಳಿಗೆ ಅವರ ವಿಳಾಸ ಹುಡುಕಿ ಅವರವರ ಮನೆಗಳಿಗೆ ಸುರಕ್ಷಿತವಾಗಿ ತಲುಪಿಸಿ ಬಂದಿದ್ದೇನೆ.
* ಸತ್ತಾಗ ಮನೆಯವರನ್ನು ಸಂಪರ್ಕಿಸಿದರೆ ‘ನಮಗೆ ಹೆಣದ ಹತ್ತಿರ ಬರಲು ಭಯ, ಎಲ್ಲಾ ನೀವೇ ಮಾಡಿ ಮುಗಿಸಿ’ ಅಂತಾರೆ. ಜೀವಂತ ಇರುವವರ ಜೊತೆಗೆ ಹೆದರಬೇಕು. ಸತ್ತವರ ಹತ್ತಿರ ಬರಲು ಯಾಕೆ ಭಯ ?
* ಈಗ 73 ಮಂದಿಯಿದ್ದಾರೆ. ಅದರಲ್ಲಿ ನನ್ನ ಧರ್ಮದವರು ಅಂತ ಯಾರೂ ಇಲ್ಲ. ಬೇಕಿದ್ದರೆ ಯಾವಾಗಲಾದರೂ ಬಂದು ಒಮ್ಮೆ ನೋಡಿ!
* ಎಲ್ಲ ಧರ್ಮಗಳೂ ಮನುಷ್ಯತ್ವವೇ ಮೇಲು ಅಂತ ಸಾರಿವೆ. ನಮಗೆ ಇನ್ನೂ ಅರ್ಥ ಆಗಿಲ್ಲ, ಅಷ್ಟೇ.
* corona ಸಂದರ್ಭ ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ 3 ತಿಂಗಳು ಕೆಲಸ ಮಾಡಿದ್ದೇನೆ. ಸಾವುಗಳ ಜೊತೆಗೇ ನನ್ನ ಮತ್ತು ಡ್ರೈವರ್ ಓಡಾಟವಾಗಿತ್ತು. ಆದರೆ ನಮಗಿಬ್ಬರಿಗೆ ಎಂದಿಗೂ corona ಬರಲಿಲ್ಲ. ದೂರ ನಿಂತು ನೋಡಿದವರಿಗೆ ಬಂತು.
ಇವಿಷ್ಟು ತಾಯಿ ಸ್ಥಾನದಲ್ಲಿದ್ದು 73 ಮಂದಿ ಬಡವರು, ಅನಾಥರು, ನಿರ್ಗತಿಕರನ್ನು ಸಲಹುತ್ತಿರುವ ಉಡುಪಿ ಜಿಲ್ಲೆಯ ಕಾರ್ಕಳದ ಸುರಕ್ಷಾ ಆಶ್ರಮದ ರೂವಾರಿ ಆಯಿಷಾ ಬಾನು ಅವರ ಮಾತಿನ ಮುಖ್ಯಾಂಶಗಳು. ಅಂದ ಹಾಗೆ ನನ್ನ ‘ಕೂತು ಮಾತಾಡುವ’ ಕಾರ್ಯಕ್ರಮ ಮತ್ತೊಮ್ಮೆ ಆರಂಭವಾಯಿತು. ಮುಂದಿನ ದಿನಗಳಲ್ಲಿ ಅದು ಕುಂದಾಪುರ ಭಾಗದಲ್ಲಿ ಜರುಗಲಿದೆ.

ಏನಿದು ‘ ಕೂತು ಮಾತಾಡುವ ‘ ?
*ನಮ್ಮ ಸುತ್ತಮುತ್ತ ಇರುವ ನಮ್ಮ ಕಣ್ಣಿಗೆ ವಿಶೇಷ ಎನಿಸುವ ವ್ಯಕ್ತಿಯನ್ನು ಗುರುತಿಸುವುದು
* ಒಂದು ದಿನಾಂಕವನ್ನು ನಿಗದಿಪಡಿಸಿ ಅದಕ್ಕೂ 2 ವಾರ ಮುಂಚೆ ಅವರ ಕುರಿತು ಬರೆದು ಸೃಜನಶೀಲ ಪೋಸ್ಟರ್ಸ್ ತಯಾರಿಸುವುದು
* ಸಮಾನ ಮನಸ್ಕರು, ಆಸಕ್ತರನ್ನು ಅಂದು ಸೇರಿಸುವುದು
* ಅವರ ಮಾತನ್ನು ಆಲಿಸವುದು ನಂತ್ರ ನೆರೆದವರು ಅವರ ಜೊತೆ ಪ್ರಶ್ನೆಗಳ ಮೂಲಕ ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಅವರನ್ನು ಸನ್ಮಾನಿಸಿ ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಸಮಾಜಕ್ಕೆ ತೋರಿಸುವುದು ಈ ಕಾರ್ಯಕ್ರಮದ ಒಟ್ಟು ಕಲ್ಪನೆಯಾಗಿದೆ.
ವಿಶೇಷತೆ
* ಇದಕ್ಕೆ ಯಾವುದೇ ಪರಿಧಿಯಿಲ್ಲ
* ಮನೆಯ ಆವರಣ, ಸಣ್ಣ ಸಭಾಂಗಣ, ಆಟದ ಮೈದಾನ, ಒಂದು ಮರದ ಕೆಳಗಿನ ಸ್ಥಳ ಹೀಗೆ ಎಲ್ಲಿ ಬೇಕೆಂದರಲ್ಲಿ ಮಾಡಬಹುದು
* ಕಾರ್ಯಕ್ರಮ ಸಣ್ಣದು, ಜಾಗ ಕಮ್ಮಿ ಆಯ್ತು ಎನ್ನುವ ಯಾವುದೇ ಭೇದವಿಲ್ಲ.
ಒಟ್ಟು ಕಾರ್ಯಕ್ರಮ ದೊಡ್ಡ ಅನುಭವ ನೀಡಬೇಕು, ಇದು ಅದರ ಮುಖ್ಯ ಉದ್ದೇಶಗಳಲ್ಲೊಂದಾಗಿದೆ. ಕುಂದಾಪುರ ನನ್ನೂರಾದರೂ ಒಬ್ಬನಿಗೆ ಇದೆಲ್ಲವನ್ನು ಮಾಡುವುದು ಕಷ್ಟ. Girija Group of Concerns ಮಖ್ಯಸ್ಥರಾದ ರವೀಂದ್ರ ಶೆಟ್ಟರು ಆರ್ಥಿಕ ಸಹಾಯಕ್ಕೆ ನಿಂತರು. ಆ ಭಾಗದ ಸಮಾಜಮುಖಿ ಸಂಘಟನೆಗಳಾದ Team Manthana ಮತ್ತು Helping Hands ಸಹಕಾರದೊಂದಿಗೆ ಮೊನ್ನೆಯ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿ ಬಂತು. ಮುಂದೆ ಯಾರು ಬರುತ್ತಾರೆ ? ಎಲ್ಲಿ ನಡೆಯುತ್ತದೆ ? ಕಾರ್ಯಕ್ರಮ ಹೇಗಿರುತ್ತದೆ ಎನ್ನುವುದಕ್ಕೆ ಕಾಲವೇ ಉತ್ತರಿಸಲಿದೆ.
ಒಂದಂತೂ ಸತ್ಯ..ಮತ್ತೆ ಮತ್ತೆ ‘ ಕೂತು ಮಾತಾಡಲು’ ನಾನು ಕಾತರನಾಗಿದ್ದೇನೆ.
ಮೊನ್ನೆಯ ‘ಕೂತು ಮಾತಾಡುವ’ ಕಾರ್ಯಕ್ರಮ ಕೊಟ್ಟ feel ದೊಡ್ಡದು. ಆ ಬಗ್ಗೆ ಹೇಳಲು ಹೋದರೆ ಇನ್ನೂ ಸಾವಿರ ಮಾತಿದೆ..