Home Shorts Celebrating the Dedication of My Kannada Teacher Amaresh Hegde

Celebrating the Dedication of My Kannada Teacher Amaresh Hegde

2

ಬನ್ನಂಜೆಯಲ್ಲಿರುವ ಹೀರಾ ಬಾಗ್ ಕಂಪೌಂಡಿನ ಕುರಿತು ಉಡುಪಿ ಪರಿಸರದ ಹೆಚ್ಚಿನವರಿಗೆ ತಿಳಿದೇ ಇದೆ. ಅದೊಂದು ‘ ಪಕ್ಕಾ’ ವಠಾರ ಎನ್ನಬೇಕು. ನಾವಲ್ಲಿ 10 ವರ್ಷಗಳ ಕಾಲ ವಾಸಿಸಿದ್ದೆವು. ಹತ್ರತ್ರ ಮನೆಗಳು. ಇಲ್ಲಿ ಮಾತನಾಡಿದರೆ ಅಲ್ಲಿ.. ಅಲ್ಲಿ ಮಾತನಾಡಿದರೆ ಇಲ್ಲಿ ಕೇಳುವುದು ಸಾಮಾನ್ಯವಾಗಿತ್ತು. ಅವರಿವರ ಸುದ್ದಿ, Gossipಗಳು ಪ್ರತಿದಿನದ ಚಟುವಟಿಕೆ ಎಂಬಂತೆ ನಡೆಯುತ್ತಿತ್ತು. ಈ ವಠಾರದಲ್ಲಿ ಒಂದಿಷ್ಟು ಮಕ್ಕಳು ಉಡುಪಿ ಜಿಲ್ಲೆಯ ಬ್ರಹ್ಮಾವರದ ಪ್ರತಿಷ್ಠಿತ ಆಂಗ್ಲ ಮಾಧ್ಯಮ ಶಾಲೆಯೊಂದಕ್ಕೆ ಹೋಗುತ್ತಿದ್ದರು. ಆ ಮಕ್ಕಳಿಗೆ ( ಆಗ ನನ್ನದೇ ವಯಸ್ಸಿನವರು ) ಕನ್ನಡ ಅಷ್ಟಾಗಿ ಬರುತ್ತಿರಲಿಲ್ಲ. ಮಾತನಾಡುವಾಗ ಒಂದು ರೀತಿಯ ಉಡಾಫೆ ಮತ್ತು Show off ಜೊತೆಗೆ ‘ ಶಾಲೆಯಲ್ಲಿ ನಮಗೆ ಸ್ವಲ್ಪ ಸ್ವಲ್ಪವೇ ಕನ್ನಡ ಹೇಳಿಕೊಡುದು’ ಎಂದು ಬೀಗುತ್ತಿದ್ದರು! ಆ ಬಗ್ಗೆ ಒಂದು ರೀತಿಯ ವಿಚಿತ್ರ ಹೆಮ್ಮೆ ಅವರಿಗಿತ್ತು. ಇದನ್ನು ನೋಡಿಯೇ ಬೆಳೆದ ನನಗೆ, ಅಷ್ಟೊಂದು ಮೆಚುರಿಟಿ ಆಗ ಇಲ್ಲದೆ ಇದ್ದರೂ ಅವರ ಅಹಂಕಾರದ ಕಾರಣಕ್ಕಾಗಿಯೇ ಅವರೊಂದಿಗೆ ಆತ್ಮೀಯತೆ ಬೆಳೆದಿರಲಿಲ್ಲ.

ಕೆಜಿಯಿಂದ ಪಿಜಿವರೆಗೆ ಆಂಗ್ಲ ಮಾಧ್ಯಮದಲ್ಲೇ ಓದಿದ ನನಗೆ ಕನ್ನಡದ ಕುರಿತು ಅಪಾರ ಆಸಕ್ತಿ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಥಮ ಭಾಷೆ ಕನ್ನಡ. ಪ್ರತೀ ವರ್ಷ ಒಳ್ಳೆಯ ಅಂಕ ಪಡೆಯುತ್ತಿದ್ದೆ. ಪ್ರತಿದಿನದ ಪತ್ರಿಕೆ ಓದು, ಕನ್ನಡ ಕಾರ್ಯಕ್ರಮಗಳ ನಿರಂತರ ವೀಕ್ಷಣೆಯಿಂದಾಗಿ ನನ್ನೊಳಗೆ ಸದ್ದಿಲ್ಲದೇ ಕನ್ನಡದ ಕುರಿತು ವಿಶೇಷ ಅಭಿಮಾನ ಚಿಗುರಿತ್ತು. SSLC ಮುಗಿಸಿ ಪಿಯುಸಿ ಸೇರಿಕೊಂಡಾಗ ಅಮರೇಶ್ ಹೆಗ್ಡೆ ಅನ್ನೋ ಮೇಷ್ಟ್ರು ನಮಗೆ ಕನ್ನಡ ಪಾಠ ಹೇಳುತ್ತಿದ್ದರು. ಅವರ ಧ್ವನಿ, ಏರಿಳಿತ, ಭಾಷೆಯ ಮೇಲಿನ ಹಿಡಿತ, ಜ್ಞಾನ, ನನ್ನ ಕನ್ನಡ ಪ್ರೇಮಕ್ಕೆ ನೀರೆರೆದು ಪೋಷಿಸಿತು. ಅಮರೇಶ್ ಸರ್ ಪಾಠಕ್ಕೆ ಬರುವಲ್ಲಿಯವರೆಗೆ ನನಗೆ ಕಾತರ. ಭಾಷೆಯ ಕುರಿತು ಇನ್ನಷ್ಟು ಪ್ರೀತಿ ಹುಟ್ಟಿಸಿದ, ಓದಿಗೆ ಪ್ರೇರೇಪಿಸಿದ ಅಮರೇಶ್ ಸರ್ ಅವರನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆಮೇಲೆ ಸಾಕಷ್ಟು ಮಂದಿಯನ್ನು ನನ್ನ ಪ್ರಯಾಣದಲ್ಲಿ ಭೇಟಿಯಾಗಿದ್ದೇನೆ. ಆದ್ರೆ ಪ್ರಾಯಶಃ ಕನ್ನಡದ ಕುರಿತು ನನಗೆ ಉತ್ತೇಜನ ನೀಡಿದವರಲ್ಲಿ ಅಮರೇಶ್ ಸರ್ ಮುಂಚೂಣಿಯಲ್ಲಿದ್ದಾರೆ.

ಪ್ರಸ್ತುತ ಅವರು ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಹೆಸರಾಂತ ಅಮೃತ ಭಾರತಿ ವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಜೊತೆ ಮಾತಿಗೆ ನಿಂತರೆ ಕನಿಷ್ಠ ಒಂದು ಗಂಟೆ ಸಮಯವಾದರೂ ಬೇಕು. ಪ್ರಸ್ತುತ ಶಿಕ್ಷಣದ ನ್ಯೂನತೆಗಳು, ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ, ಬದುಕಿನ ಮೌಲ್ಯ, ಪಠ್ಯೇತರ ಚಟುವಟಿಕೆಗಳು, ಬದುಕು ರೂಪಿಸುವ ಕಲೆ, ಕೌಶಲ್ಯದ ಕುರಿತು ಅವರಿಗೆ ಹೆಚ್ಚಿನ ಒಲವು. ಇದೇ ವಿಷಯಗಳ ಕುರಿತು ನಮ್ಮ ಮಾತುಕತೆ.

ಸುಮಾರು 15 ವರ್ಷಗಳ ನಂತ್ರ ಮೊನ್ನೆ ಅವರನ್ನು ಭೇಟಿಯಾದೆ. ಆಗ ಅವರು ಕುವೆಂಪು, ಬೇಂದ್ರೆ, ಕಾರಂತ, ಬಸವಣ್ಣ ಅವರ ಬದುಕು, ಬರಹದ ಕುರಿತು ಒಂದಿಷ್ಟು ಸೂಕ್ಷ್ಮ ವಿಷಯಗಳನ್ನು ವಿವರಿಸಿದರು. ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ‘ ಅವಿನಾಶ್, ಇಷ್ಟು ವರ್ಷಗಳ ನಂತ್ರ ಈ ದಿನ ನಾನು, ನೀನು ಸಿಗಬೇಕು ಹೀಗೆಲ್ಲ ಮಾತಾಗಬೇಕು ಅಂತ ಮೊದಲೇ ನಿರ್ಧಾರವಾಗಿದೆ. ಈ ವಿಚಾರವನ್ನು ಕಾರಂತರು ತಮ್ಮ ಕೃತಿಯೊಂದರಲ್ಲಿ ಪ್ರಸ್ತಾಪಿಸಿದ್ದಾರೆ’ ಎಂದರು.

ನಮ್ಮ ಬದುಕನ್ನು ರೂಪಿಸುವಲ್ಲಿ ಇಂತಹ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ.

ನನ್ನ ಈ ಲೇಖನ ಓದಿ ನಿಮ್ಮ ಶಿಕ್ಷಕರೊಬ್ಬರ ನೆನಪಾಗಿದ್ದರೆ ಅವರು ನಿಜಕ್ಕೂ ನಿಮ್ಮ ಮೇಲೆ ಒಂದಲ್ಲ ಒಂದು ರೀತಿ ಪ್ರಭಾವ ಬೀರಿದ್ದರು ಎಂದರ್ಥ.
ಅವರಿಗೊಂದು ಕರೆ ಮಾಡಿ ಮಾತಾಡಿ ಅಥವಾ ಮೆಸೇಜ್ ಕಳುಹಿಸಿ.

Gratitude can be a way of life…


 

2 COMMENTS

  1. ಪ್ರೀತಿಯ ಅವಿನಾಶ
    ನೀನು ನನ್ನ ಬಗ್ಗೆ ಬರೆದ ವಿಷಯವನ್ನು ಇಂದಷ್ಟೇ ನೋಡಿದೆ ಸೋಷಿಯಲ್ ಮೀಡಿಯಾಗಳಲ್ಲಿ ನಾನು ಸ್ವಲ್ಪ ಹಿಂದೆ ಕ್ಷಮೆ ಯಿರಲಿ . ನಾನು ಎಂಎ ಮಾಡುವಾಗ ಸಂಶೋಧಕರಾದ ಎಂ.ಎಂ ಕಲ್ಬುರುಗಿಯರು ವಿಶ್ವವಿದ್ಯಾಲಯಕ್ಕೆ ಬಂದಿದ್ದರು. ಅವರಿಗೆ ಸನ್ಮಾನ ಮಾಡಿತ್ತು. ಅವರು ಮಾತನಾಡುತ್ತ ಆಗಷ್ಟೆ ಅವರಿಗೆ ಪ್ರಶಸ್ತಿ ಬಂದಿತ್ತು. [ಪಂಪ ಪ್ರಶಸ್ತಿ ಇರಬೇಕು ] ಅವರನ್ನು ಅಭಿನಂದಿಸುತ್ತ ಎಸ್.ಎಲ್ ಬೈರಪ್ಪ ಪತ್ರಬರೆದಿದ್ದರಂತೆ ಅವರು ಬರೆಯುತ್ತ ಸ್ವಲ್ಪ ದಿನದ ಹಿಂದಷ್ಟೆ ಕಲಬುರುಗಿಯವರ ವಿದ್ಯಾರ್ಥಿಗಳು ಬೈರಪ್ಪ ಅವರನ್ನು ಬೇಟಿಯಾಗಲು ಬಂದಿದ್ದರಂತೆ ವಿದ್ಯಾರ್ಥಿಗಳು ಮಾತನಾಡುತ್ತಾ ಕಲಬುರುಗಿಯವರು ಪಂಪನ ಕಾವ್ಯ ಅದ್ಭುತವಾಗಿ ಪಾಠ ಮಾಡಿದ ವಿಷಯವನ್ನು ಹಂಚಿಕೊಂಡಿದ್ದರಂತೆ ಬೈರಪ್ಪ ಅವರು ಪತ್ರದಲ್ಲಿ ಅದನ್ನು ಪ್ರಸ್ಥಾಪಿ ತಮಗೆ ಸಿಕ್ಕಿರ ಎಲ್ಲಾ ಪ್ರಶಸ್ತಿಗಳಿಗಿಂತ ಅದು ದೊಡ್ಡದು ಎನ್ನುವ ವಿಷಯವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದರು. ನಾನೂ ಅದೇ ಭಾವದಲ್ಲಿ ಮುಳುಗಿದ್ದೇನೆ. ನಾನು ನನ್ನ ಕರ್ತವ್ಯವನ್ನಷ್ಟೇ ಮಾಡಿದ್ದೇನೆ. ಸಾಹಿತ್ಯ ಭಾಷೆ ಯನ್ನು ತನ್ನ ಅಭಿರುಚಿಯನ್ನಾಗಿ ಮಾಡಿಕೊಂಡು ನೀನು ಬೆಳೆದಿದ್ದನ್ನು ಒಂದಷ್ಟು ಕೇಳಿದ್ದೇನೆ ಒಂದಷ್ಟು ನೋಡಿದ್ದೇನೆ ಅದು ನಿನ್ನ ದೇ ಪ್ರತಿಭೆ ‘ನಾನು ನಿನಗೆ ಟಂಕಸಾಲೆಯಲ್ಲಿ ನಾಣ್ಯವನ್ನು ಠಂಕಿಸುವುದು ಹೇಗೆ ಎ೦ದು ಹೇಳಬಹುದಷ್ಟೇ ನಿನ್ನ ಟಂಕಸಾಲೆಯ ನಾಣ್ಯಗಳ ಒಡೆಯ ನೀನೇ ಅವಿನಾಶ್ ನಿನಗೆ ಒಳ್ಳೆಯದಾಗಲಿ
    ಇಂತಿ ನಿನ್ನ ಪ್ರೀತಿಯ ಗುರು ಅಮರೇಶ .

  2. Sir.. ನಿಮ್ಮ ಈ ಪ್ರೀತಿಯ ಸಂದೇಶ ನೋಡಿ ತುಂಬಾ ಸಂತೋಷವಾಯ್ತು. ಪ್ರೀತಿ ಇರಲಿ. ಎಂದಿಗೂ ನಿಮ್ಮ ವಿಧೇಯ ಶಿಷ್ಯ – ಅವಿನಾಶ್

LEAVE A REPLY

Please enter your comment!
Please enter your name here