ನಾಳೆ ವಿಶೇಷವಾಗಿ ಕರಾವಳಿ ಭಾಗದ ಸಿನಿ ಪ್ರಿಯರು ಬಹಳ ಕಾತರದಿಂದ ಕಾಯುತ್ತಿರುವ ‘ಕಾಂತಾರ’ ಸಿನಿಮಾ ಬಿಡುಗಡೆಯಾಗುತ್ತಿದೆ. ಕಂಬಳ, ದೈವಾರಾಧನೆ ಸುತ್ತ ಹೆಣೆದಿರುವ ಚಿತ್ರ ಎಂಬುದು Teaser, Trailerನಿಂದ ಸ್ಪಷ್ಟವಾಗಿರುವ ಕಾರಣ ಈ ಭಾಗದ ಜನರಿಗೆ ಚಿತ್ರದ ಕುರಿತು ಸಹಜವಾಗಿ ಕುತೂಹಲ ಮೂಡಿದೆ. ಸಿನಿಮಾದ ‘ ಸಿಂಗಾರ ಸಿರಿಯೇ’ ಹಾಡು ಆಗಲೇ ಜನಪ್ರಿಯವಾಗಿದೆ.
ರಿಷಬ್ ಶೆಟ್ಟಿ ಎಂಬ ಕೆರಾಡಿಯ ಕನಸುಗಾರ
2013ರಲ್ಲಿ ಉಡುಪಿಯ ರಕ್ಷಿತ್ ಶೆಟ್ಟಿ (Actor Rakshit Shetty) ನಾಯಕನಾಗಿ ಅಭಿನಯಿಸಿದ Simple Agond Love Story ಸಿನಿಮಾ 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆ ಅವರು ಉಡುಪಿಗೆ ಬಂದಿದ್ದರು. ನಾನಾಗ ಕರಾವಳಿ ಮಲೆನಾಡು ಭಾಗದ ಹೆಸರಾಂತ ಪ್ರಾದೇಶಿಕ ಸ್ಪಂದನ ಟಿವಿ ವಾಹಿನಿಯಲ್ಲಿ Program Producer / Anchor ಆಗಿ ಕಾರ್ಯನಿರ್ವಹಿಸುತ್ತಿದ್ದೆ. ರಕ್ಷಿತ್ ಜೊತೆ ಅವತ್ತು ಟಿವಿಯಲ್ಲಿ ‘100 simple days’ ಎಂಬ 100 ದಿನಗಳು ಪೂರೈಸಿದ ಕಾರಣಕ್ಕಾಗಿ ಸಂಭ್ರಮಿಸಲು ಜನರೊಂದಿಗೆ ದೂರವಾಣಿ ಮೂಲಕ ಹರಟುವ ವಿಶೇಷ ಕಾರ್ಯಕ್ರಮ ಆಯೋಜಿಸಿ ಅದರ ನಿರೂಪಣೆ ಕೂಡ ಮಾಡಿದ್ದೆ. ಹಲವು ಕರೆಗಳ ಮಧ್ಯೆ ಲವಲವಿಕೆ ತುಂಬಿದ ಧ್ವನಿಯೊಂದು ‘ನಮಸ್ತೆ ನಾನು ಪ್ರಶಾಂತ್ ಅಂತ ಕುಂದಾಪ್ರದಿಂದ‘ ಎಂದು ಮಾತು ಆರಂಭಿಸುತ್ತಾರೆ. ರಕ್ಷಿತ್ ಜೊತೆ ಕುಶಲೋಪರಿಯ ನಂತ್ರ ನನ್ನೊಂದಿಗೂ ಮಾತನಾಡುತ್ತಾರೆ. ಮಾತು ಮುಗಿದಾಗ ರಕ್ಷಿತ್ ‘ ಇವರು ನನ್ನ Close Friend ಎಂದು ಹೇಳಿ ಮುಂದಿನ ಕರೆ ಸ್ವೀಕರಿಸಿದ್ದೆವು.
ಆವತ್ತು ಕರೆ ಮಾಡಿದ ಪ್ರಶಾಂತ್ ಬೇರೆ ಯಾರೂ ಅಲ್ಲ. ಇಂದಿನ ಕನ್ನಡ ಸಿನಿಮಾ ರಂಗದ ಪ್ರಸಿದ್ಧ ನಟ, ನಿರ್ದೇಶಕ ( Actor Rishab Shetty)ರಿಷಬ್ ಶೆಟ್ಟಿ! ಹೌದು, ಬಹಳ ಮಂದಿಗೆ ರಿಷಬ್ ಅವರ ಮೂಲ ಹೆಸರು ಪ್ರಶಾಂತ್ ಎಂದು ತಿಳಿದಿರಲಿಕ್ಕಿಲ್ಲ. ಇದಾಗಿ ಸುಮಾರು 8 ವರ್ಷಗಳ ನಂತ್ರ ಪ್ರಸ್ತುತ ನಾನು ಕಾರ್ಯನಿರ್ವಹಿಸುತ್ತಿರುವ ಕಚೇರಿಗೆ ನನ್ನದೇ ಆಹ್ವಾನದ ಮೇರೆಗೆ ಅವರ ‘ ಹೀರೋ’ ಸಿನಿಮಾದ ಕುರಿತು ಸಂದರ್ಶನಕ್ಕೆಂದು ಬಂದಿದ್ದಾಗ ರಿಷಬ್ ಈ ಸಂಗತಿಯನ್ನು ನನಗೆ ನೆನಪಿಸಿ ‘ಕಾಮತ್ರೇ, ಆಗಳಿಕೆ ನಾನ್ ಫೋನ್ ಮಾಡದ್ ನಿಮಗೆ ನೆನ್ಪಿತ್ತಾ’ ( ಕುಂದಾಪ್ರ ಕನ್ನಡ – Kundapra Kannada ) ಎಂದು ನಗೆ ಚಟಾಕಿ ಹಾರಿಸಿದ್ದರು.
ರಕ್ಷಿತ್ ಜೊತೆಗಿನ Phone in ಕಾರ್ಯಕ್ರಮದಲ್ಲಿ ಅವರ ಮುಂದಿನ ಸಿನಿಮಾದ ಕುರಿತು ಕೇಳಿದ್ದಾಗ ‘ಉಳಿದವರು ಕಂಡಂತೆ’ ( Ulidavaru Kandante ) ಕುರಿತು ಪ್ರಸ್ತಾಪಿಸಿದ್ದರು. ‘ಎಂಕ್ Recording ಮಲ್ಪೆರೆ ಒಂತೆ ಮಲ್ಲ studio ಬೋಡು ಅವಿನಾಶೇರೆ, ಒಲಾಂಡ ತಿಕ್ಕುವ ?’ ( ನಮ್ಮ ತುಳು ಭಾಷೆಯಲ್ಲಿ) ಎಂದು ಕೇಳಿದ್ದರು. ಆದರೆ ಈ ವಿಚಾರದಲ್ಲಿ ಸಹಾಯ ಮಾಡಲು ನನಗಾಗಲಿಲ್ಲ. ಉಳಿದವರು ಕಂಡಂತೆ ಮೂಲಕ ಪರಿಚಯವಾದ ರಿಷಬ್ ಶೆಟ್ಟರ ಸಿನಿಮಾ ಪ್ರಯಾಣ ನಿಜಕ್ಕೂ ರೋಚಕವಾದದ್ದು.
ನಾ ಕಂಡ ರಿಷಬ್
ವೈಯಕ್ತಿಕವಾಗಿ ನನಗೆ ಅವರೊಂದಿಗೆ ಹೆಚ್ಚಿನ ಒಡನಾಟವಿಲ್ಲದಿದ್ದರೂ ಅವರ ಕೆಲಸ ಕಾರ್ಯಗಳ ಕುರಿತು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಲೇ ಬಂದಿದ್ದೇನೆ. ರಿಷಬ್ ನನಗೆ ತೀರಾ ಆಪ್ತವಾಗುವುದು ಅವರ ಸೂಕ್ಶ್ಮ ಸಂವೇದನೆಯ ಮಾತುಗಳಿಗಾಗಿ. ಆ ಧ್ವನಿ, ಭಾಷೆಯ ಮೇಲಿನ ಹಿಡಿತ, ಸ್ಪಷ್ಟತೆ, ಏರಿಳಿತ, ಹಾಸ್ಯಪ್ರಜ್ಞೆ ಮತ್ತು ಇದೆಲ್ಲವನ್ನು ಮೀರಿಸುವ ಅವರ ನಗು. ಶೆಟ್ಟರ ಹೆಚ್ಚಿನ ಸಂದರ್ಶನಗಳನ್ನು ನಾನು Youtubeನಲ್ಲಿ ವೀಕ್ಷಿಸಿದ್ದೇನೆ. ಅವರ ಮಾತುಗಳಿಂದ ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ. ಅದೇನು ಹೇಳಬೇಕೋ ಅದನ್ನು ಸ್ಪಷ್ಟವಾಗಿ, ರಸವತ್ತಾಗಿ ಹೇಳುವ ಪರಿ ನನಗೆ ಬಹಳ ಇಷ್ಟ. ಅವರ ಸಿನಿಮಾ, ನಿರ್ದೇಶನ, ನಟನೆ ಇತ್ಯಾದಿಗಿಂತಲೂ ನನಗವರು ಇಷ್ಟವಾಗುವುದು ಅವರ ಮಾತುಗಳಿಂದಲೇ. ಈ ರೀತಿ ನನಗೆ ಮಾತುಗಳಿಂದಲೇ ಇಷ್ಟವಾಗೋ ಮತ್ತೊಬ್ಬ ಕನ್ನಡದ ನಟ ಅಂದ್ರೆ ದಿಗಂತ್. ಆಹಾ! ದಿಗಂತ್ ಕನ್ನಡ ಬಹಳ ಸೊಗಸಾದದ್ದು
ಇಷ್ಟೇ ಅಲ್ಲ ನಾನವರನ್ನು ಭೇಟಿಯಾದ 3 – 4 ಬಾರಿಯೂ ಜನರೊಂದಿಗೆ ಬೆರೆತ ರೀತಿ ಕೂಡ ಸರಳವಾಗಿತ್ತು. ಯಾವುದೇ ಹಮ್ಮು ಬಿಮ್ಮಿಲ್ಲದೆ ಎಲ್ಲರನ್ನು ಮಾತನಾಡಿಸುವ Rishabರಲ್ಲಿ ನೈಜತೆ, ಊರಿನ ಸೊಗಡು ಹಾಸು ಹೊಕ್ಕಾಗಿದೆ. ಈಗಂತೂ ಪಂಚೆಯಲ್ಲಿ ರಿಷಬ್ ಹಿಂದೆಂದಿಗಿಂತಲೂ Stylish ಆಗಿ ಕಾಣಿಸುತ್ತಾರೆ.
2020ರಲ್ಲಿ ಕೋಟದ ಗಿಳಿಯಾರಿನಲ್ಲಿ ಗೆಳೆಯ ವಸಂತ ಗಿಳಿಯಾರ್ ನೇತೃತ್ವದಲ್ಲಿ ಬಹಳ ಅದ್ಧೂರಿಯಾಗಿ ಜರುಗಿದ ‘ಅಭಿಮತ ಸಂಭ್ರಮ’ ಎಂಬ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಮದಲ್ಲಿ ‘ ಕೀರ್ತಿ ಕಲಶ ‘ ಎಂಬ ಪ್ರಶಸ್ತಿಯನ್ನು ರಿಷಬ್ ಅವರಿಗೆ ಗೌರವಾದರಗಳಿಂದ ಸಮರ್ಪಿಸಲಾಯಿತು. ಈ ಪ್ರಶಸ್ತಿಗೆ ಅಳೆದು ತೂಗಿ ಸಾಧಕರನ್ನು ಆಯ್ಕೆ ಮಾಡಲಾಗುತ್ತದೆ. ಅದು ಕೇವಲ ಒಂದು ಸಮಾರಂಭವಾಗಿ ಉಳಿಯದೆ ಸ್ವೀಕರಿಸುವ ವ್ಯಕ್ತಿಯೂ ಹೆಮ್ಮೆ ಪಡುವಂತೆ ಅದನ್ನು ಅಷ್ಟೊಂದು ಅಚ್ಚುಕಟ್ಟಾಗಿ ಆಯೋಜಿಸಲಾಗುತ್ತದೆ. ಅವರ ಸಾಧನೆಯನ್ನು ಸುಂದರವಾಗಿ ಸಾರುವ ವಿಡಿಯೋ, ವೇದಿಕೆಯಲ್ಲಿರೋ ಆಯ್ದ ಗಣ್ಯರ ಮಾತು ಎಂತಹ ಸಾಧಕರನ್ನೂ ವಿನೀತನನ್ನಾಗಿಸುತ್ತದೆ. ರಿಷಬ್ ಶೆಟ್ಟರ ಕುರಿತ ಅಂತಹ ಒಂದು ವಿಡಿಯೋಗೆ ಬೆಂಗಳೂರಿನ ಭಾಸ್ಕರ ಬಂಗೇರ ಸಾಹಿತ್ಯಕ್ಕೆ ಹಿನ್ನೆಲೆ ಧ್ವನಿ ನೀಡುವ ಅಪೂರ್ವ ಅವಕಾಶ ನನಗೆ ದಕ್ಕಿತ್ತು. ಸಂಕಲನ ಮತ್ತೊಬ್ಬ ಗೆಳೆಯ ಹರೀಶ್ ಕಿರಣ್ ಅವರದ್ದಾಗಿತ್ತು. ಎರಡು ವರ್ಷಗಳ ಹಿಂದಿನವರೆಗಿನ ಅವರ ಸಾಧನೆ ಕೇವಲ 5 ನಿಮಿಷಗಳಲ್ಲಿ ಪ್ರಸ್ತುತಪಡಿಸಲಾಗಿದೆ. ನನ್ನ ಈ ಲೇಖನದ ಉದ್ದೇಶ ಕೂಡ ನಿಮಗದನ್ನು ತೋರಿಸುವುದಾಗಿದೆ. ಆ ವಿಡಿಯೋ ಇಲ್ಲಿದೆ ನೋಡಿ.
ಕರಾವಳಿ ಭಾಗದ ದೈವಾರಾಧನೆ, ಕಂಬಳ, ಭಾಷೆ, ನಂಬಿಕೆ ಪರಿಚಯಿಸುವ ‘ಕಾಂತಾರ’ ಸಿನೆಮಾಕ್ಕಾಗಿ ಎಲ್ಲರಂತೆಯೇ ನಾನೂ ಅತ್ಯಂತ ಕಾತರದಿಂದ ಕಾಯುತ್ತಿದ್ದೇನೆ. ಈ ಸಿನಿಮಾ ಗೆದ್ದು ರಿಷಬ್ ಶೆಟ್ಟರ ಸಿನಿಮಾ ಲೋಕದ ಪ್ರಯಾಣದಲ್ಲಿ ಮೈಲಿಗಲ್ಲಾಗಲಿ ಎನ್ನುವ ಹಾರೈಕೆಯೊಂದಿಗೆ …
All the best .. ಶೆಟ್ರೇ…